(ಬೊಗಳೂರು ಆತ್ಮಹತ್ಯಾ ಬ್ಯುರೋದಿಂದ)
ಬೊಗಳೂರು, ಡಿ.10- ಆತ್ಮಹತ್ಯೆಯಲ್ಲಿ ಕರ್‌ನಾಟಕಕ್ಕೆ 5 ನೇ ಸ್ಥಾನ ದೊರೆತಿರುವ ಬಗ್ಗೆ ನಮ್ಮ ವಿರೋಧಿ ಪತ್ರಿಕೆ ವರದಿ ಮಾಡಿದ್ದು, ಇದರಲ್ಲಿ ಬೊಗಳೆ ರಗಳೆ ಬ್ಯುರೋ ಕೈವಾಡ ಸಾಧ್ಯತೆಯನ್ನು ದಟ್ಟವಾಗಿ, ಕರಾಳವಾಗಿ ಶಂಕಿಸಲಾಗುತ್ತಿದೆ.ಕರುನಾಟಕದ ರಾಜಕಾರಣಿಗಳ ನಾಟಕದ ವಿಧಿ ವಿಧಾನಗಳ ಬಗ್ಗೆ ನಮ್ಮ ಬ್ಯುರೋವು ಎಡೆಬಿಡದೆ, ಜಾಹೀರಾತು ದೊರೆಯದ ಕಾರಣಕ್ಕಾಗಿ ಜಗಜ್ಜಾಹೀರಾತುಗೊಳಿಸುವ ವರದಿಗಳನ್ನು ಪ್ರಕಟಿಸಿತ್ತು. ಇದನ್ನು ಓದಿಯೇ ಕರುನಾಟಕದ ಮಂದಿ... ಅಬ್ಬಾ... ನಮ್ಮ ಜಾರಕಾರಣಿಗಳ ಜಾರೋಕೀಯ ಈ ಮಟ್ಟಕ್ಕೆ ಏರಿಬಿಟ್ಟಿತಲ್ಲಾ ಎಂದು ಹತಾಶೆಯಿಂದ, ಇರುವ ಮತ್ತು ಇಲ್ಲದ ಆತ್ಮಗಳೆಲ್ಲವನ್ನೂ ಹತ್ಯೆ ಮಾಡಿಕೊಂಡಿದ್ದಾರೆ ಎಂಬ ವಾದಕ್ಕೆ ಬಲವಾದ ಪುಷ್ಟಿ ದೊರೆಯುತ್ತಿದ್ದು, ಬೊಗಳೆ ಬ್ಯುರೋದಲ್ಲಿ ಆತಂಕ ಮೂಡಿಸಿಲ್ಲ.
ಇದರಲ್ಲಿ ಬೊಗಳೆ ಬ್ಯುರೋದ ಕೈವಾಡವಿಲ್ಲ. ಈಗಾಗಲೇ ಚುನಾವಣೆಗಳು ಎದುರಾಗುತ್ತಿರುವುದರಿಂದ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿರುವ ಶ್ವೇತವಸ್ತ್ರಧಾರಿ ಅನ್ಯಗ್ರಹ ಜೀವಿಗಳನ್ನು ನೋಡಿಯೇ ಕೆಲವರು ಹೃದಯಾಘಾತಕ್ಕೀಡಾಗುತ್ತಿದ್ದಾರೆ. ಇದನ್ನು ಆತ್ಮಹತ್ಯೆ ಅಂತ ಕೇಸು ಬರೆಸುವಂತೆ ಈ ಅನ್ಯಗ್ರಹಜೀವಿಗಳು ಪೊಲೀಸರಿಗೆ ತಾಕೀತು ಮಾಡುತ್ತಿದ್ದಾರೆ ಎಂಬುದನ್ನು ನಮ್ಮ ಬ್ಯುರೋದ ಇಲ್ಲದ ವದರಿಗಾರರು ಪತ್ತೆ ಹಚ್ಚಿ ಬಿಟ್ಟಿದ್ದಾರೆ.
ಇದೂ ಅಲ್ಲದೆ, ವಿಧಾನಸಭೆ ವಿಸರ್ಜನೆಯಾದ ಬಳಿಕ, ಅಲ್ಲಿಂದ ಹೊರಬಿದ್ದ ಅರಾಜಕೀಯ ತ್ಯಾಜ್ಯದಿಂದ ಹೊರಟ ದುರ್ವಾಸನೆ ಮತ್ತು ವಿಷಾನಿಲ ಸೇವಿಸಿಯೇ ಕೆಲವರು ಸಾವಿಗೀಡಾಗಿದ್ದಾರೆ. ಇದು ಕೂಡ ವಿಷ ಸೇವಿಸಿ ಆತ್ಮಹತ್ಯೆ ಎಂಬ ಪ್ರಕರಣ ದಾಖಲಾಗಲು ಕಾರಣವಾಗುತ್ತಿದೆ ಮತ್ತು ಆ ರೀತಿ ದಾಖಲಿಸಲು ಒತ್ತಡವೂ ಬರುತ್ತಿದೆ ಎಂಬುದನ್ನು ನಮ್ಮ ವದರಿಗಾರರನ್ನು ಕೂಡಿ ಹಾಕಿದ್ದ ಜೈಲಿನ ಪೊಲೀಸರೊಬ್ಬರು ತಿಳಿಸಿದ್ದಾರೆ.
ಈ ಮಧ್ಯೆ, ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯುರೋ ಕೂಡ ಎಲ್ಲಿಯೂ ತನ್ನ ವರದಿಯಲ್ಲಿ ಬೊಗಳೆಯ ರಗಳೆಯೂ ಕಾರಣ ಎಂದು ಎಲ್ಲಿಯೂ ಉಲ್ಲೇಖಿಸದಿರುವುದು ಹಲವರ ಹುಬ್ಬೇರಿಸಿದೆ. ಇದರಲ್ಲೇನೋ ಒಳ ಸಂಚಿರಬೇಕು, ಬೊಗಳೆ ಸೊಂಪಾದಕರು ಯಾರಿಗೋ ಲಂಚ ನೀಡಿ, ತಮ್ಮ ಪತ್ರಿಕೆಯ ಹೆಸರು ಈ ದಾಖಲೆಯಲ್ಲಿ ನುಸುಳದಂತೆ ಮಾಡಿರುವುದಾಗಿ ಶಂಕಿಸಲಾಗುತ್ತಿದೆ.
ಆದರೆ, ಬೊಗಳೆಯ ವರದಿಗಳನ್ನು ಓದಿಯೂ ಬದುಕುವುದರಲ್ಲಿ ನಂಬಿಕೆ ಉಳಿಸಿಕೊಂಡಿರುವವರ ಮನೋಸ್ಥೈರ್ಯವನ್ನು ನಮ್ಮ ಸೊಂಪಾದ-ಕರು ತುಂಬು ಕೊಡಗಳಿಂದ ಶ್ಲಾಘಿಸಿದ್ದಾರೆ.
ಅದೂ ಅಲ್ಲದೆ, ಬೊಗಳೆಯಲ್ಲಿ ಪ್ರಕಟವಾಗುತ್ತಿರುವ ಮತ್ತು ಪ್ರಕಟವಾಗದೇ ಬಾಕಿ ಉಳಿದ ಯಾವುದೇ ವರದಿಗಳು ಕೂಡ ಈ ಆತ್ಮಹತ್ಯೆಯನ್ನು ಪ್ರೇರೇಪಿಸಿಲ್ಲ ಎಂದು ನಮ್ಮ ಸಂಪಾದಕರು ಬಿದ್ದು, ಬಿದ್ದು ನಗುತ್ತಾ, ಎದ್ದು ಎದ್ದು ಓಡುತ್ತಾ, ಅಲವತ್ತುಕೊಳ್ಳುತ್ತಾ ಸ್ಪಷ್ಟನೆ ನೀಡಲು ಗಂಭೀರ ಚಿಂತನೆ ನಡೆಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಲಾಗಿದೆ.
2 ಕಾಮೆಂಟ್‌ಗಳು
ಆತ್ಮವನ್ನು ಬೆಂಕಿಯು ಸುಡಲಾರದು,ಉರುಳು ಸಾಯಿಸಲಾರದು ಎಂದು ಭಗ-ಭಗ- ವತ್ತ ಗೀತೆಯ ಕರ್ನಾಟಕ ಅಧ್ಯಯನದಲ್ಲಿ ಎಸ್.ಎಮ್.ಕೃಷ್ಣ ಡಿಕ್ಲೇರ್ ಮಾಡಿದ್ದಾನೆ. ಆದುದರಿಂದ ಕರ್ನಾಟಕದಲ್ಲಿ ಆತ್ಮಹತ್ಯೆ ಜರುಗಿವೆ ಎನ್ನುವದು ಅಶುದ್ಧ ಸತ್ಯ ಎಂದು ಕರ್ನಾಟಕ ಆತ್ಮಹತ್ಯಾ ಆಯೋಗದ ಅಧ್ಯಕ್ಷರು ವದರಿದ್ದಾರೆ. ಈ ದಂತವದಂತಿಗೆಲ್ಲ ’ಬೊಗಳೆ-ರಗಳೆ’ ಎನ್ನುವ ಪಾತಕಿಯೆ ಕಾರಣ ಎನ್ನುವದನ್ನು ಕರ್ನಾಟಕದ unintelligence dept ಪತ್ತೆ ಹಚ್ಚಿದೆ.
ಪ್ರತ್ಯುತ್ತರಅಳಿಸಿಸುಧೀಂದ್ರರೆ,
ಪ್ರತ್ಯುತ್ತರಅಳಿಸಿನಮಗೂ ತಿಳಿದಿದೆ, ಈ ಸಂಚಿನ ಬಗ್ಗೆ. ಯಾಕೆಂದರೆ ಆತ್ಮ ಸಾಕ್ಷಿ ಇಲ್ಲದವರೆಲ್ಲರೂ ತಮ್ಮ ತಮ್ಮ ಆತ್ಮ ಎಲ್ಲಿದೆ ಅಂತ ಹುಡುಕಲು ಭರ್ಜರಿ ಸಿದ್ಧತೆ ನಡೆಸುತ್ತಿದ್ದು, ಆ ಆತ್ಮ ಸಿಕ್ಕ ತಕ್ಷಣ ಅವುಗಳಿಗೆ ಬೆಂಕಿ ಹಚ್ಚಿ, ಅದನ್ನು ಬೊಗಳೆ ರಗಳೆಯ ಮೇಲೆ ಲೇಪಿಸುವ ಯತ್ನಗಳು ಭರದಿಂದ ಸಾಗಿವೆಯಂತೆ.
ಏನಾದ್ರೂ ಹೇಳ್ರಪಾ :-D