ಬೊಗಳೆ ರಗಳೆ

header ads

ಬೊಗಳೂರು: ಕರ್ನಾಟಕ ಫಾರ್ಮೇಶನ್ ಡೇ!

[ಬೊಗಳೆ ರಗಳೆಯ ಓದುಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು]
(ಬೊಗಳೂರು ಸೊಂಪಾದ-ಕರುವಿನ ಬ್ಯುರೋದಿಂದ)
ಬೊಗಳೂರು, ನ.1- ನಮ್ಮೆಲ್ಲರ ಹೆಮ್ಮೆಯ, ಹೊನ್ನಿನ ನುಡಿ "ಕನ್ನಡ" ಎಂಬುದು ಬೊಗಳೆ ರಗಳೆ ಬ್ಯುರೋಗೆ ಇಂದಷ್ಟೇ ಜ್ಞಾಪಕಕ್ಕೆ ಬಂದಿದೆ. ಇದಕ್ಕೆ ಕಾರಣವೆಂದರೆ, ಯಾರೋ ಬೆಳ್ಳಾಂಬೆಳಗ್ಗೆ ಎದ್ದು "Happy KARNATAKA formation day" ಅಂತ ಎಸ್ಸೆಮ್ಮೆಸ್ ಮಾಡಿ, ಸುದೀರ್ಘ ಕಾಲದಿಂದ ಸೊಂಪಾದ ನಿದ್ರಾವಸ್ಥೆಯಲ್ಲಿದ್ದ ನಮ್ಮ ಬೊಗಳೂರಿನ ಬ್ಯುರೋ ಸೊಂಪಾದ-ಕರುವನ್ನು ಬಡಿದೆಬ್ಬಿಸಿದ್ದು.

ಎದ್ದ ತಕ್ಷಣ ಕನ್ನಡ ಕನ್ನಡ ಎಂದು ಕೂಗಾಡಲಾರಂಭಿಸಿದ ಸೊಂಪಾದಕರು, ಬೊಗಳೂರಿನ ನವೆಂಬರ್ ಕನ್ನಡ ಸಂಘ (ಇದು ಬೊಗಳೂರು ರಾಜಕೀಯ ಪಕ್ಷದ ಕನ್ನಡ ಪ್ರೇಮ ಘಟಕ) ಏರ್ಪಡಿಸಿದ್ದ ಸಮಾರಂಭಕ್ಕೆ ತನ್ನನ್ನು ಬೊಗಳೆ ಬಿಡಲು ಆಹ್ವಾನಿಸಿದ್ದಾರೆ ಎಂದು ನೆನಪಾಗಿದ್ದೇ ತಡ, ಗಡಗಡನೇ ನಡುಗಿದರಲ್ಲದೆ, ತಕ್ಷಣವೇ ಗಡಿಬಿಡಿಯಿಂದ ಬಡಬಡಿಸಿ ಎದ್ದು ಹಳದಿ ಅಂಗಿ, ಕೇಸರಿ ಪ್ಯಾಂಟು ಧರಿಸಿ ಓಟಕ್ಕಿತ್ತರು.

ಸಮಾರಂಭ ನಡೆಯುವ ಸ್ಥಳದಲ್ಲಿ ಅದಾಗಲೇ ಜನರು ನೆರೆದಿದ್ದರು. ಇದು ರಾಜಕೀಯ ಕಾರ್ಯಕ್ರಮವಾಗಿದ್ದುದರಿಂದ ವೇದಿಕೆ ಯಾವುದು- ಪ್ರೇಕ್ಷಕರ ಗ್ಯಾಲರಿ ಯಾವುದು ಎಂಬ ವ್ಯತ್ಯಾಸವೇ ಗೊತ್ತಾಗುತ್ತಿರಲಿಲ್ಲ. ಅತೀ ಹೆಚ್ಚು ಜನರು ಕುರ್ಚಿ ಹಾಕಿಕೊಂಡು ಸುಖಾಸೀನರಾಗಿರುವುದೇ ವೇದಿಕೆ ಇರಬಹುದು ಎಂದು ಸರಿಯಾಗಿಯೇ ಗ್ರಹಿಸಿದ್ದ ಸೊಂಪಾದಕರು, ತಕ್ಷಣವೇ ಅಲ್ಲಿದ್ದ ಒಂದು ಮೈಕನ್ನು ತಮ್ಮ ಬಾಯಿಯೊಳಗೆ ಇರಿಸಿಕೊಂಡರು.

"ಕನ್ನಡ ಪ್ರೇಮಿಗಳೇ, ನಾವೆಲ್ಲಾ ಕನ್ನಡವನ್ನು ಪ್ರೀತಿಸಬೇಕು, ಕನ್ನಡ ಭಾಷೆಗೆ ಆತಂಕ ಎದುರಾಗಿದೆ, ಅದಕ್ಕೆ ಕುತ್ತು ಬಂದಿದೆ. ಅದನ್ನು ರಕ್ಷಿಸಬೇಕು, ಅದನ್ನು ಜೋಪಾನವಾಗಿ ಕಾಯ್ದಿಡಬೇಕು" ಎಂದು ರಾಜಕಾರಣಿಗಳ ಬಾಯಲ್ಲಿ ಪ್ರತಿ ನವೆಂಬರ್ ತಿಂಗಳಲ್ಲಿ ಕೇಳಿಬರುವ ಮಾತನ್ನೇ ಹೇಳುತ್ತಾ, ಒಂದು ಹೆಜ್ಜೆ ಮುಂದೆ ಹೋಗಿ... "ಹೆಚ್ಚು ಹೆಚ್ಚು ಬಳಸಿದರೆ ಈ ಕನ್ನಡ ಎಂಬುದು ಸವೆಯಬಹುದು. ಅದಕ್ಕಾಗಿ ಅದನ್ನು ಗಟ್ಟಿಯಾಗಿ, ಭದ್ರವಾಗಿ ಕಟ್ಟಿಡಬೇಕು, ಅದಕ್ಕೆ ಭದ್ರತೆ ನೀಡಬೇಕು" ಎಂದೆಲ್ಲಾ ಕಿರುಚಾಡಿದ ತಕ್ಷಣವೇ, ಪ್ರೇಕ್ಷಕರ ಗ್ಯಾಲರಿಯಿಂದ ಕರತಾಡನ, ಕೂಗಾಟದ ಸುರಿಮಳೆಯೇ ಸುರಿಯಿತು. ಆಹಾ, ಬಣ್ಣ ಬಣ್ಣದ ಹೂವುಗಳು ವೇದಿಕೆಯತ್ತ ಧಾವಿಸಿ ಬರುತ್ತಿವೆ, ಜನ ಸಂತುಷ್ಟರಾಗಿ ಪುಷ್ಪಾರ್ಚನೆ ಮಾಡಿದ್ದಾರೆ ಎಂಬುದರಿಂದ ಸಂತಸಗೊಂಡ ಸೊಂಪಾದಕರು ಇನ್ನೇನು, ಮಾತು ಮುಂದುವರಿಸಲಿದ್ದರು.

ಠಣ್ಣ್‌ಣ್... ಅಂತ ಸದ್ದು ಕೇಳಿಸಿತು. ಎಲ್ಲೋ, ತಮ್ಮ ಕೈಯಲ್ಲಿದ್ದ ಮೈಕ್ ಕೆಳ ಬಿದ್ದಿರಬೇಕು ಅಂತ ಗ್ರಹಿಸಿದರು. ಅರೆ, ಅದೇನೋ ತಲೆಯೂ ಒದ್ದೆಯಾದಂತಿದೆಯಲ್ಲಾ... ಪ್ರೇಕ್ಷಕರು ಅಭಿಷೇಕವನ್ನೂ ಮಾಡಿರಬೇಕು ಅಂತ ಮತ್ತಷ್ಟು ಉಬ್ಬಿಹೋದರು. ತಮ್ಮ ಬೋಳು ತಲೆಯ ಮೇಲೆ ಕೈಯಾಡಿಸಿ ನೋಡಿದಾಗ ಅವರಿಗೆ ವಿಷಯದ ಅರಿವಾಯಿತು. ಪ್ರೇಕ್ಷಕರ ಗ್ಯಾಲರಿಯಿಂದ ಪುಷ್ಪವೃಷ್ಟಿಯಾದದ್ದಲ್ಲ, ನಿನ್ನೆ ದಿನ ಮಾರುಕಟ್ಟೆಯಲ್ಲಿ ಒಂದು ವಾರದಿಂದ ಮಾರಾಟವಾಗದೆ ಉಳಿದಿದ್ದ ಕೊಳೆತ ಟೊಮೆಟೋ ಮತ್ತು ಕೊಳೆತ ಮೊಟ್ಟೆಗಳನ್ನು ಯಾರೋ ತಮ್ಮ ಭಾಷಣಕ್ಕಾಗಿಯೇ "ಮೀಸಲಿಟ್ಟು", ಇಲ್ಲಿಗೆ ತಂದಿದ್ದರಂತೆ.

ಅದರ ಜತೆ ಕೆಲವು ಕಲ್ಲುಗಳನ್ನೂ ಸೇರಿಸಿದ್ದರಿಂದ, ಟೊಮೆಟೋ, ಮೊಟ್ಟೆ ರಸದ ಜತೆಗೆ ತಮ್ಮ ಬೊಕ್ಕ ತಲೆಯಿಂದ ಚಿಮ್ಮಿದ ನೆತ್ತರು ಕೂಡ ಮಿಶ್ರಣವಾಗಿ ಅತ್ಯದ್ಭುತ ಪಾಕವಾಗಿ ಹೋಗಿತ್ತು. ಮೇಲಿಂದ ಒಸರುತ್ತಿದ್ದ ಈ ರಸಪಾಕವನ್ನು ನಾಲಿಗೆಯನ್ನು ಒಂದಿಷ್ಟು ಹೊರ ಹಾಕಿ, ಅಲ್ಲಿಂದಲೇ ಸವರಿಕೊಂಡ ಸೊಂಪಾದಕರು, ಮರಳಿ ಮನೆಗೆ ಬಂದು, ತಮ್ಮ ಭೀಷಣ ಭಾಷಣ ಪ್ರಕ್ರಿಯೆಯ ಮೊದಲರ್ಧ ಭಾಗವನ್ನೇ ಮೆಲುಕು ಹಾಕುತ್ತಾ, ಮುಸುಕೆಳೆದುಕೊಂಡರು. ತಪ್ಪಿಯೂ ಮುಂದಿನ ಭಾಗವನ್ನು ನೆನಪಿಸಿಕೊಳ್ಳಲಿಲ್ಲ ಎಂದು ತಿಳಿದುಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

  1. ಇದೀಗ ಕರ್-ನಾಟಕದಲ್ಲಿ ಯಾವುದೇ ಸಾರ್ವಜನಿಕ ಕಾರ್ಯಕ್ರಮಕ್ಕೂ,ಪ್ರೇಕ್ಷಕರು ಟೊಮ್ಯಾಟೊ, ಮೊಟ್ಟೆ ಇತ್ಯಾದಿ ರಸವತ್ತಾದ ವ್ಯಂಜನಗಳನ್ನು ಒಯ್ಯುತ್ತಾರೆನ್ನುವದು ನಿಮಗೆ ಗೊತ್ತಿಲ್ಲವೆ, ಅಸತ್ಯ ಅನ್ವೇಷಿಗಳೆ? ಇದೆಲ್ಲ ಭೀಷಣಕಾರರ ಮೇಲಿನ ಪ್ರೀತಿಯಿಂದಲೆ! ಹೀಗಾಗಿ ಈಗೀಗ ಎಲ್ಲ ಭೀಷಣಕಾರರು ಸಭೆಗಳಿಗೆ ಹೆಲ್-ಮೇಟ್ ಹಾಕಿಕೊಂಡೆ ಹೋಗುತ್ತಾರೆ. ನೆನಪಿನಲ್ಲಿಟ್ಟುಕೊಳ್ಳಿಯಪ್ಪ!

    ಪ್ರತ್ಯುತ್ತರಅಳಿಸಿ
  2. ಕೊಳೆತ ಮೊಟ್ಟೆ,ಟೊಮ್ಯಾಟೊಗಳಿಗೆ ಈಗ ಬೇಡಿಕೆ ಹೆಚ್ಚಾಗಿರುವಾಗ ಬಡಪಾಯಿ ಸೊಂಪಾದಕರ ಮೇಲೆ ಅದನ್ನು ಸುರಿದು ವ್ಯರ್ಥ ಮಾಡಿದ್ದು ಸ್ವಲ್ಪವೂ ಸರಿಯಲ್ಲ.

    ಅನ್ವೇಷಿಗಳೇ, ರಾಜ್ಯೋತ್ಸವ ಶುಭಾಶಯಗಳು.

    ಪ್ರತ್ಯುತ್ತರಅಳಿಸಿ
  3. hehehehe...ಬರೀ ಮೊಟ್ಟೆ, ಟೊಮೋಟೋ ತಾನೇ....ಹೂವಿನ ಜೊತೆ ಹೂ ಕುಂಡ ಯಾರೂ ಹಾಕಿಲ್ಲವಲ್ಲ ಅದಕ್ಕೆ ಖುಷಿ ಪಡಬೇಕು!

    ಪ್ರತ್ಯುತ್ತರಅಳಿಸಿ
  4. ಸುಧೀಂದ್ರರೇ,

    ರಾಜಕೀಯ ಅಂದರೆ ಹೇಲ್ ಮೆಟ್ಟೋ ಆಟ ಅಂತಲೇ ಸಿದ್ಧಪ್ರಸಿದ್ಧ ಮಾಡಿಸಿಕೊಟ್ಟಿದ್ದಾರೆ ಈ ಅವಕಾಶವಾದಿಗಳು. ಒಟ್ಟಿನಲ್ಲಿ ಅವರೆದುರು ಹೋದಲ್ಲಿ ನವರಸಗಳೂ ಸಿಗುತ್ತವೆ. ಖಂಡಿತವಾಗಿಯೂ ತಲೆಗೆ ಒಂದು ಪಾತ್ರೆ ಹಾಕಿಕೊಂಡೇ ಹೋಗುತ್ತೇವೆ. ತಲೆ ಒಡೆಯುವುದನ್ನು ತಡೆಯುವುದಕ್ಕೂ ಆಯಿತು, ಸಾಕು ಬೇಕಾಗುವಷ್ಟು ಮನೆಗೆ ಒಯ್ಯಲೂ ಆಯಿತು.

    ಪ್ರತ್ಯುತ್ತರಅಳಿಸಿ
  5. ಶ್ರೀ ತ್ರೀ ಅವರೆ,

    ಬೇಡಿಕೆ ಹೆಚ್ಚಾದರೂ ಬೆಲೆ ಇಳಿಯದಿರುವುದು ನಮ್ಮ ರಾಜಕಾರಣಿಗಳ ಇಚ್ಛಾಶಕ್ತಿಯ ಪ್ರತೀಕ. ಹಾಗಿರುವಾಗ ನಮ್ಮ ಸೊಂಪಾದಕರು ಕೂಡ ಅಮೂಲ್ಯವಾದ ಅಭಿಷೇಕ ಪಡೆದಿದ್ದಾರೆ ಅಂತ ಸಂತಸ ಪಡ್ತೀವಿ.

    ನಿಮಗೂ ರಾಜ್ಯೋತ್ಸವ ಶುಭಾಶಯಗಳು

    ಪ್ರತ್ಯುತ್ತರಅಳಿಸಿ
  6. ಸುಶ್ರುತರೇ

    ನೀವು ಕನ್ನಡದ ರಾಜಧಾನಿಯಲ್ಲಿರುವಂತೆ ತೋರುತ್ತಿರುವುದರಿಂದ ಇಡೀ ನವೆಂಬರ್ ತಿಂಗಳನ್ನು ನಿಮಗೇ ಕೊಟ್ಟು ಬಿಡುತ್ತೇವೆ. ಶುಭಾಶಯಗಳು.

    ಪ್ರತ್ಯುತ್ತರಅಳಿಸಿ
  7. ಅನಾನಸ್ ರಸದವರೆ,
    ಹೂವಿನ ಕುಂಡವನ್ನೇ ಎತ್ತಿಕೊಂಡಿದ್ದೀವಿ ನಾವು. ಅದರಲ್ಲಿ ಅನಾನಸ್ ರಸವನ್ನೂ, ಟೊಮೆಟೋ-ಮೊಟ್ಟೆ ಮಿಶ್ರಣವನ್ನೂ ಹಾಕಿ...ಕಲಸಿ ರಾಜಕೀಯದ ಮೇಲೋಗರ ಮಾಡಲು ನಿರ್ಧರಿಸಿದ್ದೇವೆ. ನೀವು ಟೇಸ್ಟ್ ನೋಡುವಿರಾ???

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D