(ಬೊಗಳೂರು ದನಸೇವಾ ಬ್ಯುರೋದಿಂದ)
ಬೊಗಳೂರು, ಮೇ 28- ಇದುವರೆಗೆ ಕಷ್ಟಪಟ್ಟು ಜನ ಸೇವೆ ಮಾಡುತ್ತಿದ್ದ ಜನನಾಯಕರನೇಕರಿಗೆ ರಾಜ್ಯದ ಮತದಾರ ತಾನಾಗಿಯೇ 'ವಿಶ್ರಾಂತಿ' ನೀಡಿರುವಂತೆಯೇ, ತಮಗೂ ಸಮಪಾಲು-ಸಮಬಾಳು ಎಂಬ ಧ್ಯೇಯ ಹೊಂದಿದ ಗೆದ್ದವರು ಕೂಡ ವಿಧಿವಿಧಾನಸೌಧದಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಸಿದ್ಧತೆಗಳನ್ನು ನಡೆಸುತ್ತಿದ್ದಾರೆ.ಇದಕ್ಕವರು ಕೊಡುವ ಕಾರಣಗಳೂ ಒಪ್ಪತಕ್ಕದ್ದೇ. ಎಲ್ಲರೂ ತಮ್ಮ ಗೆಲುವನ್ನು ಪಟಾಕಿಗೆ ದುಡ್ಡು ಸುರಿದು, ತುಂಡು ತಿಂದು ಗುಂಡೇರಿಸಿ ಆಚರಿಸಿಕೊಳ್ಳುತ್ತಾರೆ. ನಾವು ಅವರಿಗಿಂತ ವಿಭಿನ್ನ. ಭಿನ್ನವಾಗಿಯೇ ಆಚರಿಸುತ್ತೇವೆ. ನಾವೆಲ್ಲರೂ ವಿಶ್ರಾಂತಿ ತೆಗೆದುಕೊಳ್ಳುವ ಮೂಲಕ ಗೆಲುವು ಆಚರಿಸುತ್ತೇವೆ ಎಂದು ಅವರೆಲ್ಲರೂ ಬೊಗಳೆ ರಗಳೆ ಬ್ಯುರೋದೆದುರು ತಾವಾಗಿಯೇ ಸಂದರ್ಶನ ನೀಡುತ್ತಾ ಹೇಳಿದ್ದಾರೆ.
ಕತ್ತೆ ಕುದುರೆ ಲೆಕ್ಕಾಚಾರ
ಈಗೇನಿದ್ದರೂ ಕುದುರೆಗಳಿಗೇ ಕಾಲ. ಕುದುರೆ ವ್ಯಾಪಾರ ಒಳ್ಳೆ ಭರ್ಜರಿ ಭರದಿಂದ ಸಾಗುತ್ತಿದೆ. 110 ಕುದುರೆಗಳಿದ್ದರೂ, ಕೇವಲ ಮೂರು ಕುದುರೆಗಳಿಗೇ ಐಷಾರಾಮಿ ಲಾಯ ಕಟ್ಟಬೇಕಾಗಿರುವುದು ಕುದುರೆ ಲಾಯದ ಒಡೆಯರ ದುರ್ದೈವ. ಒಂದಿಡೀ ರಾಜ್ಯದ ಐದುವರೆ ಕೋಟಿ ಜನತೆ ಈ ಮೂರು ವಿಶಿಷ್ಟ, ಅತಿವಿಶಿಷ್ಟ ಮತ್ತು ಅತಿಅತಿ ವಿಶಿಷ್ಟ ಕುದುರೆಗಳ ಮುಷ್ಟಿಯೊಳಗೆ ಸಿಲುಕಿದ್ದು, ಕೆಲಸವಾಗಬೇಕಿದ್ದರೆ ಕಾಲು ಹಿಡಿಯಲೇ ಬೇಕು ಎಂಬ ಪರಿಸ್ಥಿತಿ ಇರುವುದರಿಂದ ಇಲ್ಲಿ ಕತ್ತೆಗಳೇ ಆಗಬೇಕೆಂದಿಲ್ಲ, ಮೂರು ಕುದುರೆಗಳ ಕಾಲು ಹಿಡಿದರೂ ಸಾಕಾಗುತ್ತದೆ, ಕೆಲಸ ಮಾಡಿಸಿಕೊಳ್ಳಲು. ಅದೂ ಅಲ್ಲದೆ, ಅವರಿಗೆ ಇವರ ಕೆಲಸವಾಗಬೇಕು, ಇವರಿಗೆ ಅವರ ಕೆಲಸವಾಗಬೇಕು ಎಂದಿರುವುದರಿಂದ ಯಾರು ಯಾರನ್ನು ಬೇಕಾದರೂ ಯಾವುದೇ ಪ್ರತಿಷ್ಠಿತ ಸ್ಥಾನಗಳಲ್ಲಿ ಕೂರಿಸಿಕೊಳ್ಳಬಹುದು ಎಂದು ಬೊ.ರ. ತೀರ್ಪು ನೀಡುತ್ತಿದೆ.ಈ ಕುದುರೆಗಳು ಕೂಡ ಗೆದ್ದೆತ್ತಿನ ಬಾಲ ಹಿಡಿದವುಗಳೇ ಆಗಿರುವುದರಿಂದಾಗಿ ಇವುಗಳ ಕಾಲು ಹಿಡಿಯುವುದಕ್ಕೆ ಅಡ್ಡಿಯಿಲ್ಲ ಎಂಬುದು ಸಚಿವ'ಲಾಯ'ದ ವಿಶ್ಲೇಷಕರ ಲೆಕ್ಕಾಚಾರ.
ವಿಶೇಷವೆಂದರೆ, ಈ ಆರು ಕುದುರೆಗಳೇ ಕರು-ನಾಟಕ ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚು ಬೆಲೆ ಬಾಳುವವುಗಳಾಗಿದ್ದು, ಇವುಗಳನ್ನು ಬೇಟೆಯಾಡುವುದಕ್ಕಾಗಿ ಅಡಿಗೆ ಬಿದ್ದ ಪಾಳಯಗಳೂ ಮೂಗು ಮೇಲೆತ್ತಿ ಪರಸ್ಪರ ಒಟ್ಟಾಗಿ ಸಿದ್ಧತೆ ನಡೆಸಿದ್ದವು. ಆದರೆ ಎಲ್ಲೋ ಒಂದು ಕಡೆ ಮತದಾರನ ಆಕ್ರೋಶದ ವಾಸನೆಯೊಂದು ಬಲವಾಗಿ ಬೀಸಿದ ರಭಸಕ್ಕೆ ಅವರೆಲ್ಲರೂ ಈ ಬೇಟೆ ನಿರ್ಧಾರದಿಂದ ರಭಸವಾಗಿ ತಳ್ಳಲ್ಪಟ್ಟಿದ್ದರು ಎಂಬುದು ಬೊಗಳೆ ರಗಳೆಗೆ ಮಾತ್ರ ಗೊತ್ತಿರುವ ವಿಚಾರ.
ಆದರೆ, ಈ ಆರು ಕುದುರೆಗಳು ಎರಡೂ ರಾಜರ ನಡುವೆ ಯಾರು ಹಿತವರು ನಮಗೆ ಎಂದು ಲೆಕ್ಕಾಚಾರ ಹಾಕುತ್ತಲೇ ಇರುವುದರಿಂದ ಈ ಬಿಸಿಯನ್ನು ಇಳಿಸಲು ಅವರ ತಲೆಯ ಮೇಲೆ ದೊಡ್ಡ ದೊಡ್ಡ ಸೂಟ್‌ಕೇಸ್‌ಗಳನ್ನು ಹೋಲುವ ಕೂಲರ್‌ಗಳನ್ನು ಇರಿಸಬೇಕಾಗುತ್ತದೆ ಎಂಬುದು ತಿಳಿದುಬಂದಿದೆ. ಅವರ ಮನಸ್ಸು ತಂಪು ತಂಪಾಗಿಸಲು ಈ ಕೂಲರನ್ನು ಸುಡು ಬೇಸಿಗೆಯಲ್ಲಿ ಮಾತ್ರವಲ್ಲದೆ, ಬಿರು ಚಳಿಗಾಲದಲ್ಲೂ ಇರಿಸಬೇಕಾಗುತ್ತದೆ.
ಅದೆಲ್ಲ ಇರಲಿ, ಇದೀಗ ಎಲ್ಲ ಕುದುರೆಗಳನ್ನೂ ಕಟ್ಟಿ ತಂದು ಲಾಯದಲ್ಲಿರಿಸಲಾಗಿದ್ದು, ಇನ್ನು ಸ್ವಲ್ಪ ದಿನ ಎಂದರೆ ಸುಮಾರು ಐದು ವರ್ಷಗಳ ಕಾಲ ಮಾತ್ರವೇ ವಿಶ್ರಾಂತಿ ತೆಗೆದುಕೊಳ್ಳಲು ಎಲ್ಲ ಗೆದ್ದವರೂ ಹೊರಟಿರುವುದಾಗಿ ಬಲ್ಲ ಮೂಲಗಳು ವರದ್ದಿ ಮಾಡಿವೆ.
ವಿಧಿವಿಧಾನಸೌಧದಲ್ಲೇ ಕೆಲವರು ಪವಡಿಸಲಿದ್ದರೆ, ಮತ್ತೆ ಕೆಲವರು ತಮ್ಮ ಕ್ಷೇತ್ರದ ಮತದಾರರ ಕೈಗೆ ಸಿಗದಷ್ಟು ದೂರದಲ್ಲಿ ತಂಗಲಿದ್ದಾರೆ. ಕಳೆದ ಎರಡು ತಿಂಗಳಲ್ಲಿ ಓಡಾಡಿ ಓಡಾಡಿ ಕೈ ಮುಗಿದು, ಕಾಲ್ಮುಗಿದು, ಎದ್ದು ಬಿದ್ದು ಕೆಟ್ಟು ಗಬ್ಬೆದ್ದು ಹೋಗಿರುವ ರಸ್ತೆಗಳಲ್ಲಿ ನಡೆದು, ರಸ್ತೆಗಳೇ ಇಲ್ಲದ ಊರುಗಳಲ್ಲಿಯೂ ನಡೆದು ಎಷ್ಟೊಂದು ಸುಸ್ತಾಗಿರಲಿಕ್ಕಿಲ್ಲ...! ಹಾಗಾಗಿ ಅವರು ವಿಶ್ರಾಂತಿ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದೂ ಬೊ.ರ. ತೀರ್ಪು ನೀಡುತ್ತದೆ.
ಆದರೆ ಮಧ್ಯೆ ಏನಾದರೂ ಈ ಆರು ಕುದುರೆಗಳನ್ನು ಬೇರೆಯವರು ಎಬ್ಬಿಸಿ 'ಉತ್ತರ ಗೋಗ್ರಹಣ' ಮಾಡಿಸಿ ಕರೆದುಕೊಂಡು ಹೋದರೆ, ಈ ಗೋವುಗಳಿಗೆ ಸರಿಯಾದ ಗೋ'ಗ್ರಾಸ' ನೀಡಿ ಸರಿಪಡಿಸಲು ಎಚ್ಚರಗೊಳ್ಳಲೇಬೇಕಾಗುತ್ತದೆ. ಎಚ್ಚರಿಸಲು ಸಾಕಷ್ಟು ಜನ ಇರುವುದರಿಂದ ಚಿಂತೆ ಇರುವುದಿಲ್ಲ. ಹೀಗಾಗಿ ಚಿಂತೆ ಸದ್ಯಕ್ಕೆ ನಿಶ್ಚಿಂತೆ.
6 ಕಾಮೆಂಟ್‌ಗಳು
ಅಶ್ವಮೇಧಯಾಗದ ಆರೂ ಕುದುರೆಗಳು ಸಜ್ಜಾಗಿ ಹೊರಟಿವೆ. ಕಟ್ಟಿ ಹಾಕುವ ಭೂಪ ಯಾರೊ?
ಪ್ರತ್ಯುತ್ತರಅಳಿಸಿRegistration- Seminar on the occasion of kannadasaahithya.com 8th year Celebration
ಪ್ರತ್ಯುತ್ತರಅಳಿಸಿPreetiya bogalegaarare,
On the occasion of 8th year celebration of Kannada saahithya.
com we are arranging one day seminar at Christ college.
As seats are limited interested participants are requested to
register at below link.
Please note Registration is compulsory to attend the seminar.
If time permits informal bloggers meet will be held at the same
venue after the seminar.
For further details and registration click on below link.
http://saadhaar
a.com/events/index/english
http://saadha
ara.com/events/index/kannada
Please do come and forward the same to your like minded
friends
-kannadasaahithya.com balaga
ಮಣ್ಣಿನ ಮಗ ಮತ್ತು ಮೊಮ್ಮಗ ಮಣ್ಣಿಗೇ ಬಿದ್ದುದನ್ನು ನಿಮಗೇಕೆ ಸಹಿಸಲಾಗುತ್ತಿಲ್ಲ? ಅವರು ಇರಬೇಕಾದ ಜಾಗ ಅದುವೇ ತಾನೆ?
ಪ್ರತ್ಯುತ್ತರಅಳಿಸಿಸುನಾಥರೆ,
ಪ್ರತ್ಯುತ್ತರಅಳಿಸಿಅಶ್ವಮೇಧಕ್ಕೆ ಸಜ್ಜಾದ ಕುದುರೆಗಳನ್ನು ಮೋಡಿ ಮಾಡುವುದಕ್ಕಾಗಿ ಗುಜರಾತಿಗೆ ಅಟ್ಟಿದ್ದಾರಂತೆ. ಅಲ್ಲೇ ಕಟ್ಟಿ ಹಾಕಿದ್ದಾರೆ. ನೋಡೋಣ ಯಾವಾಗ ಬಿಡುಗಡೆಯ ಬೇಡಿ ಅಂತ...
ಮೋಹನ್ ಅವರೆ,
ಪ್ರತ್ಯುತ್ತರಅಳಿಸಿಸೆಮಿನಾರಿಗೆ ಆಹ್ವಾನ ನೀಡಿದ್ದಕ್ಕೆ ಧನ್ಯವಾದ. ಒಳ್ಳೆಯ ಪ್ರಯತ್ನಕ್ಕೊಂದು ಶುಭ ಹಾರೈಕೆ. ಖಂಡಿತಾ ಬರಲು ಪ್ರಯತ್ನಿಸ್ತೀನಿ ಮತ್ತು ಇದನ್ನೇ ನಮ್ಮ ಬ್ಲಾಗಿನಲ್ಲೂ ಹಾಕ್ತೀನಿ.
ಧನ್ಯವಾದ
ಪಬ್ಬಿಗರೇ,
ಪ್ರತ್ಯುತ್ತರಅಳಿಸಿನೋಡ್ತಾ ಇರಿ... ಮಣ್ಣಿನೊಳಗಿಂದ ಹೇಗೆ ಎದ್ ಬರ್ತಾರೇಂತ... ಇದು ಗಟ್ಟಿ ಪಿಂಡ... ಅಷ್ಟು ಸುಲಭದಲ್ಲಿ ಮಣ್ಣುಪಾಲಾಗುವಂಥದ್ದಲ್ಲ, ಮಣ್ಣಿನ 'ಮಗ'ನ ಪ್ರಮಾಣವಚನ ನೋಡುವುದೇ ನನ್ನ ಕೊನೆಯ ಆಸೆ ಅಂತ ಈಗ್ಲೇ ಘೋಷಿಸಿದವರು, ಆಸೆ ತೀರಿಸದೆ ಹೋಗಲಾರರು.!!!
ಏನಾದ್ರೂ ಹೇಳ್ರಪಾ :-D