ಬೊಗಳೆ ರಗಳೆ

header ads

ಅನಾಗರಿಕ "ರತ್ನ" ಕೊಡಿಸಲು ತೀವ್ರ ಯತ್ನ

(ಬೊಗಳೂರು ಅನಾಗರಿಕ ಬ್ಯುರೋದಿಂದ)
ಬೊಗಳೂರು, ಜ.17- ಬೊಗಳೆ ರಗಳೆ ಬ್ಯುರೋದ ಸಂಪಾದಕರಿಗೆ ಇಲ್ಲದ ಮರ್ಯಾದೆಯನ್ನು ಗುಡಿಸಿ ಸಾರಿಸಿ ತೆಗೆಯುವ ಪ್ರಯತ್ನವೊಂದು ಸದ್ದಿಲ್ಲದೇ ನಡೆಯುತ್ತಿದ್ದು ಇದನ್ನು ಪತ್ತೆ ಹಚ್ಚಲಾಗಿದೆ.

ನಮಗಾಗದವರು ಎಷ್ಟೇ ವಿರೋಧಿಸಿದರೂ, ಅತ್ಯಂತ ಮೆಚ್ಚಿಕೊಳ್ಳುವ ಮಂದಿ ಯಾರೋ ನಮ್ಮ ಹೆಸರನ್ನು ದೇಶದ ಅತ್ಯುನ್ನತ 'ಅ'ನಾಗರಿಕ ಪ್ರಶಸ್ತಿಗೆ ಸೂಚಿಸಲು ಸಿದ್ಧತೆ ನಡೆಸಿರುವ ಬಗ್ಗೆ ಅನಾ"ಮತ್ತಾಗಿ" ಗೊಂದಲದಲ್ಲಿದ್ದೇವೆ ಎಂದು ಸೊಂಪಾ(ಗಿಬೆಳೆ)ದಕರುಗಳು ಮಧ್ಯರಾತ್ರಿ ಏರ್ಪಡಿಸಲಾಗಿದ್ದ ತುರ್ತು ಪಾನಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇದಕ್ಕೆ ಕಾರಣವೆಂದರೆ, ಈ ಅಭೂತಪೂರ್ವ ಪ್ರಶಸ್ತಿಯನ್ನು ಬೊಗಳೆಯ ಕುತ್ತಿಗೆಯ ಸುತ್ತ ಕಟ್ಟಿರುವ ಸರಪಳಿಗೆ ಸಿಕ್ಕಿಸಿಬಿಡಲು ತೀವ್ರ ಪ್ರಯತ್ನಗಳು ನಡೆಯುತ್ತಿವೆ ಎಂಬ ವರದಿ ಕೇಳಿ ಬೊಗಳೆಗೆ ಬೊಗಳೆಯೇ ಬೆಚ್ಚಿ ಬಳಲಿ ಬೆಂಡಾಗಿ ಬೆಂದು ಹೋಗಿರುವುದು.

ಆಡ್ವಾಣಿ ಅವರು ವಾಜಪೇಯಿ ಹೆಸರನ್ನು ದೇಶದ ಅತ್ಯುನ್ನತ ಪ್ರಶಸ್ತಿಗೆ ನಮೂದಿಸಿದ ಬೆನ್ನಿಗೇ, ನಮ್ಮವರಿಗೆ ನೀಡಬೇಕು, ತಮ್ಮವರಿಗೆ ನೀಡಬೇಕು ಎಂಬುದಾಗಿ ಎಲ್ಲಾ ಅರಾಜಕೀಯ ಪಕ್ಷಗಳು ಗುದ್ದಾಟ ಆರಂಭಿಸಿವೆ. ಇದೀಗ ತನ್ನ ಹೆಸರನ್ನು ಕೂಡ ಯಾರಾದರೂ ಶಿಫಾರಸು ಮಾಡಿ, ಬೊಗಳೆ ರಗಳೆ ಬ್ಯುರೋಗೆ ದಕ್ಕುವ ಸಾಧ್ಯತೆ ಇರುವ ಆ ಪ್ರಶಸ್ತಿಯನ್ನು ಬೇರೆಯವರ ಹೆಗಲಿಗೆ ಜಾರಿಸಿಬಿಡುವ ನಿಟ್ಟಿನಲ್ಲಿ ಕೆಲವರ ಹೆಸರುಗಳನ್ನು ಶಿಫಾರಸು ಮಾಡಲಾರಂಭಿಸಿದೆ.

ಇಂಥ ಪ್ರಶಸ್ತಿಗೆ ನಮ್ಮ ಆನೆಬಲದ ಜನ್ಮದಾತ ಕಾನ್ಶೀಗೇ ಭಾರತ ರತ್ನ ಕೊಡಬೇಕೆಂದು ಮೇಲು-ಕೀಳು-ಜಾತಿ ರಾಜಕೀಯದಿಂದ ಮೇಲೆ ಬಂದ ಮಾಯಾವತಿ, ಬೂಸಾ ತಿಂದು ಕೇಂದ್ರದಲ್ಲಿ ರೈಲನ್ನೇರಿ ಒಳ್ಳೆ ಹೆಸರು ಗಳಿಸಿಕೊಂಡ ಪಾಲು ಪ್ರಸಾದ್ ಲಾದವ್, ಬೆಂಬಲ ಹಿಂತೆಗೆತದ ಬೆದರಿಕೆ ಒಡ್ಡುವುದರಲ್ಲಿ ವಿಶ್ವದಾಖಲೆಯ ಸಂಖ್ಯೆ ತಲುಪುತ್ತಿರುವ ಮತ್ತು ನಂದಿಗ್ರಾಮ ನರಮೇಧದಲ್ಲಿ ಏನೂ ಆಗದಂತಿರುವ ಪಕ್ಷದ ಹಿರಿಯ ಕೊಂಡಿ ಜ್ಯೋತಿ ಬಸು, ನಾಯಕರಿಲ್ಲದೇ ಬಳಲುತ್ತಿದ್ದ ಪಕ್ಷವೊಂದಕ್ಕೆ ಇಟಲಿಯಿಂದ ಬಂದು ನಾಯಕತ್ವ ನೀಡಿ, ಪಕ್ಷವನ್ನು ಒಡೆದು ಚೂರಾಗದಂತೆ ತಡೆದ, ವಿಶ್ವವಿಖ್ಯಾತ ನಾಸಿಯಾ ಗಾಂಧಿ, ಆರೋಗ್ಯವಂತರಿಗೆಲ್ಲಾ ಅನಾರೋಗ್ಯದ ಪಾಠ ಹೇಳುತ್ತಾ, ನಮಗಾಗದವರನ್ನು ಕಿತ್ತು ಹಾಕುವುದು ಹೇಗೆ ಎಂಬ ಸಂಚು ರೂಪಿಸುವ ನಿಪುಣ ರೋಮ್ ದಾಸ್ ಇವರಿಗೆಲ್ಲಾ ಕೊಡಬಹುದು ಅಂತ ಶಿಫಾರಸು ಮಾಡಲಾಗುತ್ತಿದೆ.

ಆದರೂ ಬೊಗಳೆ ರಗಳೆ ಬ್ಯುರೋದ ಆದ್ಯತೆ ಮಾತ್ರ.... ನಮ್ಮ ಒದೆಯೋಗೌಡ್ರಿಗೇ ಎಂಬುದನ್ನಿಲ್ಲಿ ಸ್ಪಷ್ಟಪಡಿಸಲಾಗುತ್ತಿದೆ. ಕರ್ನಾಟಕ ಕಂಡ ಅಪರೂಪದ ಜಾರಕಾರಣಿ, ಎಲ್ಲಿಯೂ ಕಾಣಸಿಗದ ರಾಜಕೀಯ ಚಾಣಾಕ್ಷ, ಕುಶಾಗ್ರಮತಿ, ಮೌನವಾಗಿದ್ದುಕೊಂಡೇ ಕೆಲಸ ಸಾಧಿಸಿಕೊಳ್ಳುವ ನಿಪುಣ, ಕೈಬೆರಳಲ್ಲೇ ಸರಕಾರವನ್ನು ಅಲುಗಾಡಿಸಬಲ್ಲ ನಿಷ್ಣಾತ, ಪತ್ರ ಪ್ರವೀಣ, ಎಚ್ಚರಿಕೆ ಸಂದೇಶದಲ್ಲಿ ಅತಿಕುಶಲ, ಕೆಲಸವಾದ ತಕ್ಷಣ ಏರಿದ ಏಣಿ ಒದೆಯುವುದೇ ಮುಂತಾದ ಸಹಸ್ರನಾಮ ಸಮಾನವಾದ ಗುಣಗಳನ್ನು ಇದಕ್ಕಾಗಿಯೇ ಪಟ್ಟಿ ಮಾಡಲಾಗುತ್ತಿದೆ.

ಆದರೆ, ಅಲ್ಪಸಂಖ್ಯಾತರನ್ನು ಕಡೆಗಣಿಸಲಾಗುತ್ತಿದೆ, ಅವರ ಭಾವನೆಗಳಿಗೆ ಧಕ್ಕೆಯಾಗುತ್ತಿದೆ. ಅವರ ಹೆಸರು ಕೂಡ ಶಿಫಾರಸು ಮಾಡಬೇಕು, ಇಲ್ಲವಾದಲ್ಲಿ ನಿಮ್ಮ ರಗಳೆಯನ್ನು ಪರಿಗಣಿಸುವುದಿಲ್ಲ, ನಿಮಗೇ ಕೊಟ್ಟುಬಿಡುತ್ತೇವೆ ಅಂತ ಕೇಂದ್ರಾರೂಢ ಪಕ್ಷವು ಖಡಾಖಂಡಿತವಾಗಿ ಛೀಥೂ ಎನ್ನುತ್ತಾ ಬೆದರಿಸಿರುವುದರಿಂದ, ಅಷ್ಟೆಲ್ಲಾ ಸಂಸತ್ ದಾಳಿ ಮೂಲಕ ರಾಜಕೀಯ ಕ್ಷೇತ್ರ ನಿರ್ನಾಮ ಮಾಡಲೆತ್ನಿಸಿಯೂ ಏನೂ ಆಗದೆ ಪಾರಾಗಿ ಬಂದಿರುವ ತಂಡದಲ್ಲಿದ್ದವನೆನ್ನಲಾದ ನಮ್ಮ ಮಹಾಮಹಿಮ ಅpuzzle ಗುರುಗಳ ಹೆಸರನ್ನು ಸೂಚಿಸಲು ನಿರ್ಧರಿಸಲಾಗಿದೆ.

ಮತ್ತೊಂದು ಕೊನೆಯ ಪ್ರಯತ್ನವಾಗಿ, ಅತ್ಯುನ್ನತ ಅನಾಗರಿಕ ಪ್ರಶಸ್ತಿಯು, ಜನರ ತೆರಿಗೆ ಹಣದಲ್ಲಿ ಐಷಾರಾಮಿ ಜೀವನ ಸಾಗಿಸುತ್ತಾ, ಜನಸಾಮಾನ್ಯ ನೇರವಾಗಿ ಮೇಲಕ್ಕೆ ಹೋಗುವಂತೆ ಮಾಡುತ್ತಿರುವ ಜಾರಕಾರಣಿಗಳಿಗೆ ಯಾರಿಗೇ ಕೊಟ್ಟರೂ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಬೊ.ರ. ಘೋಷಿಸುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. ಇಂದಿನ ಸುದ್ದಿ ಓದಿ, ಏನೋ ಅಪಾರ್ಥ ಆಗ್ತಾ ಇದೆ, ನಮ್ಮಿಂದಲೇ (ನಾನೂ ಅನ್ವೇಷಿ ಮಾತ್ರ) ಸರಿತೂಗಿಸಬಹುದು ಅಂತ - ಸುದ್ದಿಯನ್ನು ಅಕ್ಕ ಪಕ್ಕದವರೊಂದಿಗೆ ಹಂಚಿಕೊಂಡೆ - ಅದಕ್ಕೆ ನನಗೆ ಸಿಕ್ಕದ್ದು ಏನು ಗೊತ್ತಾ :(

    ಆನೆ ಬಲವನ್ನು ಕೊಟ್ಟವರು ಯಾರು? ಅವರೇನು ಇರುವೇನಾ? ಅವರೂ ಆನೆಯಂಥವರಲ್ಲವೇ? ಅಂತಹವರಿಗೆ ರತ್ನ ಕೊಡದೇ ಇನ್ಯಾರಿಗೆ ಕೊಡ್ತೀರಿ - ಹೀಗೆ ಇಲ್ಲಿ ಯಾರೋ ಮಾತನಾಡಿಕೊಳ್ತಿದ್ರು - ಕೇರಿಗೊಂದು, ಊರಿಗೊಂದು, ದಿನಕ್ಕೊಂದು ರತ್ನದಂತೆ ಕೊಡೋದಕ್ಕೆ ನಿಮಗೇನು, ನಿಮ್ಮ ಮನೆ ಗಂಟೇನೂ ಕೊಡ್ತಿಲ್ವಲ್ಲ, ನಮ್ಮ ದೇಶ, ನಮ್ಮ ಖಜಾನೆ - ಅದನ್ನು ಉಳಿಸೋದೋ, ಬೆಳೆಸೋದೋ, ಅಳಿಸೋದೋ - ಅದು ನಮಗೆ ಬಿಟ್ಟಿದ್ದು, ನೀವ್ಯಾರ್ರೀ ಕೇಳೋಕ್ಕೆ - ಅಂತ ನನಗೇ ಗದರಿಸೋದಾ?

    ಪ್ರತ್ಯುತ್ತರಅಳಿಸಿ
  2. ಅನ್ವೇಷಿಗಳೆ, ಯಾಕೆ ಮರೆತುಬಿಟ್ಟಿರಿ ’ಮರಣಾನಿಧಿ’ಯನ್ನು?ಅವರೇನು ಕಮ್ಮಿ ಅನಾಗರಿಕರೆ? ಅವರಿಗೇನು ವಯಸ್ಸಾಗಿಲ್ಲವೆ? ಅವರೂ ಸಹ ತಮ್ಮ ಪುತ್ರರತ್ನನಿಗೇ ಅಧಿಕಾರ ಹಸ್ತಾಂತರ ಮಾಡುತ್ತಿಲ್ಲವೆ? ರ್ರೀ, ಯಾವ ಜಾರಕಾರಣಿಗಿಂತ ಅವರು ಅಯೋಗ್ಯತೆಯಲ್ಲಿ ಕಮ್ಮಿ ಇದ್ದಾರೆ? ನೀವು ಕಾವೇರಿಯನ್ನು ಕುಡಿಯೋರಿಗೆ ಪಕ್ಷವಾತ ಮಾಡೋದು ಸರೀನಾ?

    ಪ್ರತ್ಯುತ್ತರಅಳಿಸಿ
  3. ಶ್ರೀನಿವಾಸರೆ,
    ಬಿಳಿಯಾನೆಗಳಿಗೇ ನಾವು ರತ್ನಳನ್ನು ಕೊಡೋದು ಅಂತ ಕೇಂದ್ರದೋರು ಪಟ್ಟು ಹಿಡಿದ್ಬಿಟ್ಟಿದ್ದಾರೆ.

    ಅದೆಲ್ಲಾ ಹೌದು... ನೀವ್ಯಾರ್ರೀ ಕೇಳೋಕೆ????



    ಅಂತ ನಾವೂ ಕೇಳಬಹುದೇ?

    ಪ್ರತ್ಯುತ್ತರಅಳಿಸಿ
  4. ಸುನಾಥರೆ,

    "ಮರೆತುಹೋದ ಮರಣಾನಿಧಿ" ಬಗ್ಗೆ ನೀವು ಎಚ್ಚರಿಸಿದ್ದೀರಿ. ಮರಣೋತ್ತರವಾಗಿ ಮರಣಾನಿಧಿಗೆ ಶಿಫಾರಸು ಮಾಡಲು ನಮ್ಮೋರು ತೀರ್ಮಾನಿಸಿದ್ದಾರೆ. ನಿಮ್ಮ ಆಕ್ಷೇಪದ ಪ್ರಯುಕ್ತ ಪಕ್ಷವಾತವನ್ನು ರದ್ದುಮಾಡಲಾಗಿದೆ.

    ಪ್ರತ್ಯುತ್ತರಅಳಿಸಿ
  5. ಪ್ರಸಕ್ತ ವರ್ಷದ ‘ಭಾರ’ ತಾ ರತ್ನ ಎಂದು ಆರಿಸಬೇಕಾದ್ದು ಮಣ್ಣಿನ ಮಗನಾಗಿ ಹುಟ್ಟಿ ಆಗಾಗ ಧೂಳಿನಿಂದೆದ್ದು ಬರುವ ವೇದೇಗೌಡರಿಗೇ ಎಂಬುದನ್ನು ನಮ್ಮ ಏಕಸದಸ್ಯ ಬ್ಯೂರೋ ‘ಒಕ್ಕೊರಲಿ’ನಿಂದ ಆಗ್ರಹಿಸುತ್ತದೆ. ಅವರ ಬಹುಮುಖಿ ಪ್ರತಿಭೆ ಹಾಗೂ ಅಸಾಮಾನ್ಯ ಸಾಧನೆಗಳನ್ನು ಈಗಾಗಲೇ ನಮ್ಮ ಏಕೈಕ ಪ್ರತಿಸ್ಪರ್ಧಿ ‘ಬೊಗಳೆ ಅನಾಗರೀಕ ಬ್ಯೂರೊ’ ಪಟ್ಟಿ ಮಾಡಿರುವುದರಿಂದ ನಾವು ಅವನ್ನು ಮತ್ತೆ ಹೇಳದೆ ನಮ್ಮ ಆಯ್ಕೆಯನ್ನು ಮಾತ್ರ ಇಲ್ಲಿ ಪ್ರಕಟಿಸುತ್ತಿರುವುದು ಭಾವಿ ಪ್ರಧಾನಿ ಅಧ್ವಾನ(ಇ)ಯವರನ್ನು ‘ಲಾಲ್’ ಆಗಿಸಬಹುದೆಂಬ ಭರವಸೆಯೊಂದಿಗೆ...

    ಪ್ರತ್ಯುತ್ತರಅಳಿಸಿ
  6. ಸುಪ್ರೀತರೆ,

    ನಮ್ಮ ಅನಾಗರಿಕ ಬ್ಯುರೋಗೆ ಕೈ ಹಾಕದಂತೆ ಎಚ್ಚರಿಕೆ ನೀಡಲಾಗುತ್ತಿದೆ. ಎಷ್ಟು ಬೇಕಿದ್ದರೂ ಸೂಟ್ ಕೇಸ್ ಗಟ್ಟಲೆ ಭಾರ-ತಾ ಅಂತ ನಾವು ಆರ್ಡರ್ ಮಾಡುತ್ತೇವೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D