(ಬೊಗಳೂರು ವಿದ್ಯುದೀಕರಣ ಬ್ಯುರೋದಿಂದ)
ಬೊಗಳೂರು, ಏ.3- ಕರುನಾಟಕದ ಹಳ್ಳಿ ಹಳ್ಳಿ, ಗ್ರಾಮ-ಕುಗ್ರಾಮಗಳೆಲ್ಲಾ ಇತ್ತೀಚೆಗೆ ಮೂರೂವರೆ ದಿನಗಳ ಕಾಲ ಬೆಳಗುತ್ತಿದ್ದವು. ಇದಕ್ಕೆ ಕಾರಣ ಪತ್ತೆ ಹಚ್ಚಲಾಗಿದ್ದು, ಭಾವೀ ಪ್ರಧಾನಿ ರಾಹುಲ ಗಾಂಧೀಜಿ ಅವರ ಕುಗ್ರಾಮ ಡಿಸ್ಕವರಿ ಪ್ರವಾಸ.ಕೊಲಂಬಸುವಿನಂತೆ ಕುಗ್ರಾಮಗಳನ್ನೆಲ್ಲಾ ಡಿಸ್ಕವರಿ ಮಾಡಲೆಂದು ಮರಿ ಗಾಂಧೀಜಿ ಅವರು ವರಿ ಮರೆತು ಜಿಲ್ಲೆ ಜಿಲ್ಲೆಗಳಲ್ಲಿ ಪ್ರಸವ ಮಾಡಿದಾಗ, ಗ್ರಾಮಸ್ಥರಲ್ಲೆಲ್ಲಾ ವಿದ್ಯುತ್ ಸಂಚಾರವಾಗಿತ್ತು. ಕೆಲವರು ಈ ವಿದ್ಯುತ್ತಿನ ಆಘಾತಕ್ಕೂ ಒಳಗಾಗಿದ್ದರು. ಒಟ್ಟಿನಲ್ಲಿ ಎಲ್ಲಿ ಹೋದರೂ ವಿದ್ಯುತ್ತೇ ವಿದ್ಯುತ್ತು. ಈ ವಿದ್ಯುತ್ತುಗಳನ್ನೆಲ್ಲಾ ಸಂಗ್ರಹಿಸಿ, ಇಷ್ಟು ವರ್ಷ ಕರ್ನಾಟಕವನ್ನು ಆಳಿಯೂ ಇನ್ನೂ ಕರೆಂಟಿಲ್ಲದೇ ನರಳುತ್ತಿದ್ದ ಗ್ರಾಮಗಳಿಗೆ ಕಾಂಗ್ರೆಸ್ ವಿದ್ಯುತ್ ಒದಗಿಸಿ ಇದು ನಮ್ಮ ಸಾಧನೆ ಎಂದು ಬೆನ್ನು ತಟ್ಟಿಕೊಳ್ಳಲಾರಂಭಿಸಿದೆ. ಇದುವೇ ಗ್ರಾಮೀಣ ವಿದ್ಯುದೀಕರಣ ಯೋಜನೆ ಎಂದೂ ಕರೆದುಕೊಂಡಿದೆ.
ಆದರೆ, ಅವರು ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವ ಇಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ತಾವು ಮುಂದಿನ ಪ್ರಧಾನಿ ಎಂಬುದನ್ನು ಸ್ಪಷ್ಟಪಡಿಸಿದರು. ಪಕ್ಕದಲ್ಲಿರುವ ಪಾಕಿಸ್ತಾನ ಮಿಲಿಟರಿ ಆಡಳಿತದಿಂದ ಪ್ರಜಾಪ್ರಭುತ್ವ ಆಡಳಿತಕ್ಕೆ, ನೇಪಾಳವೂ ಪ್ರಜಾಸತ್ತೆಗೆ, ಭೂತಾನದಲ್ಲೂ ಪ್ರಜಾಪ್ರಭುತ್ವ ಆಡಳಿತಕ್ಕೆ ಮರಳಿದೆ. ಎಲ್ಲರೂ ಪ್ರಜಾಪ್ರಭುತ್ವ ಅಂತ ಹೋರಾಡಿದರೆ, ಗಾಂಧೀಜಿ ಕುಟುಂಬವದವರು ಇನ್ನು ಯಾವಾಗ ಆಳ್ವಿಕೆ ನಡೆಸುವುದು ಎಂಬ ಪ್ರಶ್ನೆ ಸುಳಿದಾಡಿದ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ ಮತ್ತು ಭಾರತವು ಪ್ರಜಾಪ್ರಭುತ್ವದ ಬದಲು ಪ್ರಭುಪ್ರಭುತ್ವದತ್ತ ಹೊರಳುವ ಸೂಚನೆಗಳನ್ನೂ ನೀಡಿದರು.
ಈ ಮಧ್ಯೆ, ರಾಹುಲರು ಗಾಳಿ ಬೀಸಿ ಹೋದಲ್ಲಿ ಜನರನ್ನು ಬೊಗಳೆ ರಗಳೆ ಬ್ಯುರೋ ಸಂದರ್ಶಿಸಿತು. ಅಲ್ಲಿ ಕೇಳಿ ಬಂದ ಪ್ರಶ್ನೆಗಳು ಹಲವಾರು... ರಾಹುಲ್ ಬಂದಿದ್ರಲ್ಲಾ... ಏನನಿಸಿತು ಅಂತ ಕೇಳಿದಾಗ ದೊರೆತ ತತ್ತರದ ಉತ್ತರ ಹೀಗಿತ್ತು:
'ಅರೆ, ಯಾರು ರಾಹುಲ್? ಬಂದ್ಹೋಗಿದ್ದು ಮಹಾತ್ಮ ಗಾಂಧೀಜಿ ಅಲ್ವಾ? ಛೆ.. ನಮ್ಗೆ ಗೊತ್ತೇ ಆಗಿಲ್ಲ...' ಅಂತ ಕೆಲವರು ಕೇಳಿದ್ರೆ, ಇನ್ನು ಕೆಲವರು, "ಛೆ... ನಾವು ಇಂದಿರಮ್ಮರೇ ಬಂದು ಹೋದ್ರೂಂತ ತಿಳ್ಕೊಂಡ್ವಿ... ಹಾಗಂತ ನಮ್ಗೆ ಊರ ಜನಾ ಹೇಳಿದ್ರು, ಕರ್ಕೊಂಡು ಬಂದ್ರು..."
0 ಕಾಮೆಂಟ್‌ಗಳು
ಏನಾದ್ರೂ ಹೇಳ್ರಪಾ :-D