ಬೊಗಳೆ ರಗಳೆ

header ads

ನುಡಿಸಿರಿಯಲ್ಲಿ ಬೊಗಳೆ: ಅಲ್ಲಲ್ಲಿ ಟೈರ್ ಪಂಕ್ಚರ್!

(ಬೊಗಳೂರು ಬಡಿಸಿರಿ ಬ್ಯುರೋದಿಂದ)
ಬೊಗಳೂರು, ಡಿ.4- ಇಷ್ಟು ದಿನ ನಾಪತ್ತೆಯಾಗಿದ್ದಕ್ಕೆ ಬೊಗಳೆ ರಗಳೆ ಬ್ಯುರೋದ ಸೊಂಪಾದಕರುಗಳನ್ನು ಯಾರೂ ಕೂಡ ಹಳಿಯದಂತಿರಲು ಈ ವರದಿ.

ಇಷ್ಟು ದಿನ ಓದುಗರಿಂದ ತಪ್ಪಿಸಿಕೊಂಡು ತಿರುಗಾಡಿದ್ದು ಕರುನಾಟಕದ ರಾಜಕೀಯ ಪ್ರಭಾವದಿಂದಲ್ಲ ಮತ್ತು ನಾವು ಓಟು ಕೇಳಲು ಮನೆಮನೆಗೆ ತೆರಳಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸುತ್ತಿದ್ದು, ಇದಕ್ಕೆಲ್ಲಾ ಕಾರಣ ಗುಡಿಸಿರಿ, ಸಾರಿಸಿರಿ ಎಂದು ನಮ್ಮ ಬ್ಯುರೋ ಕೆಲಸ ಮಾಡಿದ್ದಾಗಿದೆ ಎಂದು ಖಂಡಿತವಾಗಿ ಹೇಳುತ್ತಿದ್ದೇವೆ.

ಮೂಡುಬಿದ್ರೆಯಲ್ಲಿ ಮೂರು ದಿನ ಆಳ್ವಾಸ್ ನುಡಿಸಿರಿ- ಕನ್ನಡ ರಸವನು ಬಡಿಸಿರಿ ಎಂಬ ಜಾತ್ರೆ ನಡೆದಿದ್ದು, ಅದರಲ್ಲಿ ಪಾಲ್ಗೊಳ್ಳಲೆಂದು ತೆರಳಿದ ನಮಗೆ ಅಲ್ಲಿ ದೊರೆತ ಸಂಗತಿಗಳು ಹಲವು. ಆದರೆ ಬೇರೆಯವರೆಲ್ಲರೂ ಎಲ್ಲವನ್ನೂ ವರದಿ ಮಾಡಿದ್ದಾರಾದುದರಿಂದ ಅಲ್ಲಿ ಹೋದ ನಮಗೆ ವರದಿ ಮಾಡಲು ಏನೂ ಸಿಗಲಿಲ್ಲ ಎಂದು ಬಲು ಸಂತೋಷದಿಂದ ಹೇಳಲು ಬಯಸುತ್ತಿದ್ದೇವೆ.

ಆಳ್ವಾ ಅವರು ಕನ್ನಡ ನುಡಿಯನು ನುಡಿಸಿರಿ, ಕನ್ನಡ ಅನ್ನ ಬಡಿಸಿರಿ, ಕನ್ನಡದ ನೀರು ಕುಡಿಸಿರಿ ಎಂದು ಕರೆ ಕೊಟ್ಟಿದ್ದ ಕಾರಣ ಎಲ್ಲರೂ ಅದನ್ನೇ ಮಾಡುತ್ತಿದ್ದುದು ಕಂಡು ಬಂದಿತ್ತು.

ಅಷ್ಟು ದೊಡ್ಡ ಮೂರು ದಿನಗಳ ಕಾರ್ಯಕ್ರಮದಲ್ಲಿ ವರದಿ ಮಾಡಲು ನಮಗೆ ಏನೂ ಸಿಗಲಿಲ್ಲವೆಂದರೆ! ಇದು ಅವಮಾನ, ಹೇಗಾದರೂ ಏನಾದರೂ ವರದಿ ಮಾಡಲೇಬೇಕು ಎಂದುಕೊಂಡು ಯೋಚಿಸುತ್ತಾ ಕುಳಿತ ನಮ್ಮ ಬ್ಯುರೋ ವರದಿಗಾರರಿಗೆ ಕೊನೆಗೂ ವರದಿ ಮಾಡಲು ಒಂದು ವಿಷಯ ಸಿಕ್ಕಿತು.

ಅದುವೇ ಟೈರು ಪಂಚರುಗಳಾಗುತ್ತಿರುವ ವರದಿಗಳು. ಆದರೆ ಇದು ನುಡಿಸಿರಿ ಸಮ್ಮೇಳನ ಸಂಪೂರ್ಣವಾಗಿ ಮುಗಿಸಿದಿರಿ ಎಂದು ಘೋಷಿಸಿದ ಬಳಿಕವಷ್ಟೇ ನಡೆದಿತ್ತು ಎಂಬುದನ್ನು ನಾವು ದಯನೀಯವಾಗಿ ಒಪ್ಪಿಕೊಳ್ಳುತ್ತಿದ್ದೇವೆ. ನಮ್ಮ ವರದಿಗಾರರಿಗೆ ಕೂಡ ಎಲ್ಲಾ ಮುಗಿದ ಬಳಿಕವೇ ವರದಿ ಮಾಡಲು ಅವಕಾಶ ಸಿಕ್ಕಿತ್ತು!

ಮೂಡುಬಿದಿರೆಯ ಸುತ್ತಮುತ್ತ, ಅಂದರೆ ಮಂಗಳೂರು, ಕಾರ್ಕಳ, ಬೆಳ್ತಂಗಡಿ ಇತ್ಯಾದಿ ಪರಿಸರಗಳಲ್ಲಿ ಅಲ್ಲಲ್ಲಿ ಟೈರು ಪಂಚರಾಗಿ ನಿಂತುಬಿಟ್ಟಿದ್ದ ಲಾರಿಗಳು, ಬಸ್ಸುಗಳು, ಕಾರುಗಳು, ಬೈಕುಗಳು ಕಂಡು ಬರುತ್ತಿದ್ದವು. ಹಾಗಂತ ಇವುಗಳಿಗೆ ನುಡಿಸಿರಿಯಲ್ಲಿ ಹೊಟ್ಟೆ ತುಂಬಾ (ಪೆಟ್ರೋಲ್) ಕುಡಿಸಿರಿ ಅನ್ನುವವರು ಯಾರೂ ಇದ್ದಿರಲಿಲ್ಲ ಅಂತ ತಿಳಿದುಕೊಳ್ಳಬೇಕಾಗಿಲ್ಲ.

ಮೂರೂ ದಿನಗಳ ಜಾತ್ರೆಯನ್ನು ಕೆಲವರು (ಅಂದರೆ ನಮ್ಮ ಬದ್ಧ ವಿರೋಧಿ ಪತ್ರಿಕೆಗಳು) ನುಡಿ ಜಾತ್ರೆ ಎಂದರು, ಕೆಲವರು ಜನ ಜಾತ್ರೆ ಎಂದರು, ಮತ್ತೆ ಕೆಲವರು ಸಡಗರದ ಜಾತ್ರೆ, ಸಾಂಸ್ಕೃತಿಕ ಜಾತ್ರೆ ಎಂದರು, ಕೆಲವರು ನಗುವಿನ ಜಾತ್ರೆ ಎಂದೂ, ಸಾಹಿತ್ಯ ಜಾತ್ರೆ ಎಂದೂ, ಸಮಯ ಪಾಲನೆಯ ಜಾತ್ರೆ ಎಂದೂ, ಪುಸ್ತಕ ಜಾತ್ರೆಯೆಂತಲೂ, ಜಾಗೃತಿ ಜಾತ್ರೆ ಎಂತಲೂ, ಕನ್ನಡದ ಬಗ್ಗೆ ಚಿಂತನೆ ಮಾಡುವಂತೆ ಮಾಡುವ ಜಾತ್ರೆಯೆಂದೂ ತಮ್ಮ ತಮ್ಮ ಬಾಯಿಗೆ ಬಂದಂತೆ ಬರೆದರು.

ಪ್ರತಿದಿನವೂ ಸಾವಿರಾರು ಮಂದಿ ಇಲ್ಲಿ ಬಂದು ಹೋಗುತ್ತಿದ್ದರು. ಮತ್ತೆ ಮರಳಿ ಬರುತ್ತಿದ್ದರು. ಅಂತಿಮವಾಗಿ ಈ ಮೂರು ದಿನಗಳ ಜಾತ್ರೆಯು ಮುಗಿದಾಗಲಂತೂ, ಕನ್ನಡಕ್ಕೆ ಭವಿಷ್ಯವಿದೆ, ಅದರ ಬಗ್ಗೆ ಚಿಂತಿಸಬೇಕಾದ ಅಗತ್ಯವಿಲ್ಲ ಎಂಬ ಭಾವನೆಯಿಂದ ಮನಸ್ಸುಗಳು ಹಗುರವಾಗಿದ್ದವಾದರೂ, ಎಲ್ಲರ ಮನಸ್ಸುಗಳು ಭಾರವಾಗಿದ್ದವು, ಹೃದಯ ಭಾರವಾಗಿತ್ತು, ಒಡಲು ತುಂಬಿತ್ತು. ಕೆಲವರು ಅಲ್ಲಿ ದೊರೆತಿರುವ ಭರ್ಜರಿ ರಸದೌತಣವೇ ಇದಕ್ಕೆ ಕಾರಣವೆಂದು ಹೊಟ್ಟೆ ನೀವಿಕೊಂಡರೂ, ಸಾಹಿತ್ಯದ ರಸದೌತಣವನ್ನೂ ಅಲ್ಲಿ ಬಡಿಸಿರಿ ಬಡಿಸಿರಿ, ಅಂತ ಬಗೆಬಗೆದು ಕೊಡಲಾಗಿತ್ತು.

ಇಂಥದ್ದೊಂದು ಜಾತ್ರೆ ಮುಗಿಯಿತಲ್ಲಾ ಎಂಬ ಕೊರಗಿನೊಂದಿಗೆ ಭಾರವಾದ ಮನಸ್ಸು, ಹೊಟ್ಟೆ, ಹೃದಯ ಹೊತ್ತವರು ತಮ್ಮ ತಮ್ಮ ಊರಿಗೆ ಮರಳುವ ವಾಹನಗಳನ್ನೇರಿದ್ದರು. ಅವರ ತೂಕದೊಂದಿಗೆ ಈ ಭಾವನೆಗಳ ತೂಕವೂ ಹೆಚ್ಚಾಗಿ, ವಾಹನಗಳ ಟೈರುಗಳಿಗೆ ಈ ಒತ್ತಡ ಸಹಿಸುವ ಶಕ್ತಿ ಇಲ್ಲವಾಯಿತು. ಅಲ್ಲಲ್ಲಿ ಪಂಕ್ಚರ್ ಆಗಿಬಿಟ್ಟಿದ್ದವು ಎಂಬುದನ್ನು ಬೊಗಳೆ ರಗಳೆ ಬ್ಯುರೋ ಮಾತ್ರವೇ ಪತ್ತೆ ಹಚ್ಚಿದೆ.

ಹೀಗಾಗಿ ಮೂರು ದಿನಗಳ ಜಾತ್ರೆಗೆ ಹೋಗಿದ್ದ ನಾವು ಏನೂ ವರದಿ ನೀಡಿಲ್ಲ ಎಂಬ ಆರೋಪದಿಂದ ಮುಕ್ತರಾಗಲು, ಅಲ್ಲಿ ಕೇಳಿಬಂದ ಈ ಕೆಳಗಿನ ತುಣುಕುಗಳನ್ನು ಇಲ್ಲಿ ನೀಡುತ್ತಿದ್ದೇವೆ.

* ಅದು ಸಾಹಿತ್ಯ ಚರ್ಚೆಯೇ ಇರಲಿ, ಸಂವಾದ ಕಾರ್ಯಕ್ರಮವೇ ಆಗಿರಲಿ, ಯಕ್ಷಗಾನ ಪ್ರದರ್ಶನವೇ ಇರಲಿ, ಹಾಸ್ಯರಸವಿದ್ದ ಮಾತಿನ ಮಂಟಪವೇ ಇರಲಿ, ಕಾರ್ಟೂನುಗಳುಳ್ಳ ಪ್ರದರ್ಶನ ಕೊಠಡಿಯೇ ಇರಲಿ, ಎಲ್ಲೆಡೆ ರಾರಾಜಿಸುತ್ತಿದ್ದವರು ನಮ್ಮ ವದಿಯೋಗೌಡ್ರು ಮತ್ತವರ ವಂಶ ರಾಜಕಾರಣವೇ. ಒದೆಯೋರಪ್ಪನವರ ಜೋತುಬಿದ್ದ ಮುಖವೂ ಅಲ್ಲಿ ನೆನಪಾಯಿತು. * ಬೊಗಳೆ ರಗಳೆಯಲ್ಲಿ ಪ್ರಕಟವಾಗಿರುವ ವಿಧಾನಸಭೆ ವಿಸರ್ಜನೆಯಿಂದ ಎಲ್ಲೆಡೆ ಗಬ್ಬುನಾತ ಎಂಬ ಸುದ್ದಿಗೂ ಈ ಕಾರ್ಟೂನು ಗ್ಯಾಲರಿಗಳಲ್ಲಿ ಪ್ರಾಧಾನ್ಯ ನೀಡಲಾಗಿತ್ತು.

* ಸಮಯ ಪಾಲನೆಯನ್ನು ವ್ರತದಂತೆ ನಿಷ್ಠೆಯಿಂದ ಪಾಲಿಸುತ್ತಿದ್ದ ಸಮ್ಮೇಳನದ ರೂವಾರಿ ಮೋಹನ್ ಆಳ್ವಾರು ತಮಗೆ "ಬನ್ನಿರಿ ನೋಡಿರಿ ನುಡಿಸಿರಿ, ನಮ್ಮನ್ನೂ ಒಂದಿಷ್ಟು ನಗಿಸಿರಿ ಮತ್ತು 30 ನಿಮಿಷಕ್ಕೇ ಮುಗಿಸಿರಿ" ಅಂತ ಹೇಳಿದ್ದಾರೆ ಎಂದದ್ದು ಹನಿಕವಿ ಡುಂಡಿರಾಜ್.

* ಭುವನೇಶ್ವರಿ ಹೆಗಡೆ ಮತ್ತು ಡುಂಡಿರಾಜ್ ಅವರಿಗೆ 30-30 ನಿಮಿಷ ಅವಕಾಶ ನೀಡಿದಾಗ, ಅವರಿಬ್ಬರೂ, ನಾವು 30:30 ಬೇಷರತ್ ಆಗಿ ಮೈಕ್ ಹಸ್ತಾಂತರಿಸಿದ್ದೇವೆ ಅಂದಿದ್ದು ರಾಜಕೀಯ ಸೇರಲು ಇಚ್ಛಿಸಿರುವ ನಮಗೆ ಪ್ರಬಲವಾಗಿ ಮುಜುಗರ ಉಂಟುಮಾಡಿತು.

* ಡುಂಡಿಯವರು ಮಾತು ಪೋಣಿಸುತ್ತಾ, ಡಿಸೆಂಬರ್ 1ಕ್ಕೆ ಏಡ್ಸ್ ಡೇ ಮುಂತಾಗಿ ಪ್ರತಿಯೊಂದಕ್ಕೂ ಒಂದು ಡೇ ಇರುತ್ತದೆ. ಹಾಗಾಗಿ ಅದೇ ಮಾದರಿಯಲ್ಲಿ ರಾಜಕಾರಣಿಗಳಿಗೆ ಬುರು-ಡೇ, ಮಹಿಳೆಯರಿಗಾಗಿ ಜ-ಡೇ, ಸತ್ತವರಿಗಾಗಿ ವ-ಡೇ, ಯಕ್ಷಗಾನದವರಿಗಾಗಿ ಚೆಂ-ಡೇ, ರೌಡಿಗಳಿಗಾಗಿ ಹೊ-ಡೇ, ಬೇಕರಿಯವರಿಗಾಗಿ ಬಂ-ಡೇ, ಕುಡುಕರಿಗಾಗಿ ಖೋ-ಡೇ ಅಂತೆಲ್ಲಾ ಹೇಳಿ ಅಲ್ಲಿ ಸುಮ್ಮನೆ ಕೂತಿದ್ದವರನ್ನು ಜೋರಾಗಿ ಸದ್ದು ಮಾಡುವಂತೆ ಮಾಡಿ ಅಕ್ಷಮ್ಯ ಅಪರಾಧವೆಸಗಿದರು.

* ಯಡಿಯೂರಪ್ಪ ಬಗ್ಗೆ ಡುಂಡಿ ನುಡಿ ಢೀ ಢೀ: ಜ್ಯೋತಿಷಿಗಳು ಹೇಳಿದ್ದೆಲ್ಲಾ ಮಾಡಿ, ತಮ್ಮ ಹೆಸರಿಗೆ ಇನ್ನೊಂದು ಡಿ, ಸೇರಿಸಿಕೊಂಡರು ಯಡ್ಡಿ, ನಿವಾರಣೆ ಆಗಿಲ್ಲ ಆತಂಕ ಅಡ್ಡಿ, ಕಾಡಿದರು ಎಚ್‌ಡಿಡಿ, ಹಾಕಿದರು ಕಡ್ಡಿ, ಹೊಸ ಹೊಸ ಷರತ್ತುಗಳ ಒಡ್ಡಿ, ಕೊನೆಗೂ ಜಾರಿಸಿದರು ಚಡ್ಡಿ.

* ಡುಂಡಿಯವರ ಮತ್ತೊಂದು ನುಡಿ ಹಬ್ಬದ "ಡಿ"ಸ್ಕೌಂಟು ಬಗ್ಗೆ: ಹಬ್ಬದ ಸಲುವಾಗಿ ಒಳ ಉಡುಪುಗಳ ಮೇಲೆ ಭಾರೀ ದರ ಕಡಿತ, ಧರಿಸಿದ ಮೇಲೇ ಗೊತ್ತಾಗುತ್ತೆ ಒಳಗೂ ಭಾರೀ ಕಡಿತ!

* ಪ್ರತಿಯೊಬ್ಬ ಯಶಸ್ವೀ ಪುರುಷನ ಹಿಂದೊಬ್ಬ ಮಹಿಳೆಯಿರುತ್ತಾಳೆ ಅಲ್ಲವೇ? ಇದನ್ನು ಜೆಎಚ್ ಪಟೇಲರಿಗೆ ಕೇಳಲಾಗಿತ್ತು. ಡುಂಡಿಯವರು ಹೇಳಿದ್ದು ಹೀಗೆ: ಪಟೇಲರೇ ನೀವೊಬ್ಬ ಯಶಸ್ವೀ ನಾಯಕರು, ನಿಮ್ಮ ಹಿಂದಿರುವ ಹೆಂಗಸಾರು? ಆಗ ಪಟೇಲರು ಹೇಳಿದರು, ಆರಲ್ಲ, ಸಾವಿರಾರು!

* ಡುಂಡಿಯವರು ಬಹಿರಂಗ ಪಡಿಸಿದ ನಿಗೂಢ ರಹಸ್ಯ!: ನಮ್ಮ ಮನೆಯಲ್ಲಿ ಮಿಕ್ಸರು ಇಲ್ಲ, ಗ್ರೈಂಡರು ಇಲ್ಲ, ವಾಶಿಂಗ್ ಮೆಷಿನ್ ಇಲ್ಲ, ಎಂದೆಲ್ಲಾ ನನ್ನಾಕೆ ಗೊಣಗುವುದೇ ಇಲ್ಲ, ಯಾಕಂದ್ರೆ ನಾನಿದ್ದೇನಲ್ಲ!

* ಲವ್ ಶುರುವಾಗೋದು ಎಲ್ಲಿಂದ ಅನ್ನೋದಿಕ್ಕೆ ಡುಂಡಿ ವ್ಯಾಖ್ಯಾನ: ಇದಕ್ಕೆ ಹುಡ್ಗೀರು ಉತ್ತರಿಸೋದು, ಲವ್ ಅಟ್ ಫಸ್ಟ್ ಸೈಟ್ ಅಂತ, ಹುಡುಗ್ರು ಉತ್ತರಿಸೋದು ವೆಬ್ ಸೈಟ್‌ನಿಂದ ಅಂತ, ಕಣ್ಣಿಂದ ಅಲ್ಲ, ಪೆನ್ನಿಂದ ಅಂತ ಯುವ ಕವಿ. ಹೇಗೆ? ಮಿತ್ರನೊಬ್ಬ ಬರೆದ ಸುಂದರ ಪ್ರೇಮ ಪತ್ರ, ಓದಿದ ಅಪ್ಪ ಕಾದಿರಿಸಿದ ಛತ್ರ! ಮತ್ತೆ ಈಗಿನ ಯುವ ಜನಾಂಗದಲ್ಲಿ ಲವ್ ಶುರುವಾಗೋದು ಕಾಲಿಂದ... ಅಂದ್ರೆ ಮಿಸ್ಡ್ ಕಾಲಿಂದ ಅಂತ! ಡುಂಡಿಯವರು ಹೇಳುವುದೇನು? ಲವ್ ಶುರುವಾಗೋದು ಎಲ್ಲಿಂದ ಎಂಬ ಪ್ರಶ್ನೆಯಲ್ಲೇ ಉತ್ತರವಿದೆ. ಅಂದರೆ "ಎಲ್"ಇಂದ!

* ಫಲಿತಾಂಶದಲ್ಲೇಕೆ ಯಾವಾಗ್ಲೂ ಹುಡ್ಗೀರು ಮುಂದೆ? ಯಾಕಂದ್ರೆ ಹುಡುಗ್ರು ಯಾವತ್ತೂ ಹುಡ್ಗೀರ ಹಿಂದೆ ಎಂದದ್ದು ಡುಂಡಿರಾಜ್.

* ಪ್ರೀತಿ ಪ್ರೇಮದ ಬಗ್ಗೆ ಸಾಕಷ್ಟು ಕತೆ ಕಾದಂಬರಿಗಳು ಬಂದಿವೆ. ಆದರೆ ಚುಟುಕು ಕವಿಯ ಮದುವೆ ಹೇಗೆ? ಡುಂಡಿ ಹೇಳಿದ್ದು ಹೀಗೆ: ಅವಳು ನನ್ನನ್ನು ನೋಡಿ ನಕ್ಕಳು, ನಮಗೆ ಈಗ ಎರಡು ಮಕ್ಕಳು!

* ಮದುವೆಯಾದವರ ಪರಿಸ್ಥಿತಿ ಬಗ್ಗೆ ಅವರ ಮತ್ತೊಂದು ಕೋಟ್: ನಿಮ್ಮ ಹೃದಯದಲಿ ಸಿಕ್ಕರೆ ಜಾಗ, ಅಷ್ಟೇ ಸಾಕೆಂದಿದ್ದಳು ಆಗ, ಈಗ ದಿನಾಲೂ ಒಂದೇ ರಾಗ, ಸೈಟು ಕೊಳ್ಳುವುದು ಯಾವಾಗ!

* ಅದಕ್ಕೆ ಮುಂಚೆ, ಅರ್ಥಶಾಸ್ತ್ರ ಉಪನ್ಯಾಸಕಿಯಾಗಿರುವ ಹಾಸ್ಯಸಾಹಿತಿ ಭುವನೇಶ್ವರಿ ಹೆಗಡೆ ಹೇಳಿದ್ದು: ಅರ್ಥ ಶಾಸ್ತ್ರ ಎಂದರೇನು, ಎಷ್ಟು ವಿಧ ಎಂಬ ಪ್ರಶ್ನೆಗೆ ಉತ್ತರ- ಪ್ರತಿಯೊಂದು ಶಬ್ದಕ್ಕೂ ಒಂದೊಂದು ಅರ್ಥ ಹುಡುಕಿ ವಿವರಿಸುವುದೇ ಅರ್ಥಶಾಸ್ತ್ರ. ಅದರಲ್ಲಿ ಎರಡು ವಿಧ- ತಪ್ಪು ತಿಳಿದುಕೊಳ್ಳುವುದು ಅಪಾರ್ಥ ಶಾಸ್ತ್ರ ಮತ್ತು ಈ ಅಪಾರ್ಥದಿಂದ ಜಗಳವಾಗಿ ಮಾರಾಮಾರಿಗೆ ಹೋದರೆ ಅದು ಅನರ್ಥ ಶಾಸ್ತ್ರ!

* ತಮ್ಮ ಕೈನೆಟಿಕ್‌ಗೆ ಡಿಕ್ಕಿ ಹೊಡೆದ ಬಸ್ಸಿನ ಗಾಜನ್ನು ಆಕ್ರೋಶಿತ ವಿದ್ಯಾರ್ಥಿಗಳು ಪುಡಿ ಮಾಡಿದ ಸಂದರ್ಭ ಪತ್ರಿಕೆಯೊಂದರಲ್ಲಿ ಬಂದ ಸುದ್ದಿಯ ಟೈಟಲ್ಲು: ಕೈನೆಟಿಕ್‌ಗೆ ಡಿಕ್ಕಿಯಾಗಿ ಪುಡಿಪುಡಿಯಾಗ ಬಸ್!

* ಕುರುಕ್ಷೇತ್ರಕ್ಕೊಂದು ಆಯೋಗ ಎಂಬ ವಿಶಿಷ್ಟ ಯಕ್ಷ ರಂಗ ಪ್ರಯೋಗದಲ್ಲಿ ನ್ಯಾಯದ ಕಟಕಟೆಯಲ್ಲಿ ನಿಂತ ಕೌರವ ಹೇಳಿದ್ದು: ನಾನೇನೂ ತಪ್ಪು ಮಾಡಿಲ್ಲ. ಏನಿದ್ದರೂ ಕುರು ವಂಶಕ್ಕಾಗಿ ಮಾಡಿದೆ, ನಮ್ಮ ವಂಶೋನ್ನತಿಗಾಗಿ, ಕುಲೋನ್ನತಿಗಾಗಿ ಮಾಡಿದೆ ಎನ್ನುತ್ತಾ ವದಿಯೋಗೌಡ್ರನ್ನು ನೆನಪಿಸಿದ!

* ಆಯೋಗದ ತೀರ್ಪುಗಾರಿಕೆ ನಿರ್ವಹಿಸಿದ ಪ್ರಭಾಕರ ಜೋಷಿ ಹೇಳಿದ್ದು: ತಪ್ಪು ಮಾಡಿಯೂ ಏನೂ ಮಾಡಿಲ್ಲ ಎನ್ನುವ ಸುಯೋಧನ, ಧೃತರಾಷ್ಟ್ರರು ನಮ್ಮ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ಅಂಥವರೆಲ್ಲರೂ ಕಲಿಯುಗದಲ್ಲಿ ರಾಜಕಾರಣಿಗಳಾಗಿದ್ದಾರೆ.

* ಮಾತಿನ ಮಂಟಪದಲ್ಲಿ ಪ್ರೊ.ಕೃಷ್ಣೇಗೌಡರು ಹೇಳಿದ್ದು: ಹಂಸಕ್ಷೀರ ನ್ಯಾಯದ ಪ್ರಕಾರ, ಹಂಸವು ನೀರನ್ನು ಬಿಟ್ಟು ಹಾಲನ್ನು ಮಾತ್ರ ಸೇವಿಸುತ್ತದೆ ಹೇಗೆ ಎಂದು ಪದೇ ಪದೇ ಕೇಳಿದಾಗ ಜಿ.ಪಿ.ರಾಜರತ್ನಂ ಉತ್ತರಿಸಿದ್ದು ಹೀಗೆ- ಹಂಸವು ಹಾಲು ಸ್ವೀಕರಿಸಿ ನೀರು ಬಿಡುತ್ತದೆ, ಆದರೆ ಎಲ್ಲಿ, ಯಾವಾಗ ಬಿಡುತ್ತದೆ ಅಂತ ಗೊತ್ತಿಲ್ಲ!

* ಇಂಗ್ಲಿಷ್ ಮಾತನಾಡುವ ಚಟ ಬೆಳೆಸಿಕೊಳ್ಳುವ ಹೆಂಡತಿಯೊಬ್ಬಳು, ಗಂಡನ ಜತೆ ಮದುವೆಗೆ ಹೋಗಲು ಸಿದ್ಧತೆ ನಡೆಸುತ್ತಿರುತ್ತಾಳೆ. ಕತ್ತು ತುಂಬಾ ಆ ಸರ, ಈ ಸರ, ಬದನೆಕಾಯಿ ಸರ ಹಾಕಿಕೊಂಡ ಹೆಂಡತಿಯನ್ನು ನೋಡಿ ಗಂಡ ಅವಾಕ್ಕಾಗಿ ಪ್ರಶ್ನಿಸುತ್ತಾನೆ, ಏನೇ ಇದು, ಮದ್ವೆಗೆ ಬಂದೋರೆಲ್ಲರೂ ನಿನ್ನನ್ನೇ ಮದುಮಗಳು ಅಂತ ತಿಳ್ಕೊಂಡಾರು ಎಂದು ಎಚ್ಚರಿಸುತ್ತಾನೆ. ಆಗ ಅವಳು ಉತ್ತರಿಸುತ್ತಾಳೆ - "ರೀ, ಈ ವೆಡ್ಡಿಂಗಿಗೆ ತುಂಬಾ ಪೀಪಲ್ಸ್ ಬರ್ತಾರಲ್ಲ, ಅವ್ರು ಬಂದಾಗ ನಾನು ಬಾಗ್ಲಲ್ಲೇ ನಿಂತಿರ್ತೀನಿ. ಅವ್ರೆಲ್ಲಾ ನನ್ನ ನೆಕ್‌ನೋಡಿ ಹೋಗ್ಲೀಂತ ಈ ರೀತಿ ಹಾಕ್ಕೊಂಡೆ" ಅಂತಾಳೆ. ಅದ್ಯಾಕೆ ನಿನ್ನನ್ನ ನೆಕ್ ನೋಡಿ ಹೋಗ್ಬೇಕು ಎಂದು ಗಂಡ ತತ್ತರಿಸುತ್ತಾನೆ.

* ಇಂಗ್ಲಿಷನ್ನು ಹೇಗೆ ಬೇಕಾದರೂ ಬಳಸಬಹುದು ಎಂಬುದಕ್ಕೊಂದು ಉದಾಹರಣೆ: GHOTI ಎಂದು ಬರೆದರೆ ಇಂಗ್ಲಿಷಿನಲ್ಲಿ ಫಿಶ್ ಅಂತಾನೂ ಓದಬಹುದು. ಯಾಕೆ? ರಫ್ ಪದದ ಸ್ಪೆಲ್ಲಿಂಗಿನಲ್ಲಿ GH ಸೇರಿದರೆ ಫ್ ಆಗುತ್ತದೆ, O ಎಂಬುದು ವಿಮೆನ್ ಪದದಲ್ಲಿ ಇ ಆಗುತ್ತದೆ, ಅಂತೆಯೇ TI ಎಂಬುದು ನೇಶನ್ ಪದದಲ್ಲಿ ಶ್ ಆಗುತ್ತದೆ. ಇವೆಲ್ಲವೂ ಒಟ್ಟು ಸೇರಿದರೆ ಫಿಶ್ ಆಗುತ್ತದೆ ಎಂಬ ಬರ್ನಾರ್ಡ್ ಷಾ ನುಡಿ ನೆನಪಿಸಿದರು ಕೃಷ್ಣೇಗೌಡರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

10 ಕಾಮೆಂಟ್‌ಗಳು

  1. tair puncharage bogaLe kiavaDavide anno gusu-gusu sammeLanadalli keLi barta ittu.

    ಪ್ರತ್ಯುತ್ತರಅಳಿಸಿ
  2. ಮೂಡುಬಿದ್ರೆಯಲ್ಲಿ ಮೂರು ದಿನ ನಡೆದ ಆಳ್ವಾಸ್ ನುಡಿಸಿರಿ- ಕನ್ನಡ ರಸವನು ಬಡಿಸಿರಿ ಎಂಬ ಜಾತ್ರೆ ನಡೆದಿದ್ದು ಅಲ್ಲಿಗೆ ನಿಮ್ಮ ವದರಿಗಾರ ತೆರಳಿದ್ದು ಗೊತ್ತಾಗಿದೆ. ಬೊಗಳೂರು ಬ್ಯೂರೊ ಎಂಬ ಏಕಸದಸ್ಯ ಸುದ್ದಿಸಂಸ್ಧೆಯ ಸರ್ವಸದಸ್ಯರನ್ನು ಲಾಬಿಮೂಲಕ ಹಿಂದಿಕ್ಕಿ ತಾನೇ ಆ ಕಾರ್ಯಕ್ರಮಕ್ಕೆ ತೆರಳಿದ್ದು ಜಗಜ್ಜಾಹೀರು ಆಗಿರುವ ವಿಷಯ ನಿಮಗೆ ಗೊತ್ತಿರಲಿಕ್ಕಿಲ್ಲ.

    ಏಕೆಂದರೆ ನುಡಿ ಸಿರಿ ಆದಮೇಲೆ ಎಲ್ಲರೂ ಅವರವರ ಇಲ್ಲ ಬೇರೆಯವರ ಮನೆಗೆ ತೆರಳಿದ್ದರೂ ನೀವು ಮಾತ್ರ, ಭಾರವಾದ ಹೃದಯವನ್ನು ಎತ್ತಲಾರದೇ, ನುಡಿಸಿರಿಯ ಗುಂಗಿನಲ್ಲಿ 'ಗುಡಿಸಿರಿ, ಸಾರಿಸಿರಿ' ಮಾಡುತ್ತಾ ಅಲ್ಲೇ ಕುಳಿತಿರುವ ವಿಚಾರ ಗೊತ್ತಾಗಿದೆ. ಅದಲ್ಲದೆ ನುಡಿಸಿರಿಗೆ ಬಂದ, ಬರದ ವಾಹಗನಗಳ ಟೈರುಗಳನ್ನೆಲ್ಲ ಪಂಕ್ಚರ್ ಮಾಡುತ್ತಾ ಕಾಲಹರಣ ಮಾಡುತ್ತಿರುವ ನೀವು ಇನ್ನೂ ಕಚೇರಿಗೆ ಮರಳಲಿಲ್ಲ ಎಂಬುದನ್ನು ನಿಮ್ಮ ಕಚೇರಿಯಲ್ಲಿರುವ ನಿಮ್ಮ ಸಹಉದ್ವೇಗಿಗಳ ಸಂತಸವೇ ಸಾರುತ್ತಿದೆ.

    ಆಳ್ವಾ ಅವರು ಕನ್ನಡ ನುಡಿಯನು ನುಡಿಸಿರಿ, ಕನ್ನಡ ಅನ್ನ ಬಡಿಸಿರಿ, ಕನ್ನಡದ ನೀರು ಕುಡಿಸಿರಿ ಎಂದು ಕರೆ ಕೊಟ್ಟಿರುವುದನ್ನೇ ಮೂಲವಾಗಿಸಿಕೊಂಡಿರುವ ನಿಮ್ಮ ಸೊಣಕಲ ಸೊಂಪಾದಕರು ಬಡಿಸಿರಿ ಮತ್ತು ಉಣಿಸಿರಿ ಬದಲಿಗೆ ಬಡಿಸಿ ಮತ್ತು ಉಣ್ಣುತ್ತಾ ಇರುವ ವಿಚಾರ ಕೂಡ ನಮ್ಮ ಗುಪ್ತಚರ ಏಜೆಂಟರಿಗೆ ತಿಳಿದು ಬಂದಿದೆ.

    ಅದಲ್ಲದೆ ಓದುಗರಿಂದ ತಪ್ಪಿಸಿಕೊಂಡು ತಿರುಗಾಡುತ್ತಿರುವ ನೀವು ರಾಡಿಕೀಯ ಪ್ರಲೋಭನೆಗೆ ಒಳಗಾಗಿದ್ದು ವಿಧಾನಸೌಧದತ್ತ ಎಡತಾಕುತ್ತಿದ್ದೀರಿ ಎಂಬ ಅಂಶವನ್ನು ಯಾರೂ ಬಹಿರಂಗ ಪಡಿಸದಿದ್ದರೂ ನಾವೇ ಊಹಿಸಿಕೊಂಡಿದ್ದೇವೆ.

    ಪ್ರತ್ಯುತ್ತರಅಳಿಸಿ
  3. ಭುವನೇಶ್ವರಿ ಹೆಗಡೆ ಹಾಗು ಢುಂಡಿರಾಜರ ತುಣುಕುಗಳನ್ನು ನೀಡಿದ್ದಕ್ಕಾಗಿ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  4. ಹಂಸಕ್ಷೀರದ ಜೋಕ್ ಕೃಷ್ಣೇಗೌಡರ ಬಾಯಲ್ಲಿ ಅಲ್ಲಿ ,ಇಲ್ಲಿ, ಟಿವಿಲಿ ಕನಿಷ್ಟ ಹತ್ತು ಸಲ ಕೇಳಿದೀನಿ ನಾನು. ಮತ್ತೆ ಇಲ್ಲಿ!!

    ಪ್ರತ್ಯುತ್ತರಅಳಿಸಿ
  5. ಮಹಾಂತೇಶರೆ,

    ಸಮ್ಮೇಳನದಲ್ಲಿ ಬೊಗಳೆಯ ಗುಳ್ಳೆ ಒಡೆದದ್ದಲ್ಲ, ಅದು ಟೈರೇ ಪಂಕ್ಚರ್ ಆಗಿದ್ದು ಅಂತ ನಮ್ಮ ಬ್ಯುರೋದವರಿಂದ ಸ್ಪಷ್ಟನೆ ದೊರೆಯುವ ಸಾಧ್ಯತೆಗಳಿವೆ.

    ಪ್ರತ್ಯುತ್ತರಅಳಿಸಿ
  6. ಮನಸ್ವಿನಿ ಅವರೆ,

    ಟೈರಿನ ಪೀಸುಗಳು ಇಲ್ಲಿ ಬಂದು ಬಿದ್ದ ಹಾಗಿವೆ... ನೀವು ನಮ್ಮನ್ನು ನೋಡಿ ನಗುತ್ತಾ ಇರಿ...

    ಪ್ರತ್ಯುತ್ತರಅಳಿಸಿ
  7. ಶಾನಿಯವರೆ,

    ನಿಮ್ಮ ಡೆಸ್ಕಿನಲ್ಲಿ ಕಸದ ಬುಟ್ಟಿಗೆ ಹೋಗಲು ಕಾದು ಕುಳಿತಿರುವ ಒದರಿಯ ಪ್ರತಿಯನ್ನೇ ಹಿಡಿದುಕೊಂಡು ನೀವು ನಮ್ಮನ್ನು ಬ್ಲ್ಯಾಕ್ ಮೇಲ್ ಮಾಡಲು ಯತ್ನಿಸುತ್ತಿರುವುದು ನಿಮಗೆ ತರವಲ್ಲ. ನಾವು ಒದರಲೆಂದು ಹೊರಟಾಗಲೇ... ಅಬ್ಬಾ... ಪೀಡೆ ತೊಲಗಿತು ಅಂತ ನಮ್ಮ ಕಚೇರಿಯಲ್ಲಿಡೀ ಸಂತಸ ತುಂಬಿ ತುಳುಕಾಡಿದ್ದು, ನಮ್ಮ ಗಮನಕ್ಕೆ ಬಂದಿದ್ದರೂ ಬಾರದಂತೆ ನಾವು ನರ್ತಿಸುತ್ತಿದ್ದೇವೆ.

    ಪ್ರತ್ಯುತ್ತರಅಳಿಸಿ
  8. ಸುಧೀಂದ್ರರೆ,

    ಹೆಗಡೆ ಮತ್ತು ಡುಂಡಿರಾಜರು ಉದುರಿಸಿದ ನುಡಿಯನ್ನು ನಮ್ಮ ಒದರಿಗಾರರು ಹೆಕ್ಕಿಕೊಂಡಿದ್ದಾರಷ್ಟೇ. ಯಾವುದೇ ರೀತಿಯಲ್ಲೂ ತಿರುಚಲು ಸಾಧ್ಯವಾಗಿಲ್ಲ,

    ಪ್ರತ್ಯುತ್ತರಅಳಿಸಿ
  9. zzn ಅಂದರೇನು ಅಂತ ಗೊತ್ತಾಗದಿದ್ದರೂ ನಾವು zzzzz ಅಂತ ಎಲ್ಲಿ ಬರೆಯುತ್ತೇವೆ ಎಂಬ ಅರಿವುಳ್ಳವರಾಗಿರುವುದರಿಂದ, ನಿಮ್ಮನ್ನು ನಮ್ಮ ಬೊಗಳೆಗೆ ಸ್ವಾಗತಿಸುತ್ತಿದ್ದೇವೆ.

    ಹಂಸಕ್ಷೀರದ ಜೋಕು ಕೈ-ಲಾಸ್ ಮಾಡಿಕೊಂಡವರು ಹೇಳಿದ್ದಾಗಿದ್ದು, ಅದಿನ್ನೂ ಸವೆಯುವವರೆಗೂ ಚಾಲ್ತಿಯಲ್ಲಿರುತ್ತದೆಯಂತೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D