(ಬೊಗಳೂರು ಕೆಲಸಹೀನ ಬ್ಯುರೋದಿಂದ)
ಬೊಗಳೂರು, ಏ.9- ಏಪ್ರಿಲ್ ಫೂಲ್ ಎಂಬ ವಿಶ್ವದಾದ್ಯಂತ ಸಡಗರದಿಂದ ಆಚರಿಸಲಾದ ಹಬ್ಬದ After-effects ಬಗ್ಗೆ ಸಂಶೋಧಿಸಲು ತೀವ್ರವಾಗಿ ಪರದಾಡಿದ ಬೊಗಳೆ ರಗಳೆ ಬ್ಯುರೋಗೆ ಹಲವಾರು ಮಹತ್ವಹೀನ ಅಂಶಗಳು ಲಭಿಸಿವೆ.ಏಪ್ರಿಲ್ ಫೂಲ್‌ನ ಪಶ್ಚಾತ್ ಪರಿಣಾಮಗಳಿವು:
* ಮನೆಯವರೆಲ್ಲಾ ನಾಳೆ ಬೆಳಿಗ್ಗೆ ಬೇಗನೇ ಎದ್ದು ಗಡಿಬಿಡಿಯಲ್ಲಿ ಕಚೇರಿಗೆ ಬೇಗನೇ ಹೋಗಿ ಏಪ್ರಿಲ್ ಫೂಲ್ ಆಗಲಿ ಎಂಬ ಕಾರಣಕ್ಕೆ ಗಡಿಯಾರದ ಮುಳ್ಳನ್ನು ಒಂದು ಗಂಟೆ ಮುಂದೆ ತಿರುಗಿಸಿಟ್ಟಿದ್ದ ತಮ್ಮ. ಮಧ್ಯರಾತ್ರಿ ಎದ್ದ ಅಣ್ಣ, ನಾಳೆ ಎಲ್ಲರನ್ನೂ ಏಪ್ರಿಲ್ ಫೂಲ್ ಮಾಡೋಣ ಎಂದುಕೊಂಡು, ಎಲ್ಲರೂ ಕಚೇರಿ, ಶಾಲೆಗೆ ಲೇಟಾಗಿ ಹೋಗಲಿ ಅಂತ ಒಂದು ಗಂಟೆ ಹಿಂದೆ ಇಟ್ಟ. ಇಬ್ಬರಿಗೂ ತಮ್ಮ ತಮ್ಮ ಸಮಯದ ಮೇಲೆ ಅಪಾರ ಭರವಸೆ. ಮರುದಿನ ಎಲ್ಲರೂ ಸರಿ ಸಮಯಕ್ಕೇ ಕೆಲಸಕ್ಕೆ ಹೋದರೂ, ತಮ್ಮ ಒಂದು ಗಂಟೆ ತಡವಾಗಿ, ಅಣ್ಣ ಒಂದು ಗಂಟೆ ಮುಂಚಿತವಾಗಿ ಕಚೇರಿ ಸೇರಿ ಫೂಲ್‌ಗಳಾಗಿದ್ದರು!
* ಏಪ್ರಿಲ್ 1ರಂದು ನಡೆದ ಪರೀಕ್ಷೆಗೆ ಕಾಲೇಜಿನ ಉಂಡಾಡಿ ಗುಂಡರು ಯಾರು ಕೂಡ ಹಾಜರಾಗಿರಲಿಲ್ಲ. ಅವರು ನೀಡಿದ ಕಾರಣ: ಅವ್ರೇನು ನಮ್ಮನ್ನು ಫೂಲ್‌ಗಳು ಅಂತ ತಿಳ್ಕೊಂಡಿದ್ದಾರಾ? ಏಪ್ರಿಲ್ 1ರಂದು ಪರೀಕ್ಷೆ ಇದೆ ಅಂತ ಹೇಳಿ ನಮ್ಮನ್ನು ಮೂರ್ಖರಾಗಿಸಲು ಹೊರಟಿದ್ದಾರೆ. ನಾವು ಮೂರ್ಖರಲ್ಲ ಎಂಬುದನ್ನು ಶ್ರುತಪಡಿಸಬೇಕು. ಅದಕ್ಕಾಗಿ ನಾವು ಪರೀಕ್ಷೆಗೆ ಹೋಗಲೇ ಇಲ್ಲ.
* ಸಹೋದ್ಯೋಗಿಯನ್ನು ಫೂಲ್ ಮಾಡಲೆಂದು ಆತನ ಮೌಸ್‌ನ ಕೆಳಭಾಗದ ಬಾಲ್‌ಗೆ ಗಮ್ ಹಾಕಿದ ಕಾರಣ, ಗಮ್ ತೆಗೆಯಲಾರದೆ, ಮೌಸನ್ನೇ ಬದಲಾಯಿಸಬೇಕಾಗಿಬಂದು, ಏಪ್ರಿಲ್ ಫೂಲ್ ಮಾಡಿದವರೇ ದಂಡ ತೆರಬೇಕಾಗಿ ಬಂದ ಪ್ರಸಂಗಗಳು ಕೂಡ ಅಲ್ಲಲ್ಲಿ ವರದಿಯಾಗಿವೆ.
* ಕರ್ನಾಟಕದ ವಿವಿಧೆಡೆಯಂತೂ ಭಾರೀ ಮಳೆ ಸುರಿದು ಶ್ರಾವಣ ಮಾಸದ ಗಂಟೆಯನ್ನು ಒಂದೆರಡು ತಿಂಗಳುಗಳಷ್ಟು ಹಿಂದೆ ತಿರುಗಿಸಿದ ವರುಣದೇವನೇ ಜನರನ್ನು ಫೂಲ್ ಮಾಡಿಬಿಟ್ಟಿದ್ದ.
* ಅದೂ ಅಲ್ಲದೆ, ಏಪ್ರಿಲ್ ಫೂಲ್ ದಿನವೇ ಬೊ.ರ. ಜನುಮದಿನ ಅಂತ ಬೆಟ್ ಕಟ್ಟಿದವರು ಕೋಟ್ಯಂತರ ರೂಪಾಯಿ ಹಣ ಕಳೆದುಕೊಂಡು ಸಂಭ್ರಮಿಸಿದ್ದಾರೆ.
2 ಕಾಮೆಂಟ್‌ಗಳು
ಎಪ್ರಿಲ್ ಮೊದಲನೆಯ ತಾರೀಕು ನನ್ನ ಜನ್ಮದಿನ ಅಲ್ಲ ಅಂತ ನೀವು ಬೊಗಳೆ ಬಿಟ್ಟರೆ ನಂಬ್ತೀವಾ? ಮೊದಲೇ ಫೂಲ್ ಆಗಿರೋ ನಮ್ಮನ್ನು ಮತ್ತೆ ಫೂಲ್ ಮಾಡೋಕೆ ನಿಮ್ಮಿಂದ ಸಾಧ್ಯವೇ ಇಲ್ಲ.
ಪ್ರತ್ಯುತ್ತರಅಳಿಸಿಸುನಾಥರೆ,
ಪ್ರತ್ಯುತ್ತರಅಳಿಸಿನಿಮ್ಮ ಸಂಪೂರ್ಣ ಆತ್ಮವಿಶ್ವಾಸದ, ಸ್ಪಷ್ಟ, ಖಚಿತ, ನೇರ ನುಡಿ ಕೇಳಿ ನಮಗೇನೂ ಆಗದಿದ್ದರೂ, ಹೃದಯಕ್ಕೆ ಮಾತ್ರ ಆಘಾತವಾಗಿದೆ. ಶೀಘ್ರವೇ ಚಾ-ತರಿಸಿಕೊಂಡ ಬಳಿಕ ವಿ-ಚಾ-ರಿಸಿಕೊಳ್ಳುತ್ತೇವೆ.
ಏನಾದ್ರೂ ಹೇಳ್ರಪಾ :-D