ಬೊಗಳೆ ರಗಳೆ

header ads

ನಾಯಿಪಾಡಿಗಾಗಿ ನಾಯಿಗೇ ತಾಳಿ ಕಟ್ಟಿದ!

(ಬೊಗಳೂರು ಮ್ಯಾರೇಜ್ ಬ್ಯುರೋದಿಂದ)
ಬೊಗಳೂರು, ನ.17- ನಾಯಿಯನ್ನು ಅದು ಕೂಡ ಹೆಣ್ಣು ನಾಯಿಯನ್ನು ಮದುವೆಯಾದ ಯುವಕನೊಬ್ಬ ತನ್ನ ಕ್ರಮವನ್ನು ಬೊಗಳೆ ರಗಳೆ ಎದುರು ಸಮರ್ಥಿಸಿಕೊಂಡಿದ್ದಾನೆ.

ತಾನು ಹಿರಿಯರು, ಅನುಭವಿಗಳ ಮಾತನ್ನು ಸದಾ ಪಾಲಿಸುತ್ತೇನೆ. ನಮ್ಮದು ಗಮಾರಸ್ವಾಮಿಯಂತಹ ಪಿತೃವಾಕ್ಯ ಪರಿಪಾಲಕರ ತಲೆಮಾರು. ಅಂತೆಯೇ ನಮ್ಮ ಹಿರಿಯರು ಹೇಳುತ್ತಿದ್ದುದು ಒಂದೇ... ಮದುವೆಯಾದವರದು ನಾಯಿಪಾಡು ಅಂತ. ಹಾಗಾಗಿ ನಾಯಿಯನ್ನೇ ಮದುವೆಯಾದರೆ ನಮ್ಮದು ಮನುಷ್ಯಪಾಡು ಆದೀತು ಎಂದು ಪ್ರಯೋಗ ಮಾಡಲು ಈ ರೀತಿ ಮಾಡಿರುವುದಾಗಿ ಆತ ತಿಳಿಸಿದ್ದಾನೆ.

ಅಲ್ಲದೆ ಎರಡು ನಾಯಿಗಳು ಮದುವೆಯಾಗುವುದಕ್ಕಿಂತ, ಒಂದು ನಾಯಿ ಒಂದು ಮನುಷ್ಯ ಮದುವೆಯಾದರೆ ಕನಿಷ್ಠ ಒಬ್ಬರ ಪಾಡು ಬದಲಾದೀತು ಎಂಬ ಪ್ರಯೋಗವೂ ತನ್ನ ಯೋಜನೆಯಲ್ಲಿ ಸೇರಿದೆ ಎಂದು ಆತ ತಿಳಿಸಿದ್ದಾನೆ.

ಇದಕ್ಕೆ ಹಲವಾರು ಉದಾಹರಣೆಗಳ ಮೂಲಕ ನಮ್ಮ ಒದರಿಗಾರರನ್ನು ಕಂಗೆಡಿಸಿದ ಅವರು, ಓದುಗರೂ ಕೂಡ ಮದುವೆಯಾಗುವ ಬಗ್ಗೆ ಹಿಂದೆ ಮುಂದೆ ಯೋಚಿಸುವಂತಹ ಬೆಚ್ಚಿ ಬೀಳಿಸುವ ಸಂಗತಿಗಳನ್ನು ಕೂಡ ಉಸುರಿದ್ದಾನೆ.

ನಮ್ಮಜ್ಜ ಮತ್ತು ಅಜ್ಜಿ (ಪ್ರತ್ಯೇಕವಾಗಿ ಕರೆದು) ಹೇಳುತ್ತಿದ್ದುದನ್ನು ಕೇಳಿಯೇ ಜೀವನದಲ್ಲಿ ಒಂದೇ ಮದುವೆ ಸಾಕಪ್ಪಾ... ತಾನು ಮತ್ತೊಮ್ಮೆ ಎಂದಿಗೂ ಮದುವೆಯಾಗುವುದಿಲ್ಲ ಎಂದು ನಿರ್ಧರಿಸಿರುವುದಾಗಿ ಆತ ಹೇಳಿದ್ದಾನೆ.

ನನಗೆ ದೆವ್ವ ಭೂತಗಳ ಬಗ್ಗೆ ಹೆದರಿಸ್ತೀಯಲ್ಲಾ... ಅವುಗಳು ಕಿಟಾರನೆ ಕಿರುಚುತ್ತವೆ ಎಂದೆಲ್ಲಾ ಹೇಳಿದ್ದೆಯಲ್ಲಾ... ಅದನ್ನು ನೋಡಬೇಕಿದ್ರೆ ಏನು ಮಾಡಬೇಕು ಅಂತ ನಾನು ಮತ್ತು ತಂಗಿ ಇಬ್ಬರೂ ಕೇಳಿದ್ದೆವು. ಆಗ ಅಜ್ಜ, "ಮದುವೆಯಾದ ನಂತರ ಎಲ್ಲವೂ ತಿಳಿಯುತ್ತದೆ" ಅಂತ ತಿಳಿಯುತ್ತದೆ ಎಂದು ಹೇಳಿದ್ದರು ಎಂಬ ಒಂದು ಉದಾಹರಣೆ ನೀಡಿದ.

ಮತ್ತೊಂದು ಬಾರಿ, ನಾವಿಬ್ಬರೂ ಬೆಳೆದು ದೊಡ್ಡವರಾದ ಬಳಿಕ ಶಾಲೆ ಕಾಲೇಜುಗಳಿಗೆ ಹೋಗುತ್ತಾ, ಬೊಗಳೆ ರಗಳೆ ಓದುತ್ತಾ ಇದ್ದೆವು. ಆಗ ಆರಂಭವಾದ ನಗು ಯಾವತ್ತೂ ನಿಂತಿರಲಿಲ್ಲ. ಈ ನಗು ರೋಗವೇ ಇರಬಹುದೇ ಅಂತ ಅಜ್ಜನಲ್ಲಿ ಕೇಳಿದ್ದೆವು. ಅದಕ್ಕೆ ಅವರು, ನಿಮ್ಮ ನಗು ನಿಲ್ಲಬೇಕಿದ್ದರೆ ನೀವು ಮದುವೆಯಾಗಬೇಕು ಎಂದೂ ಅಪೂರ್ವ ಸಲಹೆ ನೀಡಿದ್ದರು ಎಂಬ ಮತ್ತೊಂದು ಬಾಂಬ್ ಕೂಡ ಸಿಡಿಸಿದ.

ಈ ಎಲ್ಲಾ ಕಾರಣಗಳಿಂದಾಗಿ ತಾನು ಬೊಗ್ಗಿ (ಹೆಣ್ಣು ಶ್ವಾನ)ಗೆ ತಾಳಿ ಕಟ್ಟಿರುವುದಾಗಿ ಆತ ಹೇಳಿದ್ದಾನೆ. ತಾಳಿ ಕಟ್ಟುವ ಸಮಯದಲ್ಲಿ ಬೊಗ್ಗಿಯು ನಾಚಿ ನೀರಾಗಿತ್ತು. ಡಾಗ್ ಬಿಸ್ಕಿಟನ್ನು ಮತ್ತೊಬ್ಬರು ಅದರ ಎದುರಿನಲ್ಲಿ ಹಿಡಿದರು. ಹಾಗಾಗಿ ಅದನ್ನು ಆ ನಾಯಿ ತಿನ್ನುವ ಹವಣಿಕೆಯಲ್ಲಿದ್ದಾಗ, ತಾಳಿ ಕಟ್ಟಿ ಬಿಟ್ಟೆ ಎಂದು ತನ್ನ ಸಾಧನೆಯನ್ನಾತ ವಿವರಿಸಿದ್ದಾನೆ.

ಆದರೆ ಕುಟುಂಬ ಕಲ್ಯಾಣ ಯೋಜನೆ ಬಗ್ಗೆ ಬೊಗಳೆ ರಗಳೆ ಬಿಸಾಕಿದ ಪ್ರಶ್ನೆ ಹೆಕ್ಕಿಕೊಳ್ಳಲು ಆತ ನಿರಾಕರಿಸಿದ್ದಾನೆ. ಉತ್ತರಿಸದೆ ಪರಾರಿಯಾಗಿದ್ದಾನೆ ಎಂದು ತಿಳಿಸಲು ವಿಷಾದಿಸುತ್ತೇವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. ಬವ್,ವವ್,ಬವ್,ವವ್!
    .
    .
    ಕುಞ್,ಕುಞಿ,ಕುಞಿ,ಕುಞಿ!
    .
    .
    ಊSSSSSSಊSSSSS!
    :
    (ಇವು ಶ್ವಾನಪತ್ನಿಯು ತನ್ನ ಗಂಡನೊಡನೆ ನಡೆಸಿದ ಸಂಭಾಷಣೆಯ ತುಣುಕುಗಳು).
    ................
    ಪತಿರಾಯನ ಉತ್ತರ:
    ಹಚಾ, ಹಚಾ! ಥೂಥೂಥೂ,ಹಚಾ,ಹಚಾ!

    ಪ್ರತ್ಯುತ್ತರಅಳಿಸಿ
  2. ಜೀವನ ನಾಯಿಪಾಡಾದರೆ ನಾಯಿಗೆ ತಾಳಿಕಟ್ಟಬೇಕಾ? :o
    ಹಾಗಿದ್ರೆ ಜೀವನ ಕತ್ತೆಪಾಡಾದ್ರೆ ಕತ್ತೆಗೆ ತಾಳಿಕಟ್ಟಬೇಕಾ?

    ನಾಯಿಗೆ ತಾಳಿಕಟ್ಟಿದ ಮೇಲೆ ನಾಯಿ ಕಚ್ಚಿದರೆ, ಇಂಜಕ್ಷನ್ ತೆಗೆದುಕೊಳ್ಳೋ ಗೋಜಿಲ್ಲ ಅಲ್ವಾ? ಹೇಗಿದ್ರೂ ಅದಾಗಲೇ ಸ್ವಜಾತಿ ಆಗಿಹೋಗಿರತ್ತೆ ಅಥವಾ ತಾಳಿಕಟ್ಟಿದವನು ನಾಯಿಜಾತಿಗೆ ಸೇರಿಹೋಗಿರ್ತಾನೆ.

    ಪ್ರತ್ಯುತ್ತರಅಳಿಸಿ
  3. ಸುಧೀಂದ್ರರೆ,

    ಶ್ವಾನ ದಂಪತಿ ಸಂಭಾಷಣೆಯನ್ನು ಚೆನ್ನಾಗಿ ರೆಕಾರ್ಡ್ ಮಾಡಿದ್ದೀರಿ. ನೀವು ಸ್ಟಿಂಗ್ (ಬೈಟಿಂಗ್) ಆಪರೇಶನ್ನಿಗೆ ತುಂಬಾ ಪಳಗಿದವರು ಅಂತ ತೋರಿಸಿಕೊಟ್ಟಿದ್ದೀರಿ. ನಮ್ಮ ಬ್ಯುರೋಗೆ ಕುಟುಕು ವರದಿಗೆ ನಿಮ್ಮ ಹೆಸರನ್ನು ಶಿಫಾರಸು ಮಾಡುತ್ತೇವೆ.

    ಪ್ರತ್ಯುತ್ತರಅಳಿಸಿ
  4. ಶ್ರೀನಿವಾಸರೆ,
    ಇಂಜೆಕ್ಷನ್ ಉಳಿತಾಯ ಮಾಡಲೆಂದೇ ಆತ ಈ ರೀತಿ ಮಾಡಿದ್ದಾನೆ ಅಂತ ಬಯಲಿಗೆ ತಂದ ನಿಮಗೂ ಒಂದು ಒದರಿಗಾರಿಕೆ ಹುದ್ದೆ ನೀಡಲಿದ್ದೇವೆ. ಆದರೆ ಅದು ನೀವು ನಮಗೆ ಎಷ್ಟು ಕೊಡುತ್ತೀರಿ ಅನ್ನೋದರ ಮೇಲೆ ಡಿಪೆಂಡ್ ಆಗಿರುತ್ತೆ.

    ಪ್ರತ್ಯುತ್ತರಅಳಿಸಿ
  5. :)
    ತುಂಬ ಮಜವಾಗಿದೆ.

    ಆ ಮಹಾಶಯರು ನಾಯಿಯನ್ನು ಮದುವೆಯಾಗಿದ್ದರ ವರದಿಗಿಂತ ಅವರ ಸ್ಪಷ್ಟೀಕರಣವನ್ನು ನೀವು ರುಚಿಕಟ್ಟಾಗಿ ಬರೆದಿದ್ದೀರ. ಅಸತ್ಯದ ಮಜಾ ತಗೊಂಡು ತಗೊಂಡು ಸುಸ್ತಾಗಿ ಹೋಗಿದೀನಿ.. :)

    ಥ್ಯಾಂಕ್ಸ್
    ಸಿಂಧು

    ಪ್ರತ್ಯುತ್ತರಅಳಿಸಿ
  6. ಸಿಂಧು ಅವರೆ,

    ತುಂಬ ಮಜವಾಗಿದೆ, ಅದನ್ನು ಸೇವಿಸಿ ಸುಸ್ತಾಗಿದೆ ಅಂದಿದ್ದೀರಿ. ದಯವಿಟ್ಟು ಈ ಬಾರಿ ಕ್ಷಮಿಸಿ ಬಿಡಿ. ಇನ್ನು ಮುಂದೆ ಹಾಗಾಗದಂತೆ ನಮ್ಮ ಬ್ಯುರೋ ಕ್ರಮ ತೆಗೆದುಕೊಳ್ಳುತ್ತದೆ.

    ಬರ್ತಾ ಇರಿ, ಬರೀತಾ ಇರಿ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D