ಬೊಗಳೆ ರಗಳೆ

header ads

ಕಿರಿ- ಕೆಟ್ ತಂಡ ಖರೀದಿಯಲ್ಲಿ ಸೋತು ಸುಣ್ಣವಾದ 'ಬಿಡ್ಡ'ರು

(ಬೊಗಳೂರು ಕ್ರಿಕೆಟ್ಟಾಟ ಫಿಕ್ಸಿಂಗ್ ಬ್ಯುರೋದಿಂದ)
ಬೊಗಳೂರು, ಜ.25- ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಬಿಸಿಕೈಯ ಐ(ಪಿ)ಲ್‌ನಲ್ಲಿ ತಂಡಗಳ ಖರೀದಿ ಭರದಿಂದ ಸಾಗಿದ್ದು, ಬೊಗಳೂರು ತಂಡವನ್ನು ಖರೀದಿಸುವಷ್ಟು ಯಾರೂ ಶ್ರೀಮಂತರರಿರಲಿಲ್ಲ ಎಂಬುದು ಭಾರಿ ಅಚ್ಚರಿಗೆ ಕಾರಣವಾಗಿದೆ.

ರಿ-ಲಯನ್ಸ್ ಅಧ್ಯಕ್ಷ ಅನಿಲ ಅಂಬಾಭವಾನಿ ಅವರು ಮುಂಬಯಿ ತಂಡವನ್ನು ಅತ್ಯಧಿಕ ಹಣ ನೀಡಿ, ಶಾರ್ಕ್ ಖಾನ್ ಅವರು ಕಾಲುಕುತ್ತ ತಂಡವನ್ನು, ಖೋಡೇಸ್ ಯುಬಿ ಮಲ್ಯರು ಬೆಂಗಳೂರು ತಂಡವನ್ನು ಖರೀದಿಸುವಷ್ಟು ಶ್ರೀಮಂತರಾಗಿದ್ದಾರೆ. ಆದರೆ ಬೊಗಳೂರು ತಂಡವನ್ನು ಖರೀದಿಸುವ ಹಣ ತಮ್ಮಲ್ಲಿಲ್ಲ ಎಂದು ಅವರೆಲ್ಲಾ ಕೈ ಚೆಲ್ಲಿ ಕೂತಿದ್ದಾರೆ.

ಬೊಗಳೂರಿನ ಬೊಗಳೆ ತಂಡವನ್ನು ಖರೀದಿಸಬೇಕಿದ್ದರೆ ಹೊಸದಾಗಿ ನೋಟು/ನಾಣ್ಯ ಮುದ್ರಿಸಬೇಕಾಗುತ್ತದೆ. ಯಾಕೆಂದರೆ ಅಷ್ಟು ಮೌಲ್ಯದ ಹಣ ಎಷ್ಟು ಶ್ರಮಪಟ್ಟರೂ ದೊರೆಯಲಾರದು. ಅಷ್ಟೊಂದು ಅಮೂಲ್ಯವಾದ ತಂಡಕ್ಕೆ ಜೈ ಎನ್ನುತ್ತಾ ಅವರೆಲ್ಲಾ ಬೈಬೈ ಹೇಳಿದ್ದಾರೆ.

ಈ ಬಗ್ಗೆ ಬೇರೆ ಯಾವುದೇ ಪತ್ರಿಕೆಗಳವರು ಸ್ಟಿಂಗ್ ತನಿಖೆಗೆ ಹೊರಡದ ಕಾರಣ ಬೊಗಳೂರು ಬ್ಯುರೋದ ತಂಡವನ್ನೇ ಕಳುಹಿಸಲಾಯಿತು. ಈ ಏಕಸದಸ್ಯ ಬ್ಯುರೋದ ಸಕಲ ಸದಸ್ಯರೂ ಸೇರಿಕೊಂಡು ಪತ್ತೆ ಮಾಡಿದ ಅಂಶದ ಪ್ರಕಾರ, ಬೊಗಳೂರು ತಂಡವನ್ನು ಖರೀದಿಸಲು ಬೇಕಾದ ಹಣ ಜಗತ್ತಿನ ಯಾವುದೇ ಶ್ರೀಮಂತನ ಬಳಿ ಇರುವುದಿಲ್ಲ ಎಂಬ ವಾದ ಖಚಿತವಾಯಿತು. ಯಾಕೆಂದರೆ ಸೊನ್ನೆ ಡಾಲರ್ ಆಗಲಿ, ಸೊನ್ನೆ ರೂಪಾಯಿಯಾಗಲಿ... ಈ ಸೊನ್ನೆ ಎಂಬ ಮೊತ್ತದ ನೋಟು ಎಲ್ಲೂ ದೊರೆಯುತ್ತಿಲ್ಲ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಬಿಡ್ಡುದಾರರು ಸೊನ್ನೆಗಿಂತಲೂ ಕಡಿಮೆ ರೂಪಾಯಿಗೆ ತಮ್ಮ ಬಿಡ್ ಸಲ್ಲಿಸಿದ್ದೇ, ಬೊಗಳೂರು ತಂಡವನ್ನು ಯಾರು ಕೂಡ ಖರೀದಿಸದಿರಲು ಕಾರಣ ಎಂಬುದು ಪತ್ತೆಯಾಗಿದೆ.

ಪಕ್ಕದಲ್ಲೇ ಬಿದ್ದಿದ್ದ ಇನ್ನೊಂದು ಮಾಹಿತಿ ಪ್ರಕಾರ, ಸೊನ್ನೆಗಿಂತ ಕಡಿಮೆ ಬೆಲೆಯಲ್ಲಿ ಖರೀದಿಸುವುದು ಸೂಕ್ತವಲ್ಲ ಎಂದು ಈ ಜಗತ್ತಿನ ಶ್ರೇಷ್ಠಾತಿಶ್ರೇಷ್ಠ ಶ್ರೀಮಂತ ಕುಳಗಳು ತೀರ್ಮಾನಿಸಿರುವುದು ಕೂಡ ಬೊಗಳೂರು ತಂಡ ಖರೀದಿಯಾಗದಿರುವುದಕ್ಕೆ ಕಾರಣ.

ಹಾಗಾಗಿ ಬೊಗಳೂರು "ಸು"ರಕ್ಷಿತವಾಗಿದೆ, ಭದ್ರವಾಗಿ ನೆಲೆ ನಿಂತಿದೆ ಮತ್ತು ಬೊಗಳೂರನ್ನು ಯಾರೂ ಏನೂ ಮಾಡಲಾರರು ಎಂಬುದು ತನಿಖೆಯ ವೇಳೆ ಶ್ರುತಪಟ್ಟಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

10 ಕಾಮೆಂಟ್‌ಗಳು

  1. ಬೊಗಳೆ ತಂಡವನ್ನು ಖರೀದಿಸೋಕ್ಕೆ ಯಾರಿಂದಲೂ ಆಗೋಲ್ಲ ಬಿಡಿ - ಬೊ ಅಂದದ್ದೇ ತಡ, ಸಾವಿರಾರು ಮಂದಿ ಕನ್ನಡಿಗರು, ಬಿಡ್ಡಗಳನ್ನು ಡಬ್ಬಿಯಲ್ಲಿ ಹಾಕಿ ಬೀಗ ಹಾಕಿಬಿಡ್ತಾರೆ.

    ಜೈ ಬೋರೇಶ್ವರ!!!

    ಪ್ರತ್ಯುತ್ತರಅಳಿಸಿ
  2. ಬೊಗಳೆ ತಂಡ ಕ್ರಿಕೆಟ್ ಆಡುತ್ತಾ? ಹಂಗಿದ್ರೆ.... ವರ್ಡ್ ಕಪ್ ಗೆ ಕಳುಹಿಸುವ ಯೋಜನೆ ಮಾಡುತ್ತೇನೆ.

    ಪ್ರತ್ಯುತ್ತರಅಳಿಸಿ
  3. ಬೊಗಳೂರು ಕಿರಿಕಿರಿಕೆಟ್ಟು ತಂಡಕ್ಕೆ ಯಾರೂ ಬಿಡ್ಡು ಮಾಡದಿರುವುದರ ಹಿಂದೆ ನಮ್ಮ ಕೈ-ಕಾಲು, ಕತ್ತು ಹೊರತುಪಡಿಸಿ ಇನ್ನೆಲ್ಲಾ ಅಂಗಗಳ ‘ಕೈವಾಡ’ವಿದೆ ಎಂಬುದನ್ನು ನಾವು ನಿರಾಕರಿಸಲು ನಿರಾಕರಿಸುತ್ತಿದ್ದೇವೆ. ಬೊಗಳೂರು ಕಿರಿಕೆಟ್ಟ ಆಟದ ತಂಡದಲ್ಲಿ ಕೈಯಲ್ಲಿ ಬಾಲು ಸಿಗುವ ಮುನ್ನವೇ ಎಷ್ಟು ವಿಕೆಟ್ ಪಡೆಯುತ್ತೇನೆ ಎಂದು ಹೇಳಬಲ್ಲ, ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿಯುವ ಮುನ್ನವೇ ಸೊನ್ನೆ ರನ್ನು ಹೊಡೆಯುತ್ತೇನೋ, ಹತ್ತು ರನ್ನಿನೊಳಕ್ಕೆ ಔಟಾಗುತ್ತೇನೆ ಎಂದು ಹೇಳಬಲ್ಲ, ಮೈದಾನಕ್ಕೆ ಹೋಗುವ ಮುನ್ನವೇ ಎಷ್ಟು ಕ್ಯಾಚ್ ಡ್ರಾಪ್ ಮಾಡುತ್ತೇನೆ ಎಂದು ಕರಾರು ಬರೆದುಕೊಡಬಲ್ಲ ಅದ್ಭುತ ದೂರದರ್ಶಿತ್ವದ ಆಟಗಾರರ ಅಪಾರ ಕೊರತೆಯಿರುವುದು ಇದಕ್ಕೆ ಕಾರಣ ಎಂಬ ವರದಿಯನ್ನು ನಮ್ಮ ಸಂಸ್ಥೆ ಗುಟ್ಟಾಗಿ ಜಗಜ್ಜಾಹೀರು ಗೊಳಿಸಿದ ಬೆನ್ನಲ್ಲೇ ಈ ನಿರ್ಧಾರ ಪ್ರಕಟಗೊಂಡಿರುವುದಕ್ಕೆ ನಾವು ವಿಷಾದಿಸುತ್ತೇವೆ.

    ಪ್ರತ್ಯುತ್ತರಅಳಿಸಿ
  4. ಶ್ರೀನಿವಾಸರೆ,
    ಲಬೋ... ಲಬೋ.... ಲಬೋ... ಅಂತ ಕೇಳ್ತಾ ಇದ್ದದ್ದು ಇದೇನಾ?

    ಪ್ರತ್ಯುತ್ತರಅಳಿಸಿ
  5. ವೀ-ಮನಸಿನ ಮಾತನಾಡುವವರೆ,

    ದಯವಿಟ್ಟು ಆ ರೀತಿ ಮಾಡಬೇಡಿ. ವಿಶ್ವದಲ್ಲಿದ್ದ ಕಪ್ಪು ಕಪ್ಪುಗಳನ್ನೆಲ್ಲಾ ಖಂಡಿತಾ ಮುಖಕ್ಕೆ ಬಳಿಯುತ್ತಾರೆ.

    ಪ್ರತ್ಯುತ್ತರಅಳಿಸಿ
  6. ಸುಪ್ರೀತರೆ,

    ನೀವು ವಿಷಾದಿಸಿದ್ದಕ್ಕೆ ನಾವೂ ವಿಷಾದವಿಲ್ಲದೆ ವಿಷಾದಿಸುತ್ತಿದ್ದೇವೆ. ನೀವು ನಿರಾಕರಿಸಿದ್ದನ್ನು ನಾವೂ ಸ್ವೀಕರಿಸಿ ನಿರಾಕರಿಸಿತ್ತೇವೆ. ಆದರೆ ಬ್ಯಾಟು ಹಿಡಿಯುವ ಮೊದಲೇ ಬೌಲ್ ಮಾಡಿದರೆ ಖಂಡಿತಾ ಔಟ್.

    ಪ್ರತ್ಯುತ್ತರಅಳಿಸಿ
  7. ಅಲ್ಲಣ್ಣ, ಹಂಪೈರುಗಳನ್ನೇ ಬಿಡ್‌ನಲ್ಲಿ ಕೊಂಡ್ಕೊಂಡ್ ಬಿಟ್ರೆ, ಕಷ್ಟ ಪಟ್ಟು ಆಡೋದೆ ತಪ್ತೈತಲ್ಲಣ್ಣ!

    ಪ್ರತ್ಯುತ್ತರಅಳಿಸಿ
  8. ಏನ್ರಿ ಇದು ಕಿರ್ಕೆಟ್ಟಾಟದ ಹಿಂದು, ಮುಂದು, ಮೇಲು, ಕೆಳಗು , ಅಕ್ಕವೂ ಪಕ್ಕವೂ ಏನು ನಡೆಯುತ್ತಿದೆ? ಈ ಬಿಡ್ಡರ ಅಡ್ಡ ಎಲ್ಲಿದೆ ಹೇಳ್ರಿ? ನಮ್ಮನ್ನೂ ಯಾರಾದ್ರೂ ಬಿಡ್ ಮಾಡಿ ಕೊಂಡ್ಕೋತಾರೋ ಕೇಳೋಣ.

    ಪರ್ತಿನಲ್ಲಿ ಭಾರತದ ಜಯಕ್ಕೆ ಕಾರಣವನ್ನು ನಾವು ಪತ್ತೆ ಹಚ್ಚಿದ್ದೇವೆ ನೋಡಿ:
    http://nagenagaaridotcom.wordpress.com/2008/01/27/ಭಾರತದ-ಗೆಲುವಿಗೆ-‘ಕೋತಿ’ಯಾಟ/

    ನಗೆಸಾಮ್ರಾಟ್

    ಪ್ರತ್ಯುತ್ತರಅಳಿಸಿ
  9. ಸುನಾಥರೆ,

    ನಿಮ್ಮ ಕಿರಿಕೆಟ್ಟಾಟ ನಿರ್ನಾಮ ಮಾಡೋ ಸಲಹೆ ಅತ್ಯಂತ ಅಮೂಲ್ಯವಾದದ್ದು. ಇದಕ್ಕೆ ಈಗಾಗಲೇ ಪೇಟೆಂಟ್ ಮಾಡಿಸಿಕೊಳ್ಳಿ.

    ಪ್ರತ್ಯುತ್ತರಅಳಿಸಿ
  10. ನಗೆ ಸ್ಫೋಟಿಸಲು ಬಂದಿರುವ ನಗೆ ಸಾಮ್ರಾಟ ಎಂಬ ನಗೋತ್ಪಾದಕರೆ, ನಿಮಗೆ ಸ್ವಾಗತ.

    ಪರ್ ಎಂದರೆ ತುಳುವಿನಲ್ಲಿ ಕುಡಿ ಎಂದರ್ಥ. ಹಾಗಾಗಿ ಪರ್‌ತ್ ಪರ್‌ತ್ (ಕುಡಿದು ಕುಡಿದು) ನಮ್ಮವರು ಗೆದ್ದರೋ ನೋಡಬೇಕಷ್ಟೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D