ಬೊಗಳೆ ರಗಳೆ

header ads

ದೇಶಾದ್ಯಂತ ಎಲ್ಲರೂ ದಿವಾಳಿ

(ಬೊಗಳೂರು ಬೌದ್ಧಿಕ ದಿವಾಳಿ ಬ್ಯುರೋದಿಂದ)
ಬೊಗಳೂರು, ನ.10- ದೇಶದೆಲ್ಲೆಡೆ ಎಲ್ಲರೂ ಭಕ್ತಿ, ಸಡಗರ, ಅಬ್ಬರದಿಂದ ದಿವಾಳಿಯಾಗುವ ಸಂಭ್ರಮದಲ್ಲಿರುವುದು ಬೊಗಳೂರಿನಲ್ಲಿಯೂ ಚುರುಕು ಮುಟ್ಟಿಸಿದೆ.

ಮಕ್ಕಳು ಪಟಾಕಿಗಳನ್ನು ಸುಟ್ಟಮೇಲೆ ಕೈಸುಟ್ಟುಕೊಂಡರೆ ಅವರ ಅಪ್ಪಂದಿರು ಕಿಸೆ ಸುಟ್ಟುಕೊಂಡು ಬಾಲ ಸುಟ್ಟಬೆಕ್ಕುಗಳಂತೆ ಅತ್ತಿಂದಿತ್ತ ಶಥಪಥ ಹಾಕುವ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು.

ಇದೇ ವೇಳೆ, ಈಗಾಗಲೇ ಕೇಂದ್ರ ಸರಕಾರವು ಆವಶ್ಯಕ ವಸ್ತುಗಳ ಬೆಲೆಯನ್ನು ಆಕಾಶ ಬುಟ್ಟಿಯಂತೆ ಮಾಡಿ ರಾಕೆಟ್ ಮೂಲಕ ಆಗಸಕ್ಕೆ ಉಡಾಯಿಸಿದ್ದರೆ, ದೇಶಾದ್ಯಂತ ಪ್ರಜೆಗಳು ಅದನ್ನು ನೋಡುತ್ತಾ ಭಕ್ತಿ ಸಡಗರದಿಂದ ಅಲ್ಲಿಂದಲೇ ಕೈ ಮುಗಿದು ತಮ್ಮ ಹತಾಶೆಯನ್ನು ಸಲ್ಲಿಸಿದರು.

ಪಟಾಕಿಗಳ ಬೆಲೆ, ತರಕಾರಿಗಳ ಬೆಲೆ, ಬೇಳೆ ಕಾಳುಗಳು, ಆಹಾರ ಇತ್ಯಾದಿ ಬದುಕುವುದಕ್ಕೆ ಬೇಕಾಗಿರುವ ಬೆಲೆಗಳೆಲ್ಲವೂ ಆಕಾಶದಲ್ಲೇ ನಕ್ಷತ್ರಗಳಂತೆ ಬೆಳಗುತ್ತಿರುವುದರಿಂದಾಗಿ ಎಲ್ಲಾ ಪ್ರಜೆಗಳು ಕೂಡ ಆಗಸದತ್ತ ದೃಷ್ಟಿ ನೆಡುವ ಮೂಲಕ ದೀಪಾವಳಿಯ ಆಚರಣೆಯ ಧನ್ಯತೆ ಪಡೆದರು ಎಂದು ಗೊತ್ತಾಗಿದೆ.

ಅಂತೆಯೇ, ಒಂದು ಚೀಲ ತುಂಬಾ ಹಣದ ನೋಟುಗಳನ್ನು ತುಂಬಿಕೊಂಡು, ಅದಕ್ಕೆ ಶರಟಿನ ಜೇಬು ತುಂಬಾ ದೊರೆತ ಪಟಾಕಿಗಳನ್ನು ತರುವಷ್ಟರಲ್ಲಿ ಸಾಕು ಸಾಕಾಗಿ ಹೆಚ್ಚಿನವರು ಅಕ್ಷರಶಃ ದಿವಾಳಿ ಆಚರಿಸಿದರು ಎಂದು ಗೊತ್ತಾಗಿದೆ.

ಕೆಲವು ಪಟಾಕಿಗಳಂತೂ ಠುಸ್ ಠುಸ್ ಎನ್ನುತ್ತಲೇ ಇದ್ದುದರ ಹಿಂದೆ ಇರಬಹುದಾದ ಕಾರಣ ಏನು ಎಂದು ಸಂಶೋಧಿಸಿದಾಗ, ಈ ಬಾರಿ ಕೆಲವು ಪಟಾಕಿ ಕಂಪನಿಗಳು ಬಾಲ ಕಾರ್ಮಿಕರನ್ನು ಬಳಸಿಲ್ಲದಿರುವುದೇ ಕಾರಣ ಅಂತ ತಿಳಿದುಬಂತು. ಬಾಲ ಕಾರ್ಮಿಕರಾದರೆ ಶ್ರದ್ಧೆಯಿಂದ ದುಡಿಯುತ್ತಿದ್ದರು, ಆದರೆ ಈ ಬಾರಿ ಪಟಾಕಿಗೆ ಮದ್ದು ತುಂಬಿದ್ದು "ವ್ಯವಹಾರ"ದಲ್ಲಿ ಬಲಿತು ಪಳಗಿದ ದೊಡ್ಡ ಮಕ್ಕಳೇ ಆದುದರಿಂದ ಪಟಾಕಿಗಳು ಠುಸ್ ಆಗಿದ್ದವು.

(ಬೊಗಳೆ ರಗಳೆಗೆ ಇಣುಕಿ ಹೆಣಕಿ, ಕೆಣಕಿ ಬಂದು ಹೋಗುವ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.)

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. ಈ ಸಲದ ದಿವಾಳಿಯಂದು ಠುಸ್ ಎಂದ ಕೆಲವು ಪಟಾಕಿಗಳು:
    ೧)ವೇದೆಗೌಡ ಅಟಮ್ ಬಾಂಬ್
    ೨)ಗರಮಾ-ಗರಮ್ ಮತಾಪು
    ೩)ಒದೆಯೂರುಣ್ಣ ಸಿಂಹಾಸನ ಚಕ್ರ

    ದೀಪಾವಳಿಯು ಬೊಗಳೆ-ರಗಳೆ ಸೊಂಪಾದಕರುವಿಗೆ , ಎಲ್ಲ ಓಡುಗರಿಗೆ, ಮುಖ್ಯವಾಗಿ ಕರ್-ನಾಟಕದ ಪ್ರಜೆಗಳಿಗೆ ರಂಜನೆ ಒದಗಿಸುತ್ತಿರುವ ಜಾರಕಾರಣಿಗಳಿಗೆ ಹ್(+ಉ)ರುಪು ನೀಡಲಿ.

    ಪ್ರತ್ಯುತ್ತರಅಳಿಸಿ
  2. ನಮಸ್ಕಾರ. ದಿವಾಳಿಯ ಲೇಖನ ಚೆನ್ನಾಗಿದೆ.
    ಇತ್ತೀಚೆಗೆ ಬೊಗಳೆ-ರಗಳೆಗೆ ಇಣುಕಿ ನೋಡುವ ಚಟ ನಮ್ಮದಾಗಿದೆ. ಈ ಚಟದ ನಿಮಿತ್ತ , ಕ್ಷಮ್ಸಿ, ದೀಪಾವಳಿಯ ನಿಮಿತ್ತ ನಿಮಗೆ ಶುಭ ಹಾರೈಸುವೆ.
    ವಿಸೂ. ಅದು ಶಥಪಥ ಅಲ್ಲ ಶತಪಥ ಎಂದು ನನ್ನ ಅನಿಸಿಕೆ.
    --ವಿಜಯ.

    ಪ್ರತ್ಯುತ್ತರಅಳಿಸಿ
  3. ಸುಧೀಂದ್ರರೇ,

    ವೇದೇಗೌಡರ ಆಟದ ಬಾಂಬು ಸ್ವಲ್ಪ ನಿಧಾನವಾಗಿ ಸಿಡಿಯುತ್ತದೆ ಎಂಬುದು ನಮ್ಮ ಬ್ಯುರೋಗೆ ಗೊತ್ತಾಗಿದೆ. ಸ್ವಲ್ಪ ದಿನ ಕಾಯಿರಿ.

    ಪ್ರತ್ಯುತ್ತರಅಳಿಸಿ
  4. ವಿಜಯರೇ,

    ನಮ್ಮ ಬೊಗಳೂರಿನ ಬೊಗಳೆ ತಾಣಕ್ಕೆ ಸ್ವಾಗತ.

    ನೀವು ಶತಪಥ ಹಾಕುತ್ತಿದ್ದುದು ನಿಜವೇ ಆದರೂ, ನಾವು ಅದನ್ನು ಒತ್ತಿ ಒತ್ತಿ ಶಥ ಪಥ ಎಂದೇ ಹೇಳುತ್ತಿದ್ದೇವೆ. ಯಾಕೆಂದರೆ ಅವರು ಅಷ್ಟೊಂದು ಧಾವಂತದಿಂದ ಅಡ್ಡಾಡುತ್ತಿದ್ದರು.

    ಇರಲಿ, ನಮಗೆ ಅಶುಭ ಹಾರೈಸಿದ್ದು ಕೇಳಿ ಸಂತೋಷವಾಗಿದೆ. ಇಣುಕಿ ನೋಡುವ ಚಟ ಮುಂದುವರಿಸಿ....

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D