(ಬೊಗಳೂರು ಅಪ್ಪಟ ಬೊಗಳೆ ಬ್ಯುರೋದಿಂದ)
ಬೊಗಳೂರು, ಜ.5- ಬೊಗಳೆ ರಗಳೆ ಪತ್ರಿಕೆಯನ್ನು ನಮ್ಮ ದೇಶದ ಉಪರಾಷ್ಟ್ರಪತಿಗಳೂ ಓದುತ್ತಾರೆ ಎಂಬುದು ದೃಢವಾಗಿದೆ. ಈ ವಿಷಯವನ್ನು ನಾವೇ ಪತ್ತೆ ಮಾಡಿದ್ದು, ನಮಗೆ ಈ ವಿಷಯ ತಿಳಿದುಬರಲು ಕಾರಣವೆಂದರೆ ಇಲ್ಲಿ ಪ್ರಕಟವಾಗಿರುವ ವರದಿ!ಇದರಲ್ಲಿ ನಮ್ಮ ವಿರೋಧಿ ಪತ್ರಿಕೆಗಳ ಕುತಂತ್ರವಿದೆ ಎಂಬ ಶಂಕೆ ನಮಗೆ ಆರಂಭವಾಗಿದೆ. ತೀವ್ರವಾಗಿ ಇಳಿಕೆಗತಿಯಲ್ಲಿ ಸಾಗುತ್ತಿರುವ ನಮ್ಮ ಪತ್ರಿಕೆಯ (ಅಪ)ಪ್ರಸಾರ ಸಂಖ್ಯೆಯನ್ನು ಒಂದಕ್ಕೆ ಏರಿಸುವ ಕುತಂತ್ರದ ಫಲವೇ ಇದು ಎಂದು ಬೊಗಳೆಯ ಅಸತ್ಯಾನ್ವೇಷಣಾ ಬ್ಯುರೋ ಕಂಡುಕೊಂಡಿದೆ.
ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳ ಬಾಯಲ್ಲಿ ಈ ಹೇಳಿಕೆಯನ್ನೇಕೇ ಹೇಳಿಸಬೇಕಿತ್ತು ಎಂಬುದನ್ನು ತಿಳಿಯದೆ ಚಡಪಡಿಸುತ್ತಿದ್ದ ಸೊಂಪಾದ-ಕರುಗಳೆಲ್ಲಾ ಒಟ್ಟಾಗಿ ಈ ತೀರ್ಮಾನಕ್ಕೆ ಬಂದಿವೆ ಎಂದು ತಳ ಮತ್ತು ಬುಡವಿಲ್ಲದ ಸುದ್ದಿಯ ಮೂಲಗಳು ತಿಳಿಸಿವೆ.
ಅಂದರೆ ಇದುವರೆಗೆ ಒಂದಕ್ಕಿಂತ ಕಡಿಮೆ ಇದ್ದ ಓದುಗರ ಸಂಖ್ಯೆಯು ಉಪರಾಷ್ಟ್ರಪತಿಗಳ ಓದುವಿಕೆಯಿಂದಾಗಿ ಒಂದಕ್ಕೆ ಏರಿರುವುದು ಖಚಿತಪಟ್ಟಂತಾಗಿದೆ. ಒಂದಕ್ಕೇ ಅವರು ಈ ರೀತಿಯ ಹೇಳಿಕೆ ನೀಡಬಾರದಿತ್ತು ಎಂಬುದು ನಮ್ಮ ಬ್ಯುರೋವನ್ನು ಕಾಡಿದ ಅಂಶವಾಗಿದೆ.
0 ಕಾಮೆಂಟ್‌ಗಳು
ಏನಾದ್ರೂ ಹೇಳ್ರಪಾ :-D