ಬೊಗಳೆ ರಗಳೆ

header ads

ಮನುಷ್ಯನಿಂದ ಕಚ್ಚಿಸಿಕೊಂಡ ನಾಯಿ ಆತ್ಮಹತ್ಯೆ!

(ಬೊಗಳೂರು ರೇಗೀಸ್ ಬ್ಯುರೋದಿಂದ)
ಬೊಗಳೂರು, ಡಿ.17- ಮಾನವೀಯತೆ ಮೆರೆಯುವ ಪ್ರಾಣಿಗಳ ಸುದ್ದಿಗಳನ್ನು ಆಗಾಗ್ಗೆ ಕೇಳುತ್ತಾ ಇದ್ದೇವೆ. ಈ ಹಿನ್ನೆಲೆಯಲ್ಲಿ vice versa ಆಗಬೇಕಾದದ್ದು ಮಾನವ ಧರ್ಮ. ಇಂಥ ಪ್ರಸಂಗಗಳು ಕೂಡ ಅಲ್ಲಲ್ಲಿ ವರದಿಯಾಗುತ್ತಿದ್ದು, ನಮ್ಮ ವಿರೋಧಿ ಪತ್ರಿಕೆಯೊಂದು ಇಲ್ಲಿ ಹುಚ್ಚು ನಾಯಿಗೇ ಕಚ್ಚಿದ ವೃದ್ಧನ ಬಗ್ಗೆ ವರದಿ ಪ್ರಕಟಿಸಿ ಬೊಗಳೆಯನ್ನು ಚಿಂತಾಜನಕ ಸ್ಥಿತಿಗೆ ತಳ್ಳಿದೆ.

ಹುಚ್ಚು ನಾಯಿ ಕಚ್ಚಿದಂತೆಯೇ ಓಡಾಡಿದ ಬೊಗಳೆ ಬ್ಯುರೋ ಸಿಬ್ಬಂದಿ, ಅಜ್ಜ ದಾಖಲಾಗಿದ್ದ ಆಸ್ಪತ್ರೆ ಸೇರಿ (ಚಿಕಿತ್ಸೆ ಪಡೆಯಲು ಅಲ್ಲ ಅಂತ ಸಂಪಾದಕರು ಸ್ಪಷ್ಟನೆ ನೀಡಿದ್ದಾರೆ.), ಅಜ್ಜ ಮಲಗಿದ್ದ ಹಾಸಿಗೆಯತ್ತ ಭೀತಿಯಿಂದಲೇ ಒಂದು ನೋಟ ಬೀರಿದಾಗ, ಆ ಅಜ್ಜನ ಮುಖದಲ್ಲಿ ನಗುವಿನ ಛಾಯೆಯಿತ್ತು. ಮಾತ್ರವಲ್ಲ ಹುಚ್ಚು ನಾಯಿಯನ್ನು ಕೊಂದ ಹೆಮ್ಮೆಯ ಗೆರೆಯೂ ಅಲ್ಲಿ ಕಾಣಿಸುತ್ತಿತ್ತು.

ಆದರೆ ಈ ಬಗ್ಗೆ ತೀವ್ರ ತನಿಖೆ ಕೈಗೊಂಡಾಗ, ಆ ನಾಯಿ ಸತ್ತದ್ದಕ್ಕೆ ಈ ಅಜ್ಜ ಕಚ್ಚಿದ್ದಾಗಲೀ, ಅಥವಾ ಅಲ್ಲಿದ್ದವರು ಹೊಡೆದದ್ದಾಗಲೀ ಕಾರಣವಲ್ಲ ಎಂದು ಪತ್ತೆಯಾಗಿದೆ. ತನಿಖೆ ತೀವ್ರಗೊಳಿಸಿದಾಗ ತಿಳಿದು ಬಂದ ಅಂಶವೆಂದರೆ ಈ ನಾಯಿ ತನ್ನದೇ ಆತ್ಮವನ್ನು ಹತ್ಯೆ ಮಾಡಿಕೊಂಡಿತ್ತು!

ಮನುಷ್ಯನಿಂದಲೂ ಕಚ್ಚಿಸಿಕೊಳ್ಳಬೇಕಾಯಿತಲ್ಲಾ ಎಂಬ ಅವಮಾನದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅದು ಬರೆದಿಟ್ಟಿರುವ ಚೀಟಿಯೊಂದು ದೊರಕಿದ್ದು, ಮುಂದಿನ ಜನ್ಮದಲ್ಲಿ ತಾನೂ ಮಾನವನಾಗಿ ಹುಟ್ಟಿ ಬಂದು ಸೇಡು ತೀರಿಸಿಕೊಳ್ಳುವುದಾಗಿ ಶಪಥವನ್ನೂ ಹಾಕಲಾಗಿದೆ.

ಈ ನಾಯಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಶ್ವಾನವೈದ್ಯರು ನೀಡಿದ ವರದಿಯ ಪ್ರಕಾರ, ನಾಯಿಯ ದೇಹದಲ್ಲಿ ಆಧುನಿಕ ಯುಗದಲ್ಲಿ ಪ್ರಾಣಿಗಳಂತೆಯೇ ವರ್ತಿಸುತ್ತಿರುವ ಮಾನವನ ಅ-ಮಾನವೀಯತೆ ಎಂಬ ವಿಷವಿರುವುದು ಪತ್ತೆಯಾಗಿತ್ತು.

ಈ ಮಧ್ಯೆ, ಮಾನವ ಪ್ರಾಣಿ ಕಚ್ಚಿದ ಪರಿಣಾಮವಾಗಿ ನಾಯಿಗೆ ಇದ್ದ ರೇಗಿಸೋ "ರೇಬೀಸ್" ಕಾಯಿಲೆ ಗುಣವಾಗುವ ಹಂತಕ್ಕೆ ತಲುಪಿತ್ತೇ? ಗುಣವಾಗುವ ಲಕ್ಷಣಗಳು ಆರಂಭವಾಗಿದ್ದವೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. ಮೊದಲಿಗೆ ರೈತರ ಆತ್ಮಹತ್ಯೆ; ಈಗ ನಾಯಿಯ ಆತ್ಮಹತ್ಯೆ. ಈ ಸರಣೀಗೆ ಕೊನೆ ಇಲ್ಲವೆ? ಆತ್ಮ ಉಳ್ಳ ಯಾರಾದರೂ ಆತ್ಮಹತ್ಯೆ ಮಾಡಿಕೊಳ್ಳುವ ಅವಕಾಶವಿರುವದರಿಂದ, ಇದನ್ನು ತಪ್ಪಿಸಲು ಆತ್ಮ ಉಳ್ಳ ಎಲ್ಲ ಪ್ರಾಣಿಗಳನ್ನೂ ಗುಂಡು ಹಾಕಿ ಕೊಲ್ಲಬೇಕೆಂದು ಬೊಗಳೆ-ರಗಳೆಯ ಸೊಂಪಾದಕರು ಒಮ್ಮೆ ಸಲಹೆ ನೀಡಿದ್ದು ನೆನಪಾಗುತ್ತಿದೆ. ಇದರಲ್ಲಿರುವ ಅಪಾಯವೆಂದರೆ, ಆ ಬಳಿಕ ಜಾರಕಾರಣಿಗಳನ್ನು ಬಿಟ್ಟು ಉಳಿದ ಪ್ರಾಣಿ ಹಾಗು ಪ್ರಜೆಗಳು ಗುಂಡಿಗೆ ಬಲಿಯಾಗಬೇಕಾದೀತು!

    ಪ್ರತ್ಯುತ್ತರಅಳಿಸಿ
  2. ನಿಮ್ಮ ತನಿಖೆ ಮುಂದುವರೆಯಲಿ, ನಮ್ಮ ಸಹಕಾರವೂ ಇದೆ. ಜನಬೆಂಬಲವೂ ನೀಡುತ್ತೇವೆ.

    ಪ್ರತ್ಯುತ್ತರಅಳಿಸಿ
  3. ಸುಧೀಂದ್ರರೇ,

    ತಮ್ಮನ್ನು ತಾವೇ ಗುಂಡಿಟ್ಟು ಕೊಂದು ಕೊಳ್ಳ(ಲ್ಲ)ಲು ಬೊಗಳೆಯ ಸೊಂಪಾದಕರು ಯಾರಿಗೂ ಆದೇಶಿಸಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸಿದ್ದಾರೆ.

    ಪ್ರತ್ಯುತ್ತರಅಳಿಸಿ
  4. ಚಿತ್ರಾ ಅವರೆ, ಬನ್ನಿ ಸ್ವಾಗತ...

    ನೀವು ನೀಡಿದ ಸಹಕಾರಕ್ಕೆ ಧನ್ಯವಾದ. ತನಿಖೆಗೆ ನಿಮ್ಮನ್ನೂ ಸೇರಿಸುತ್ತೇವೆ. ನಿಮ್ಮ ಗ್ಯಾಂಗಿನವರ ಮೇಲೂ ತನಿಖೆ ಮಾಡುತ್ತೇವೆ ಅಂತ ಭರವಸೆ ನೀಡುತ್ತೇವೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D