ಬೊಗಳೆ ರಗಳೆ

header ads

ಯಾರು? ಯಾವ ಪಕ್ಷದಿಂದ ಉಚ್ಚಾಟಿಸಿದ್ದು?

(ಬೊಗಳೂರು ಪಕ್ಷ ರಹಿತ ಬ್ಯುರೋದಿಂದ)
ಬೊಗಳೂರು, ಜೂ.30- ಯಾವುದೋ ಒಂದು ಪಕ್ಷದಿಂದ ಹೊರದಬ್ಬಲ್ಪಟ್ಟ ಜಿಪಿಆರ್ ನಿಂದ್ಯಾ ಅವರನ್ನು ಬೊಗಳೆ ರಗಳೆ ಬ್ಯುರೋಗಾಗಿ ವಿಶೇಷವಾಗಿ ಸಂದರ್ಶಿಸಲಾಯಿತು. ಸಂದರ್ಶನದ ಕಸಾರಾಂಶ ಇಲ್ಲಿದೆ:

* ನಿಮ್ಮನ್ನು ಆನೆ ಪಕ್ಷದಿಂದ ಮಾಯ ಮಾಡಲಾಗಿದೆ. ಯಾಕೆಂತ ಕೇಳಬಹುದೇ?
ಹೌದೇ? ಇರಬಹುದು. ನನ್ನನ್ನು ಯಾವ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ತಿಳಿಸಿದರೆ ನಿಮಗೆ ನಾನು ತುಂಬಾ ಆಭಾರಿ. ಯಾಕೆಂದರೆ ನಾನು ಒಂದು ಕಾಲದಲ್ಲಿ ಜನತಾ... ಜನತಾ... ಜನತಾ... ಛೆ... ನೆನಪಿಗೇ ಬರ್ತಾ ಇಲ್ಲ... ಪಕ್ಷವೋ, ದಳವೋ... ಯಾವುದ್ರಲ್ಲೋ ಇದ್ದೆ. ಆ ಮೇಲೆ ಬಹುಶಃ ಸಮಾಜವಾದಿ ಪಕ್ಷಕ್ಕೆ ಸೇರಿರಬೇಕು. ಇಲ್ಲವಾದ್ರೆ ಕಾಂಗ್ರೆಸಿಗೆ...? ಛೆ... ಬಿಜೆಪಿಗೂ ಸೇರಿದ್ದಿರಬಹುದು. ಹೀಗಾಗಿ ಇವುಗಳಲ್ಲಿ ಯಾವ ಪಕ್ಷ ನನ್ನನ್ನು ಉಚ್ಚಾಟಿಸಿದೆ ಅಂತ ಹೇಳಿ ಪುಣ್ಯ ಕಟ್ಟಿಕೊಳ್ಳಿ.

* ನಿಮ್ಮ ಮುಂದಿನ ನಡೆ ಏನು?
ಆನೆ ನಮ್ಮ ಮೇಲೆ ಲದ್ದಿ ಹಾಕಿದರೆ ನಾವೇನು ಸುಮ್ಮನೆ ಕೂರುವವರೇ? ಸ್ಥಳೀಯ ಸಂಸ್ಥೆಗಳು, ರಾಜ್ಯ ರಾಜಕಾರಣ, ರಾಷ್ಟ್ರೀಯ ರಾಜಕಾರಣ ಇವೆಲ್ಲಾ ನಮಗೆ ಯಾವ ಲೆಕ್ಕ?... ಇನ್ನು ಮುಂದೆ ಏನಿದ್ದರೂ ನಮ್ಮದು ಅಂತಾರಾಷ್ಟ್ರೀಯ ರಾಜಕಾರಣ. ಹೀಗಾಗಿ ಹಿಲಾರಿಯಸ್ ಭಾಮಾಮಣಿ ಜತೆಗೆ ಸೆಣಸಾಡಿ ಅಭ್ಯರ್ಥನ ಪಡೆದುಕೊಂಡ ಒಬಾಮಾ ವಿರುದ್ಧ... ಅಲ್ಲಲ್ಲ... ಪರವಾಗಿ ಪ್ರಚಾರ ಮಾಡಲು ಅಮೆರಿಕೆಗೆ ಹಾರಲಿದ್ದೇನೆ.

* ಛೆ... ನೀವು ಹೋದರೆ ಇಲ್ಲಿ ನಿಮ್ಮವರನ್ನು, ನಿಮ್ಮನ್ನು ನಂಬಿದವರನ್ನು ನೋಡಿಕೊಳ್ಳೋರು ಯಾರು?
ಅವರಿಗೇನು... ಎಷ್ಟು ಬೇಕಾದ್ರೂ ಪಕ್ಷಗಳಿವೆ... ಯಾವುದಕ್ಕೆ ಬೇಕಾದ್ರೂ ಹೋಗ್ಬಹುದು. ಯಾಕೆಂದರೆ ಎಲ್ಲ ಪಕ್ಷಗಳ ತತ್ವ ಸಿದ್ಧಾಂತಗಳೂ ಒಂದೇ ಆಗಿಬಿಟ್ಟಿವೆ. ಈ ಸಿದ್ಧಾಂತಗಳಲ್ಲಿ ಪಕ್ಷಾಂತರ ಸಿದ್ಧಾಂತವು ಮೋಸ್ಟ್ ಕಾಮನ್ ಪ್ರಕ್ರಿಯೆ. ನೀವೇನೂ ಯೋಚ್ನೆ ಮಾಡ್ಬೇಕಾಗಿಲ್ಲ. ಇವತ್ತು ನೀವು ಬೊಗಳೆ ರಗಳೆ ಬ್ಯುರೋ ಪರವಾಗಿ ಕೆಲ್ಸ ಮಾಡ್ತಾ ಇದ್ದೀರಿ. ನಾಳೆ ಮಜಾವಾಣಿಗೆ, ನಾಡಿದ್ದು ನಗೆ ನಗಾರಿಗೆ, ಇನ್ನೊಂದಿನ ಹಾಸ್ಯಬ್ಲಾಗು ರದ್ದಿಗಾರರಾಗುತ್ತೀರಿ. ಎಲ್ಲಿ ಹೆಚ್ಚು ಗಿಟ್ಟುತ್ತದೆ ಅಲ್ಲಿಗೆ ಹಾರುತ್ತೀರಿ ಅಲ್ಲವೇ?

ಹೀಗೆ ಬುಡಕ್ಕೇ ಕೊಡಲಿ ಹಾಕಿದ ಕಾರಣದಿಂದಾಗಿ ಸಂದರ್ಶನವನ್ನು ಅರ್ಧಕ್ಕೇ ನಿಲ್ಲಿಸಿ, ಅಲ್ಲಿಂದ ಓಡಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

  1. "ಹೀಗೆ ಬುಡಕ್ಕೇ ಕೊಡಲಿ ಹಾಕಿದ ಕಾರಣದಿಂದಾಗಿ ಸಂದರ್ಶನವನ್ನು ಅರ್ಧಕ್ಕೇ ನಿಲ್ಲಿಸಿ, ಅಲ್ಲಿಂದ ಓಡಲಾಯಿತು."
    he he he...

    ಪ್ರತ್ಯುತ್ತರಅಳಿಸಿ
  2. ಪಾಪ ಇನ್ನೂ ಲದ್ದಿಯಿಂದ ಎದ್ದಿದ್ರೊ ಇಲ್ವೊ... ಅವಾಗ್ಲೇ ಇಂಟರ್ವ್ಯೂ ಮಾಡ್ಲಿಕ್ಕೊದ್ರೆ ಮತ್ತಿನ್ನೇನು ಆದಾತು :D
    -ಅಮರ

    ಪ್ರತ್ಯುತ್ತರಅಳಿಸಿ
  3. ನಿಂದ್ಯಾರವರು ಯಾವ ಪಕ್ಷದಲ್ಲಿದ್ದೇನೆಂಬುದನ್ನು ಮರೆತು ತಮ್ಮನ್ನೇ ಆನೆ ಪಕ್ಷದಿಂದ ಉಚ್ಛಾಟಿಸಿಕೊಂಡು, ಮಾಯಾವತಿಯ ಸಹಿ ಸಹಿಪಡೆದು ಪತ್ರಿಕಾಗೋಷ್ಟಿ ಕರೆದು ಆ ಪತ್ರದ ಪ್ರತಿಯನ್ನು ಪತ್ರಕರ್ತರಿಗೆ ಕೊಟ್ಟು, ಮರುದಿನ ಪೇಪರ್ ನೋಡಿದಾಗ ಶಾಕ್ ಆಗಿ ಲದ್ದಿ ತಿಂದ ಕೋಡಂಗಿಯಾಗಿದ್ದು ನಮ್ಮ ಕರ್ನಾಟಕದ ಪುಣ್ಯ. ಇಲ್ಲದಿದ್ದಲ್ಲಿ ಈ ನಿಂದ್ಯಾ ಈಗಾಗಲೇ ಮರೆತು ಮುಖ್ಯಮಂತ್ರಿಯ ಸೀಟಲ್ಲಿ ಕುಳಿತು ಯಡ್ಡಿಯನ್ನೇ ಉಚ್ಛಾಟಿಸುವ ಮಟ್ಟಕ್ಕೆ ಹೋಗುತ್ತಿದ್ದರೆನ್ನುವುದಕ್ಕೆ ಬೊ.ರ ಬ್ಯೂರೋ ಬಳಿ ಪುರಾವೆ ಇದೆ.

    ಪ್ರತ್ಯುತ್ತರಅಳಿಸಿ
  4. ಶ್ರೀನಿಧಿಯವರೆ,

    ನೀವೇನೋ he he ಅಂದ್ರಿ... ಆದ್ರೆ ನಮ್ಮ ವಿರೋಧಿ ಪಕ್ಷದವರು she she she ಅಂತ ಮೂಗು ಮುರೀತಾರೆ!

    ಪ್ರತ್ಯುತ್ತರಅಳಿಸಿ
  5. ಅಮರ ಅವರೆ,

    ಹೌದು ನೀವಂದಿದ್ದು ಸರಿ. ಅದು ಲದ್ದಿಯೋ ಸಗಣಿಯೋ ... ಯಾವುದು ತಿಳ್ಕೊಳೋದಕ್ಕೆ ಮುಟ್ಟಿ ಮುಟ್ಟಿ ಟೇಸ್ಟ್ ನೋಡ್ತಾ ಇದ್ರು...ಅಷ್ಟರಲ್ಲೇ ನಮ್ಮ ರದ್ದಿಗಾರರು ಅಲ್ಲಿ ತಲುಪಿದ್ದರು.

    ಪ್ರತ್ಯುತ್ತರಅಳಿಸಿ
  6. ಗುರು ಅವರೆ,
    ನಿಂದ್ಯಾರವರು ಕೆಲಸವಾಗಬೇಕಿದ್ರೆ ಆನೆ ಕಾಲು ಹಿಡೀಲಿಕ್ಕೆ ಹೋಗಿದ್ರು. ಆದ್ರೆ ಆನೆ ಸ್ವಲ್ಪ ಬಲವಾಗಿಯೇ ಕಾಲು ಎತ್ತಿತ್ತು.

    ಪ್ರತ್ಯುತ್ತರಅಳಿಸಿ
  7. ಗಣೇಶ್ ಅವರೆ,
    ಸಿಂದ್ಯಾ ಎಂಬ ಮಾಜಿ ವಿದಳದ ದಳವು ಸದ್ಯ ಕಮಲಕ್ಕೆ ಹೊಸ ದಳವಾಗಿ ಸೇರ್ಪಡೆಯಾಗುತ್ತದೇಂತ ಕೇಳಿದ್ದೇನೆ....

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D