(ಬೊಗಳೂರು ಸಂಚಕಾರ ಬ್ಯುರೋದಿಂದ)
ಬೊಗಳೂರು, ಮಾ.12- ರಾಷ್ಟ್ರವ್ಯಾಪಿಯಾಗಿ ವಿಮಾನ ನಿಲ್ದಾಣ ನೌಕರರು ಮುಷ್ಕರ ಆರಂಭಿಸಿರುವುದರಿಂದ ವಿಮಾನಗಳ ಓಡಾಟ ಕಡಿಮೆಯಾಗಿ, ರಸ್ತೆ ಸಂಚಾರದಲ್ಲಿ ತೀವ್ರ ದಟ್ಟಣೆ ಕಂಡುಬಂದಿದ್ದು, ಅಲ್ಲಲ್ಲಿ ಟ್ರಾಫಿಕ್ ಜಾಮ್ ಆಗಿರುವುದಾಗಿ ವರದಿಯಾಗಿದೆ.ಕಚೇರಿಯಿಂದ ಮನೆಗೆ ಹೊರಟವರು ಮನೆ ತಲುಪಲಾರದೆ ದಾರಿಯಲ್ಲೇ ದಾರಿ ತಪ್ಪಿ ಎಲ್ಲೆಲ್ಲೋ ಹೋಗಿರುವ ಕುರಿತಾಗಿ ನಮ್ಮ ಬೊಗಳೂರು ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳ ತಂಡವು ನಗರವಿಡೀ ಸಂಚಾರ ನಡೆಸಿ ಸಮೀಕ್ಷೆ ನಡೆಸಿದಾಗ ಕಂಡು ಬಂದ ಪ್ರಮುಖ ಅಂಶ.
ವಿಮಾನ ಮುಷ್ಕರದಿಂದಾಗಿ ವಿಮಾನ ನಿಲ್ದಾಣದ ಸುತ್ತಮುತ್ತ ವಾಸಿಸುತ್ತಿರುವ ಕುಟುಂಬಗಳಂತೂ ತೀರಾ ಸಂಕಷ್ಟಕ್ಕೀಡಾದವು. ಮಕ್ಕಳು ಮರಿಗಳು ಶಾಲೆಗೆ ತಡವಾಗಿ ಹೋಗಬೇಕಾಯಿತು. ಬೆಳಗ್ಗೆ ನ್ಯೂಯಾರ್ಕ್‌ಗೆ ತೆರಳುವ ವಿಮಾನ ಹಾರಾಟ ಆರಂಭವಾದಾಗಲೇ ಅಪಾರ ಶಬ್ದಮಾಲಿನ್ಯದಿಂದಾಗಿ ಸುತ್ತಮುತ್ತಲಿನವರಿಗೆ ಗಾಢ ನಿದ್ರೆಯಿಂದ ಎಚ್ಚರವಾಗುತ್ತಿತ್ತು. ಮತ್ತು ಯಾವುದೇ ಅಲಾರಂ ಅನಗತ್ಯವಾಗಿತ್ತು. ಇದೀಗ ವಿಮಾನದ ಸದ್ದಿಲ್ಲದೆ ಅವರು ತುಂಬಾ ತ್ರಾಸಪಟ್ಟರು. ಹೆಚ್ಚಿನ ಮನೆಗಳಲ್ಲಿ ಆಫೀಸಿಗೆ ತಡವಾಯಿತು, ಶಾಲೆಗೆ ತಡವಾಯಿತು, ತಿಂಡಿಗೆ ಲೇಟಾಯ್ತು, ಸ್ನಾನಕ್ಕೆ ಲೇಟಾಯ್ತು ಅಂತ ಗೊಣಗುಟ್ಟುವಿಕೆ, ಸಿಡಿಮಿಡಿಗುಟ್ಟುವಿಕೆಯೇ ಹೆಚ್ಚಾಗಿ ವಿಮಾನಕ್ಕಿಂತಲೂ ಹೆಚ್ಚು ಶಬ್ದಮಾಲಿನ್ಯವನ್ನು ಬೊಗಳೂರು ತಂಡವು ಕಣ್ಣಾರೆ ಕೇಳಿಸಿಕೊಂಡಿತು ಮತ್ತು ಕಿವಿಯಾರೆ ಕಂಡಿತು.
ಶಾಲೆಗೆ ಹೋಗುವ ಮಕ್ಕಳು ಕೂಡ ವಿಮಾನಕ್ಕಾಗಿ ಕಾದು ಕಾದು ಸುಸ್ತಾಗಿ ನಡೆದೇ ಶಾಲೆಗೆ ಹೋಗುವಾಗ ತಡವಾಯಿತು. ಇನ್ನು ಕೆಲವು ವಿಮಾನಗಳು ಬಂದಂತೆ ಕಾಣಿಸಿತಾದರೂ ಅವುಗಳು ಎಲ್ಲಿಯೂ ನಿಲ್ಲಿಸದೆ ಪರಾರಿಯಾದಂತೆ ಓಡಿದವು. ವಿಚಾರಣೆಗೊಳಪಡಿಸಿದಾಗ, ಅವುಗಳೆಲ್ಲಾ ಬೆಂಗಳೂರಿನ ಹೊಸ ವಿಮಾನ ನಿಲ್ದಾಣಕ್ಕೆ ಹೋಗಿ ಅಲ್ಲೇ ನೆಲೆ ನಿಲ್ಲಲು ತೆರಳುತ್ತಿವೆ ಎಂಬುದು ತಿಳಿದುಬಂತು.
ಇನ್ನು, ಕಚೇರಿಗೆ ಅದು ಹೇಗೋ ತಲುಪಿದವರ ಪಾಡು ಹೇಳತೀರದು. ಅವರಿಗೆ ವಾಪಸ್ ಬರಲು ವಿಮಾನವೇ ಇಲ್ಲ! ಅರ್ಧಂಬರ್ಧ ಕೆಲಸ ಮುಗಿಸಿ ಮನೆಗೆ ವಿಮಾನದಲ್ಲಿ ಬುರ್ರನೇ ಓಡಿಹೋಗೋಣ ಅಂದುಕೊಂಡವರ ಸ್ಥಿತಿಯಂತೂ ಕುದಿಯುವ ಎಣ್ಣೆಗೆ ನೀರು ಚಿಮುಕಿಸಿದಂತಿತ್ತು.
ಒಟ್ಟಿನಲ್ಲಿ, ವಿಮಾನಗಳು ಇಲ್ಲದ ಕಾರಣದಿಂದಾಗಿ ನಗರದ ರಸ್ತೆಗಳೆಲ್ಲಾ ತುಂಬಿ ತುಳುಕಾಡುತ್ತಿದ್ದು, ಇರುವೆಗಳು ಕೂಡ ಎಲ್ಲಿ ಹೋಗುವುದು, ಹೇಗೆ ಹೋಗುವುದು ಎಂದು ತಿಳಿಯದೆ ಒದ್ದಾಡಿದವು ಎಂದು ತಿಳಿದುಬಂದಿದೆ. ವಿಮಾನಗಳಿಲ್ಲದ ಕಾರಣದಿಂದಾಗಿ ಕಚೇರಿಗೆ ಓಡುತ್ತಿರುವವರ, ನಡೆದು ಏಗುತ್ತಿರುವವರ ಮತ್ತು ಏಗಿಕೊಂಡೇ ನಡೆಯುತ್ತಿರುವವರ ಮುಖ ನೋಡಿ ಬೊಗಳೂರು ಬ್ಯುರೋದ ಮಂದಿಯೂ ಮುಖ ಕಿವುಚಿಕೊಳ್ಳಬೇಕಾಗಿಬಂತು ಎಂದು ನಮ್ಮ ಖಾರಾ ಬಾತ್‌ಮೀದಾರರು ವರದ್ದಿ ಒಪ್ಪಿಸಿದ್ದಾರೆ.
4 ಕಾಮೆಂಟ್‌ಗಳು
ಆಗಿಂದಾಗ್ಯೆ ಮುಷ್ಕರ ನಡೆಯುತ್ತಿದ್ದರೆ ಜನಕರುಗಳಿಗೂ ಒಳಿತಾಗುವುದು. ಆಕ್ಸಿಡೆಂಟ್‍ಗಳು ಕಡಿಮೆ ಆಗುವುದು ಮತ್ತು ಇಂಧನ ಸಮಸ್ಯೆಯೂ ಪರಿಹಾರ ಆಗುವುದು.
ಪ್ರತ್ಯುತ್ತರಅಳಿಸಿಅಂದ ಹಾಗೆ ನಾವು ಜಟಕಾ, ಎತ್ತಿನಬಂಡಿ ಸರ್ವೀಸ್ ಅನ್ನು ಸದ್ಯದಲ್ಲಿಯೇ ಪ್ರಾರಂಭಿಸುತ್ತಿದ್ದೇವೆ. ಪುಕ್ಕಟೆಯಾಗಿ ಜಾಹೀರಾತು ನೀಡಲು ನಿಮ್ಮ ಪತ್ರಿಕೆಯಲ್ಲಿ ಅವಕಾಶ ಮಾಡಿಕೊಡುತ್ತೀರಾ?
ಪಾಲೂ ಪ್ರಸಾದರಂಥ ಸಮರ್ಥ ದುರಾಡಳಿತಗಾರರ ಕೈಯಲ್ಲಿರುವ ರೇಲ್ವೆ ನಿಲ್ದಾಣಗಳನ್ನು ವಿಮಾನ ನಿಲ್ದಾಣಗಳನ್ನಾಗಿ ಪರಿವರ್ತಿಸಬೇಕು. ಆಗ ನೋಡಿರಿ, ಒಂದೂ ಮುಷ್ಕರವಿರುವದಿಲ್ಲ. ವಿಮಾನಗಳನ್ನೆಲ್ಲ ಹಳಿಗಳ ಮೇಲೆ ಓಡಿಸಬಹುದು.
ಪ್ರತ್ಯುತ್ತರಅಳಿಸಿಶ್ರೀನಿವಾಸರೆ,
ಪ್ರತ್ಯುತ್ತರಅಳಿಸಿನೀವು ಕೂಡ ಒಬ್ಬ ಜನಕ ಆಗಿರುವುದರಿಂದ ನಿಮಗೆ ಒಳ್ಳೆಯದಾಗುತ್ತದೆ ಎಂಬುದೇ ನಿಮ್ಮ ಹೇಳಿಕೆಯ ಹಿಂದಿರುವ ಸ್ವಾರ್ಥಭರಿತ ಗೂಢಾರ್ಥವಲ್ಲವೇ? ಆದರೆ ದನಕರುಗಳಿಗೆ ಒಳ್ಳೆಯದಾಗಿ ಇಂ-ಧನ ಉಳಿತಾಯವಾಗೋದು ಹೇಗೆ? ಹೆಚ್ಚು ಹೆಚ್ಚು ಸಗಣಿ.....?
ನಿಮ್ಮ ಜಾಹೀರಾತು ಉಚಿತವಾಗಿಯೇ ಪ್ರಕಟಿಸುವುದು ಖಚಿತ. ಆದರೆ ಅದಕ್ಕೆ ಒಂದಷ್ಟು ತಳ್ಳಬೇಕಾಗುತ್ತದೆ. ಹಾಗಿದ್ದರೆ ಮಾತ್ರ ಉಚಿತ.
ಸುನಾಥರೆ,
ಪ್ರತ್ಯುತ್ತರಅಳಿಸಿಆ ಮೇಲೆ, ಮಡಿಕೆಯಲ್ಲಿ ಮಜ್ಜಿಗೆ, ಕುಡಿಕೆಯಲ್ಲಿ ನೀರಾ, ಎಲ್ಲವೂ ವಿಮಾನದಲ್ಲೇ ಲಭ್ಯ. ಮ್ಯಾನೇಜ್ಮೆಂಟ್ ಗುರು ಆಗಿರುವ ಲಲ್ಲು ಪ್ರಸಾದ್ ಇಲ್ಲೂ ಜಯಿಸುತ್ತಾರೆ.
ಏನಾದ್ರೂ ಹೇಳ್ರಪಾ :-D