ಬೊಗಳೆ ರಗಳೆ

header ads

ನ್ಯೂ ಇಯರ್ : ಬೊಗಳೆ ರಿಸೊಲ್ಯುಶನ್!

  • ಬೊಗಳೆಯ ಎಲ್ಲ ಓದುಗರಿಗೂ, ಬ್ಯುರೋ ಸಿಬ್ಬಂದಿಯನ್ನು ಅತ್ತಿಂದಿತ್ತ ಓಡಿಸುವವರಿಗೂ, ಕ್ರಿಸ್ಮಸ್ ಮತ್ತು ಹೊಸ ವರ್ಷದ ಶುಭಾಶಯಗಳು

  • ಬೊಗಳೂರು ನಿಯಮ ಮುರಿಯೋ ಬ್ಯುರೋದಿಂದ)
    ಬೊಗಳೂರು, ಜ.1- ನಿಯಮಗಳಿರುವುದೇ ಮುರಿಯಲಿಕ್ಕಾಗಿ ಎಂಬ ಪಕ್ಕಾ ರಾಜಕೀಯ Resolution ನೊಂದಿಗೆ ಬೊಗಳೆ ರಗಳೆ ಬ್ಯುರೋ ಹೊಸ ವರುಷವನ್ನು ಸ್ವಾಗತಿಸಿದೆ.

    ಅದರ ಆರಂಭಿಕ ಹೆಜ್ಜೆಯಾಗಿ, ಹೊಸ ವರ್ಷಕ್ಕೆ ಹೊಸ ಸಂಕಲ್ಪ ಕೈಗೊಳ್ಳಬೇಕು ಎಂದು ನಮ್ಮ ಬ್ಯುರೋ ನಿರ್ಧರಿಸಿತ್ತು. ಅದರ ಗತಿ ಏನಾಗಿದೆ ಎಂಬುದು ನಮ್ಮೆಲ್ಲಾ ಓದುಗರಿಗೆ ಈಗಾಗಲೇ ಮನದಟ್ಟಾಗಿರಬಹುದು ಎಂಬ ದೃಢ ವಿಶ್ವಾಸ ನಮಗಿದೆ. ತತ್ಪರಿಣಾಮವೇ, ಹೊಸ ನಿರ್ಧಾರವೂ ಇಲ್ಲ, ಅದನ್ನು ಪಾಲಿಸಬೇಕಾದ ಅನಿವಾರ್ಯತೆಯೂ ಇಲ್ಲ!

    ಆದರೆ ಎಲ್ಲರೂ ಹೊಸ ವರ್ಷದ ಸಂಭ್ರಮದಲ್ಲಿರುವಾಗ ನಮ್ಮ ಬ್ಯುರೋ ಮಾತ್ರ ಗಡದ್ದಾಗಿ ನಿದ್ದೆ ಹೊಡೆದ ಪರಿಣಾಮವಾಗಿ, ಗಡಬಡನೆ ಎದ್ದು ನೋಡಿದಾಗ ಇದು 2008ರದ್ದೋ ಅಥವಾ 2009ರ ಹೊಸ ವರ್ಷವೋ ಎಂಬ ಗೊಂದಲ ನಮ್ಮ ಬ್ಯುರೋವನ್ನು ಕಾಡಿದ್ದು ಸಹಜ.

    ಎದ್ದು ನೋಡಿದಾಗ, ಏನೂ ಇರಲಿಲ್ಲ. ಅಂದರೆ ಎಲ್ಲವೂ ನಿನ್ನೆ ಯಾವ ಥರ ಇತ್ತೋ ಅದೇ ಥರ ಇದೆ. ಆದರೆ ಕೆಲವರು ರಾತ್ರಿಯಿಡೀ ಶಬ್ದ ಮಾಲಿನ್ಯ, ವಾಯು ಮಾಲಿನ್ಯದಲ್ಲಿ ನಿರತರಾಗಿ ಹೊಸ ವರ್ಷವನ್ನು ಸಂಭ್ರಮದ ಅಲೆಯಲ್ಲಿ "ತೇಲಾಡುತ್ತಾ", ಅಂದರೆ ಜಲ ಮಾಲಿನ್ಯವನ್ನೂ ಸೇರಿಸಿ, ಸ್ವಾಗತಿಸಿರುವುದು ನಗರ ಪ್ರದೇಶಗಳಾದ್ಯಂತ ಸುತ್ತಾಡಿದ ನಮ್ಮ ಏಕ ಸದಸ್ಯ ಬ್ಯುರೋದ ಎಲ್ಲಾ ಸಿಬ್ಬಂದಿಗಳಿಗೆ ಗೋಚರವಾದ ವಿಚಾರ.

    ನಮ್ಮ ಸಂಸ್ಕೃತಿಯಲ್ಲಿ ಬರುವ ಯುಗದ ಆದಿಯನ್ನು ನಾವು ಇಷ್ಟೊಂದು ಸಡಗರದಿಂದ ಬರಮಾಡಿಕೊಳ್ಳುತ್ತಿಲ್ಲವೇಕೆ, ಅದು ದೇವರ ಕೋಣೆಗೆ ಮಾತ್ರ ಸೀಮಿತವಾಗುತ್ತಿದೆಯೇಕೆ ಎಂಬ ಶಂಕೆಗಳ ಮಾಲೆಯೊಂದಿಗೆ,

    ಆದರೆ, ನಮ್ಮೆಲ್ಲಾ ಆತ್ಮೀಯರಿಗೆ ಶುಭಾಶಯ ಕೋರಲು ಒಂದು ಬಲು ದೊಡ್ಡ ಅವಕಾಶ ದೊರೆತಿದೆ, ಅದನ್ನು ಮಿಸ್ ಮಾಡಿಕೊಳ್ಳಬಾರದು. ಹಾಗಾಗಿ, ಯಾವುದರ ಆಧಾರದಲ್ಲಿ ಜಗತ್ತೇ ನಿಂತಿದೆಯೋ, ಆ ಇಂಗ್ಲಿಷ್ ಕ್ಯಾಲೆಂಡರಿನ ಹೊಸ ವರ್ಷದ ಶುಭಾಶಯಗಳನ್ನು ಬೊಗಳೆ ರಗಳೆ ಬ್ಯುರೋವು ಕೋರುತ್ತಿದೆ.

    ಕಾಮೆಂಟ್‌‌ ಪೋಸ್ಟ್‌ ಮಾಡಿ

    8 ಕಾಮೆಂಟ್‌ಗಳು

    1. ಹಳೆಯ ವರ್ಷದ ಕೊನೆಯಲ್ಲಿ ಏನಾದರೂ ಮಾಲಿನ್ಯ ಮಾಡಲೇಬೇಕೆನ್ನುವ ರೆಜೊಲ್ಯುಶನ್ ಇಟ್ಟುಕೊಂಡು ಗಲೀಗಲೀ ಗಲೀಜು ಮಾಡುತ್ತಿದ್ದವರನ್ನು ಹಿಡಿಯಹೊರಟ ಮಹಾನುಭಾವರೆ, ಈ ಹೊಸ ವರ್ಷದಲ್ಲಾದರೂ ನಿಮಗೆ ಬೇಟೆಗಳು ಸಿಗಲಿ ಎಂದು ಹಾರೈಸುತ್ತೇನೆ. ಹೊಸ ವರ್ಷದ ಶುಭಾಶಯಗಳು!

      ಪ್ರತ್ಯುತ್ತರಅಳಿಸಿ
    2. ಅಸತ್ಯಾನ್ವೇಷಿಗೆ ಸತ್ಯವಾಗಲೂ ಹಾರೈಕೆಗಳು:

      ಹೊಸ ವರುಷ ಹರುಷದಾಯಕವಾಗಿರಲಿ.
      ಸುಖ, ಸಂತಸ, ಶಾಂತಿ ತರಲಿ,
      ನಗು ಹಬ್ಬಲಿ, ಬಿಗು ತಗ್ಗಲಿ,
      ಸಮೃದ್ಧಿಯ ಆಪ್ತ ತೋಳು ಎಲ್ಲರನು ತಬ್ಬಲಿ.

      ಪ್ರತ್ಯುತ್ತರಅಳಿಸಿ
    3. ಅಸತ್ಯ ಅನ್ವೇಷಿಗಳಿಗೆ ಶುಭ ಹಾರೈಕೆಗಳು
      ಆಮಶಂಕೆಯಿಂದ ಸುಸ್ತಾಗಿ ತೇಲಾಡುತ್ತಿದ್ದೀರಿ ಎಂದು ನಿಮ್ಮ ಬರವಣಿಗೆ ಮೂಲಕ ತಿಳಿಯಿತು
      ಪಾಪ! ಇಷ್ಟು ಚಿಕ್ಕವಯಸ್ಸಿಗೇ ಹೀಗಾಗಬಾರದಿತ್ತು - :D ಅದೇನೋ ರೆಸಲ್ಯೂಷನ್, ರೆವಲ್ಯೂಷನ್ ಅಂತ
      ಏನೇನನ್ನೋ ತಿಂದು ಕುಡಿದಿರ್ಬೇಕು ಅನ್ಸತ್ತೆ. ಹೋಗ್ಲಿ ಬಿಡಿ, ಈ ವಿಷಯ ಇನ್ಯಾರಿಗೂ ಹೇಳಲ್ಲ

      ಬಹಳ ಬೇಗ ಹಳಿಯ ಮೇಲೆ ಬಂದು ಓಡಿ, ನಮ್ಮೆಲ್ಲರನ್ನೂ ಎಳೆದುಕೊಂಡು ಹೋಗಿ :)

      ಪ್ರತ್ಯುತ್ತರಅಳಿಸಿ
    4. ಸುಧೀಂದ್ರರೆ,
      ನೀವು ಹೇಳಿದಂತೆ ಗಲೀ ಗಲೀ ಮೇ ಗಲೀಜು ಮಾಡುವ ರಿಸೊಲ್ಯುಶನ್ ಕೈಗೊಂಡವರು ತಮ್ಮ ನಿರ್ಣಯ ಪೂರೈಸಿಬಿಟ್ಟಿದ್ದಾರೆ.

      ಹೊಸ ವರ್ಷದ ಶುಭಾಶಯಗಳು

      ಪ್ರತ್ಯುತ್ತರಅಳಿಸಿ
    5. ಸುಪ್ತ ದೀಪ್ತಿಯವರೆ,

      ನಿಮಗೂ ಶುಭಾಶಯ.

      ಶಾಂತಿಯನ್ನು ಎಲ್ಲಿಂದ ತರಲಿ?
      ಮತ್ತು
      ಕರುನಾಟಕದ ಬಡತೆರಿಗೆದಾರ ಈಗ ತಬ್ಬಲಿ

      ಎನ್ನುವುದನ್ನೂ ಸೇರಿಸಿಕೊಳ್ಳಬಹುದಿತ್ತು!!!

      ಪ್ರತ್ಯುತ್ತರಅಳಿಸಿ
    6. ಶ್ರೀನಿವಾಸರೆ,

      ನಿಮಗೆ ಯಾರೋ ತಪ್ಪು ಮಾಹಿತಿ ನೀಡಿಲ್ಲ. ಆಮಶಂಕೆಯೂ ಕೂಡ ಒಂದು ರೀತಿಯ solution ಅಲ್ವೇ? ಅದನ್ನು ಪದೇ ಪದೇ ತಲೆಗೇರಿಸಿಕೊಂಡರೆ ರಿ-ಸೊಲ್ಯುಶನ್. ತಲೆಗೇರಿದರೆ ತೇಲಾಡುತ್ತಾರಂತೆ.

      ನಿಮ್ಮನ್ನು ಎಳೆಯಲು ಎಷ್ಟೇ ಪ್ರಯತ್ನಿಸಿದರೂ, ನೀವು ಕೈಗೆ ಸಿಗದೆ ತಪ್ಪಿಸಿಕೊಂಡಿದ್ದೀರಿ... ಊರಿಗೆ ಬಂದವರು ನೀರಿಗೆ ಬರಲೇ ಇಲ್ಲ ಅಂತ ಗೊತ್ತಾಗಿದೆ.

      ಪ್ರತ್ಯುತ್ತರಅಳಿಸಿ
    7. ಅನ್ವೇಷಿಗಳೇ, ನಿಮಗೂ ಹೊಸ ವರ್ಷದ ಶುಭಾಶಯಗಳು. ಹೊಸ ವರ್ಷದಲ್ಲಿಯೂ ನಿಮ್ಮ ಬೊಗಳೆ ನಿರಂತರವಾಗಿರಲಿ ಎಂದು ಹಾರೈಸುತ್ತೇನೆ.

      ಪ್ರತ್ಯುತ್ತರಅಳಿಸಿ
    8. ಶ್ರೀತ್ರೀ ಅವರೆ,

      ನಿಮಗೂ ಶುಭಾಶಯ. ನಿಮ್ಮ ಹಾರೈಕೆಯಂತೆ ಬೊಗಳಿ ಬೊಗಳೆಯಾದರೂ ರಾಗವಾಗುತ್ತದೆಯೋ ಕಾಯೋಣ...

      ಪ್ರತ್ಯುತ್ತರಅಳಿಸಿ

    ಏನಾದ್ರೂ ಹೇಳ್ರಪಾ :-D