ಕಳೆದ ಎರಡು ವರ್ಷಗಳಿಂದ ಓದುಗರು ಬ್ಲಾಗು ಬಿಟ್ಟೋಡುಗರು ಆಗುವಂತೆ ನೋಡಿಕೊಂಡಿರುವ ಬೊಗಳೆ ರಗಳೆ ಬ್ಯುರೋ ರಗಳೆಗೆ ಓದುಗರ ಬರೆಗಳೇ ಕಾರಣವಾಗಿದ್ದಲ್ಲದೆ, ಇದರಿಂದಾಗಿಯೇ ಸಾಕಷ್ಟು ರಗೆಳೆಯರೂ ದೊರೆತಿದ್ದಾರೆ ಎಂದು ಬೊಗಳೆ ರಗಳೆ ಬ್ಯುರೋ ಇಂದು ಸಂಭ್ರಮದಿಂದ ಹೇಳಿಕೊಳ್ಳುತ್ತಿದೆ.
ಇದೇನಪ್ಪಾ, ಬೊಗಳೆ ಬ್ಯುರೋದ ಏಕ ಸದಸ್ಯ ಬ್ಯುರೋದ ಸಮಸ್ತ ಮಂದಿಗೆ ತಲೆ ಕೆಟ್ಟಿದೆಯಾ ಅಂತ ಬೆಪ್ಪಾಗುವವರಿಗೊಂದು ತಲೆ ಚಿಟ್ಟು ಹಿಡಿಸುವ, ದಿಗ್ಭ್ರಮೆ ಮೂಡಿಸುವ ಸುದ್ದಿ. ಏಪ್ರಿಲ್ 1ರಂದೇ ನಮ್ಮ ಬ್ಯುರೋದ ಜನ್ಮದಿನ ಅಂತ ರಚ್ಚೆ ಹಿಡಿದು, ಊರೆಲ್ಲಾ ರಂಪ ಮಾಡಿ, ದೇಶದೆಲ್ಲೆಡೆ ಪ್ರತಿಭಟನಾ ಪ್ರದರ್ಶನಗಳನ್ನು ಮಾಡಿ, ಸಿಕ್ಕ ಸಿಕ್ಕಲ್ಲೆಲ್ಲಾ ಕೂಗಾಡಿದ ಎಲ್ಲ ಓದುಗರು ಈ ಸುದ್ದಿ ಕೇಳಿ ಬೆಚ್ಚಿ ಬೀಳಬಹುದು.
ಈ ಸುದ್ದಿ ಏನಪಾ ಎಂದರೆ, ನಮ್ಮ ಬ್ಯುರೋದ ಜನ್ಮ ದಿನ ಏ.1 ಅಲ್ಲ, ಬದಲಾಗಿ, ಏ.4. ಅಂದ್ರೆ ಇಂದು! ಎರಡು ವರ್ಷಗಳ ಹಿಂದೆ ಅದ್ಯಾವುದೋ ಕಾರಣಕ್ಕೆ ತಲೆಚಿಟ್ಟು ಹಿಡಿದು ಈ ಬೊಗಳೆಯ ಪುಟದ ಪ್ರತಿಷ್ಠಾಪನೆಯನ್ನು ಇದೇ ದಿನ ನೆರವೇರಿಸಲಾಗಿದ್ದು, ಇದುವರೆಗೆ ಬೊಗಳೂರಿನ ಮಂಗನ ಮುಸುಡಿಗೆ ಕೈ ಒತ್ತಿಹೋದವರ, ಕೈಯೆತ್ತಿ ಹೋದವರ ಸಂಖ್ಯೆ ಐಒತ್ತು ಸಾವಿರ!
2006ನೇ ಏಪ್ರಿಲ್ ನಾಲ್ಕರಂದು ಸ್ವಲ್ಪ ಕಾಯಿರಿ, ಅಸತ್ಯದ ಅನ್ವೇಷಣೆಗೆ ಹೊರಟಿರುವುದಾಗಿ ಹೇಳಿ ಆರಂಭಿಸಿದಾಗ, ವಾಸ್ತವವಾಗಿ ಬ್ಲಾಗೆಂದರೆ ಏನು ಎಂಬುದೇ ಅರಿವಿರಲಿಲ್ಲ ಎಂಬುದು ಖಂಡಿತಾ ಅಸತ್ಯವಲ್ಲ. ಅದರಲ್ಲಿ ಏನು ಬರೆಯೋದು ಅಂತ ತಲೆ ಕೆರೆದುಕೊಳ್ಳಲೆಂದೇ ಮೂರು ದಿನ ತೆಗೆದುಕೊಂಡ ಬಳಿಕ ಎರಡನೇ ಪೋಸ್ಟ್ ಬಂದಿತ್ತು. ಊಹೂಂ... ಸರಿ ಎನಿಸಲಿಲ್ಲ... ಮತ್ತೆ ಏನೇನೋ ಗೀಚಿ, ಅಳಿಸಿ, ಗೀಚಿ ಅಳಿಸಿ, ಎಲ್ಲಾ ನೋಡಿದ ನಂತರ ಸಿಕ್ಕಿದ ಐಡಿಯಾವೊಂದರಿಂದಾಗಿ ಇಡೀ ಕನ್ನಡಾಂತರ್ಜಾಲಿಗರು ಕಿರಿಕಿರಿ ಎದುರಿಸಲೇಬೇಕಾದ ಪ್ರಸಂಗವೊಂದು ಸೃಷ್ಟಿಯಾಯಿತು ಎಂದು ತಿಳಿಸಲು ವಿಷಾದಿಸುತ್ತೇವೆ.
ಇದುವರೆಗೆ ಸುಮಾರು 400ರ ಸಮೀಪದಷ್ಟು ಬೊಗಳೆ ವರದ್ದಿಗಳು ನಮ್ಮ ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿ ಒದರಿದ್ದರಿಂದ ಪ್ರಕಟವಾಗಿದ್ದು, ನಮಗೆ ಬಿದ್ದ ಒದೆಗಳ ಸಂಖ್ಯೆ ಐವತ್ತು ಕಿಲೋ ಸಮೀಪಿಸಿದೆ.
ಈ ಮಧ್ಯೆ ಮಧ್ಯೆ, ಬೊಗಳೆಯಲ್ಲಿ ವರದಿ ಪ್ರಕಟವಾಗದೆ, ಚಂದಾದಾರರಿಗೆಲ್ಲ ವಂಚಿಸಿದರೂ, ನೀಡದ ಚಂದಾ ಹಣ ವಾಪಸ್ ಕೇಳದೆ, ಇಂದು ವರದಿ ಬಂದಿಲ್ಲ ಅಂತ ಸಂಭ್ರಮದಿಂದ ಕುಣಿದಾಡುತ್ತಿದ್ದಾ ಸಂತೋಷ ಕೂಟ ಏರ್ಪಡಿಸಲಾಗುತ್ತಿತ್ತು ಎಂಬುದನ್ನು ಕೂಡ ನಮ್ಮ ಬ್ಯುರೋದ ರದ್ದಿಗಾರರು ಕಂಡುಕೊಂಡಿದ್ದಾರೆ.
ಮಾಹಿತಿ ಹತ್ತಿಕ್ಕು ಕಾಯ್ದೆ ಪ್ರಯೋಗಿಸಿ ನಮ್ಮ ಜನ್ಮ ಜಾಲಾಡಲು ಯತ್ನಿಸಿದ ಆತ್ಮೀಯ ಬೊಗಳಿಗರಿಗೆ, ದಿನಾಲೂ 'ಚುಚ್ಚು'ಮಾತುಗಳಿಂದ ಚುಚ್ಚುತ್ತಲೇ, ನಾವು ಚಚ್ಚುವುದನ್ನು ನೋಡುತ್ತಲೇ ಇರುವವರು, ಕಚೇರಿಯಲ್ಲಿ ಕೆಲಸದೊತ್ತಡವಿದ್ದರೂ, ಕಾಫೀ-ಟೀ ಕುಡಿಯುವಂತೆ ರಿಲ್ಯಾಕ್ಸೇಷನ್‌ಗಾಗಿ ನಮ್ಮ ಬೊಗಳೂರಿನ ಈ ತಾಣಕ್ಕೆ ಬಂದು ಉಗುಳಿ ಹೋಗುವವರು, ಯಾರದೋ ಕಾಲೆಳೆಯಬೇಕು ಅಂತನ್ನಿಸಿದಾಗ, ಬೊಗಳೆ ರಗಳೆಗೆ ಬಂದು ಕಾಲೋ, ಕೈಯೋ ಎಳೆದು ಹೋಗುವವರು, ಇಂದು ಬೊಗಳೆಯಲ್ಲೇನಿದೆ ಅಂತ ನಿರೀಕ್ಷೆಯಿಂದ ಬಂದು ನಿರಾಶರಾಗುವವರು, ಬೊಗಳೆಯಲ್ಲಿ ಏನೂ ಇಲ್ಲ, ಅದ್ರೂ ಒಮ್ಮೆ ಓದೋಣ ಅಂತ ಓದಿ ಬೆಚ್ಚಿ ಬೀಳುವವರು, ಬೊಗಳೆಯಲ್ಲಿ ಕಾಮೆಂಟ್ ಹಾಕುವ ಬದಲು ನೇರವಾಗಿ ಮೇಲ್ ಮೂಲಕವೇ ಕಾಲೆಳೆಯುವವರು, ಆತ್ಮೀಯರಾದವರು, ಅನ್ವೇಷಿಗಳೇ ಹೇಗಿದ್ದೀರಿ ಅಂತ ಒಂದು ಕೈ ವಿಚಾರಿಸಿಕೊಳ್ಳೋರು... ಅಬ್ಬಬ್ಬಾ... ಬರೆದರೆ ಪಟ್ಟಿ ತುಂಬಾನೇ ಬೆಳೆದುಬಿಡುತ್ತದೆ... ನಾವು ಫೂಲ್ ಮಾಡಲೆತ್ನಿಸಿದರೂ ನಮ್ಮನ್ನು ಸುಲಭವಾಗಿ ಫೂಲ್ ಮಾಡುವ ಅಂಥವರೆಲ್ಲರಿಗೂ, ಒಟ್ಟಿನಲ್ಲಿ ಬೊಗಳೆಯನ್ನು ಮೆಚ್ಚಿಕೊಳ್ಳುವವರಿಗೆ, ಚಚ್ಚಿ ಹಾಕುವವರಿಗೆ, ಕೊಚ್ಚೆ ಎಂದು ಹೀಗಳೆಯುವವರಿಗೆ, ಬೆಚ್ಚಿ ಓಡುವವರಿಗೆ, ಹಚ್ಚಿಕೊಂಡವರಿಗೆ, ದ್ವೇಷಿಸುವವರೂ ಸಹಿತ ಎಲ್ಲ ಕನ್ನಡ ನೆಟ್ಟೋದುಗರಿಗೆ, ಕನ್ನಡದ ಬ್ಲಾಗೋತ್ತಮರಿಗೆ ನನ್‌ನ-ಮನ!
10 ಕಾಮೆಂಟ್‌ಗಳು
ಬೊಗಳೆ ರಗಳೆಯ ಏಕಸದಸ್ಯ ಬ್ಯೂರೋದ ಸಮಸ್ತ ಸಿಬ್ಬಂದಿ ವರ್ಗಕ್ಕೂ ಮೂರ್ಖರ ದಿನದ್ದು, ಹುಟ್ಟಿದ್ ಹಬ್ಬದ್ದು, ಯುಗಾದಿದು -ಎಲ್ಲಾ ಸೇರ್ಸಿ ಒಟ್ಟಿಗೇ ಶುಭಾಶಯ. ;)
ಪ್ರತ್ಯುತ್ತರಅಳಿಸಿನಾನು ಬ್ಲಾಗು ಶುರುಮಾಡುವಾಗ ಇದ್ದ ಕನ್ನಡದ ಕೆಲವೇ ಬ್ಲಾಗುಗಳಲ್ಲಿ 'ಬೊಗಳೆ ರಗಳೆ'ಯೂ ಒಂದು. ಇದನ್ನು ನೋಡಿಯೇ ಕಲಿತದ್ದು ನಾನು ಬ್ಲಾಗು ಎಂದರೆ ಏನು, ಹೇಗೆ ಮಾಡುವುದು, ಇತ್ಯಾದಿ. ಹೀಗಾಗಿ, 'ಗುರುಸಮಾನ'ರಾದ ಅನ್ವೇಷಿಗಳಿಗೆ ನಾನಂತೂ ಕೃತಜ್ಞ. :-)
ಬ್ಲಾಗರ್ಸ್ ಮೀಟಿಗೆ ಬಂದೂ ನನ್ನ ಕಣ್ಣಿಗೆ ಬೀಳದೇ ತಪ್ಪಿಸಿಕೊಂಡು ಓಡಿಹೋದ ಕೋತಿಮರಿಗೆ..... ಇರ್ಲಿ, ಸಿಕ್ಕಾಗ ವಿಚಾರಿಸಿಕೊಳ್ತೇನೆ. ;)
ಬರೀತಿರಿ..
Congrats
ಪ್ರತ್ಯುತ್ತರಅಳಿಸಿಒಂದಕ್ಕಿಂತ ನಾಲ್ಕು ಹೆಚ್ಚು ಅಲ್ವಾ? ಅಭಿನಂದನೆಗಳು.
ಪ್ರತ್ಯುತ್ತರಅಳಿಸಿಸುಶ್ರುತರೆ,
ಪ್ರತ್ಯುತ್ತರಅಳಿಸಿನೀವು ಕೊಟ್ಟ ಶುಭಾಶಯಗಳನ್ನೆಲ್ಲಾ ಗುಡಿಸಿ, ಒಟ್ಟುಗೂಡಿಸಿ ಎಲ್ಲರಿಗೂ ಹಂಚಿದ್ದೇವೆ.
ಅಷ್ಟು ಚೆನ್ನಾಗಿ ಬರಿಯೋ ನೀವು ನಮ್ಮಿಂದಲೇ ಬ್ಲಾಗು ಕಲಿತದ್ದು ಅಂತ ಹೇಳಿ, ಇಲ್ಲದ ಗುರು-ಸ-ಮಾನ ಮರ್ಯಾದೆ ತೆಗೆದಿದ್ದೀರಿ. ದಯವಿಟ್ಟು ಬೇರೆಲ್ಲೂ ಹೇಳಬೇಡಿ. ನಿಮ್ಮನ್ನು ಯಾರೂ ನಂಬದಂತಹ ಸ್ಥಿತಿ ಬಂದೀತು!!!! ;)
ಕೋತಿ ಮರಿ ಎದುರಿಗೇ ಕೂತಿದ್ರೂ... ನೀವಾಗಲೇ ನಮ್ಮನ್ನು ವಿಚಾರಿಸಿಕೊಂಡಾಗಿದೆ. ಗೊತ್ತಾ???
ಶ್ರೀನಿಧಿಯವರೆ,
ಪ್ರತ್ಯುತ್ತರಅಳಿಸಿಧನ್ಯವಾದಗಳು.
professional amateur ಆಗಿರೋ ನೀವೂ ಸ್ವಲ್ಪ ನಮಗೆ ಗುರುವಾಗಬೇಕಿದೆ.
ಸುನಾಥರೆ,
ಪ್ರತ್ಯುತ್ತರಅಳಿಸಿಪರೋಕ್ಷವಾಗಿ, ಹೆಚ್ಚು ಸಂಖ್ಯೆಯ ಮೂರ್ಖ ಅಂತ ಜ್ಞಾಪಿಸಿದ್ದಕ್ಕೆ ಧನ್ಯವಾದ.
ಅದೇ ಹೇಳ್ತೀವಲ್ಲ... ಅವ್ನಿಗೆ ಒಂsssssದು ಬಿಡು! ಅಂತ ಹೇಳೋ ಬದ್ಲು.... ಅವ್ನಿಗೆ ನಾssssಲ್ಕು ಬಾರಿಸು ಅಂತ ಆದೇಶಿಸೋದ್ರಲ್ಲಿರೋ ವಿಶೇಷವೇ ಬೇರೆ!
ಹುಟ್ಟು ಹಬ್ಬದ ಹಾಗೂ ಯುಗಾದಿಯ ಶುಭಾಶಯಗಳು :)
ಪ್ರತ್ಯುತ್ತರಅಳಿಸಿಗೂಗಲ್ ಮಾಡುವಾಗ ಮೊದಲು ಸಿಕ್ಕ ಬ್ಲಾಗೇ ಬೊ-ರ! ಅವತ್ತಿನಿಂದ ಇವತ್ತಿನವರೆಗೂ ದಿನಾಲೂ ಬಂದು ಇವತ್ತೇನು ವಿಶೇಷ ಎಂದು ನೋಡಿದ ಮೇಲೆಯೇ ನನ್ನ ನಂತರದ ಕೆಲಸಗಳು.
ನನಗೂ ಬ್ಲಾಗು ಶುರು ಮಾಡಬೇಕಿನಿಸಿದ್ದು ಇಲ್ಲಿಗೆ ಬರುತ್ತಿದ್ದ ಅನೇಕರನ್ನು ನೋಡಿ:D ಹೊಸ ಹೊಸ ಗೆಳೆಯ/ಗೆಳೆತಿಯರನ್ನು ಬ್ಲಾಗ್ ಪ್ರಪಂಚದಲ್ಲಿ ತೋರಿಸಿಕೊಟ್ಟ ಅನ್ವೇಷಿಗಳಿಗೆ ಧನ್ಯವಾದಗಳು.
ಜೈ ಬೊ-ರ!
ನೀಲಗಿರಿಯವರೆ,
ಪ್ರತ್ಯುತ್ತರಅಳಿಸಿನೀವು ಕೊಟ್ಟ ಯುಗಾದಿ ಶುಭಾಶಯಗಳನ್ನು ಮಾತ್ರವೇ ತೆಗೆದುಕೊಂಡಿದ್ದು, ಗುಟ್ಟುಹಬ್ಬದ ಶುಭಾಶಯಗಳನ್ನು ಏಪ್ರಿಲ್ ಕಳೆದ ನಂತರವೇ ತೆಗೆದುಕೊಳ್ಳುತ್ತೇವೆ.
ನಮ್ಮನ್ನು ಗೂಗಲ್ಲಿನಲ್ಲೇ ಅನ್ವೇಷಿಸಿಯೇ ಗಲ್ಲಿಗೇರಿಸಲು ಆಗಾಕ್ಕೆ ಬರ್ತಾ ಇದ್ದೀರಿ ಅಂತ ಹೇಳಿರೋದ್ರಿಂದ, ಗೂಗಲ್ ವಿರುದ್ಧ ಅವಮಾನ ನಷ್ಟ ಪ್ರಕರಣ ದಾಖಲಿಸಲಿದ್ದೇವೆ.
ಚಿಂತನೆಗೆ ಹಚ್ಚುವ ಬ್ಲಾಗ್ ಇದು !
ಪ್ರತ್ಯುತ್ತರಅಳಿಸಿಬೊಗಳೆಯೇ ಮೊದಲ ಕನ್ನಡದ ಬ್ಲಾಗೂ ! !
ಬೊಗಳೆಯಲ್ಲಿ ಪ್ರಕಟವಾಗೋ ಪ್ರತಿಯೊಂದು ವರದಿಯೂ ಸತ್ಯ ! ! !
ಏನ್ರಿ ಅಸತ್ಯಾನ್ವೇಶಿಗಳೇ ನಿಮಗಷ್ಟೇ ಬೊಗಳೆ ಬಿಡಲು ಬರುತ್ತೆ ಅಂದುಕೊಂಡಿರೇನ್ರಿ.
ಮೂರು(?) ವರ್ಷಗಳಿಂದ ನಿಮ್ಮ ಬೊಗಳೆ ಓದಿ ಓದಿ ಇಷ್ಟೂ ಬೊಗಳೆ ಬಿಡೋದು ಕಲಿತುಕೊಳ್ಳಲಿಲ್ಲ ಅಂದ್ರೆ ಆ ಶಿವಾ (ಪಾತರಗಿತ್ತಿ ಶಿವು ಅಲ್ಲಾ) ಮೆಚ್ತಾನಾ?
೫೦ ಕಿಲೋ ತೂಕದ ಬೊಗಳೆ ಬ್ಯೂರೋ ೫೦ ಕ್ವಿಂಟಾಲ್ ದಷ್ಟು ಬೆಳೆಯಲಿ ಎಂದು ಆಶಿಸುತ್ತೇನೆ. ಈ ಮಾತು ಬೊಗಳೆಯಲ್ಲ!
ಎಂಡಿಯವರೆ,
ಪ್ರತ್ಯುತ್ತರಅಳಿಸಿನೀವು ಬಿಟ್ಟ ಮೂರೂ ಬೊಗಳೆ ಫಸ್ಟ್ ಕ್ಲಾಸ್.
ನೀವು ಆಶಿಸಿದ್ರೆ ಬಿಡ್ತೀವಾ... ನಿಮಗೂ ಹಾಗೇ ಆಗ್ಲಿ ಅಂತ ಶಾಪ ಕೊಡ್ತಾ ಇದ್ದೇವೆ....
ಏನಾದ್ರೂ ಹೇಳ್ರಪಾ :-D