(ಬೊಗಳೂರು ಫ್ಯಾಶನ್-ಪ್ಯಾಶನ್ ಬ್ಯುರೋದಿಂದ)
ಬೊಗಳೂರು, ಮಾ.28- ಆನೆಗಳ ಫ್ಯಾಶನ್ ಪೆರೇಡ್ಗೆ ನಿಷೇಧ ವಿಧಿಸಿರುವುದರಿಂದಾಗಿ ಆನೆಗಳು, ಅದರಲ್ಲೂ ಧಢೂತಿ ಆನೆಗಳು ತೀವ್ರ ಚಿಂತೆಗೀಡಾಗಿವೆ.ಈ ಬಗ್ಗೆ, ಯಾವತ್ತೂ ಕತ್ತೆ, ನಾಯಿ, ಮಂಗಗಳಂತೆಯೇ ಅಲ್ಲದಿದ್ದರೂ ಅವುಗಳ ಪರವಾಗಿಯೇ ವರ್ತಿಸುತ್ತಿರುವ ಬೊಗಳೆ-ರಗಳೆ ಬ್ಯುರೋವನ್ನು ಸಂಪರ್ಕಿಸಿದ ಗಜಸಮೂಹ, ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಸಂಚು ಎಂದು ದೂರು ನೀಡಿವೆ.
ನಾವು ಸ್ಲಿಮ್ ಆಗುವುದಕ್ಕೆ ಸಾಕಷ್ಟು ಕಷ್ಟಪಡುತ್ತೇವೆ. ಹೆಚ್ಚಾಗಿ ಜಲಕ್ರೀಡೆ ಆಡುತ್ತಾ ಇರುತ್ತೇವೆ. ನೀರೆಯರ ಮೈಮಾಟ ಚೆನ್ನಾಗಿರಬೇಕೆಂದರೆ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ಬೇಕು ಅಂತ ತಿಳಿದವರು ಹೇಳಿದ ಪ್ರಕಾರವೇ ನಾವು ನೀರಿನಲ್ಲೇ ಜಳಕ ಮಾಡಿ ಪುಳಕಗೊಳ್ಳುತ್ತಿದ್ದೆವು. ಅಷ್ಟು ನೀರು ಕುಡಿದ ಪರಿಣಾಮವಾಗಿ ನಾವು ಸ್ಲಿಮ್ ಆದದ್ದನ್ನು ತೋರಿಸಲೋಸುಗ ಈ ಫ್ಯಾಶನ್ ಶೋದಲ್ಲಿ ಭಾಗವಹಿಸುವ ಅವಕಾಶವಿತ್ತು. ಅದೀಗ ಇಲ್ಲದಂತಾಗಿದೆ ಎಂಬುದು ಅವುಗಳ ಅಳಲು.
ತಮ್ಮ ಗಜಗಾಂಭೀರ್ಯದ ಬೆಕ್ಕಿನ ನಡಿಗೆಯನ್ನು ನಿಲ್ಲಿಸುವಲ್ಲಿ ತಮ್ಮ ಬದ್ಧವೈರಿಯಾದ ಇರುವೆಗಳ ಕೈವಾಡವಿದೆ ಎಂದು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ ಧಢೂತಿ ಆನೆಗಳು, ನಾವು ಮಾಡಿದಂತೆ ವ್ಯಾಯಾಮ ಮಾಡಲಾಗದಿರುವುದು ಮತ್ತು ನಮ್ಮಷ್ಟು ಪ್ರಸಿದ್ಧಿ ಪಡೆಯದೇ ಇರುವುದು ಇರುವೆಗಳಿಗೆ ನಮ್ಮ ಮೇಲೆ ಇರುವ ಹೊಟ್ಟೆಕಿಚ್ಚು ಎಂದು ಆಪಾದಿಸಿವೆ.
ಮಾನವರಂತೆ ನಾವೇನೂ ಮೈಚಳಿ ಬಿಟ್ಟು ಬೆತ್ತಲೆಯಾಗಿ ಫ್ಯಾಶನ್ ಶೋದಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬ ಮಾತನ್ನೂ ಗಜರಾಜ್ ಅವರು ಇದೇ ಸಂದರ್ಭದಲ್ಲಿ ಅದೆಲ್ಲಿಂದಲೋ ಹೆಕ್ಕಿ ತಂದು ಸೇರಿಸಿದ್ದಾರೆ.
ಫ್ಯಾಶನ್ ಶೋಗಳು ಮೈಮಾಟ ಪ್ರದರ್ಶಿಸುವುದಕ್ಕೇ ಇರುವುದಾದರೂ, ನಾವು ಆ ರೀತಿ ಮಾಡುತ್ತಿಲ್ಲ. ನಾವು ದಿನನಿತ್ಯ ಮಾಡುವ ವ್ಯಾಯಾಮ, ಡಯಟ್ ಇತ್ಯಾದಿಗಳಿಂದ ನಾವೆಷ್ಟು ಸ್ಲಿಮ್ ಆಗಿದ್ದೇವೆ, ಸಾಕಷ್ಟು ನೀರನ್ನು ನಮ್ಮ ಸೊಂಡಿಲಿನಿಂದ ಮೈಗೆ ಪಂಪ್ ಮಾಡಿಕೊಳ್ಳುವುದೇ ನಮ್ಮ ಸೌಂದರ್ಯದ ಗುಟ್ಟು ಎಂಬುದನ್ನು ಜನತೆಗೆ ತೋರಿಸೋದಷ್ಟೇ ನಮ್ಮ ಇಂಗಿತ ಎಂದವರು ಹೇಳಿದ್ದಾರೆ.
ಆದರೆ ಇರುವೆ ಸಂಘದ ಅಧ್ಯಕ್ಷರು ಗಜರಾಜ್ ಅವರ ಈ ಮಾತನ್ನು ಮಾತ್ರವೇ ಖಡಾಖಂಡಿತವಾಗಿ ತಳ್ಳಿ ಹಾಕಿದ್ದಾರೆ. ನಮ್ಮ ಸಮೂಹವನ್ನು ರೇಗಿಸಲೆಂದೇ ಗಜರಾಜ್ ಅವರು ನೀರಿನಲ್ಲಿ ಮುಳುಗುವ ಮಾತನ್ನು ಆಡಿದ್ದಾರೆ ಎಂಬುದು ಅವರ ಆರೋಪ.
ಈ ಬಗ್ಗೆ ಗೊಂದಲದಲ್ಲಿ ಸಿಲುಕಿರುವ ಬೊಗಳೆ ಬ್ಯುರೋ, ತನಿಖೆ ನಡೆಸಲು ಸಿದ್ಧತೆ ನಡೆಸುತ್ತಾ ನಿದ್ರಿಸಿದೆ.
0 ಕಾಮೆಂಟ್ಗಳು
ಏನಾದ್ರೂ ಹೇಳ್ರಪಾ :-D