ಬೊಗಳೆ ರಗಳೆ

header ads

ಅಭ್ಯರ್ಥಿಗಳ ಸಾಮೂಹಿಕ ವಿವಾಹಕ್ಕೆ ಆಯೋಗ ನಿಷೇಧ!

(ಬೊಗಳೂರು ರದ್ದಿ ಬ್ಯುರೋದಿಂದ)
ಬೊಗಳೂರು, ಏ.16- ಚುನಾವಣೆಗೆ ನಿಂತ ಅಭ್ಯರ್ಥಿಗಳು ಸಾಮೂಹಿಕ ವಿವಾಹ ಮಾಡಿಕೊಳ್ಳುವುದನ್ನು ನಿರ್ಬಂಧಿಸಿ ಕೇಂದ್ರ ಮತದಾನ ಆಯೋಗವು ದಿಬ್ಬಣ ಹೊರಡಿಸಿದೆ.

ಚುನಾವಣೆಗೆ ನಿಲ್ಲುವ ಹೆಚ್ಚು ಹೆಚ್ಚು ಅಭ್ಯರ್ಥಿಗಳು ಆಗಾಗ್ಗೆ ಹೆಚ್ಚು ಹೆಚ್ಚು ವಿವಾಹವಾಗಿ, ಬಂದವರಿಗೆಲ್ಲ ಬಾಡೂಟ ಏರ್ಪಡಿಸಿ ಖರ್ಚು ಮಾಡುತ್ತಾರೆ. ಈ ರೀತಿ ಒಬ್ಬನೇ ಅಭ್ಯರ್ಥಿಯು ಸಾಮೂಹಿಕವಾಗಿ ವಿವಾಹವಾಗುವುದನ್ನು ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆಯುಕ್ತರು ಬೊಗಳೆಗೆ ನೀಡಿದ ಎಚ್ಚರಿಕೆ ಪತ್ರದಲ್ಲಿ ವಿವರಿಸಿದ್ದಾರೆ.

ಈ ಆದೇಶ ಹೊರಟ ಸಂದರ್ಭದಲ್ಲಿ ದಿಬ್ಬಣ ಹೊರಟಿದ್ದು, ಯಾವುದನ್ನು ಮೊದಲು ತಡೆಯಬೇಕು ಎಂದು ತಿಳಿಯದೆ ಬೊಗಳೂರಿನ ಮಂದಿ ಗಲಿಬಿಲಿಯಾದ ಪ್ರಸಂಗವೂ ನಡೆದಿರುವುದಾಗಿ ವರದ್ದಿಯಾಗಿದೆ.
----------

ಚುನಾವಣಾ ಪ್ರಣಾಳಿಕೆ ಬಟಾ ಬಯಲು!

ಉಚಿತ ಜಾಹೀರಾತಿದು ಖಚಿತ!

ನೋಡಲು ಮರೆಯದಿರಿ, ಮರೆತು ನಿರಾಶರಾಗಿರಿ!!!

ಕರುನಾಟಕದ ದೇಶದಾದ್ಯಂತ ಭೀಕರ ಜ್ವರ ಹಬ್ಬತೊಡಗಿದ್ದು, ವಿಧಾನಸೌಧದಲ್ಲಿದ್ದ ನೊಣಗಳು, ವೈರಸ್ಸುಗಳು, ಕ್ರಿಮಿಗಳು, ಕೀಟಗಳು ಇತ್ಯಾದಿಗಳೆಲ್ಲವೂ ಊರೂರಿನಲ್ಲಿ ಕಂಡುಬರುತ್ತಿವೆ. ಜನರು ಕಿವಿ ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ಇದೆ. ಇಂಥಹ ಸ್ಥಿತಿಯಲ್ಲಿ ಬೊ.ರ. ಬ್ಯುರೋಗೆ ಆಕಸ್‌ಮಿಕವಾಗಿ ಸಿಕ್ಕಿರುವ ಚುನಾವಣಾ ಜ್ವರದ ಪ್ರಣಾಳಶಿಶುವೊಂದು ಬಟಾ ಬಯಲಾಗಲು ಸಿದ್ಧತೆ ನಡೆಸಿದೆ.

ಪ್ರಣಾಳಿಕೆಯ ಪ್ರಣಾಳಕ್ಕೆ ಒಂದಷ್ಟು ತೇಪೆ ಹಚ್ಚಿ ಅದನ್ನು ನೀಡಲು ತೀವ್ರ ಸಿದ್ಧತೆಗಳು ನಡೆಯುತ್ತಿದ್ದು, ಬೊಗಳೂರು ಓದುಗರು ಎಂದಿನಂತೆ ತಮ್ಮ ಪ್ರತಿಗಳನ್ನು ಕಾದಿರಿಸಿಕೊಳ್ಳದೆ, ತಲೆಕೆಡಿಸಿಕೊಳ್ಳಲು ಸೂಚಿಸಲಾಗಿದೆ.

ಇದು ನಮ್ಮಲ್ಲಿ ಮಾತ್ರ!
ಇಂದಿನ ಸುದ್ದಿ ನಾಳೆಯ ವ-ರದ್ದಿ!!!

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. ಆಯೋಗಕ್ಕೆ ತಲೆ ಸಮ ಇಲ್ಲ ಅಂತಾಯ್ತು. ಹೀಗೆ ಸಾಮೂಹಿಕ ವಿವಾಹವಾಗಿ ದೇಶ ಸೇವೆ ಮಾಡಬೇಕೆನ್ನುವ ಅಭ್ಯರ್ಥಿಗಳ " ರಂಗೋಲಿ ಕೆಳಗೆ ನುಸುಳುವ " ಕ್ರಮಕ್ಕೆ ಕಲ್ಲು ಹಾಕುವುದು ಸರಿಯಲ್ಲ.

    ಇದೇ ಸಂದರ್ಭದಲ್ಲಿ ಭರ್ಜರಿ ಮದುವೆ ಊಟದ ನಿರೀಕ್ಷೆಯಲ್ಲಿದ್ದ ಬೊಗಳೂರು ವರದಿಗಾರರಿಗೆ, ದಿಬ್ಬಣ ನಿಲ್ಲಿಸಿದ್ದರಿಂದ ನಿರಾಸೆಯಾದುದನ್ನು ಯಾಕೋ ವರದಿ ಮಾಡಿಲ್ಲ.

    ಪ್ರತ್ಯುತ್ತರಅಳಿಸಿ
  2. ಚುನಾವಣಾ ಅಭ್ಯರ್ಥಿಗಳ ಸಾಮೂಹಿಕ ವಿವಾಹ? ೩೩% ಹೆಣ್ಣು ಅಭ್ಯರ್ಥಿಗಳ ಜೊತೆಗೆ ೬೭% ಗಂಡು ಅಭ್ಯರ್ಥಿಗಳ ಮದುವೆ? ಇದನ್ನು ನಿಷೇಧಿಸುವದು ಸರಿಯಲ್ಲ.ದೇಶದ ದನಸಂಖ್ಯೆಯನ್ನು ಕಡಿಮೆ ಮಾಡುವ ಈ ಕ್ರಮವನ್ನು ಸ್ವಾಗತಿಸಬೇಕು.

    ಪ್ರತ್ಯುತ್ತರಅಳಿಸಿ
  3. ನೀಲಗಿರಿಯವರೆ,
    ವಿವಾಹದ ಬಾಡೂಟ ನಿಲ್ಲಿಸಿದ್ದರಿಂದ ನಮ್ಮ ರದ್ದಿಗಾರರಿಗೆ ಯಾವುದೇ ತೊಂದರೆಯಾಗಲಿಲ್ಲ. ಮದುವೆ ಮನೆಗೆ ಬಂದ ಜಾರಕಾರಣಿಯೊಬ್ಬರು, ಮದುವೆಗೆ ಕಡಿವಾಣ ಹಾಕಿದ್ದಾರಲ್ಲ, ಅದಿರಲಿ. ಪಕ್ಕದಲ್ಲೇ ಒಂದು ಸಾವಿದೆ, ಆ ಮನೆಗೆ ಹೋಗೋಣ ಅಂತ ಕರೆಕರೆದುಕೊಂಡು ಹೋಗಿದ್ದಾರೆ.

    ಪ್ರತ್ಯುತ್ತರಅಳಿಸಿ
  4. ಸುನಾಥರೆ,
    ನಮ್ಮ ರಾಜ್ಯದಲ್ಲಂತೂ ಇತ್ತೀಚೆಗೆ ಬೀದಿಬೀದಿಯಲ್ಲಿ ಬೀಡಾಡಿ ದನಸಂಖ್ಯೆ ಹೆಚ್ಚಾಗಿದೆ. ಆದರೆ ಅವುಗಳ ಎರಡೂ ಕೈಗಳು ಮುಗಿದ ಸ್ಥಿತಿಯಲ್ಲಿರುತ್ತವೆ. ಉಳಿದೆರಡು ಕೈಗಳಲ್ಲಿ ನಡೆಯುತ್ತಿರುತ್ತವೆ. ಅಚ್ಚ ಬಿಳಿಯ ಈ ಬೀಡಾಡಿ ದನಸಂಖ್ಯೆ ಈಗಾಗಲೇ ಹೆಚ್ಚಳವಾಗಿರುವುದರಿಂದ ಚುನಾವಣೆ ಮುಗಿಯೋವರೆಗೆ ತೊಂದರೆಯಿಲ್ಲ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D