(ಬೊಗಳೂರು ಮೂಸಲು ಬ್ಯುರೋದಿಂದ)
ಬೊಗಳೂರು, ಜೂ.23- ಸರಕಾರ ಎಷ್ಟೇ ಕಷ್ಟ ಪಟ್ಟು ಹೆಣಗಾಡಿದರೂ ದೇಶದಲ್ಲಿ ಇತರ ಹಿಂದುಳಿದವರು ಸಿಗದೇ ಇರುವುದರಿಂದ ಜಾರಕೀಯ ಪಕ್ಷಗಳೆಲ್ಲವೂ ತತ್ತರಿಸಿ ಬೆಚ್ಚಿ ಬಿದ್ದಿವೆ. ಹೀಗಾದರೆ ಹೇಗೆ, ಓಟಿನ ಬ್ಯಾಂಕಿನ ಖಾತೆಯಲ್ಲಿ ಜಮಾವಣೆ ಆಗುವುದಾದರೂ ಹೇಗೆ ಎಂಬುದೇ ನಮ್ಮನ್ನು ಆಳಲು ಮನಸ್ಸಿಲ್ಲದವರ ಚಿಂತೆಗೆ ಕಾರಣ ಎಂದು ಬೊಗಳೆ ರಗಳೆ ಬ್ಯುರೋ ಪತ್ತೆ ಹಚ್ಚಿದೆ.ಓಟಿನ ಬ್ಯಾಂಕನ್ನು ಗಟ್ಟಿ ಮಾಡಿಕೊಳ್ಳುವ ಸರಕಾರದ ಉದ್ದೇಶವೇ ಇಲ್ಲಿ ದಾರಿ ತಪ್ಪಿರುವುದು ಎಲ್ಲ ಜಾರಕೀಯ ಪಕ್ಷಗಳ ಉದ್ವೇಗಕ್ಕೆ ಕಾರಣವಾಗಿದೆ. ಓಬಿಸಿ ಕೋಟಾವನ್ನೇ ಖೋಟಾ ಎಂದು ಪರಿಗಣಿಸುವಂತಾಗಿಸುವ ನಿಟ್ಟಿನಲ್ಲಿ ಇತ್ತೀಚೆಗೆ ಎಲ್ಲರೂ ತಾವು ಹಿಂದುಳಿದವರು, ನಾವು ಹಿಂದುಳಿದವರು ಎಂದು ಹಳಿದುಕೊಳ್ಳುತ್ತಾ, ಅಧಿಕಾರಿಗಳಿಗೆ ದುಡ್ಡು ತೆತ್ತು ಒಬಿಸಿ ಫರ್ಟಿಸಿಕೇಟು ಮಾಡಿಸಿಕೊಳ್ಳುವ ತರಾತುರಿಯಲ್ಲಿರುವುದನ್ನು ಕೂಡ ಬೊಗಳೆರಗಳೆ ಬ್ಯುರೋ ಕಂಡು ಹುಡುಕಿದೆ.
ಒಬಿಸಿಗೆ 27 ಶೇ. ಮೀಸಲಾಗಿದ್ದರೂ, ಏಳು ಶೇಕಡಾ ಮಾತ್ರ ಒಬಿಸಿ ಮಂದಿಗಳು ದೊರಕಿದ್ದು, ಉಳಿದ 20 ಶೇಕಡಾ ಮಂದಿಯನ್ನು ಸೃಷ್ಟಿಸಬೇಕಾಗಿರುವುದು ಮಾನನೀಯ ಮಾವನ ಸಂಪನ್ಮೂಲಗಳನ್ನು ಕ್ರೋಡೀಕರಿಸುವ ಸಚಿವ ದುರ್ಜನ ಸಿಂಗರಿಗೆ ದೊಡ್ಡ ಸವಾಲಿನ ಮತ್ತು ಮುಖವುಳಿಸಿಕೊಳ್ಳುವ ವಿಷಯವಾಗಿದ್ದು, ಅದನ್ನು ತುಂಬಿಸಿಕೊಳ್ಳುವ ನಿಟ್ಟಿನಲ್ಲಿ ತಮ್ಮ ಪಕ್ಷದ ಓಟಿನ ಬ್ಯಾಂಕೇ ಆಗಿಬಿಟ್ಟಿರುವ ಅಲ್ಪ ಸಂಖ್ಯೆಯುಳ್ಳವರನ್ನು ಓಲೈಸಿಕೊಳ್ಳುವತ್ತ ಒಳಗಿಂದೊಳಗೆ ಸಿದ್ಧತೆಗಳನ್ನು ಮಾಡುತ್ತಿದ್ದಾರೆ ಎಂಬುದು ತಿಳಿದುಬಂದಿದೆ.
ಇದಕ್ಕಾಗಿ ದೇಶದ ಎಲ್ಲಾ ಜೈಲುಗಳನ್ನು ಹುಡುಕಿ, ಇತ್ತೀಚೆಗೆ ಭಯೋತ್ಪಾದನೆಗೆ ಸಂಬಂಧಿಸಿ ಬಂಧಿತರಾದವರನ್ನೆಲ್ಲರಿಗೂ ಉನ್ನತ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಅವರನ್ನು ಐಐಟಿಗಳಿಗೆ ಸೇರಿಸುವ ಪ್ರಯತ್ನ ನಡೆಯುತ್ತಿದೆ. ಸಿಮಿ ಸಂಘಟನೆಯವರು ಯಾವತ್ತಿದ್ದರೂ ಸ್ಟೂಡೆಂಟ್‌ಗಳೇ ಆಗಿರುವುದರಿಂದ ಅವರಿಗೆ ಉನ್ನತ ತಾಂತ್ರಿಕ ಶಿಕ್ಷಣ ಕೊಡಿಸಲು ಮತ್ತು ಅವರನ್ನು ಐಐಟಿಗಳಿಗೆ ಸೇರಿಸಿಕೊಳ್ಳಲು ಅತ್ಯಂತ ಸುಲಭ. ಹೇಗಿದ್ದರೂ ದೇಶದಲ್ಲಿ ಈ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅವರು ಆಗಾಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆಯುವ ಕೆಲಸ ಮಾಡುತ್ತಿದ್ದಾರೆ. ಅವರಿಂದಾಗಿ ದೇಶದ ಹೆಸರು ಕೂಡ ಅಂತಾರಾಷ್ಟ್ರೀಯ ಟೆರರ್ ಭೂಪಟದಲ್ಲಿ ಜ್ವಾಜ್ವಲ್ಯಮಾನವಾಗಿ ಬೆಳಗುತ್ತಿದೆ ಎಂಬುದನ್ನು ಕೇಂದ್ರವು ಮನಗಂಡಿದ್ದು, ಹೇಗಾದರೂ ಮಾಡಿ ಅವರಿಗೆ ಉನ್ನತ ಶಿಕ್ಷಣ ಕೊಡಿಸಿದರೆ, ದೇಶದ ಹೆಸರೂ ಪ್ರಸಿದ್ಧಿ ಪಡೆಯುತ್ತದೆ, ಒಬಿಸಿ ಕೋಟಾವನ್ನು ಖೋಟಾ ಪದ್ಧತಿಯಿಂದ ತುಂಬಿಸಿ ತಮ್ಮ ಇಲ್ಲದ ಮಾನವನ್ನು ಉಳಿಸಿಕೊಂಡ ಹಾಗೆಯೂ ಆಗುತ್ತದೆ ಎಂಬುದು ಲೆಕ್ಕಾಚಾರ.
ಒಬಿಸಿ ಕೋಟಾಕ್ಕೆ ಸಾಕಷ್ಟು ಅಭ್ಯರ್ಥಿಗಳು ಸಿಗದಿರುವುದರಿಂದ, ಯಾರಿಗೆ ಬೇಕಾದರೂ ಈ ರೀತಿಯ ಪ್ರಮಾಣಪತ್ರ ಕೊಡಿಸುಲು ಯಾರಾದರೂ ಮುಂದೆ ಬಂದರೆ ಅವರಿಗೂ ಉದ್ಯೋಗಾವಕಾಶ ಹೆಚ್ಚುತ್ತದೆ. ಮೀಸಲಾತಿಯಿಂದಾಗಿ ಎಷ್ಟೊಂದು ಜನರಿಗೆ ಉದ್ಯೋಗಾವಕಾಶ ದೊರೆಯುತ್ತದೆ ಎಂದು ತಮಗರಿವಿಲ್ಲದಂತೆಯೇ ಅಚ್ಚರಿ ವ್ಯಕ್ತಪಡಿಸಲಿರುವ, ಇಂಥ ವಿಷಯಗಳಿಗೇ ತಲೆ ಓಡಿಸುತ್ತಾ ಮಾವನ ಸಂಪನ್ಮೂಲ ಹೆಚ್ಚಿಸುವ ಕೇಂದ್ರ ಸಚಿವ ದುರ್ಜನ ಸಿಂಗ್, ಪ್ರಮಾಣಪತ್ರ ಕೊಡುವ ಕೇಂದ್ರಗಳನ್ನು ಅಲ್ಲಲ್ಲಿ ಸ್ಥಾಪಿಸಲು ಕೇಂದ್ರ ಪಿತ್ತಸಚಿವ ಪೀಚಿ ದಂಬರಂ ಅವರ ಸಲಹೆ ಕೋರಿದ್ದಾರೆ.
2 ಕಾಮೆಂಟ್‌ಗಳು
ಅನ್ವೇಷಿ,
ಪ್ರತ್ಯುತ್ತರಅಳಿಸಿಮೊದಲೆಲ್ಲಾ ’ಸತ್ಯವಾಕ್ಯವ ನೆಚ್ಚಿ ನಡೆದರೆ ಮೆಚ್ಚನಾ ಪರಮಾತ್ಮನು’ ಅಂತ ಹೇಳ್ತಿದ್ದೋರು, ಈಗ ’ದುರ್ಜನಸಿಂಗ ನಗುತಿರಲಿ, ಅವನಳವು ನನಗಿರಲಿ’ ಎಂದು ಹೇಳ್ಬಿಟ್ರೆ ನಂಬೋಕಾಗತ್ತಾ?
ಸುನಾಥರೆ,
ಪ್ರತ್ಯುತ್ತರಅಳಿಸಿನಂಬಿ ಕೆಟ್ಟವರಿಹರು
ಈ ಜಗದಲಿ
ನಂಬದೇ ಕೆಟ್ಟವರಿಲ್ಲವೋ
ಅಂತ ಬೊಗಳೂರಿನ ದಾಸರು ಹಾಡಿದ್ದಾರೆ.
ದುರ್ಜನ ಸಿಂಗರು ಇದೀಗ ಒಬಿಸಿಗಳಿಗಾಗಿಯೇ ವಿಶೇಷ ಐಐಟಿಯೊಂದನ್ನು ತೆರೆಯಬೇಕೂಂತ ಬೊ.ರ. ಬ್ಯುರೋದಿಂದ ವಿಶೇಷ ಮನವಿಯೊಂದು ಹೋಗಿದೆ.
ಏನಾದ್ರೂ ಹೇಳ್ರಪಾ :-D