ಬೊಗಳೆ ರಗಳೆ

header ads

ಲಾಭದಲ್ಲಿ ಲಾಲು-ವೇಲು ರೈಲು: ರಹಸ್ಯ ಬಯಲು

(ಬೊಗಳೂರು ಲಾಭಾಲಾಭ ಲೆಕ್ಕಾಚಾರ ಬ್ಯುರೋದಿಂದ)
ಬೊಗಳೂರು, ಫೆ.28- ಕರ್ನಾಟಕದ ಮಟ್ಟಿಗೆ 'ಡರ್ಟಿ' ಬಜೆಟ್ ಮಂಡಿಸಿದ ಲಾಲು-ವೇಲು-ರೈಲು ಬಜೆಟ್ ಇದೀಗ ಐಲು ಪೈಲಾಗಿ ಕಂಡಿದ್ದು, ಲಾಲು ಅವರು ಯಾವತ್ತೂ ಲಾಭವನ್ನೇ ತೋರಿಸುತ್ತಿರುವುದು ಹೇಗೆ ಎಂಬುದನ್ನು ಪತ್ತೆ ಹಚ್ಚಲಾಗಿದೆ.

ಆದರೆ ಈ ಸಂಗತಿಯು ಕೇವಲ ಬೊಗಳೆಗೆ ಮಾತ್ರವೇ ತಿಳಿದಿರುವುದು ಸಮಾಧಾನಕರ ಅಂಶವೆಂದು ಜಾರಕಾರಣಿಗಳೆಲ್ಲಾ ಬಾಯಿಬಾಯಿ ಬಡಕೊಳ್ಳುತ್ತಿರುವುದು ಬೊಗಳೆಯ ಅಸ್ತಿತ್ವವನ್ನೇ ಪ್ರಶ್ನಿಸಿದಂತಾಗಿದೆ ಎಂದು ನಮ್ಮ ಖಾರಾ ಬಾತ್‌ಮೀದಾರರು ವ-ರದ್ದಿ ರವಾನಿಸಿದ್ದಾರೆ.

ಕರುನಾಟಕದಲ್ಲಿ ಜಾರಕಾರಣಿಗಳ ಬಾಯನ್ನೆಲ್ಲಾ ಮುಚ್ಚಿಸಲಾಗಿದೆ. ಯಾರೇ ಕೂಗಾಡಲೀ, ಯಾರೇ ಹೋರಾಡಲಿ ಅಂತ ಲಾಲು ಅವರು ಕರ್ನಾಟಕದಿಂದ ಬರೋ ರೈಲ್ವೇ ಆದಾಯವನ್ನೆಲ್ಲಾ ಬಿಹಾರದ ಸ್ವಜಾತಿ ಬಾಂಧವರಾದ ಡರ್ಟಿ ಪೀಪಲ್‌ಗಳತ್ತ ರವಾನಿಸಿದ್ದಾರೆ. ಇನ್ನು ದೇಶದ ವಿವಿಧ ರಾಜ್ಯಗಳಿಂದ ಬರೋ ರೈಲ್ವೇ ಆದಾಯವನ್ನೆಲ್ಲಾ ಹಾಗೆಯೇ ಗಂಟು ಕಟ್ಟಿಡುತ್ತಾರೆ. ಮುಂದೆಂದಾದರೂ ಮೇಯಲು ಬೇಕಾಗಬಹುದು ಎಂಬ ದೂರಾಲೋಚನೆ ಇದ್ದರೂ ಇರಬಹುದು ಎಂಬ ಶಂಕೆ.

ಹೀಗೆ ಕಟ್ಟಿಟ್ಟ ಗಂಟಿನಲ್ಲಿ ಲವಲೇಶದಷ್ಟು ವಿನಿಯೋಗಿಸಿ, ಪ್ರಯಾಣಿಕರ ಮೂಗಿಗೆ ತುಪ್ಪ ಸವರಿಬಿಟ್ಟರೆ, ಸರಕಾರದ ಹೆಸರು ಚಿರಸ್ಮರಣೆಯಲ್ಲಿ ಉಳಿಯುತ್ತದೆ. ತಾನು ಬಿಹಾರವಾಳುತ್ತಿದ್ದಾಗ ಯಾವ ಪರಿಯಲ್ಲಿ ಬಿಹಾರದಲ್ಲಿ ಅಭಿವೃದ್ಧಿ ಮಾಡಲಿಲ್ಲವೋ, ಅದನ್ನೇ ಈಗ ದೇಶದೆಲ್ಲೆಡೆ ಮಾಡುತ್ತಿದ್ದಾರೆ ಎಂದು ನಮ್ಮ ರದ್ದಿಗಾರರು ಹೆಕ್ಕಿ ಹೆಕ್ಕಿ ವರದಿ ಮಾಡಿದ್ದಾರೆ.

ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ. ರಾಜ್ಯದಲ್ಲೂ ತಮ್ಮ ಪರವಾಗಿರುವ ರಾಜ್ಯಪಾಲರು. ಉಳಿದ ಸಂಸದರು ಕೂಡ ಜನರ ಪರವಾಗಿ ಧ್ವನಿಯೆತ್ತಲಾರದಷ್ಟು ತಮ್ ತಮ್ಮೊಳಗಿನ ಕಚ್ಚಾಟದಲ್ಲಿ, ಕೆಸರೆರಚಾಟದಲ್ಲಿ ಮುಳುಗಿದ್ದಾರೆ. ಇವುಗಳನ್ನು ಮನದಟ್ಟು ಮಾಡಿಕೊಂಡಿರುವ ಲಾಲು-ವೇಲು ಜೋಡಿ, ಕರ್ನಾಟಕವನ್ನು ಹೊಗಳಿ ಅಟ್ಟಕ್ಕೇರಿಸಿ ಧುಢುಂ... ಅಂತ ಕೆಳ ತಳ್ಳಿ ಬಿಟ್ಟಿದ್ದಾರೆ.

ಒಟ್ಟಿನಲ್ಲಿ, ಒಟ್ಟು ಸೇರಿದ ಹಣವನ್ನು ಅಭಿವೃದ್ಧಿಗೆ ವಿನಿಯೋಗಿಸಿದರಲ್ಲವೇ ಇಲಾಖೆಗೆ ನಷ್ಟ ಅಂತನ್ನಿಸುವುದು? ಯಾವುದೇ ಅಭಿವೃದ್ಧಿ ಕಾರ್ಯ ಮಾಡದಿದ್ದರೆ ಲಾಭ ಲೆಕ್ಕಾಚಾರ ಹಾಕಬಹುದೆಂಬ ಚಾಣಾಕ್ಷ ಮತ್ತು ಚಾಣಕ್ಯ ತಂತ್ರವನ್ನು ಇಲ್ಲಿ ಪ್ರಯೋಗಿಸಲಾಗಿದೆ ಎಂಬ ರಹಸ್ಯ ನಮ್ಮ ನಿಮ್ಮಲ್ಲೇ ಇರಲಿ ಎಂದು ಬೊಗಳೆ ವರದಿಗಾರರು ಮನವಿ ಮಾಡಿಕೊಂಡಿದ್ದಾರೆ.
---------------
ಪುಗಸಟ್ಟೆ ಜಾಹೀರಾತು
ಫೆ.29ರಂದು ಪಿತ್ತ ಸಚಿವ ಪೀಚಿ ದಂಬರಂ ಅವರು ಜನಮರುಳು ಬಜೆಟ್ ಮಂಡಿಸಲಿದ್ದು, ಅವರು ಮಂಡಿಸುವ ಮುನ್ನವೇ ಅವರ ಕೈಯಿಂದ ಬಜೆಟ್ ಪ್ರತಿಗಳನ್ನು ಕಿತ್ತುಕೊಂಡು, ನಮ್ಮ ಬೊಗಳೆ ರಗಳೆ ಬ್ಯುರೋ ಆಯವ್ಯಯ ಪತ್ರ ಮಂಡಿಸಲಿದೆ.... ಇದಕ್ಕಾಗಿ ನಿಮ್ಮ ಪ್ರತಿಗಳನ್ನು ಇಂದೇ ಒಂದಕ್ಕೆ ಹತ್ತು ಪಟ್ಟು ಹಣ ನೀಡಿ ಕಾದಿರಿಸಿಕೊಳ್ಳಿ... ಇಲ್ಲವಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.... ನಿರೀಕ್ಷಿಸಿ...

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

  1. ಅನ್ವೇಷಿ,
    ಒಂದು ಗಾದೆ ಮಾತು ಹೇಳಿರ್ತೀನಿ, ನೆನಪಿನಲ್ಲಿಟ್ಕೊಳ್ಳಿ:
    "ಹುಲ್ಲು ತಿನ್ನುವವನು ಕಲ್ಲಿದ್ದಲು ಸಿಕ್ಕರೆ ಬಿಟ್ಟಾನೆಯೆ?"

    ಪ್ರತ್ಯುತ್ತರಅಳಿಸಿ
  2. ಅಲ್ಲ ಸುನಾಥರೆ,
    ಕಲ್ಲಿದ್ದಲು ತಿನ್ನುವವರು ಹುಲ್ಲು ಸಿಕ್ಕರೆ ಬಿಟ್ಟಾರೆಯೇ? ಅಂತಾನೂ ಆಗ್ಬೋದಲ್ಲ...

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D