(ಬೊಗಳೂರು ವಿಸರ್ಜನೆ ಬ್ಯುರೋದಿಂದ)
ಬೊಗಳೂರು, ನ.29- ರಾಜ್ಯ ವಿಧಾನಸಭೆಯಿಂದ ವಿಸರ್ಜನೆ ಮಾಡಲಾದ ಎಲ್ಲಾ ಶ್ವೇತವಸನಧಾರಿ ಜೀವಿಗಳು ಇದೀಗ ಕರ್‌ನಾಟಕದ ಎಲ್ಲಾ 224 ಕ್ಷೇತ್ರಗಳ ಮನೆ ಮನೆಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿರುವುದು ಮತದಾರರ ಆತಂಕ ಹೆಚ್ಚಳಕ್ಕೆ ಕಾರಣವಾಗಿದೆ.ರಾಜ್ಯ ನಿಧಾನಸಭೆಯಿಂದ ವಿಸರ್ಜನೆಯಾಗುತ್ತಿರುವ ತ್ಯಾಜ್ಯವನ್ನು ಸ್ಥೂಲವಾಗಿ ಮತ್ತು ಕೂಲಂಕಷವಾಗಿಯೂ ತಪಾಸಣೆಗೊಳಪಡಿಸಿದಾಗ ಅದರೊಳಗೆ ಹುಳುಗಳು, ಕ್ರಿಮಿಗಳು, ಕೊಳಚೆ, ಕೆಸರು, ಧೂಳು, ರಾಡಿ, ಕೊಚ್ಚೆ ಇತ್ಯಾದಿಗಳು ಪತ್ತೆಯಾಗಿರುವುದರಿಂದಾಗಿ ರಾಜ್ಯದ ಜನತೆ ಛೆ! ಇಂಥವರಿಂದಲೂ ಕೈಯೆತ್ತಿದ ನಮಸ್ಕಾರ ಪಡೆಯಬೇಕಲ್ಲಾ ಎಂದು ತಲೆ ತಲೆ ಚಚ್ಚಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ನಮ್ಮವರಲ್ಲದ ಬಾತ್ಮೀದಾರರು ಮುಖ ಮುಚ್ಚಿಕೊಂಡು ವರದಿ ಮಾಡಿದ್ದಾರೆ.
ವಿಸರ್ಜನೆಯ ಹಂತದಲ್ಲಿರುವಾಗಲೇ ರಾಜ್ಯ ನಿಧಾನಸಭೆಯಿಂದ ಹುಳು(ಕು)ಗಳು ಹೊರ ಬರಲಾರಂಭಿಸಿದ್ದವು. ಇದಕ್ಕೆ ಪ್ರಧಾನ ಕಾರಣವೆಂದರೆ ಕಮಲಕ್ಕೆ ಕೆಸರು ಮೆತ್ತಿ ಕೊಳೆತು ಹೋಗಿರುವುದು ಹಾಗೂ ತೆನೆಹೊತ್ತ ರೈತ ಮಹಿಳೆಯ ತಲೆಯ ಮೇಲಿದ್ದ ಮೂಟೆಯಲ್ಲೂ ಕೆಸರು ಎರಚಿ, ತೆನೆಯೆಲ್ಲವೂ ಉದುರುವ ಹಂತದಲ್ಲಿರುವುದು.
ಈಗಾಗಲೇ ವದಿಯೋಗೌಡ್ರ ಕಾರ್ಯವೈಖರಿಯಿಂದ ರೋಸಿ ಹೋಗಿರುವ ಪೀಂಎಂ ಪ್ರಕಾಶ್ ಅವರು ಕೆಲವು ಹುಳುಕುಗಳನ್ನು ತೆಗೆಯಲು ಪ್ರಯತ್ನಿಸುತ್ತಿದ್ದು, ದಳ ವಿದಳನೆ ಪ್ರಕ್ರಿಯೆಯು ಬಿರುಸಿನಿಂದ ನಡೆಯುತ್ತಿದೆ. ವದಿಯೋಗೌಡ್ರು ಇಬ್ಬರು ಮಕ್ಕಳೊಂದಿಗೆ ಎಲ್ಲಿಗೋ ಪಯಣ... ಯಾವುದೋ ದಾರಿ... ಎಂಬಂತೆ ಸನ್ಯಾಸದೀಕ್ಷೆಯತ್ತ ತಮ್ಮ ಚಿತ್ತ ನೆಟ್ಟರೆ, ಈ ತೆನೆ ಎಲ್ಲವೂ ಕ್ಲೀನ್ ಆಗಿಬಿಡುತ್ತದೆ ಎಂಬುದು ದಳವಾಯಿಗಳ ಅಂಬೋಣ.
ಇನ್ನೊಂದೆಡೆ ಕೆಸರು ಮೆತ್ತಿಕೊಂಡಿರುವ ಕಮಲವೂ ಕೂಡಾ ಪಕ್ಷ ಒಡೆಯೂರಪ್ಪ ಎಂಬ ಸ್ಥಿತಿ ತಲುಪಿದ್ದು, ಗಜದೀಶ್ ಮೆಟ್ಟರ್, ಡಿಯಚ್ ಕಿಂಕರಮೂರ್ತಿ ಮತ್ತು ಕೇಯಚ್ಚೀಶ್ವರಪ್ಪ ಅವರು ಈ ಕೊಳೆಯ ಕ್ಲೀನಿಂಗ್‌ಗಾಗಿ ದಿಲ್ಲಿ ದೊರೆಗಳ ಬಾಗಿಲು ಬಡಿದಿದ್ದಾರೆ.
ಇಂಥಹ ತ್ಯಾಜ್ಯ ವಿಸರ್ಜನೆಯ ಹಂತದಲ್ಲಿ ಕರ್ನಾಟಕದ ಮತದಾರರ ಮನೆ ಮನೆ ಬಾಗಿಲು ಆಗಾಗ ದಡಬಡನೆ ಸದ್ದಾಗುತ್ತಿದೆ.
ಮೂರು ವರ್ಷಗಳ ಹಿಂದೆ ಓಟು ಕೊಟ್ಟು ತಮ್ಮ ಪಾಡಿಗೆ ತಾವಿದ್ದ ಮತದಾರರು ಹೊರಗೋಡಿ ಬಂದಾಗ ಎಲ್ಲಾ ರಚ್ಚೆ, ಕೊಳಚೆಗಳು ಬಾಗಿಲಲ್ಲಿ ನಿಂತಿವೆ! ಇದು ವಿಧಾನಸಭೆಯ ವಿಸರ್ಜನೆಯ ಪರಿಣಾಮ ಎಂದು ಮನದಟ್ಟಾದ ಬಳಿಕ ಆಯ್ತಾಯ್ತು, ಓಟು ಕೊಡ್ತೇವೆ, ದಯವಿಟ್ಟು ನೀವು ಬೆಂಗಳೂರಲ್ಲೇ ಹೊಡೆದಾಡಿಕೊಂಡು, ಕೆಸರೆರಚಾಡುತ್ತಿರಿ, ಇಲ್ಯಾಕೆ ಬಂದು ತೊಂದರೆ ಕೊಡ್ತೀರಿ ಎಂದು ಕೇಳಲು ಸಿದ್ಧತೆ ಮಾಡಿರುವುದಾಗಿ ವರದಿಯಾಗಿದೆ.
4 ಕಾಮೆಂಟ್‌ಗಳು
ಹಾಗೆಯೇ, ಕರ್ನಾಟಕದಲ್ಲಿ ಈಗ ವಿಧಾನಸಭೆ ವಿಸರ್ಜನೆ ಆಗಿರುವುದರಿಂದ, ತಿಂಗಳಿಗೆ ಸುಮಾರು ೨೫ ಲಕ್ಷದಷ್ಟು ಹಣ ಉಳಿಯುವುದರಿಂದ ಇನ್ನು ಮುಂದೆ ನಮಗೆ ಯಾವುದೇ ಸರ್ಕಾರಗಳು ಬೇಡವೆಂದು ಕರ್ನಾಟಕದ ಹಳ್ಳಿ ಹೈದರ ನಿಯೋಗವೊಂದು ದೆಹಲಿಗೆ ಹೋಗುತ್ತಿರುವುದಾಗಿಯೂ ಒಂದು ವದಂತಿ ಹಬ್ಬಿದೆ. ಇದನ್ನು ತಿಳಿದ ವದೆಯೋಗೋಡರು ಜನರ ಮನಸ್ಸನ್ನು ಬದಲಾಯಿಸಲು ಕೇರಳದ ಮಾಂತ್ರಿಕರ ಮೊರೆ ಹೋಗಿದ್ದಾರೆಂದು ಗುಪ್ತಲೂಲಗಳಿಂದ ತಿಳಿದು ಬಂದಿದೆ. ಆದರೆ ವೇರಣ್ಣನವರು 'ಏನಾರ ಮಾಡ್ಕಳ್ಳಿ ಬಿಡು ಶಿವಾ, ನಂಗೆ ನನ್ನ ಮಕ್ಕಳಿಗಾಗೋಷ್ಟು ಆಗ್ಲೇ ಮಾಡಿ ಮಡಕ್ಕಂಡಿದೀನಿ' ಅಂದ್ರಂತೆ ಅನ್ನೋದನ್ನು ಹೆಸರು ಹೇಳಲಿಚ್ಛಿಸಿದ ಅವರ ಆಪ್ತವಲಯದ ಮಿತ್ರರೊಬ್ಬರು ಹೇಳಿದ್ದಾರೆ.
ಪ್ರತ್ಯುತ್ತರಅಳಿಸಿಹತ್ತು ದಿನಗಳ Net-ಸನ್ಯಾಸದ ನಂತರ, ’ಬಲೆ’ಗೆ ಮರಳಿದವನೇ ಮೊದಲು ’ಬೊಗಳೆ ಬಲೆ’ಯಲ್ಲಿಯೆ ಬಿದ್ದೆ. ವಿಧಾನಸಭೆಯ ವಿಸರ್ಜನೆಯ ಭೀಕರ ಪರಿಣಾಮವನ್ನು ಮನದಟ್ಟಾಗುವಂತೆ ವರ್ಣಿಸಿದ್ದೀರಿ. ನಮ್ಮ ಊರುಗಳಲ್ಲಿ ಈಗಾಗಲೆ ಡಿ.ಡಿ.ಟಿ, ಕೋಕಾ ಕೋಲಾ ಮುಂತಾದ ಕೀಟನಾಶಕಗಳನ್ನು ಸಿಂಪಡಿಸಲು ಪ್ರಾರಂಭಿಸಿದ್ದೇವೆ. ಈ ಪ್ರಾಣಿಗಳು ನಿಧಾನಸೌಧಕ್ಕೆ ಮರಳಿ ಹೋಗುವವರೆಗೆ,ಆ ಪರಮಾತ್ಮನೇ ನಮ್ಮನ್ನು ಕಾಪಾಡಬೇಕು.
ಪ್ರತ್ಯುತ್ತರಅಳಿಸಿರಾಧಾ ಅವರೆ, ಬೊಗಳೆಗೆ ಸ್ವಾಗತ.
ಪ್ರತ್ಯುತ್ತರಅಳಿಸಿನೀವು ಯಾವುದೇ ಸರಕಾರ ಬೇಡ ಅಂತ ಹೇಳಿ ರಾಜಕಾರಣಿಗಳ ದೊಡ್ಡ ಹೊಟ್ಟೆಗೆ ಕಲ್ಲು ಹಾಕುವ ಯೋಜನೆ ಹಾಕಿದ್ದೀರಿ. ಮತ್ತು ಮರಿಚಕ್ಕಳಿಗಾಗಿನ ಸಂಪಾದಿಸಿ ಭವಿಷ್ಯಕ್ಕೆ ತಯಾರಿ ಯೋಜನೆಯನ್ನೂ ಪ್ರಕಟಿಸಿದ್ದೀರಿ.
ನಿಮ್ಮನ್ನ ರಾಜಕಾರಣಿಗಳು ಆಪಹರಿಸುವ ಯೋಜನೆ ಇದೆ. ಎಚ್ಚರ ವಹಿಸುವುದೊಳಿತು.
ಸುಧೀಂದ್ರರೆ,
ಪ್ರತ್ಯುತ್ತರಅಳಿಸಿನೀವು ಬೊಗಳೆಗೆ ಬಲೆ ಹಾಕಿ ಅದಕ್ಕೆ ಡಿಡಿಟಿ ಸುರಿಯುವ ಉತ್ತಮ ಯತ್ನದಲ್ಲಿ ತೊಡಗಿದ್ದೀರಿ. ಕೀಟನಾಶಕಗಳ ಸ್ಟಾಕ್ ಖಾಲಿಯಾಗಿದೆ ಎಂಬ ಸುದ್ದಿಯನ್ನು ನಾವು ನಿಮಗೆ ಕೊಡುತ್ತಿದ್ದೇವೆ.
ಏನಾದ್ರೂ ಹೇಳ್ರಪಾ :-D