(ಬೊಗಳೂರು ಕು-ತಂತ್ರ ಬ್ಯುರೋದಿಂದ)
ಬೊಗಳೂರು, ಮೇ 25- ಹಲವು ಕ್ಷೇತ್ರಗಳಲ್ಲಿ ಅಕ್ಷರಶಃ 'ಹಣಾ'ಹಣಿಯೇ ಆಗಿಬಿಟ್ಟಿರುವ ಚುನಾವಣೆಗಳ ಫಲಿತಾಂಶ ಹೊರಬಿದ್ದಿದ್ದು, ಅದೆಷ್ಟೋ ದೇವರು, ದಿಂಡರನ್ನು ಸಂದರ್ಶಿಸಿ, ಲೆಕ್ಕವಿಲ್ಲದಷ್ಟು ಜ್ಯೋತಿಷಿಗಳು, ಪುರೋಹಿತರೊಂದಿಗೆ ಚರ್ಚಿಸಿದ ಪರಿಣಾಮ ಮಾನನೀಯ ತೆನೆಹೊತ್ತ ರೈತ ಮಹಿಳೆಯ ಒಡೆಯಗೌಡ್ರು ನುಡಿದ ಭವಿಷ್ಯವೂ ನಿಜವಾಗುವುದಾಗಿ ಬೊಗಳೆಗೆ ಖಚಿತ ಮಾಹಿತಿ ದೊರೆತಿದೆ.ನಮ್ಮ ಬೆಂಬಲವಿಲ್ಲದೆ ಯಾರು ಸರಕಾರ ರಚಿಸ್ತಾರೋ ನೋಡ್ತೀನಿ ಅಂತ ಅವರ ಬಾಯಿಂದ ಬಿದ್ದ ಅಣಿಮುತ್ತುಗಳು ನಿಜವಾಗುತ್ತಿದ್ದು, ತೆನೆಹೊತ್ತವರ ಕಚೇರಿಯ ಮುಂದೆ ಹಸ್ತದ ಚಿಹ್ನೆಯನ್ನೂ ಇರಿಸಲು ಸಿದ್ಧತೆ ನಡೆಸಲಾಗುತ್ತಿದೆ. ಇದಕ್ಕೆ ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡುವ ಉದ್ದೇಶ ಎಂಬ ಕಾರಣ ನೀಡುವುದಿಲ್ಲ. ಇಲ್ಲಿ ಹಸ್ತ ಎಂಬುದು ಜ್ಯೋತಿಷ್ಯ, ಭವಿಷ್ಯ ವಾಣಿ ನುಡಿಯುವವರು ಹಾಕಿಕೊಳ್ಳುವ ಬೋರ್ಡ್‌ನಲ್ಲಿರುವ ಲಾಂಛನವೇ ಹೊರತು, ರೈತ ಮಹಿಳೆ ಮತ್ತು 'ಕೈ'ಗಳು ಪರಸ್ಪರ ಮುಗಿದುಕೊಳ್ಳುತ್ತವೆ ಎಂಬ ಅರ್ಥವನ್ನು ಕಲ್ಪಿಸಿದರೆ ಅದಕ್ಕೂ ಬೊಗಳೆ ರಗಳೆ ಸಿದ್ಧವಾಗಿದೆ.
ಹೇಗೂ ಹಲವು ತಂತ್ರಗಾರಿಕೆಗಳಿಂದಾಗಿ ಅತಂತ್ರದ ಸ್ಥಿತಿ ನಿರ್ಮಾಣವಾಗಿರುವಾಗ ಕುತಂತ್ರ ಮಾಡಲು ಕೂಡ ಯಾರಾದರೂ ಇರಬೇಕಿರುವುದು ಬೈಡೀಫಾಲ್ಟ್ ಅನಿವಾರ್ಯ ಪರಿಸ್ಥಿತಿ. ಹೀಗಾಗಿ ಆ ಕಾರ್ಯವನ್ನು ತಮ್ಮ ಕೈಗೆ ಎತ್ತಿಕೊಳ್ಳಲು, ಅದರ ಜವಾಬ್ದಾರಿಯನ್ನು ತೆನೆ ಹೊತ್ತಂತೆಯೇ ಹೊರಲು ಸಿದ್ಧ ಎಂದು ಅವರು ವಿಶೇಷ ಸಂದರ್ಶನದಲ್ಲಿ ಬಾಯಿಬಿಟ್ಟಿದ್ದಾರೆ.
ಈ ಮಧ್ಯೆ, ಗೆದ್ದವರು, ಸೋತವರೆಲ್ಲರೂ ಬಾಯಿ ಚಪ್ಪರಿಸಿಕೊಳ್ಳುತ್ತಿದ್ದಾರೆ. ಹೇಗಾದರೂ ಮತದಾರನ ಮನೆ ಬಾಗಿಲಿಗೆ ತಿರು ತಿರುಗಿ ಸುಸ್ತಾಗಿದೆ. ಇನ್ನೈದು ವರ್ಷ ಗಡದ್ದಾಗಿ ನಿದ್ದೆ ಮಾಡಬಹುದು (ಯಾವುದೇ ಮೈತ್ರಿ ಕು-ತಂತ್ರಗಳು ನಡೆಯದೇ ಇದ್ದರೆ!).
ಒಂದೆರಡು ತಿಂಗಳು ಮತದಾರರಿಗೆ ಕೈ ಮುಗಿದು ಕೈಗಳೆಲ್ಲಾ ನೋವಾಗಿದೆ. ಇನ್ನೇನಿದ್ದರೂ ಕೈ ಮುಗಿದು, ಕಾಲು ಹಿಡಿಯುವ ಸರದಿ ನಮ್ಮ ಮತದಾರರದು ಎಂದು ಹೆಮ್ಮೆಯಿಂದ ಬೀಗುತ್ತಿರುವ ಜಾರಕಾರಣಿಗಳು, ಇಷ್ಟು ದಿನ ತಮ್ಮ ತಮ್ಮ ಕೊಠಡಿಗಳಲ್ಲಿ ನಿದ್ದೆಯಿಲ್ಲದೆ ಚಡಪಡಿಸುತ್ತಾ ಚೆಲ್ಲಾಪಿಲ್ಲಿಯಾಗಿದ್ದ ಹಾಸಿಗೆಗಳನ್ನು ಸರಿಪಡಿಸುವಂತೆ ತಮ್ಮ ನೌಕರರಿಗೆ, ಕಾಲಾಳುಗಳಿಗೆ, ಕೈಯಾಳುಗಳಿಗೆ ಆದೇಶ ನೀಡಿರುವುದನ್ನು ಬೊಗಳೆ ಬ್ಯುರೋ ಸ್ಟಿಂಗ್ ಆಪರೇಶನ್ ತಂಡವು ಪತ್ತೆ ಹಚ್ಚಿದೆ.
ಇದುವರೆಗೆ ಸುಮಾರು ಎರಡು ತಿಂಗಳ ಕಾಲ ರಜಾ ಅನುಭವಿಸುತ್ತಾ ನೆಮ್ಮದಿಯಾಗಿದ್ದ ರಾಜ್ಯದ ಜನತೆ ಇನ್ನು ಮುಂದೆ ಹೊಸ ಹೊಸ ಹೊಚ್ಚ ಹೊಸ 'ಬನ್ನಿರಿ, ನೋಡಿರಿ, ಆನಂದಿಸಿರಿ' ಎಂಬಂತೆ ಪ್ರೇರೇಪಿಸುತ್ತಿರುವ ನಾಟಕಗಳನ್ನು ನೋಡಲು ಸಜ್ಜಾಗುತ್ತಿದ್ದಾರೆ ಎಂದು ಇದೇ ವೇಳೆ ರಾಜ್ಯದ ವಿವಿಧೆಡೆ ಅವಿತಿರುವ ನಮ್ಮ ಬೊಗಳೆ ಏಕ ಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳು ಅಲ್ಲಲ್ಲಿಂದ ವರದ್ದಿ ಕಳುಹಿಸುತ್ತಿದ್ದಾರೆ.
4 ಕಾಮೆಂಟ್‌ಗಳು
ನನ್ನ ವೋಟಿಗೆ ಎಂಥಾ ಕಿಮ್ಮತ್ತು ಬರುತ್ತಾ ಇದೆ ಅಂತೀರಪ್ಪಾ. ಪದೇ ಪದೇ ಮನೆಗೆ ಬಂದು ಡಿಮಾಂಡ್ ಮಾಡ್ತಾ ಇದ್ದಾರೀ. ಈ ಸಲಾ ವೋಟು ಒತ್ತಿ ಬಂದಾ ಮೇಲೆ,ಜೊತೆಗಾರನೊಬ್ಬ ಹೇಳಿದ:
ಪ್ರತ್ಯುತ್ತರಅಳಿಸಿ" ಇನ್ನಾರು ತಿಂಗಳಿನ ಮೇಲೆ, ಇದೇ ಸಮಯದಲ್ಲಿ, ಇದೇ ಜಾಗದಲ್ಲಿ ಮತ್ತೆ ಭೇಟಿಯಾಗೋಣ."
OK, ಮತ್ತೆ, ಮತ್ತೆ ಭೇಟಿಯಾಗೋಣ!
ಸುನಾಥರೆ,
ಪ್ರತ್ಯುತ್ತರಅಳಿಸಿಅತಂತ್ರ ವಿಧಾನಸಭೆಯಲ್ಲಿ ಸ್ವತಂತ್ರರು ಯಾವ ಕಡೆ ಹೆಚ್ಚು ಮೇಯಲು ದೊರೆಯುತ್ತದೆ ಎಂದು ಕಾಯುತ್ತಾ ನಮ್ಮನ್ನೆಲ್ಲಾ ಮತ್ತೆ ಭೇಟಿಯಾಗಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ರಹಸ್ಯ ವರದಿಗಳು ಬಂದಿವೆ.
OK ಶೀಘ್ರ ಭೇಟಿಯಾಗೋಣ.
'ಬಂ' ಸೈಕಲ್ ಪಂಕ್ಚರ್ ಆದುದರ ಬಗ್ಗೆಯೂ ವದರಬೇಕಿತ್ತು
ಪ್ರತ್ಯುತ್ತರಅಳಿಸಿಪಬ್ಬಿಗರೇ,
ಪ್ರತ್ಯುತ್ತರಅಳಿಸಿಬಂ ಸೈಕಲ್ ಟೈರು ಢಂ ಅಂತ ಪಂಕ್ಷರ್ ಆಗಿದೆ, ಮಾಯಾಂಗನೆಯ ಆನೆಯೇ ಮಾಯವಾಗಿದೆ, ವಟವಟಾಳ್ ಪ್ರತಿಭಟನಾರಾಜ್ ಅವರಂತೂ ಠೇವಣಿಯೇ ಕಳ್ಕೊಂಡಿದ್ದಾರೆ...ಎಡವೂ ಇಲ್ಲ, ಬಲವೂ ಇಲ್ಲ, ಸಂಯುಕ್ತವೂ ಇಲ್ಲ, ವಿದಳನೆಯೂ ಇಲ್ಲ, ಸುವರ್ಣವೂ ಇಲ್ಲ, ಚಂಪಾವೂ ಇಲ್ಲ... ಮತದಾರನಿಗೆ ಬುದ್ಧಿ ಬರುತ್ತಿರುವುದರಿಂದಾಗಿ ಇದೀಗ ಜಾರಕಾರಣಿಗಳು ಎಚ್ಚರಗೊಳ್ಳುತ್ತಿದ್ದಾರೆ. ಹೇಗಾದ್ರೂ ಮಾಡಿ ಮತದಾರರನ್ನು ಅಶಿಕ್ಷಿತರನ್ನಾಗಿಸಬೇಕೂಂತ ಪ್ರಯತ್ನ ಮಾಡಲು ಸಿದ್ಧತೆ ಮಾಡ್ತಾ ಇದ್ದಾರೆ.
ಏನಾದ್ರೂ ಹೇಳ್ರಪಾ :-D