ಬೊಗಳೆ ರಗಳೆ

header ads

ಪಕ್ಷ ತೊರೆಯಲು ಒದಿಯೋಗೌಡ್ರ ಸಿದ್ಧತೆ!

(ಬೊಗಳೂರು ವಿ-ಪಕ್ಷ ಬ್ಯುರೋದಿಂದ)
ಬೊಗಳೂರು, ಜ.17- ಎಲ್ಲರೂ ದಳಬಳನೇ ಅತ್ತರು, ದಳ ಬಿಟ್ಟರು, ಇನ್ನೂ ಕೆಲವರು ಬಿಡುತ್ತಿದ್ದಾರೆ... ಹಾಗಾದ್ರೆ ಒದೆಯೋಗೌಡ್ರು ಯಾವ ಪಕ್ಷ ಸೇರ್ತಾರೆ ಎಂಬ ಪ್ರಶ್ನಾರ್ಥಕ ಚಿಹ್ನೆಯು ಬೊಗಳೂರಿನ ಮೂಲೆ ಮೂಲೆಯಲ್ಲೂ ಹಾರಾಟ ಆರಂಭಿಸಿದೆ.

ಕಮಲಕ್ಕೂ ಕೈಗೂ ಕೈಕೊಟ್ಟ ಬಳಿಕ ಜನತಾ ದಳದಲ್ಲಿರುವ ಎಲ್ಲಾ ದಳಗಳು ಉದುರಿಹೋಗುತ್ತಿರುವುದರಿಂದ, ಪಕ್ಷ ಬಿಟ್ಟು ಹೋದರೆ ಏನೋ ದೊರೆಯುತ್ತದೆ. ಅದಕ್ಕಾಗಿಯೇ ಎಲ್ಲರೂ ತಮ್ಮ ಪಕ್ಷದಿಂದ ದೂರ ಹೋಗುತ್ತಿದ್ದಾರೆ. ನಾವು ಕೂಡ ಹೋಗೋಣ ಎಂದು ಅವರು ಚಿಂತಿಸುತ್ತಿರುವುದಾಗಿ ವರದಿಯಾಗಿದೆ.

ಆ "ಏನೋ ದೊರೆಯುತ್ತದೆ" ಎಂಬುದು ಏನು ಎಂಬುದರ ಕುರಿತು ಬೊಗಳೆ ರಗಳೆ ನಿಂತಲ್ಲೇ ತಿರುತಿರುಗಿ ಹಲವು ಸುತ್ತುಗಳ ಸಮೀಕ್ಷೆ ನಡೆಸಿತು. ಆದರೆ ಯಾವುದೇ ಸ್ಪಷ್ಟ ಸೂಚನೆಗಳು ಕಂಡುಬರಲೇ ಇಲ್ಲ. ಅಂತೆ ಕಂತೆಗಳನ್ನೇ ಕಂತೆ ಕಂತೆ ಪೇರಿಸಿಟ್ಟು ನೋಡಿದಾಗ, ದೊರೆತ ಒಂದು ವಿಷಯವೆಂದರೆ ಮತ್ತೆ ಪ್ರಧಾನಿ ಪಟ್ಟವೇನಾದರೂ ದೊರೆತೀತೇ? ಎಂಬುದು. ಇದಕ್ಕೆ ಕಾರಣವೆಂದರೆ ಮಾಯಾಂಗನೆಯ ಈ ಹೇಳಿಕೆ.

ಈ ಪಕ್ಷದಲ್ಲಿದ್ದುಕೊಂಡು ಒಳ್ಳೆಯ ಹೆಸರು ಸಂಪಾದಿಸಿ ಆಗಿದೆ. ಇನ್ನು ಮಾಡೋದೆಲ್ಲಾ ಅಷ್ಟರಲ್ಲೇ ಇದೆ. ಇಲ್ಲಿ ಮತ್ತಷ್ಟು ಒಳ್ಳೆಯ ಹೆಸರು ಸಂಪಾದಿಸುವ ಸಾಧ್ಯತೆಗಳೆಲ್ಲವೂ ಖಾಲಿಯಾಗಿವೆ. ಹಾಗಾಗಿ ಹೊಸ ವರ್ಷಕ್ಕೆ ಹೊಸ ಪಕ್ಷ, ಹೊಸ ನಾನೋ ನೀನೋ ಎಂಬ ಕಾರು, ಹೊಸ ತೆನೆ ಹೊತ್ತ ಹೊಸ ಮಹಿಳೆ, ಹೊಸ ಮನೆ, ಹೊಸ ಬೆಂಬಲಿಗರು, ಹೊಸ ಚುನಾವಣೆ, ಹೊಸ ಅಧಿಕಾರ... ಇತ್ಯಾದಿಗಳ ಕನಸಿನಲ್ಲೇ ಮುಳುಗಿರುವ ಅಪ್ಪಮಕ್ಕಳು, ಫೀನಿಕ್ಸ್ ಹಕ್ಕಿ ಮೈಕೊಡವಿದಾಗ ಬೂದಿಯೆಲ್ಲಾ ಹಾರಾಡುವಂತೆ ಪ್ಲಾನ್ ರೂಪಿಸುತ್ತಿದ್ದಾರೆ.

ಪಕ್ಷದಲ್ಲಿ ತತ್ವ ಇಲ್ಲ, ಸಿದ್ಧಾಂತ ಇಲ್ಲ ಎಂದೆಲ್ಲಾ ಗಾಳಿಮಾತುಗಳು ಕೇಳಿಬರುತ್ತಿವೆ. ಇದ್ದರೂ ಇರಬಹುದು! ಹಾಗಾಗಿ ಇವೆಲ್ಲಾ ಏನೂ ಇಲ್ಲದಿದ್ದರೆ ಪಕ್ಷವಾದರೂ ಇರುವುದು ಹೇಗೆ? ಪಕ್ಷವೇ ಇಲ್ಲವೆಂದ ಮೇಲೆ ಬೇರೊಂದು ಪಕ್ಷ ಸೇರುವುದೇ ಸರಿ ಅಲ್ಲವೇ? ಹಾಗಾಗಿಯೇ ಇಲ್ಲದ ಪಕ್ಷ ತೊರೆಯಲು ನಿರ್ಧರಿಸಿರುವುದಾಗಿ ಏನೂ ತಿಳಿಯದ ಮೂಲಗಳು ವರದಿ ಮಾಡಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. ಹೊಸ ಪಕ್ಶ, ಹೊಸ ಮಂದಿ, ಹೊಸ ಮತದಾರ ಅದ್ಭುತ!!!

    ಒದಿಯೋಗೌಡ್ರೇ ಪಕ್ಷ ಬಿಡ್ತಿದ್ದಾರೋ ಅಥ್ವಾ ಪಕ್ಷವೇ ಅವರನ್ನು ಬಿಡ್ತಿದೆಯೋ? ಯಾಕೇಂದ್ರೆ, ಶೆಟ್ಟಿ ಬಿಟ್ಟಲ್ಲೇ ಪಟ್ಣ, ಗೌಡ್ರು ಇದ್ದಲ್ಲೇ ಪಕ್ಷ ಅಂತ ನಾಣ್ನುಡಿ ಇದೆಯಂತೆ

    ಅದ್ಸರಿ ಪಕ್ಷ ಬಿಡೋಕ್ಕೂ ಸಿದ್ಧತೆ ಮಾಡ್ಕೋಬೇಕಾ? ಅಂದ್ರೆ ಪಕ್ಷದಲ್ಲಿರೋ ಆಸ್ತಿ ಪಾಸ್ತಿ ಎಲ್ಲ ಗುಳುಂ ಮಾಡಿ, ತೇರಾ ಹಾಥ್ ಜಗನ್ನಾಥ್ ಅಂತ ಪಕ್ಷವನ್ನು ತೊರೆಯಬೇಕಾ?

    ಪ್ರತ್ಯುತ್ತರಅಳಿಸಿ
  2. ಈ ಭಸ್ಮಾಸುರನನ್ನು ಪಕ್ಷದಲ್ಲಿ ಸೇರಿಸಿಕೊಳ್ಳಲು ಹುಚ್ಚು ಹಿಡಿದವರಿಗಷ್ಟೇ ಸಾಧ್ಯ. ಅದಕ್ಕೇ ಅಪ್ಪ, ಮಕ್ಕಳು ಕೂಡಿ ಒಂದು ಹೊಸ ಪಕ್ಷ ಕಟ್ಟುತ್ತಿದ್ದಾರೆ. ಪಕ್ಷದ ಚಿನ್ನೆ: ಮಣ್ಣಿನ ಬುಟ್ಟಿ ಹೊತ್ತ ಕನ್ನಡಿಗ.

    ಪ್ರತ್ಯುತ್ತರಅಳಿಸಿ
  3. ‘ಮಕ್ಕಳನ್ನು ಹೊತ್ತ ಮುದುಕ’ ಎಂಬ ಪಕ್ಷವನ್ನು ಸ್ಥಾಪಿಸಿ ಅದಕ್ಕೆ ಮಣ್ಣಿನಿಂದ ಹಾಗೂ ಕೇವಲ ಮಣ್ಣಿನಿಂದ ಎದ್ದು ಬಂದವರನ್ನು ಮಾತ್ರ ಸದಸ್ಯರನ್ನಾಗಿಸುತ್ತೇವೆ ಎಂದು ಗೌಡರು ಗುಡುಗಿದ್ದು ನಮ್ಮ ಕಛೇರಿಗೆ ತಲುಪಿದೆ. ಫೀನಿಕ್ಸ್ ಹಕ್ಕಿಗೆ ಹಕ್ಕಿಜ್ವರದ ಭಯವಿದೆಯೆಂಬ ‘ಪಂಚ್ ಮುಖಿ’ ಸುದ್ದಿಯು ಯಾವುದೋ ಮೂಲದ ಮೂಲಕ ಕನ್ನಡ ಪ್ರಭದ ಪದ್ಮನಾಭರಿಗೆ ಲಭಿಸಿರುವ ಸಾಧ್ಯತೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ.
    ಅಂದ ಹಾಗೆ ಮಾನ್ಯ ಮೇವಣ್ಣನವರು ‘ಪಕ್ಷವೆಂದರೆ ಪಿತೃ ಪಕ್ಷವೇ’ ಎಂದು ಚಿದ್ವಿಲಾಸದ ನಗೆಯೊಂದಿಗೆ ಪತ್ರಕರ್ತರಿಗೇ ಪ್ರಶ್ನೆ ಹಾಕಿ ದಿಗಿಲುಗೊಳಿಸಿರುವ ಸುದ್ದಿ ನಮಗೆ ಮಾತ್ರ ತಲುಪಿದೆ.

    ಪ್ರತ್ಯುತ್ತರಅಳಿಸಿ
  4. ಶ್ರೀನಿವಾಸರೆ,
    ಯಾರು ಯಾವುದನ್ನು ಮತ್ತು ಯಾವುದು ಯಾರನ್ನು ಬಿಡಬೇಕು ಎಂಬುದು ಇನ್ನೂ ಗೊಂದಲದಲ್ಲಿದೆಯಂತೆ.

    ಪ್ರತ್ಯುತ್ತರಅಳಿಸಿ
  5. ಸುನಾಥರೆ
    ಭಸ್ಮದಿಂದ ಮೇಲೆದ್ದುಬರುವ ಫೀನಿಕ್ಸಾಸುರರಿಗೇ ಈಗ ಮಣೆ. ಅವರು "ಮಣ್ಣಿನ ಮಕ್ಕಳ ತಲೆಗೆ ಟೊಪ್ಪಿ" ತಮ್ಮ ಪಕ್ಷದ ಚಿಹ್ನೆಯನ್ನಾಗಿ ಆರಿಸುತ್ತಿದ್ದಾರಂತೆ.

    ಪ್ರತ್ಯುತ್ತರಅಳಿಸಿ
  6. ಸುಪ್ರೀತರೆ,
    ಮಣ್ಣಿನಿಂದ ಮಾಡಿದ್ದು ಮಣ್ಣೇ ಸೇರುತ್ತದೆ. ಹಾಗಾಗಿ ಏಕಮೇವಾದ್ವಿತೀಯ ಸದಸ್ಯ/ಅಧ್ಯಕ್ಷ/ಎಲ್ಲವೂ ಆಗಿ ಮೆರೆಯಬಹುದೆಂಬುದು ಪಿತೃಪಕ್ಷದವರ ಹೇಳಿಕೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D