(ಬೊಗಳೂರು ಕೊಚ್ಚೆ-ಸ್ವಚ್ಛ ಬ್ಯುರೋದಿಂದ)
ಬೊಗಳೂರು, ಏ.15- ಕರುನಾಟಕದಲ್ಲಿ ಮುಂಬರುವ ಭರ್ಜರಿ ನಾಟಕ ಪ್ರದರ್ಶನಕ್ಕಾಗಿ ಬೊಗಳೂರಿನಲ್ಲಿಯೂ ಚಿತ್ರವಿಚಿತ್ರ ತಾಲೀಮುಗಳನ್ನು ಆರಂಭಿಸಲಾಗಿದ್ದು, ಈಗಾಗಲೇ ರೊಚ್ಚಿಗೆದ್ದ ಮತದಾರರು ಮತ್ತಷ್ಟು ರೊಚ್ಚಿಗೇಳುವ ಮುನ್ನ ಅವರ ಎಲ್ಲಾ ಶಕ್ತಿಗುಂದಿಸಲು ಸಕಲ ಸಿದ್ಧತೆ ನಡೆಯುತ್ತಿದೆ ಎಂಬುದನ್ನು ಬೊ.ರ. ಬ್ಯುರೋ ಪತ್ತೆ ಹಚ್ಚಿದೆ.ಈ ನಡುವೆ, ಬೀದಿ ಬೀದಿಯಲ್ಲಿರುವ ಕೊಚ್ಚೆ ಸ್ವಚ್ಛ ಮಾಡುವುದಕ್ಕಾಗಿ ಬೊಗಳೂರಿನ ಸಮಸ್ತ ಸಿಬ್ಬಂದಿಗೂ ಉಪ-ವಾಸ ಮಾಡಲು ಪ್ರಯತ್ನಿಸಿದ ಘಟನೆ ವರದಿಯಾಗಿದೆ. ಇದಕ್ಕೆ ಕಾರಣ ಮತ್ತು ಪ್ರೇರಣೆ ಸುವರ್ಣಯುಗದಲ್ಲಿರುವ ಪಕ್ಷವೊಂದರ ಮಹಿಮೆಯೇ ಆಗಿದೆ.
ಕರುನಾಟಕದಲ್ಲಿ ನಾಟಕದ ಪ್ರಚಾರಾರ್ಥ ಹೋಗ ಹೋದಲ್ಲೆಲ್ಲಾ, ಗಲ್ಲಿ ಗಲ್ಲಿಯಲ್ಲಿ ರಾಜಕಾರಣಿಗಳ ಆಶ್ವಾಸನೆಗಳು ಪುಂಖಾನುಪುಂಖವಾಗಿ ಉದುರಿದ ಪರಿಣಾಮವಾಗಿ ರಸ್ತೆಯೆಲ್ಲಾ ಕೊಚ್ಚೆಯಂತಾಗಿ, ಗಬ್ಬೆದ್ದು ಹೋಗುತ್ತಿದೆ. ಇದನ್ನೆಲ್ಲಾ ಕ್ಲೀನ್ ಮಾಡಲು ಕೇವಲ ಒಬ್ಬರು ಉಪವಾಸ ಮಾಡಿದರೆ ಸಾಲದು ಎಂಬ ಕಾರಣಕ್ಕೆ ಬೊಗಳೂರಿನ ರಗಳೆ ಬ್ಯುರೋ ಕೂಡ ಈ ಕ್ರಮಕ್ಕೆ ಕೈಜೋಡಿಸಿದೆ.
ಆದರೆ ಯಾವ ಕೈಯನ್ನು ಎಲ್ಲಿ ಜೋಡಿಸಬೇಕು ಎಂದು ತಿಳಿಯದೆ, ನೇರವಾಗಿ ಕೇಂದ್ರದಲ್ಲಿ ಸರ-ಖಾರ ಚಲಾಯಿಸುತ್ತಾ, ತರ-ಖಾರಿ ಬೆಲೆ ಏರಿಕೆಯಿಂದಾಗಿ ಎಲ್ಲರ ಟೀಕೆಗೆ ಪಾತ್ರವಾಗಿರುವ ಸರ-ಖಾರ ನಡೆಸುತ್ತಿರುವ ಪಕ್ಷದ 'ಕೈ' ಹಿಡಿಯುವುದೇ ಸೂಕ್ತ ಅಂತ ಯೋಚಿಸಿದ ನಮ್ಮ ಬ್ಯುರೋ ಅತ್ತ ಕಡೆ ತೆರಳಿತು.ಆದರೆ ನಮ್ಮ ಬರುವಿಕೆಯನ್ನು ದೂರದಿಂದಲೇ ನೋಡಿದ ತಕ್ಷಣ ಅರ್ಥೈಸಿಕೊಂಡ ಮಾಜಿ ಅನರ್ಥ ಸಚಿವರೂ ಆಗಿರುವ ನಿಧಾನಿ ಒಣಮೋಸಕ ಸಿಂಗರು, "ಬೇಡ... ಬೇಡ... ನೀವಿಲ್ಲಿ ಬರೋದೇ ಬೇಡ... ನಾನೇ ನಿಮಗೆ ಎಲ್ಲಾ ವ್ಯವಸ್ಥೆ ಮಾಡ್ತೇವೆ. ನಿಮಗೆ ಎಲ್ಲರೂ ಉಪವಾಸವಿದ್ದರಾಯಿತಲ್ಲ... ಈಗಾಗಲೇ ಇದ್ದ ಬದ್ದ ಬೆಲೆಗಳೆಲ್ಲಾ ಏರಿವೆ. ಹೆಚ್ಚಿನವರೆಲ್ಲರೂ ದೇಶಾದ್ಯಂತ ಅರೆಬರೆ ಉಂಡು ಉಪವಾಸ ಮಾಡುತ್ತಲೇ ಇದ್ದಾರೆ. ಕೆಲವೇ ದಿನಗಳಲ್ಲಿ ಪರಿಪೂರ್ಣ ಉಪವಾಸವೂ ನಡೆಯುತ್ತದೆ. ನೀವೇನೂ ಹೆದರದಿರಿ... ದಯವಿಟ್ಟು ಅಲ್ಲಿಂದಲೇ ಹೋಗಿಬಿಡಿ" ಅಂತ ಕಿರುಚಾಡಿದರು ಎಂದು ಮೂಲೆಯಲ್ಲೆಲ್ಲೋ ನಿಂತು ವರದಿ ಮಾಡುತ್ತಿದ್ದ ನಮ್ಮ ರದ್ದಿಗಾರರು ಫ್ಯಾಕ್ಸ್ ಮಾಡಿದ್ದಾರೆ.
ಹೀಗಾಗಿ, ಕರುನಾಟಕದ ಪಕ್ಷಗಳೆಲ್ಲವೂ ಕೇಂದ್ರ ಸರಕಾರದ ಯೋಜನೆಗಳನ್ನು ಕಾಪಿ ಮಾಡಿಕೊಳ್ಳುತ್ತಿವೆ ಎಂದು ಅವರು ಟೀಕಿಸಿದ್ದು, ಈ ಬಾರಿ ನಮ್ಮ ಕೈಗೇ ಜಯ ಕಟ್ಟಿಟ್ಟ ಬುತ್ತಿ. ಯಾಕಂದ್ರೆ ಎಲ್ಲರನ್ನೂ ಉಪವಾಸ ಕೆಡವಿದ್ದೇವೆ. ರಾಜಕಾರಣಿಗಳು ಕೂಡ ಗ್ರಾಮವಾಸ, ಕೊಳಚೆ ವಾಸ, ಬೀದಿ ವಾಸ, ಹಳ್ಳಿ ವಾಸ, ಗುಡಿಸಲು ವಾಸ ಎಂಬಿತ್ಯಾದಿಗಳನ್ನು ಮುಂದುವರಿಸುತ್ತಿದ್ದು, ಅದಕ್ಕೆ ಉಪ ವಾಸವೂ ಸೇರ್ಪಡೆಯಾಗಿದೆ ಎಂದು ಅವರು ವಿಜಯದ ನಗೆ ಬೀರಿದ್ದಾರೆ.
6 ಕಾಮೆಂಟ್‌ಗಳು
ಉಪವಾಸ ಅಂದ್ರೆ ಊಟ ಮಾಡೋ ಹಾಗಿಲ್ಲ ಅಂತ ನಮ್ಮ ಪಾತಜ್ಜಿ ಹೇಳ್ತಿದ್ರು. ಮುಸುರೆ ಅಂತ ಕರೆಸಿಕೊಳ್ಳುವ ಪದಾರ್ಥವನ್ನು ಮಾತ್ರ ತಿನ್ನುವಂತಿಲ್ಲವಂತೆ.
ಪ್ರತ್ಯುತ್ತರಅಳಿಸಿಅದೇನೋ ಉಪ್ಪಿಟ್ಟು, ಸಜ್ಜಿಗೆ, ರವೆಉಂಡೆ, ಕೋಡುಬಳೆ, ಚಕ್ಕುಲಿ, ಮುಚ್ಚೋರೆ, ಅವಲಕ್ಕಿ, ಆಗಾಗ ಬಾಯಾಡಿಸಲು ಖಾರದ ಕಡಲೆಕಾಯಿ ಬೀಜ ತಿನ್ನಬಹುದಂತೆ. ಇವುಗಳೆಲ್ಲವನ್ನೂ ಮೂರು ಬಾರಿ ತಿಂದರೆ ಸ್ವರ್ಗಕ್ಕೆ ಹೋಗ್ತಾರಂತೆ. ಢರ್ರ್ ಭುರ್ರ್ ಝೇಂಕಾರಗಳ ಆರ್ಭಟವಾದ್ರೆ, ಸಿಡಿಲು ಗುಡುಗು ಸಮೇತ ಮಳೆ ಬರುವುದಂತೆ. ಒಮ್ಮೆ ನಾನೂ ಉಪವಾಸ ಮಾಡಬೇಕು ಅಂತಿದ್ದೀನಿ. ಲೋಕಕಲ್ಯಾಣ ಆದ್ರೂ ಆಗಲಿ ಅಂತ. ನೀವೂ ನನ್ನ ಜೊತೆ ಸೇರ್ತೀರಾ ಅನ್ವೇಷಿಗಳೇ?!
ಉಪ ವಾಸ ಅಂದ್ರೆ ಬೇರೆಯೇ ವಾಸ ಮಾಡೋದು ಅಂತಾನೂ ಆಗುತ್ತೆ... ಬೇರೆಯವರ ಸಹ-ವಾಸದ ಮಾದರಿಯಲ್ಲೇ ಇದೂ ಕೂಡ. ಸಹವಾಸ ದೋಷದಿಂದ ಕೆಡುವುದಲ್ಲ, ಸಹ-ವಾಸದಲ್ಲಿ ಮಾಡುವ ಉಪ-ವಾಸ (ಕುಡಿಯುವುದು, ತಿನ್ನುವುದು ಇತ್ಯಾದಿ)ಯ ಪರಿಣಾಮವಾಗಿ ಕೆಡುವುದು ಅಂತ ಸಂಶೋಧಿಸಿದ್ದೇವೆ.
ಪ್ರತ್ಯುತ್ತರಅಳಿಸಿನಿಮ್ಮ ಜೊತೆ ಉಪ-ವಾಸಕ್ಕೆ ಸೇರಿಕೊಂಡ್ರೆ ನೀವು ಕೂಡ ನನಗೆ ಕೂಡ ಕುಡಿಸುತ್ತೀರಾ? ಅಂದ್ರೆ ನೀರು ಕುಡಿಸ್ತೀರಾ ಅಂತ ಕೇಳಿದೆ.
ಈಗ ಉಳಿದಿರೋದು ಒಂದೇ ವಾಸ:ವನವಾಸ!
ಪ್ರತ್ಯುತ್ತರಅಳಿಸಿಹೌದು ಸುನಾಥರೆ,
ಪ್ರತ್ಯುತ್ತರಅಳಿಸಿನಮ್ಮ ಬ್ಯುರೋದ ಮಂಗಗಳಿರುವುದು ಈಗ ವನದಲ್ಲೇ!
Hi,
ಪ್ರತ್ಯುತ್ತರಅಳಿಸಿilli yella posts odoke aagde iro font nalli ide, eee problem nan browser inda na ?
Kannada Vybhava
ಹೌದು ಎಲ್ವಿಸ್... ನಿಮ್ಮದೇ ಸಮಸ್ಯೆ. ಕಂಪ್ಯೂಟರು ಬದಲಿಸಿಬಿಡಿ.
ಪ್ರತ್ಯುತ್ತರಅಳಿಸಿಏನಾದ್ರೂ ಹೇಳ್ರಪಾ :-D