ಬೊಗಳೆ ರಗಳೆ

header ads

ಠೇವಣಿ ನಷ್ಟ: ಬೊಗಳೆಯೆದುರು ವಟವಟಾಳ್ ಪ್ರತಿಭಟನೆ!

(ಬೊಗಳೂರು ಅಪ್ರಜ್ಞಾವಸ್ಥೆ ಬ್ಯುರೋದಿಂದ)
ಬೊಗಳೂರು, ಮೇ 28- ಒಮ್ಮೆಯೂ ತಮ್ಮ ಸ್ವಕ್ಷೇತ್ರವಾದ ಚಾಮರಾಜನಗರದಲ್ಲಿ ಯಾವುದೇ ಪ್ರತಿಭಟನೆ ಮಾಡದೆ, ರಾಜಧಾನಿಯಲ್ಲಿ ಮಾತ್ರವೇ ಹುಲಿಯಂತಿದ್ದ ವಟವಟಾಳ್ ಗಾನರಾಜ್ ಅವರಿಗೆ ಪ್ರತಿಭಟನೆಗೆ ಮತ್ತೊಂದು ಅವಕಾಶ ಸಿಕ್ಕಿದೆ.

ಅದೆಂದರೆ ಅವರು ಚುನಾವಣಾ ಆಯೋಗದಲ್ಲಿ ಇಟ್ಟಿದ್ದ ಠೇವಣಿಯು ನಷ್ಟವಾಗಿರುವುದು. ಹಣಕ್ಕೆ ಈಗ ಬೆಲೆ ಇಲ್ಲದಂತಾಗಿರುವುದರಿಂದ ಈ ಠೇವಣಿ ನಷ್ಟವಾಗಲು ಹಣದುಬ್ಬರವೇ ಕಾರಣ ಎಂದು ಹೇಳುತ್ತಿರುವ ಅವರು, ತಮ್ಮನ್ನು ಸೋಲಿಸಿದ ಮತದಾರರ ವಿರುದ್ಧ ಪ್ರತಿಭಟನೆ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ.

ಈ ಬಾರಿ ಕತ್ತೆಗಳ ಉದ್ಧಾರಕ್ಕಾಗಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದ ತಮಗೆ ಕತ್ತೆಗಳೇ ಲತ್ತೆ ಕೊಟ್ಟಿವೆ ಎಂದು ಹೇಳಿಕೊಂಡು ತಿರುಗಾಡುತ್ತಿರುವ ಅವರು, ಹೇಗಾದರೂ ಮಾಡಿ ಪ್ರತಿಭಟನೆ ಮಾಡಬೇಕಾಗಿದೆ. ಆದರೆ ತಮ್ಮ ಕ್ಷೇತ್ರವಾಗಿರುವ ಚಾಮರಾಜನಗರಕ್ಕೆ ಹೋಗುವ ದಾರಿ ಯಾವುದು ಎಂದು ತಿಳಿಯದೆ ಕಂಗಾಲಾಗಿರುವುದಾಗಿ ಬೊ.ರ. ಪತ್ತೆ ಹಚ್ಚಿದೆ.

ತಾವು ಇದುವರೆಗೆ ವಿಧಿವಿಧಾನಸೌಧದಲ್ಲೇ ಕುಳಿತು ಫೇಮಸ್ಸಾಗಿದ್ದು, ಚಾ.ನಗರಕ್ಕೆ ಹೋಗದೆ ಅದೆಷ್ಟೋ ವರ್ಷಗಳಾಗಿದ್ದವು. ಅಲ್ಲಿನ ಮತದಾರರು ಅದು ಹೇಗೆ ಮ್ಯಾಜಿಕ್ ಮಾಡಿದರೋ... ನಾನು ರಾಜಧಾನಿಯಲ್ಲಿರುವಾಗಲೇ ನನ್ನನ್ನು ಚಾ.ನಗರದಲ್ಲಿದ್ದುಕೊಂಡೇ ಗದ್ದುಗೆಯಿಂದ ಇಳಿಸಿಬಿಟ್ಟರಲ್ಲಾ... ಅದು ಹೇಗೆ ಸಾಧ್ಯವಿರಬಹುದು ಎಂದು ಅವರು ಲೆಕ್ಕಾಚಾರ ಹಾಕುತ್ತಿದ್ದಾರೆ. ಅವರು ಈ ಬಗ್ಗೆ ತಮಗೆ ದೊರೆತ ಮತಗಳ ಸಂಖ್ಯೆಗಿಂತಲೂ ಒಂದು ಹೆಚ್ಚು ಅಂದರೆ 11,414 ಬಾರಿ ಲೆಕ್ಕಾಚಾರ ಮಾಡಿದ್ದಾರೆ ಎಂಬುದನ್ನು ನಮ್ಮ ವರದ್ದಿಗಾರರು ಪತ್ತೆ ಹಚ್ಚಿದ್ದಾರೆ.

ತಮ್ಮ ಪ್ರತಿಭಟನಾ ಯೋಜನೆಯ ಕಾರಣಗಳನ್ನು ಪತ್ತೆ ಹಚ್ಚುತ್ತಾ ಪಟ್ಟಿ ಮಾಡುತ್ತಿರುವ ವಟವಟಾಳ್ ಅವರು, ಮೊದಲ ಕಾರಣವೆಂದರೆ, ತಾನು ಹಿಂದೆ ಎಲ್ಲಿಂದ ಆರಿಸಿ ಬಂದಿದ್ದೆ ಎಂಬುದು ತನಗೇ ತಿಳಿದಿಲ್ಲದಿದ್ದರೂ, ಅಲ್ಲಿನ ಜನ ಮಾತ್ರ ಸರಿಯಾಗಿ ತಿಳಿದುಕೊಂಡಿರುವುದು. ಎರಡನೇ ಕಾರಣವೆಂದರೆ, ತಮ್ಮ ಊರಿನ ಜನರಿಗೆ ಶಿಕ್ಷಣ ಹೆಚ್ಚಾಗಿರುವುದು. ಅದು ಯಾರೋ ಪುಣ್ಯಾತ್ಮ ಊರಿನ ಜನರನ್ನು ಬಡಿದೆಬ್ಬಿಸಿ, ಅವರಲ್ಲಿ ಜಾಗೃತಿ ಮೂಡಿಸಿ, ಸುಶಿಕ್ಷಿತರಾಗಿರುವಂತೆ ಮಾಡಿದ್ದಾರೆ. ಇದೇ ಕಾರಣಕ್ಕೆ ತನ್ನ ಸೋಲಾಗಿದೆ ಎಂದಿರುವ ಅವರು, ತಮ್ಮ ಕ್ಷೇತ್ರದ ಜನರನ್ನು ಈ ಪರಿ ಬುದ್ಧಿವಂತರಾಗಿಸಿದ್ದು ಯಾರು ಎಂಬ ಬಗ್ಗೆ ತನಿಖೆ ನಡೆಸುವುದಾಗಿ ಘೋಷಿಸಿದ್ದಾರೆ.

ಬರದ ಜಿಲ್ಲೆಯೆಂದೇ ಖ್ಯಾತಿ ಹೊತ್ತ ಚಾಮರಾಜನಗರದಲ್ಲಿ, ನೀರು ಬಿಡಿ, ಚರಂಡಿ ಹರಿಯಲೂ ಒಂದ ಯೋಜನೆ ರೂಪಿಸದಿದ್ದುದಕ್ಕಾಗಿಯೇ ವಟವಟಾಳ್ ಅವರಿಗೆ ಪ್ರಜ್ಞಾವಂತ ಮತದಾರರು ವಿಶ್ರಾಂತಿ ನೀಡಿ ಕಳುಹಿಸಿದ್ದಾರೆ, ಮತ್ತೊಮ್ಮೆ ವಿಧಾನಸೌಧಕ್ಕೆ ಆರಿಸಿ 'ಬರ'ದಂತೆ ನೋಡಿಕೊಂಡಿದ್ದಾರೆ ಎಂದು ಅಲ್ಲಿನ ಜನರು ಬೊಗಳೆ ರಗಳೆಗೆ ನೀಡಿದ ಸ್ವಯಂಪ್ರೇರಿತವಾದ ಮತ್ತು ವಿಶೇಷವಾದ ಸಂದರ್ಶನದಲ್ಲಿ ಗುಡುಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. ವಾಟಾಳರ ತರಾವರಿ ಪ್ರತಿಭಟನೆಗಳಿಗೆ ಜನರೆ ಉತ್ತರ ಕೊಟ್ಟಿದ್ದಾರೆ ಬಿಡಿ :)

    ಪ್ರತ್ಯುತ್ತರಅಳಿಸಿ
  2. ಅಮರರೇ,
    ಪ್ರತಿಭಟನೆಯ ಫಲವನ್ನು ಉಣ್ಣಲು ಸಮಯ ಬೇಕಲ್ಲಾ... ಅದ್ಕೇ ಜನ ಅವರಿಗೆ ಸಮಯ ಕೊಟ್ಟಿದ್ದಾರೆ...

    ಪ್ರತ್ಯುತ್ತರಅಳಿಸಿ
  3. ಇದೇನು! ಉಟ್ಟು ಓರಾಟಗಾರರಿಗೆ ಉಟ್ಟುಡುಗೆಯಲ್ಲೇ ಅಟ್ಟಿಬಿಡಬೇಕೆ? ಖನ್ನಡಿಗರು ಪ್ರಜ್ಞಾವಂತರಾಗುತ್ತಿರುವ ಕೆಟ್ಟ ಲಕ್ಷಣಗಳು ಸ್ಪಷ್ಟವಾಗುತ್ತಿವೆ.

    ಪ್ರತ್ಯುತ್ತರಅಳಿಸಿ
  4. ಕತ್ತೆಗಳು ಬೇಕಿದ್ದಲ್ಲಿ ನಮ್ಮಲ್ಲಿ ವಿಚಾರಿಸಿ -ವಾಟಾಳ್ ನಾಗರಾಜ್, ವಿಧಾನ ಸೌಧದ ಎದುರು, ಬೆಂಗಳೂರು

    ಪ್ರತ್ಯುತ್ತರಅಳಿಸಿ
  5. ಸುನಾಥರೆ,
    ಉಟ್ಟು ಓರಾಟಗಾರರು ಉಟ್ಟಬಟ್ಟೆ ತೊಟ್ಟು ಓಡಾಟ ಮಾಡುವಂತೆ ಮಾಡಿದ ಮತದಾರನಿಗೆ ಜೈ. ಪ್ರಜ್ಞಾವಂತಿಕೆಯೇ ಜಾರಕಾರಣಿಗಳ ಇಲ್ಲದ ಪ್ರಜ್ಞೆಯನ್ನೂ (ಬಡಿದೆಬ್ಬಿಸಿ) ತಪ್ಪಿಸಲಾರಂಭಿಸಿರುವುದು ಅಸಂತೋಷದ ವಿಷಯ.

    ಪ್ರತ್ಯುತ್ತರಅಳಿಸಿ
  6. ಪಬ್ಬಿಗರೆ,

    ನೀವು ಕೊಟ್ಟ ವಿಳಾಸ ತಪ್ಪಾಗಿದೆ. ಅಲ್ಲಿ ಸಂಪರ್ಕಿಸಿದಾಗ ಅಲ್ಲಿಂದ ಬಂದ ಉತ್ತರದ ಪ್ರಕಾರ,

    ವಟವಟಾಳ್ ಬೇಕಿದ್ದರೆ ವಿಚಾರಿಸಿ ಅಂತ ಬೋರ್ಡು ಹಾಕಿಕೊಂಡ ಕತ್ತೆಗಳು ಕಾಣಸಿಕ್ಕಿವೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D