(ಬೊಗಳೂರು ಅಳತೆ ಮತ್ತು ತೂಕದ ಬ್ಯುರೋದಿಂದ)
ಬೊಗಳೂರು, ಡಿ.25- ಜಾತಿಗೆ ಅತೀತವಾದ ಬಸ್ ಮತ್ತು ಗುಜರಾತ್ ಅಭಿವೃದ್ಧಿಯ ರೈಲು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಅದೆಷ್ಟೋ ಹುರಿಯಾಳುಗಳು ನೆಲಕಚ್ಚಿದ್ದು, ರೈಲಿನ ಚಾಲಕ ಮತ್ತೆ ರೈಲಿನ ಮೋಡಿ ಎಕ್ಸ್ಪ್ರೆಸ್ ಓಡಿಸಲಾರಂಭಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕರೇ ಹೇಳಿರುವುದು ಹಲವಾರು ಶಂಕೆಗಳಿಗೆ ಎಡೆಮಾಡಿಕೊಟ್ಟಿದೆ.ಹಾಗಾಗಿ, ಈ ಶಂಕೆಗಳಲ್ಲಿ ಒಂದರ ನಿವಾರಣೆಗಾಗಿ ಬೊಗಳೆ ರಗಳೆ ಉದ್ಯುಕ್ತವಾಯಿತು. ಮಾಧ್ಯ-ಮಗಳು ಸೃಷ್ಟಿಸುತ್ತಿರುವ ಗೊಂದಲಗಳ ಬಗ್ಗೆ ತೀವ್ರ ಸಂತಸ ವ್ಯಕ್ತಪಡಿಸುತ್ತಿದ್ದ ಮೋಡಿ, ತಾನು ಪಕ್ಷಕ್ಕಿಂತ ದೊಡ್ಡವನಲ್ಲ ಎಂದು ಸ್ಪಷ್ಟನೆ ನೀಡಿರುವ ಹಿನ್ನೆಲೆಯಲ್ಲಿ ಬೊಗಳೆ ರಗಳೆಯ ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳು ಗೂಟದ ಕಾರಿನಲ್ಲಿ ಟೇಪು, ಫುಟ್ರೋಲ್ ಹಿಡಿದುಕೊಂಡು ಅಲ್ಲಿಗೆ ತೆರಳಿತು.
ಮೋಡಿ ಒಬ್ಬ ಕಟ್ಟಾ ಹುರಿಯಾಳು ಆಗಿರುವುದರಿಂದ ಅವರು ಪಕ್ಷಕ್ಕಿಂತ ದೊಡ್ಡವರೇ, ಅಥವಾ ಅವರಿಗಿಂತ ಪಕ್ಷ ದೊಡ್ಡದೇ ಎಂಬುದನ್ನು ಅಳೆಯಲು ದೊಡ್ಡ ಹುರಿ ಹಗ್ಗವನ್ನೂ ಒಯ್ಯಲಾಗಿತ್ತು. ಗೋಧ್ರಾ ರೈಲಿನಲ್ಲಿ ಜೀವಂತ ದಹನದ ಬಗ್ಗೆ ಚಕಾರವೆತ್ತದ ಜಾತ್ಯತೀತವಾದಿಗಳು, ಆನಂತರ ನಡೆದ ಹಿಂಸಾಚಾರವನ್ನು ಮೋಡಿಯೇ ಮಾಡಿದ್ದು ಎಂದೂ, ಆತ ಸಾವಿನ ವ್ಯಾಪಾರಿ ಎಂದೂ ದೇಶ-ವಿದೇಶಗಳಲ್ಲಿ ಪ್ರಚಾರ ಮಾಡುತ್ತಿದ್ದ ಪರಿಣಾಮವೋ ಎಂಬಂತೆ, ಈ ಮೋಡಿ ಸ್ವಯಂಚಾಲಿತವಾಗಿ ಏರಿದ ಎತ್ತರವನ್ನು ಅಳೆಯಲು ಒಂದು ಹುರಿ ಹಗ್ಗ ಸಾಕಾಗಲೇ ಇಲ್ಲ.
ಕೊನೆಗೂ ಅಡ್ಡಬಿದ್ದು, ಮೇಲೇರಿ, ಕೆಳಗೆ ಜಾರಿ, ಧೊಪ್ಪನೆ ಬಿದ್ದು ಅಳೆದು ತೂಗಿ ನೋಡಿದಾಗ, ಮೋಡಿ ಹೇಳಿರುವುದು ಸರಿ ಎಂಬುದು ಖಚಿತವಾಯಿತು. ಯಾಕೆಂದರೆ ಪಕ್ಷ ಮತ್ತು ಮೋಡಿಯ ಅಳತೆ ಎರಡೂ ಒಂದೇ ರೀತಿಯಾಗಿರುವುದು ಕಂಡುಬಂತು. ಹಾಗಾಗಿ ಮೋಡಿಯ ಪಕ್ಷಕ್ಕಿಂತ ತಾನು ದೊಡ್ಡವನಲ್ಲ ಎಂಬ ಮಾತನ್ನು ನಂಬಲೇಬೇಕಾಗಿ ಬಂದು ಇಲ್ಲಿ ವರದಿ ಮಾಡಬೇಕಾಯಿತು.
0 ಕಾಮೆಂಟ್ಗಳು
ಏನಾದ್ರೂ ಹೇಳ್ರಪಾ :-D