(ಬೊಗಳೂರು ಚಮಚಾಗಿರಿ ಬ್ಯುರೋದಿಂದ)
ಬೊಗಳೂರು, ಏ.11- ಬೆಂಗಳೂರಿನಲ್ಲಿ ಇತ್ತೀಚೆಗೆ ಹೆಚ್ಚು ಹೆಚ್ಚು ಜಾಮ್ ದೊರೆಯುತ್ತಿರುವುದರಿಂದಾಗಿ ನಾಯಿಗಳಿಗೆ ಬಾಲ ಅಲ್ಲಾಡಿಸುವುದಕ್ಕೂ ಜಾಗದ ಕೊರತೆ ಉಂಟಾಗಿದೆ.ಇದಕ್ಕೆ ಕಾರಣವನ್ನು ಈ ಹಿಂದೆಯೇ ಹಲವು ಬಾರಿ ವಿವರಿಸಲಾಗಿತ್ತಾದರೂ, ಇದೀಗ ಹೊಸದೊಂದು ಕಾರಣವೂ ಸೇರ್ಪಡೆಯಾಗಿದೆ. ಅದೆಂದರೆ ಎಲ್ಲರೂ ಟಿಕೆಟ್ ಕೊಳ್ಳುವುದಕ್ಕೆ ಸಾಲುಗಟ್ಟಿ ಬೆಂಗಳೂರಿಗೆ ಬರುತ್ತಿರುವುದು. ಇದರಿಂದಾಗಿಯೇ ಈ ಬಾರಿ ಟ್ರಾಫಿಕ್ ಜಾಮ್ ಹೆಚ್ಚಾಗಿ, ಯಾರು ತಮಗೆ ಬ್ರೆಡ್ಡು ತುಂಡುಗಳನ್ನು ಹಾಕುತ್ತಾರೆ ಎಂದು ಕಾಯುವ ಪರಿಸ್ಥಿತಿ ಹೆಚ್ಚಾಗತೊಡಗಿದೆ ಎಂದು ಹೇಳಲಾಗದಿದ್ದರೂ, ಸಾಕಷ್ಟು ಅವಕಾಶಗಳು ಲಭ್ಯವಾಗಿರುವುದರಿಂದಾಗಿ ಇದನ್ನು ಅಲ್ಲಗಳೆಯುವಂತೆಯೂ ಇಲ್ಲ.
ಅರ್ಥವಾಗಲಿಲ್ಲವೇ? ತಲೆ ಜೋರಾಗಿ ಕೆರೆದುಕೊಳ್ಳಬೇಡಿ. ಇದೆಂಥಾ ಕ್ಯೂ? ನಾಟಕದ ಟಿಕೆಟ್ ಪಡೆಯಲು, ಅತ್ಯಂತ ಮನರಂಜನೀಯ ಸಿನಿಮಾದ ಟಿಕೆಟ್ ಕೊಳ್ಳಲು, ಯಕ್ಷಗಾನವೋ, ಬೊಂಬೆಯಾಟವೋ, ಬೀದಿ ನಾಟಕವೋ ಎಂದೆಲ್ಲಾ ತಲೆ ತುರಿಸಿಕೊಳ್ಳಬೇಕಾಗಿಲ್ಲ. ಇವೆಲ್ಲವುಗಳಿಗೂ ಕಾರಣವಾಗಬಲ್ಲ ಪ್ರದರ್ಶನದ ಟಿಕೆಟ್ ಪಡೆಯಲು ಈ ಪರಿ ನೂಕು ನುಗ್ಗಲು.
ಹೌದು. ಇದು ಕರುನಾಟಕಕ್ಕಾಗಿ ಕ್ಯೂ. ಈಗಾಗಲೇ ಹತ್ತು ಹಲವು ಬಾರಿ ನಾಟಕವಾಡಿ, ಆಟವಾಡಿ ಹೊಡೆದಾಡಿ-ದಣಿದು, ನಿರೀಕ್ಷೆಗಳ ಗುಳ್ಳೆಯೊಂದು ಒಡೆದ ರಭಸಕ್ಕೆ ಎಲ್ಲರೂ ದಿಕ್ಕಾಪಾಲಾಗಿದ್ದರು. ಇದೀಗ ಮತ್ತೆ ಒಂದುಗೂಡುವ ಕಾಲ. ವಿವಿಧ ನಾಟಕ ರಂಗಗಳನ್ನು ಕಟ್ಟಿ, ಭಿನ್ನ ಭಿನ್ನ ರೀತಿಯ ಬಣ್ಣ ಹಚ್ಚಿ, ಏನೆಲ್ಲಾ ಡೈಲಾಗು ಹೊಡೆಯಬೇಕು ಅಂತೆಲ್ಲಾ ಪಟ್ಟಿ ಮಾಡಿ, ಬಾಯಿಪಾಠ ಮಾಡಿಕೊಂಡು ಸಿದ್ಧವಾಗುವ ಕಾಲ.
ಹಾಗಿದ್ದರೆ, ಇಂಥದ್ದೊಂದು ನಾಟಕವಾಡಲೊಂದು ವೇದಿಕೆ ಅಂತ ಬೇಕಲ್ಲ... ವೇದಿಕೆ ಯಾವುದಾದರೇನು... ಕುಣಿಯುವವರೂ... ಕುಣಿಸುವವರೂ ಇರೋವಾಗ ಎಂಬ ಉಡಾಫೆ ಮನೋಭಾವದ ಪಾತ್ರಧಾರಿಗಳಿಗೇನೂ ಕೊರತೆಯಿಲ್ಲದಿದ್ದರೂ, ರಾಷ್ಟ್ರೀಯ ಮಟ್ಟದ ನಾಟಕ ಮಂಡಳಿಯಲ್ಲಿ ಅಭಿನಯಕ್ಕೆ ಅವಕಾಶ ದೊರೆತರೆ, ಹೆಚ್ಚು ಹೆಚ್ಚು ಅಧಿಕಾರದ ಸಾಧ್ಯತೆ ಲಭಿಸುತ್ತದೆ ಎಂಬ ಕಚ್ಚಾ ಸತ್ಯದ ಬೆನ್ನೇರಿ,
ಕರುನಾಟಕದ ಮೂಲೆ ಮೂಲೆಗಳಿಂದ ಈ ಪಾತ್ರಧಾರಿಗಳು ಬೆಂಗಳೂರಿಗೆ ಬಂದು ಹೋಟೇಲುಗಳಲ್ಲಿ ತುಂಬಿ ತುಳುಕಾಡುತ್ತಿದ್ದಾರೆ. ಹೆಚ್ಚಿನವರು ಚಮಚಾಗಳನ್ನೂ ತಮ್ಮೊಂದಿಗೆ ತಂದಿದ್ದರು. ಬೇಕಾದಾಗಲೆಲ್ಲಾ ಈ ಚಮಚಾಗಳನ್ನು ಅವರು ಬಳಸಿಕೊಳ್ಳುತ್ತಾ, ಲಾಬಿಯ ಸ್ಕ್ರೂ ತಿರುಗಿಸಲು ಕೂಡ ಅವುಗಳ ಮೊರೆ ಹೋಗುತ್ತಿದ್ದುದು ಕಂಡುಬರುತ್ತಿತ್ತು.
ಇಷ್ಟೆಲ್ಲದರ ನಡುವೆಯೇ, ಬೊ.ರ.ಬ್ಯುರೋದ ಏಕಸದಸ್ಯ ವರದಿಗಾರರ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು ಎಲ್ಲರೂ ಸೇರಿಕೊಂಡು, ಬೆಂಗಳೂರಿಗೆ ಹೋಗಿ ಅಡ್ಡಾಡುತ್ತಿದ್ದು, ತಮಗೂ ಯಾರಾದರೂ ಟಿಕೆಟ್ ಕೊಡಲಿದ್ದಾರೆಯೇ ಎಂದು ಚಾತಕ ಪಕ್ಷಿಯಂತೆಯೂ, ಫೀನಿಕ್ಸ್ ಪಕ್ಷಿಯಂತೆಯೂ ಕತ್ತು ಉದ್ದ ಮಾಡಿ ಅತ್ತಿತ್ತ ನೋಡುತ್ತಿದ್ದಾರೆ ಎಂಬುದನ್ನು ನಮ್ಮ ವಿರೋಧೀ ಪತ್ರಿಕೆಗಳವರು ವರದ್ದಿಸಿದ್ದಾರೆ.
6 ಕಾಮೆಂಟ್‌ಗಳು
asatya anveshigaLe,
ಪ್ರತ್ಯುತ್ತರಅಳಿಸಿishtu chandada blog annu kannada saahitya lokakke arpisuttiruvudakke sharaNu
iti,
archana
ಹೀಗಾ ವಿಷ್ಯ? ಅದಕ್ಕೆ ಬೊಗಳೂರು ಖಾಲಿಖಾಲಿ. ತಮ್ಮದು ಯಾವ ಪಾತ್ರಕ್ಕೆ ಬೇಡಿಕೆ?
ಪ್ರತ್ಯುತ್ತರಅಳಿಸಿತಮ್ಮದು full ticketಓ,half ticketಓ?
ಪ್ರತ್ಯುತ್ತರಅಳಿಸಿಬಾಲ ಅಲ್ಲಾಡಿಸಲು ಜಾಗದ ಕೊರತೆಯಾಗಿದೆಯಾ? ಆದರೆ ಆ ಶ್ವಾನದ ಬಾಲವನ್ನು ಈ ಶ್ವಾನ, ಈ ಶ್ವಾನದ ಬಾಲವನ್ನು ಆ ಶ್ವಾನ ಎಳೆಯುತ್ತಿರುವದರಿಂದ ಏನೂ ಸಮಸ್ಯೆ ಇಲ್ಲ.
ಅರ್ಚನಾ ಅವರೆ, ಸ್ವಾಗತ.
ಪ್ರತ್ಯುತ್ತರಅಳಿಸಿಚಂದ ಇದೆ ಅಂತ ಹೇಳಿ, ನಿಮ್ಮ ಅಡುಗೆಗೆ ನಮ್ಮ ಬ್ಲಾಗನ್ನು ಕತ್ತರಿಸಿ ಬಜ್ಜಿಯೋ, ತಂಬುಳೀನೋ ಮಾಡಿಬಿಡೋ ನಿಮ್ಮ ಪ್ರಯತ್ನ ಸಫಲವಾಗಲಿ ಅಂತ ಬೊ.ರ.ಬ್ಯುರೋ ಹಾ-ರೋದಿಸುತ್ತಿದೆ.
ಶಾನಿ ಅವರೆ,
ಪ್ರತ್ಯುತ್ತರಅಳಿಸಿಪಾತ್ರಗಳೇನಿದ್ದರೂ ಈಗ ರಾಜಕಾರಣಿಗಳ ಕೈಯಲ್ಲಿ ಶೋಭಿಸುತ್ತಿವೆ. ಅದುವೇ ಭಿಕ್ಷಾಪಾತ್ರ. ನಮಗೆ ಅದನ್ನೂ ಉಳಿಸಿಲ್ಲ ಅಂತ ಸುದ್ದಿ.
ಸುನಾಥರೆ,
ಪ್ರತ್ಯುತ್ತರಅಳಿಸಿನಮಗೇನಿದ್ದರೂ ಫೂಲ್ ಟಿಕೆಟ್. ಯಾಕಂದ್ರೆ ಆರಿಸಿ ಬಂದ ನಂತ್ರ ಮತದಾರರನ್ನು ಫೂಲ್ ಮಾಡಲೇಬೇಕಲ್ಲ...
ಏನಾದ್ರೂ ಹೇಳ್ರಪಾ :-D