(ಬೊಗಳೂರು ಡ್ರೀಮ್ಬಗ್ ಬ್ಯುರೋದಿಂದ)
ಬೊಗಳೂರು, ಮಾ.7- ಕನಸುಗಳನ್ನು ನನಸಾಗಿಸುವ ಉಪಕರಣವೊಂದು ಬೊಗಳೂರು ಅಜ್ಞಾನಿಗಳ ತಂಡವೊಂದು Someಶೋಧಿಸಿದ್ದು, ಇದಕ್ಕೆ ವಿಶೇಷವಾಗಿ ಕಾಲೇಜು ಸುತ್ತಮುತ್ತಲಿನ ಪರಿಸರಗಳು, ಲೇಡೀಸ್ ಹಾಸ್ಟೆಲ್ ಮತ್ತು ಜೆಂಟ್ಸ್ ಹಾಸ್ಟೆಲ್ಗಳಿಂದ ತೀವ್ರ ಬೇಡಿಕೆ ಕುದುರಿದೆ ಎಂದು ವರದ್ದಿಯಾಗಿದೆ.ಈ ಉಪಕರಣಕ್ಕೆ ಡ್ರೀಮ್ಬಗ್ ಅಂತ ಹೆಸರಿಡಲಾಗಿದೆ. ಡ್ರೀಮ್ ಅನ್ನೋದು ಡ್ರೀಮೇ, ಆದರೆ ಬಗ್ ಅನ್ನೋದು ಮಾತ್ರ ಬೊಗಳೆ ಎಂಬುದರ ಕತ್ತರಿಸಿದ ರೂಪ ಎಂದು ಅಜ್ಞಾನಿಗಳು ತಿಳಿಸಿದ್ದಾರೆ. ಹೀಗಾಗಿ ಇದರಲ್ಲಿ ಬೊಗಳೆ ರಗಳೆ ಕೈವಾಡವಿರುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಆದರೂ ಹುಡುಗರ ಡ್ರೀಮ್ಗರ್ಲ್ಗಳು ಮತ್ತು ಹುಡುಗಿಯರ ಡ್ರೀಮ್ಬಾಯ್ಗಳು ಈ ಡ್ರೀಮ್ ಬಗ್ ಖರೀದಿಗೆ ಮುಗಿಬೀಳುತ್ತಿದ್ದಾರೆ ಎಂಬುದನ್ನು ಪಕ್ಕದ್ಮನೆಯಲ್ಲಿ ನಡೆಯುತ್ತಿದ್ದ ಗಲಾಟೆಯನ್ನು ನೋಡಿ ನಮ್ಮ ವರದಿಗಾರರು ರಹಸ್ಯವಾಗಿ ಬಾಯಿಬಿಟ್ಟಿದ್ದಾರೆ.
ಆದರೆ ಸುಳ್ಳು ಸುಳ್ಳೇ ಕನಸು ಕಾಣುವ ಯುವ ವರ್ಗದಿಂದ ಈ ಉಪಕರಣಕ್ಕೆ ತೀವ್ರ ಪ್ರತಿರೋಧವೂ ಎದುರಾಗಿದೆ. ಕೆಲವು ಬಾರಿ ನಾವು ನಮ್ಮ ಎಲ್ಲ ಕ್ಲಾಸುಮೇಟ್ಗಳ ಬಗ್ಗೆ ಮತ್ತು ಗ್ಲಾಸುಮೇಟುಗಳ ಬಗ್ಗೆ ಕನಸು ಕಾಣುತ್ತಿರುತ್ತೇವೆ. ಅದೆಲ್ಲಾ ನನಸಾದಲ್ಲಿ ಅವರೆಲ್ಲರನ್ನೂ ನಿಭಾಯಿಸೋದು ಹೇಗೆ ಎಂಬುದು ಅವರ ಪ್ರಶ್ನೆ.
ಆದರೆ, ಹಗಲು ಕನಸು ಕಾಣುವುದಕ್ಕಾಗಿಯೇ ಕಾಲೇಜಿಗೆ ಬರುವವರು ಇದನ್ನು "ಭಯಂ"ಕರವಾಗಿ ಸ್ವಾಗತಿಸಿದ್ದಾರೆ. ಈಗಾಗಲೇ ಬುಕಿಂಗ್ ಆರಂಭಿಸಿರುವ ಅವರು, ಬೊಗಳೆಗೂ ಕನಸು ಕಾಣುವಂತೆ ಒತ್ತಾಯಿಸುತ್ತಿದ್ದಾರೆ ಎಂದು ವರದ್ದಿಗಾರರು ಬೆಚ್ಚಿಬಿದ್ದು ಕೆಂಡಾಮಂಡಲವಾಗಿ ವದರಿದ್ದಾರೆ.
ಈ ಕನಸಿನ ಉಪಕರಣವು ಮನಸಿನಲ್ಲೇನೇನಿದೆ ಎಂಬುದನ್ನೆಲ್ಲಾ ತಿಳಿಯಪಡಿಸುವುದರಿಂದ ಜಾರಕಾರಣಿಗಳಂತೂ ಬಾಲ ಸುಟ್ಟ ಇಲಿಯಂತೆ ರಾಜಪಥದಲ್ಲೇ ಅತ್ತಿತ್ತ ಶತಪಥ ಹಾಕುತ್ತಿದ್ದಾರೆ. ಎಲ್ಲಾದರೂ ಅಬ್ದುಲ್ ಕರೀಂ ತಲೆತೆಗಿ ಮುಂತಾದ ಹಗರಣಕೋರರನ್ನು, ಕೊಲೆಗಡುಕರನ್ನೆಲ್ಲಾ ಹಿಡಿದು ಈ ಉಪಕರಣದ ಮುಂದೆ ಇರಿಸಿದಲ್ಲಿ, ಅವರು ಪೂರ್ತಿಯಾಗಿ ಬಾಯಿ ಬಿಡದಂತೆ ಮಾಡಲು, ಅವರ ಬಾಯಿಯ ಸ್ನಾಯುವಿಗೆ ಹಗ್ಗ ಕಟ್ಟುವಂತೆ ಅಧಿಕಾರಿಗಳಿಗೆ ಒಳಗಿಂದೊಳಗೆ ಆದೇಶ ನೀಡುತ್ತಿದ್ದಾರೆ ಎಂಬುದನ್ನು ಬೊಗಳೆ ರಗಳೆಯ ರಹಸ್ಯ ಬ್ಯುರೋ ವದರಿದೆ.
0 ಕಾಮೆಂಟ್ಗಳು
ಏನಾದ್ರೂ ಹೇಳ್ರಪಾ :-D