(ಬೊಗಳೂರು ಮೂರ್ಖರ ಸ್ಪಷ್ಟನಾ ಬ್ಯುರೋದಿಂದ)
ಬೊಗಳೂರು, ಏ.1- ಇಂದು ಏಪ್ರಿಲ್ ಫೂಲ್‌ಗಳ ದಿನವಾದರೂ ಇದು ನಮ್ಮ ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಯ ಬರ್ತ್ ಡೇ ಅಲ್ಲ ಎಂದು ಈ ಸಂದರ್ಭದಲ್ಲಿ ಬೊಗಳೆ ರಗಳೆ ಬ್ಯುರೋ ದಯನೀಯವಾಗಿ ಬಿದ್ದು ಒದ್ದಾಡುತ್ತಾ, ಕೈಕಾಲು ಬಡಿಯುತ್ತಾ ಸ್ಪಷ್ಟಪಡಿಸುತ್ತಿದೆ ಎಂದು ತಿಳಿಸಲು ವಿಷಾದ ವ್ಯಕ್ತಪಡಿಸಲಾಗುತ್ತದೆ.ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬಂತೆ, ಮೂರ್ಖರನ್ನು ಮೂರ್ಖರಿಂದಲೇ ಮೂರ್ಖರಾಗಿಸಬೇಕು ಎಂದು ಯತ್ನಿಸುತ್ತಾ ದೇಶ-ವಿದೇಶದೆಲ್ಲೆಡೆ ಓಲಾಡಿಕೊಂಡಿರುವವರಿಗೆ ಬೊಗಳೆ ಬ್ಯುರೋ ಶುಭಾಶಯಗಳನ್ನೂ ಕೋರುತ್ತದೆಯಲ್ಲದೆ, ಈಗಿನ ಜಾರಕಾರಣಿಗಳ ಜಾರಕಾರಣದ ಆಟಗಳಿಂದಾಗಿ ಮೂರ್ಖತನ ಎಂಬುದು ನಮ್ಮ ಆಜನ್ಮ ಸಿದ್ಧ ಹಕ್ಕು ಆಗಿಬಿಟ್ಟಿದೆ ಎಂಬುದನ್ನೂ ಖಚಿತಪಡಿಸಲಾಗುತ್ತಿದೆ.
ಈ ಬೆಲೆ ಏರಿಕೆ ಜಮಾನಾದಲ್ಲಿ ಮೂರ್ಖರಾಗದಿರುವುದೇ ದೊಡ್ಡ ಮೂರ್ಖತನ. ಕಷ್ಟವೂ ಹೌದು. ಕೇಂದ್ರದಲ್ಲಿ ಅಧಿಕಾರದಲ್ಲಿರೋರು, ಅಯ್ಯಯ್ಯೋ ಬೆಲೆ ಏರ್ತಾ ಇದೆ, ಹಣಗೊಬ್ಬರವೂ ಏರ್ತಿದೆ... ಅಂತೆಲ್ಲಾ ಬೊಬ್ಬೆ ಹೊಡೆದು ರಾತೋರಾತ್ರಿ ಸಭೆ ಸೇರುತ್ತಾರೆ. ಆದರೆ ಜನಸಾಮಾನ್ಯನ ಕಷ್ಟ ಮುಂದುವರಿದೇ ಇರುತ್ತದೆ. ಬೆಲೆ ಇಳಿಸದಿದ್ದರೆ ಬೆಂಬಲ ಹಿಂತೆಗೆಯುತ್ತೇವೆ ಅಂತ ಎಡಚರು ಕೂಗುತ್ತಾರೆ, ಬೆಲೆ ಇಳಿಯೋದೇ ಇಲ್ಲ. ಕೊನೆಯಲ್ಲಿ ಬೈ ಡೀಫಾಲ್ಟ್ ಆಗಿ ಮೂರ್ಖರಾಗೋದು ಮಾತ್ರ, ಒಂದು ಹೊತ್ತು ಹೊಟ್ಟೆ ತುಂಬಾ ಉಣ್ಣಲು ಚಡಪಡಿಸುವ ಸಮಸ್ತ ಭಾರತದ ಬಡಪ್ರಜೆಗಳೇ! ಹೀಗಾಗಿ ಮೂರ್ಖರಾಗದಿರುವುದೇ ಅವಮಾನ ಅಂತ ನಮ್ಮ ಬ್ಯುರೋ ಕಂಡುಕೊಂಡಿದೆ.
ಆದರೆ, ಫೂಲ್ ಆಗೋದನ್ನು ನಾವು (ಇನ್ನೂ) ಕಾಪಿರೈಟ್ ಮಾಡಿಸಿಕೊಂಡಿಲ್ಲ ಎಂಬುದನ್ನು ಇಲ್ಲಿ ಬಲವಾಗಿ ಒದರುತ್ತಾ ನಮ್ಮ ಸಂತಾಪಕರು ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಫೂಲ್ ಆಗುವ ಬಗೆಗಿನ ಪೇಟೆಂಟ್ ಎಲ್ಲಿ ಹೇಗೆ ಮಾಡಿಸಿಕೊಳ್ಳೋದು ಎಂಬುದು ಗೊತ್ತಿಲ್ಲದಿರುವುದೇ ಇದಕ್ಕೆ ಕಾರಣ ಎಂಬುದನ್ನು ನಮ್ಮ ವಿರೋಧಿ ಪತ್ರಿಕೆಯ ವರದ್ದಿಗಾರರು ಈಗಾಗಲೇ ಪತ್ತೆ ಹಚ್ಚಿಬಿಟ್ಟಿದ್ದಾರೆ. ನಮ್ಮನ್ನು ಮೂರ್ಖರಾಗಿಸುವುದು ಸಾಧ್ಯವಿಲ್ಲ ಎಂದೂ ಜಂಭ ಕೊಚ್ಚಿಕೊಳ್ಳಲಾಗುತ್ತಿದೆ. ಯಾಕೆಂದರೆ, ನಮ್ಮನ್ನು ಯಾರೂ ಫೂಲ್ ಮಾಡಬೇಕಾದ ಅವಶ್ಯಕತೆಯಿಲ್ಲದಿದ್ದರೂ ಮೂರ್ಖರನ್ನೇ ಮೂರ್ಖರಾಗಿಸುವುದು ಹೇಗೆ? ಎಂಬುದರ ಬಗ್ಗೆ ಇನ್ನೂ (ಜಾರಕಾರಣಿಗಳು ಈ ಕುರಿತ ಸಂ-ಶೋಧನೆಗೆ ಶತಾಯಗತಾಯ ಯತ್ನಿಸುತ್ತಿದ್ದರೂ) ಸಂಶೋಧನೆಯಾಗಿಲ್ಲ ಅಂತ ನಮಗೆ ನಾವೇ ಸಮಾಧಾನ ಮಾಡಿಕೊಳ್ಳುತ್ತಿದ್ದೇವೆ.
ಇದು ಮೂರ್ಖರ ದಿನದ ಮಾತು. ಇನ್ನು ಏಪ್ರಿಲ್ ಫೂಲ್‌ಗಳ ಬಗ್ಗೆ ಹೊರಳೋಣ.
ನಮ್ಮ ಬೊಗಳೆ ಪತ್ರಿಕೆ ಓದಲು ಬಂದು, ಓದಿದ ತಕ್ಷಣವೇ ಎದ್ದೋಡುಗರು ಆಗುವ ನಮ್ಮ ಪತ್ರಿಕೆಯ ಓದುಗರು ಏಪ್ರಿಲ್ ಒಂದರಂದೇ ನಮ್ಮ ಬರ್ತ್ ಡೇ ಅಂತ ಖಚಿತವಾಗಿ, ನಿಖರವಾಗಿ ಮತ್ತು ಯಾವುದೇ ಗೊಂದಲ, ಸಂಶಯಗಳಿಲ್ಲದ ರೀತಿಯಲ್ಲಿ ಮತ್ತು ನಮಗೇ ನಮ್ಮ ಬಗ್ಗೆ ಡೌಟು ಬರುವ ರೀತಿಯಲ್ಲಿ ವಾದಿಸುತ್ತಿರುವುದರಿಂದ ಅವರಿಗಾಗಿ ಈ ಸಾಲುಗಳು.
ಅದೆಂದರೆ, ನೀವು ಅಂದುಕೊಂಡಂತೆಯೇ ಆಗಲಿ, ಇದು ಏಪ್ರಿಲ್‌ನ ಫೂಲ್‌ಗಳ ದಿನ ಅಂತಲೇ ಒಪ್ಪಿಕೊಳ್ಳೋಣ. ನಮ್ಮ ಜನ್ಮದಿನವೇ ಅಂತಲೂ ಒಪ್ಪೋಣ. ಆದರೆ ನಾವು ಯಾವತ್ತೂ ಆಂಗ್ಲ ವಿರೋಧಿಗಳಾಗಿರುವುದರಿಂದ ಇದು fool ಗಳ ದಿನವಲ್ಲ, ಬದಲಾಗಿ ರಂಗ್ ಬಿರಂಗೀ ಫೂಲ್‌ಗಳ (फूल) ದಿನ ಅಂತಲೂ ಒತ್ತಾಯಪೂರ್ವಕವಾಗಿ ಒಪ್ಪಿಕೊಳ್ಳಬೇಕಾಗುತ್ತದೆ.
ಈಗ ನೀವೇ ಹೇಳಿ.... ಯಾರು 'ಫೂಲ್'ಗಳಲ್ಲ? ಕನ್ನಡ ಬ್ಲಾಗ್ ಜಗತ್ತಿನಲ್ಲಿ ಅರಳ್ತಾ ಇರೋ ಫೂಲ್‌ಗಳು. ಅಂತೂ ನಾವು ನಮ್ಮನ್ನೂ phoolಮಾಡಿಕೊಂಡು, ನಿಮ್ಮನ್ನೂ phool ಮಾಡಿದ್ದೇವೆ. ಬ್ಲಾಗ್ ಜಗತ್ತಿನಲ್ಲಿ ಹೊಸ ಹೊಸ ಬಣ್ಣ ಬಣ್ಣದ ಫೂಲ್‌ಗಳು ಅರಳಲಿ.
ವಿ.ಸೂ.: ಫೂಲ್ ಆಗಲು ಇಷ್ಟ ಇಲ್ಲದೇ ಇರೋರು, ಮುಜುಗರ ಪಡೋರು, ಮನೆಯಲ್ಲೇ ಬಾಗಿಲು ಹಾಕಿ ಕುಳಿತುಕೊಳ್ಳೋರು, ಶಾಲಾ-ಕಾಲೇಜಿಗೆ ರಜಾ ಹಾಕೋರು, ಆಫೀಸಿಗೆ ಚಕ್ಕರ್ ಹೊಡೆಯೋರು, ಫೂಲ್ ಆಗಿದ್ದರೂ, ಆಗಿಲ್ಲ, ಆಗಿಲ್ಲ ಅಂತ ವಾದಿಸೋರು...ಈ ಬಗ್ಗೆ ಮತ್ತೊಮ್ಮೆ ಯೋಚಿಸುವುದೊಳಿತು!
9 ಕಾಮೆಂಟ್‌ಗಳು
ನಿಮ್ಗೆ फूल ಕೊಟ್ಟು ಫೂಲ್ ಮಾಡಿದೋರು ಯಾರು ಅನ್ವೇಷಿಗಳೇ ;)
ಪ್ರತ್ಯುತ್ತರಅಳಿಸಿಅನ್ವೇಷಿಗಳಿಗೆ ಹುಟ್ಟುಹಬ್ಬದ ಮುಬಾರಕುಗಳು
ಪ್ರತ್ಯುತ್ತರಅಳಿಸಿಚಳ್ಳೇಹಣ್ಣು ತಿಂದೇ ಹೊಟ್ಟೆ ತುಂಬಿಸಿಕೊಳ್ತಿದ್ದೀರಾ? ಹುಟ್ಟುಹಬ್ಬದ ಅಂಗವಾಗಿ ನಮಗೇನು ತಿನ್ನಿಸ್ತಿದ್ದೀರಾ?
ವರ್ಷವಿಡೀ ನಮ್ಮನ್ನು phool ಮಾಡ್ತಾ ಇದ್ದೀರಿ.ಒಂದು ದಿನಾ
ಪ್ರತ್ಯುತ್ತರಅಳಿಸಿfool ಆದರೂ ಪರವಾ ಇಲ್ಲ ಬಿಡಿ.
ನೀಲಗಿರಿಯವರೆ,
ಪ್ರತ್ಯುತ್ತರಅಳಿಸಿನಾವು ಫೂಲ್ ಆದಮೇಲಷ್ಟೇ फूल ತೆಗೆದುಕೊಂಡಿದ್ದು! ;)
ಶ್ರೀನಿವಾಸರೆ,
ಪ್ರತ್ಯುತ್ತರಅಳಿಸಿನಿಮಗೂ ಶೇಮ್ ಟೂ ಯೂ! ;)
ಹುಟ್ಟುಹಬ್ಬಕ್ಕೆ ಒಂದಷ್ಟು ಅಕ್ಷರ ಸಮಾರಾಧನೆ!
ಸುನಾಥರೆ,
ಪ್ರತ್ಯುತ್ತರಅಳಿಸಿfool ಆಗೋದು ಪ್ರತಿಷ್ಠೆಯ ವಿಷಯ. ಹಾಗಾಗಿ ದೊರೆತ ಅವಕಾಶಾನ ತಪ್ಪಿಸ್ಕೋಬೇಡಿ...
ಅಸತ್ಯಿಗಳೇ,
ಪ್ರತ್ಯುತ್ತರಅಳಿಸಿದೇಶದ ಅತಿದೊಡ್ಡ ಫೂಲ್ ಪ್ರಶಸ್ತಿಯನ್ನು ಈಗಾಗಲೇ ಯಡ್ಡಿಯವರಿಗೆ ನೀಡಿಯಾಗಿದೆಯಲ್ಲ?
-ಪಬ್
ಎವರ್‌ಗ್ರೀನ್ ಹಳಸಲು...!! ಆದರೂ ಶುಭಾಶಯಗಳು.
ಪ್ರತ್ಯುತ್ತರಅಳಿಸಿಎಚ್ಚೆತ್ತುಕೊಂಡಿದ್ದೇವೆ, ಶುಭಾಶಯಗಳು.
ಅಳಿಸಿಏನಾದ್ರೂ ಹೇಳ್ರಪಾ :-D