ಹಣದುಬ್ಬರದಿಂದಾಗಿ ಆವಶ್ಯಕ ವಸ್ತುಗಳ ಬೆಲೆ ಏರಿಕೆಯಾಗಿದೆ. ಬಡ ಮತದಾರನಂತೂ ಯಾವುದೇ ಬೆಲೆಗಳು ಕೈಗೆಟುಕದಷ್ಟು ಮೇಲಕ್ಕೇರಿರುವುದರಿಂದ ಆಕಾಶಕ್ಕೆ ಹಾರಲು ಮತ್ತು ಆ ಬೆಲೆಗಳನ್ನು ಹಿಡಿಯಲು ಎಷ್ಟೇ ಪ್ರಯತ್ನ ಪಟ್ಟರೂ ಸೋತಿದ್ದಾನೆ. ಇದೇ ಸಂದರ್ಭ ಊರು-ಪರವೂರುಗಳಿಗೆ ಹೋಗುವ ವಿಮಾನ ಯಾನದ ಟಿಕೆಟ್ ದರಗಳೂ ರಾಕೆಟ್‌ನಂತೆ ಮೇಲೇರುತ್ತಿವೆ ಎಂಬುದು ಕೂಡ ಪತ್ತೆಯಾಗಿದೆ. ಅದೇ ರೀತಿಯಲ್ಲಿ ವಿಧಾನಸಭೆಗೆ ಪ್ರಯಾಣದ ಟಿಕೆಟ್ ದರವೂ ಪೈಪೋಟಿಯಿಂದಾಗಿ ಮೇಲಕ್ಕೇರಿದೆ ಎಂಬುದನ್ನು ಪತ್ತೆ ಹಚ್ಚಲಾಗಿದೆ.
ಇದರಿಂದಾಗಿಯೇ ಹಣದುಬ್ಬರದಿಂದ ಟಿಕೆಟ್ ಬೆಲೆಯೂ ಏರಿದ್ದು, ದೇಶದ ಅರ್ಥಿಕತೆಗೂ ದಢೂತಿ ದೇಹದ ಆರ್ಥಿಕತೆಗೂ ಹೊರೆ ಬಿದ್ದಿದೆ. ಜನ ಸಾಮಾನ್ಯರು ಬುಟ್ಟಿ ತುಂಬಾ ಹಣ ತೆಗೆದುಕೊಂಡು ಹೋಗಿ, ಜೇಬು ತುಂಬಾ ಅಕ್ಕಿಯನ್ನು ಹೇಗೆ ತರುತ್ತಾರೋ... ಅದೇ ಮಾದರಿಯಲ್ಲಿ, ಈ ದಢೂತಿ ದೇಹಿಗಳು ಅಂದರೆ ಜಾರಕಾರಣಿಗಳು, ಟಿಕೆಟ್ ಪಡೆಯುವುದಕ್ಕಾಗಿ ಸೂಟ್‌ಕೇಸು ತುಂಬಾ ನೋಟುಗಳ ಕಂತೆ ತೆಗೆದುಕೊಂಡು ಹೋಗಿ, ಒಂದು ಪುಟ್ಟ ಕಾಗದದ ತುಂಡನ್ನು ಹಿಡಿದುಕೊಂಡು ಬರಬೇಕಾಗಿದೆ. ಇಂಥ ದುರಂತ ಯಾರಿಗೂ ಬರಬಾರದಪ್ಪಾ ಎಂದು ನಾಡಿಗೆ ನಾಡೇ ಕಣ್ಣೀರಿಡುತ್ತಿದೆ ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ, ವಿಧಾನಭೆಗೆ ತೆರಳುವ ಬಸ್ಸಿನ ಟಿಕೆಟ್ ದೊರೆತು, ಗಮ್ಯ ಸ್ಥಾನ ತಲುಪಿದ ಬಳಿಕ ತುಟ್ಟಿ ಭತ್ಯೆ ಹೆಚ್ಚಿಸುವ ಬಗ್ಗೆ ಕ್ರಮ ಕೈಗೊಳ್ಳಲು ಎಲ್ಲಾ ಟಿಕೆಟ್‌ಸಹಿತ ಪ್ರಯಾಣಿಕರು ತೀರ್ಮಾನಿಸಿದ್ದಾರೆ.
0 ಕಾಮೆಂಟ್‌ಗಳು
ಏನಾದ್ರೂ ಹೇಳ್ರಪಾ :-D