ಬೊಗಳೆ ರಗಳೆ

header ads

ಕಳ್ಳಬಟ್ಟಿ ದುರಂತಕ್ಕೆ ಕಾರಣ ಪತ್ತೆ

(ಬೊಗಳೂರು ಸಂ-ಚೋಧನಾ ಬ್ಯುರೋದಿಂದ)

ಬೊಗಳೂರು, ಮೇ 23- ಕಳ್ಳಬಟ್ಟಿ ದುರಂತಕ್ಕೆ ಕಾರಣವನ್ನು ಬೊಗಳೆ ರಗಳೆ ಬ್ಯುರೋದ ವಿಶೇಷ ತನಿಖಾ ತಂಡವು ಪತ್ತೆ ಹಚ್ಚಿ ಈ ಸಾಧನೆ ಮಾಡಿದ್ದಕ್ಕೆ ಹೆಮ್ಮೆಯಿಂದ ಪಟಾಕಿ ಹಚ್ಚಿ ಸಂಭ್ರಮಿಸುತ್ತಿದೆ.

ಚುನಾವಣೆ ಸಮಯವಾಗಿರುವುದರಿಂದ ಮತದಾರರು ಯಾವ ಪಕ್ಷಕ್ಕೆ ಮತ ನೀಡುತ್ತಿದ್ದೇವೆ ಎಂದು ಅರಿವಿಗೆ ಬಾರದೆ ಮತಮುದ್ರೆಯೊತ್ತಬೇಕೆಂಬ ಕಾರಣಕ್ಕೆ ರಾಜಕೀಯ ಪಕ್ಷಗಳೇ ಈ ಕಳ್ಳಬಟ್ಟಿ ತಯಾರಿಸಿಟ್ಟಿದ್ದವು ಮತ್ತು ಅದನ್ನು ಹಂಚಿಯೂ ಇದ್ದವು ಎಂಬುದು ಯಾರು ಬೇಕಾದರೂ ಬಾಯಿಬಿಟ್ಟು ಹೇಳಬೇಕೆಂದಿಲ್ಲ ಎನ್ನುವಂತಹ ಹಸಿ ಹಸಿ ಸುಳ್ಳು.

ಹೀಗಾಗಿ ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಚಿತಾವಣೆ ನೀಡುವುದಕ್ಕಾಗಿ ಕದ್ದು ತಂದ (ಕಳ್ಳ) ಬಟ್ಟಿಯನ್ನು ಬಿಟ್ಟಿಯಾಗಿಯೇ ಕುಡಿದು ಜೀವವನ್ನೂ ಬಿಟ್ಟು ಬಿಡುವಂತೆ ಮಾಡಲಾಗಿರುವುದು ತಮಗೆ ಹೆಚ್ಚು ಮತ ಸಿಗದಂತೆ ಮಾಡಲು ವಿರೋಧ ಪಕ್ಷಗಳ ಕೈವಾಡ ಎಂದು ಎಲ್ಲ ಪಕ್ಷಗಳೂ ದೂಷಿಸುತ್ತಿವೆ.

ಆದರೆ ಬೊಗಳೆ ರಗಳೆ ಬ್ಯುರೋ ಸಾಕ್ಷಾತ್ ಕಳ್ಳಬಟ್ಟಿ ಸಮೀಕ್ಷೆ ನಡೆಸಿದ ಪ್ರಕಾರ, ಮತದಾರರು ಕಳ್ಳಬಟ್ಟಿ ಸೇವಿಸಿದ್ದೇ ಈ ದುರಂತಕ್ಕೆ ಕಾರಣ ಎಂದು ತಿಳಿದುಬಂದಿದೆ! ಕಳ್ಳಬಟ್ಟಿ ಸೇವಿಸಿದ ಪರಿಣಾಮವಾಗಿಯೇ ಅವರು ಪ್ರಾಣಕಳೆದುಕೊಂಡ ಕಾರಣ, ಅವರು ಕುಡಿಯದೇ ಇದ್ದಿದ್ದರೆ ಬದುಕಬಹುದಿತ್ತು ಎಂಬುದು ಬೊಗಳೆ ರಗಳೆ ಅಭಿಪ್ರಾಯವಾದುದರಿಂದ ಕುಡಿದದ್ದೇ ದುರಂತಕ್ಕೆ ಕಾರಣ ಎಂಬುದನ್ನು ಖಚಿತವಾಗಿ ಹೇಳಲಾಗುತ್ತಿದೆ!

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. ಕಳ್ಳಬಟ್ಟಿಯನ್ನು ತಯಾರು ಮಾಡಿ, ಎಲೆಕ್ಷನ್ ಟೈಮಿನಲ್ಲಿ ಸರಬರಾಜು ಮಾಡಿದವನು, ಮತ್ತು ಕುಡಿದು ಸತ್ತವರಲ್ಲಿ ಹೆಚ್ಚು ಜನರು ತಮಿಳು ವಲಸೆಗಾರರು ಇರೋದು ನೋಡಿದ್ರೆ, ನಂಗೇನೋ ಇದು ಕಚಡಾನಿಧಿಯ ಕೆಲಸ ಅಂತ ಡೌಟು!

    ಪ್ರತ್ಯುತ್ತರಅಳಿಸಿ
  2. ನೀಲಗಿರಿಯವರೆ,

    ನಿಮ್ಮ ಡೌಟು ನಿಜವಾಗಲೆಂದು ಹಾರೈಸುತ್ತೇವೆ. ನಿಜವಾಗದಿದ್ದರೂ ಈ ಥರ ಮಾಡಿದವರು ತಾವೇ ಸ್ವತಃ ಸಿಕ್ಕಾಪಟ್ಟೆ "ಕಚಡಾ" ನಿಧಿಗಳಾಗಿಯೇಬಿಡುತ್ತಾರೆ.

    ಪ್ರತ್ಯುತ್ತರಅಳಿಸಿ
  3. ಕಳ್ಳಭಟ್ಟಿ ಕುಡಿಯುವ ಬದಲು ಅಸಲಿ ಮದ್ಯ ಕುಡಿಯಬಹುದಲ್ಲ! ನಾನು ಈ ಬಗ್ಗೆ ತುಂಬ ಹಿಂದೆಯೇ ನನ್ನ ಬ್ಲಾಗಿನಲ್ಲಿ ಗಳಹಿದ್ದೆ. ಆದರೆ ಅದನ್ನು ಯಾರೂ ಓದಿರಲಿಲ್ಲ. ದಿನಕರ ದೇಸಾಯಿಯವರ ಚುಟುಕವೊಂದು ನೆನಪಾಗುತ್ತಿದೆ-

    ಕುಡಿಯಬೇಡಿ ಸೇಂದಿ
    ಅಂದರಂದು ಗಾಂಧಿ
    ಬಿಟ್ಟನವನು ಸೇಂದಿ
    ಹಿಡಿದನಿಂದು ಬ್ರಾಂದಿ

    -ಪಬ್

    ಪ್ರತ್ಯುತ್ತರಅಳಿಸಿ
  4. ಪಬ್ಬಿಗರೆ,
    ನಿಮ್ಮ ಅಸಲಿ ಮದ್ಯ ಕುಡಿಯುವ ಸಲಹೆಯೇ ತುಂಬಾ ಕಿಕ್ ಕೊಡುತ್ತಿದೆಯಂತೆ. ಆದ್ರೆ ಕದ್ದು ಮುಚ್ಚಿ ಮಾಡಿದ್ರೇ ಅದ್ರಲ್ಲಿ ಕಿಕ್ ಜಾಸ್ತಿ ಅಂತ ಈ ದನಗಳು ಅಂದ್ಕೊಂಡಿದ್ದಾರೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D