(ಬೊಗಳೂರು ನುಂಗೋ ಬ್ಯುರೋದಿಂದ)
ಬೊಗಳೂರು, ಮೇ 2- ಹಣ ನುಂಗುವುದರಲ್ಲಿ ಎಕ್ಸ್‌ಪರ್ಟ್ ಆಗಿರುವ ಪೊಲೀಸ್ ಅಧಿಕಾರಿಯೊಬ್ಬ ಆಂಧ್ರಪ್ರದೇಶದಲ್ಲಿ ಪತ್ತೆಯಾಗಿದ್ದಾನೆ ಎಂಬ ಸುದ್ದಿ ಕೇಳಿದ ತಕ್ಷಣವೇ ಕಿವಿ ನಿಮಿರಿಸಿಕೊಂಡ ರಾಜ್ಯಾಂಗ ಮತ್ತು ಕಾರ್ಯಾಂಗದ ಅಧಿಕಾರಿಗಳು, ಆತನನ್ನು ಎಳೆದು ತಂದು ತಮ್ಮ ಬುಟ್ಟಿಯೊಳಗೆ ಹಾಕಿಕೊಳ್ಳುವ ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.ಹೇಗಿದ್ದರೂ ಬೇರೆ ಬೇರೆ ಪಕ್ಷಗಳ ಟಿಕೆಟ್ ಪಡೆಯುವುದಕ್ಕೆ ಕೋಟ್ಯಂತರ ರೂಪಾಯಿ, ಮತದಾರರಿಗೆ ಆಮಿಷವೊಡ್ಡುವುದಕ್ಕೆ ಕೋಟಿ ಕೋಟಿ ರೂಪಾಯಿ ಎಲ್ಲಾ ನೀಡಲಾಗಿದೆ. ಚುನಾವಣೆಯಲ್ಲಿ ಆರಿಸಿ ಬಂದ ಬಳಿಕ ಇವನ್ನೆಲ್ಲಾ ಬಡ್ಡಿ ಸಮೇತ ಹಿಂದೆ ಪಡೆಯುವುದಕ್ಕೆ ಇಂಥವರ ಅಗತ್ಯವಿದೆ ಎಂಬುದನ್ನು ಮನಗಂಡ ಜಾರಕಾರಣಿಗಳು ಆತನ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಇನ್ನೊಂದೆಡೆ, ಜನಸಾಮಾನ್ಯರನ್ನು ಎಷ್ಟು ಹಿಂಡಿದರೂ ಈ ರೀತಿ ಹಣ ನುಂಗುವಿಕೆ ತಮಗೆ ಕಷ್ಟ-ಸಾಧ್ಯ. ಹೀಗಾಗಿ ಈ ಪೊಲೀಸಪ್ಪನಿಂದ ತರಬೇತಿ ಪಡೆಯವುದಕ್ಕೆ, ಆತನ ಮೂಲಕ ತರಬೇತಿ ಶಿಬಿರವೊಂದನ್ನು ಏರ್ಪಡಿಸುವುದಕ್ಕೆ ಪ್ಲಾನ್ ಹಾಕುತ್ತಿದ್ದಾರೆ.
ಈ ಮಧ್ಯೆ, ನುಂಗಿದ ಹಣವನ್ನು ವಾಂತಿ ಮಾಡಿಸುವುದಕ್ಕೆ ವೈದ್ಯರು ಬರೆದುಕೊಟ್ಟಿರುವ ಮಾತ್ರೆಯ ಹೆಸರು ಯಾವುದು ಎಂಬುದನ್ನು ಕೂಡ ಪತ್ತೆ ಮಾಡಲಾಗುತ್ತಿದೆ. ಯಾಕೆಂದರೆ ಬರೇ ನೋಟು ನುಂಗಣ್ಣಗಳನ್ನು ತಂದು ಕೂರಿಸಿದರೆ ಯಾವುದೇ ಕೆಲಸವಾಗಲಾರದು. ಅವರು ನುಂಗಿದ್ದನ್ನು ಕಕ್ಕಿಸದಿದ್ದರೆ ತಮ್ಮ ಶ್ರಮವೆಲ್ಲಾ ವ್ಯರ್ಥ ಎಂಬ ಗೂಢಚಿಂತನೆ ಅವರದು.
2 ಕಾಮೆಂಟ್‌ಗಳು
ಈ ಅಧಿಕಾರಿ ಪದವಿ ಪಡೆದದ್ದು ಎಲ್ಲಿ? ಆಲೂ ಪ್ರಸಾದರ ಠಕ್ಕರ ತರಬೇತಿ ವಿದ್ಯಾಲಯದಲ್ಲೊ ಅಥವಾ ಒದಿಯೊಗೌಡ ವಂಚಕ ವಿದ್ಯಾಲಯದಲ್ಲೊ?
ಪ್ರತ್ಯುತ್ತರಅಳಿಸಿಸುನಾಥರೆ,
ಪ್ರತ್ಯುತ್ತರಅಳಿಸಿಈ ಪೊಲೀಸಪ್ಪ ಇಬ್ಬರಲ್ಲೂ ತರಬೇತಿ ಪಡೆದಿದ್ದಾನೆ ಅಂತ ಬಲ್ಲ ಮೂಲಗಳು ತಿಳಿಸಿವೆ. ಆಲೂ ಗುಳುಂಕರಿಸೋದು ಮತ್ತು ಕೆಳಗಿದ್ದವರನ್ನು ಒದಿಯೋದನ್ನೆಲ್ಲಾ ನೀವು ಹೇಳಿದ ವಿವಿಗಳಿಂದಲೇ ಕಲಿತದ್ದು.
ಏನಾದ್ರೂ ಹೇಳ್ರಪಾ :-D