ಬೊಗಳೆ ರಗಳೆ

header ads

ವದಿಯೋಗೌಡ್ರ ಚಿತ್ತ ಅಂಪೈರ್ ಆಗುವತ್ತ!

[ಅರಾಜಕೀಯದ ತುರ್ತು ವಿಶ್ಲೇಷಣೆ]
ರ್ನಾಟಕವು ಚಪ್ಪಲಿ ರಾಜಕೀಯದಿಂದ ಹಿಡಿದು ಮಸಿ ರಾಜಕೀಯ, ಕೆಸರು ರಾಜಕೀಯ, ಕೊಳಚೆ ರಾಜಕೀಯ ಮುಂತಾದ ರಾಜಕಾರಣದ ಶ್ರೇಷ್ಠಾತಿಶ್ರೇಷ್ಠ ರೂಪಗಳನ್ನು ಹೊಂದಿರುವ ಛೀ-ಥೂ ರಾಜಕೀಯಗಳನ್ನು ಕಂಡಿದೆ. ಈ ಛೀ-ಥೂ ಧಾರಾವಾಹಿಯ ಮುಂದುವರಿದ ಮತ್ತು ಮುಗಿಯಲಾರದ ಭಾಗವೇ "ಒಪ್ಪದ ಒಪ್ಪಂದ".

ಮೇಲೇರಲು ಕಾರಣರಾದವರು ಮೇಲೇರಿದವರಿಂದಲೇ ತುಳಿಯಲ್ಪಟ್ಟು, ಪಕ್ಷದಿಂದಲೇ ಉಚ್ಚಾಟಿಸಲ್ಪಡುವ ಮೌಲ್ಯಾಧಾರಿತ ರಾಜಕಾರಣಕ್ಕೆ ಕರ್ನಾಟಕದಲ್ಲಿ ಮೊದಲು ಬಲಿಯಾಗಿದ್ದು ರಾಮಕೃಷ್ಣ ಹೆಗಡೆ. ಅಂದಿನಿಂದ ಇಂದಿನವರೆಗೆ ಮಣ್ಣಿನ ಮಗನ ಈ ಜೈತ್ರ ಯಾತ್ರೆಯಲ್ಲಿ ಹಲವಾರು ಮಂದಿ - ರಾಜಕೀಯಕ್ಕೆ ನಾಲಾಯಕ್ ಆಗಿರುವ ನೀತಿ ನಿಯಮಾವಳಿಗಳನ್ನು, ಕಾರ್ಯನಿಷ್ಠೆಯನ್ನು ಪ್ರದರ್ಶಿಸಿದವರು- ಇನ್ನಿಲ್ಲದಂತೆ ನಾಶವಾಗಿದ್ದಾರೆ. ಈ ರಾಜಕೀಯಕ್ಕೆ ಬಲಿಯಾದವರಲ್ಲಿ ಹೆಗಡೆ, ಸಿಂಧ್ಯಾ, ಸಿದ್ದರಾಮಯ್ಯ, ಧರ್ಮ ಸಿಂಗ್ ಮುಂತಾದ ಬಲಿಪಶುಗಳು ಕಣ್ಣಿಗೆ ರಾಚುವಂತೆ ನಮ್ಮ ಮುಂದಿವೆ.

ಇದೀಗ ಟ್ವೆಂಟಿ20 ಕ್ರಿಕೆಟ್ ಎಂಬ ಅಮೂಲ್ಯವಾದ ಮನರಂಜನಾ ನಾಟಕದಲ್ಲೂ ಕರುನಾಟಕದ ಬಡತೆರಿಗೆದಾರರು ಪುಕ್ಕಟೆ ಮನರಂಜನೆ ಪಡೆಯುತ್ತಿರುವುದು ಚೌಚೌ ರಾಜಕೀಯದ ಹೊಸ ಕೊಡುಗೆ. ಇದಕ್ಕೆ ವದಿಯೋಗೌಡರು ಕೊಡುವ ಕಾರಣ ಕೂಡ ಒಪ್ಪತಕ್ಕದ್ದೇ. ರಾಜ್ಯದ ಜನತೆ ಇಷ್ಟೊಂದು ಓಟು ಕೊಟ್ಟು ನಮ್ಮನ್ನು ಆರಿಸಿದ್ದಾರೆ, ಅವರು ಬೇಕಾಬಿಟ್ಟಿಯಾಗಿ ತೆರಿಗೆಯನ್ನೂ ಪಾವತಿಸಿ, ನಮ್ಮ ಐಷಾರಾಮಿ ಜೀವನಕ್ಕೆ ಕಾರಣಕರ್ತರಾಗಿದ್ದಾರೆ. ಬೆವರು ಸುರಿಸಿ ಹಣ ಸಂಪಾದಿಸಿ, ಮತ್ತು ಕರ್-ನಾಟಕದ ದೃಶ್ಯಾವಳಿಗಳನ್ನು ನೋಡಿ ಜೀವನದಲ್ಲಿ ಬೆಂದು ನೊಂದು ಬೇಸತ್ತಿರುವ ಅವರ ಮೈ-ಮನಗಳಿಗೆ ಸ್ವಲ್ಪವಾದರೂ ಮನರಂಜನೆ ದೊರೆಯದಿದ್ದರೆ ಹೇಗೆ? ಈ ಕಾರಣಕ್ಕೆ ನಾವು ಈ ನಾಟಕ ಪ್ರದರ್ಶನ ಏರ್ಪಡಿಸಿದ್ದೇವೆ ಎಂದು ವದಿಯೋಗೌಡರು ಬೊಗಳೆ ರಗಳೆ ಬ್ಯುರೋಗೆ ಮಾತ್ರವೇ ತಿಳಿಸಿದ್ದಾರೆ.

"ಆ ನನ್ಮಗ ಕುಮಾರ, ಕಾಂಗ್ರೆಸಿಗೆ ಅದರದ್ದೇ ಚಿಹ್ನೆಯಾಗಿರುವ "ಕೈ" ಕೊಟ್ಟು, ತನ್ನೆರಡೂ ಕರಗಳಲ್ಲಿ "ಕಮಲ"ಳನ್ನು ಅಪ್ಪಿಕೊಳ್ಳುವಾಗ ನನ್ನನ್ನೊಂದ್ಮಾತು ಕೇಳಿಲ್ಲ. ಅವ್ನು ನನ್ಮಗನೇ ಅಲ್ಲ, ನಿದ್ದೆ ಮಾಡಿದ್ರಿಂದಾಗಿಯೇ ಪ್ರಧಾನಿ ಪಟ್ಟ ಕೈತಪ್ಪಿ ಹೋದಾಗಲೂ ಇಷ್ಟು ಬೇಜಾರಾಗಿರಲಿಲ್ಲ. ಇದು ಅತ್ಯಂತ ಕರಾಳ ದಿನ" ಅಂತ ಅತ್ತೂ ಕರೆದು, ಮೌನ ವ್ರತ ಧಾರಣೆ ಮಾಡಿದಂತಿದ್ದ ಒದಿಯೋಗೌಡ್ರು, ಇದೀಗ ಪ್ರಧಾನಿ ಪಟ್ಟ ಹೋದಾಗ ನೀಡಿದ್ದ ಮಾತನ್ನೊಂದು ಅಚಾನಕ್ಕಾಗಿ ನೆನಪಿಸಿಕೊಂಡಿದ್ದಾರೆ.

ಅದೆಂದರೆ, "ಧೂಳಿನಿಂದ ಮೇಲೆದ್ದು ಬರುವೆ" ಎಂಬ ಭೀಷ್ಮ ಪ್ರತಿಜ್ಞೆ. ಆದರೆ ಧೂಳಿನಿಂದ ಮೇಲೆದ್ದು ಬರಲು, ಮತ್ತು ಧೂಳನ್ನು ಕೊಡವಿಕೊಳ್ಳಲು ಸಾಕಷ್ಟು ಧೂಳು ಇರಬೇಕು. ಅದಕ್ಕಾಗಿ ಕೊಳಚೆ ರಾಜಕೀಯದಲ್ಲಿ ಮುಳುಗಬೇಕು, ಅದು ಒಣಗಬೇಕು.- ಈ ಪ್ರಕ್ರಿಯೆ ಪೂರೈಸಿದರೆ, ಖಂಡಿತವಾಗಿಯೂ ಧೂಳಿನ ರಾಶಿಯು ಏರ್ಪಟ್ಟು, ಅದರೊಳಗಿಂದ ಎದ್ದು ಬಂದಲ್ಲಿ, ತನ್ನ ಪ್ರತಿಜ್ಞೆ ಈಡೇರಿದಂತೆ ಎಂದು ನಿರ್ಧರಿಸಿದ ಪರಿಣಾಮವೇ ಈ ಟ್ವೆಂಟಿ20 ಪಂದ್ಯ.

ಆದರೆ ಈ ಪಂದ್ಯದಲ್ಲಿ ಕೋಚ್ ಆಗಿದ್ದ ವದಿಯೋಗೌಡರು, ದಿಢೀರನೇ ಅಂಪೈರ್ ಪಾತ್ರ ವಹಿಸಿ, ಕುಮಾರಕಂಠೀರವನ ಇನ್ನಿಂಗ್ಸ್ ಮುಗಿದು ಔಟ್ ಆಗಬೇಕಿದ್ದರೂ, ನಾಟೌಟ್ ಎಂದು ಗೋಣಲ್ಲಾಡಿಸಿದ್ದು, ಬ್ಯಾಟಿಂಗ್ ಮುಂದುವರಿಸುವಂತೆ ಹೆಣಗಾಡುತ್ತಿರುವುದು ಮಾತ್ರ ಕರ್ನಾಟಕದ ಮುಕ್ಕೋಟಿ (ಈಗ ನಾಲ್ಕೈದು ಕೋಟಿ) ಕನ್ನಡಿಗರಿಗೆ ಹೊಸ ಮನರಂಜನೆಯ ವಿಷಯ ದೊರೆತಂತಾಗಿದೆ. ವದಿಯೋಗೌಡ್ರು ದಿಢೀರನೆ ಅಂಗಣಕ್ಕಿಳಿದ ಕಾರಣದಿಂದಾಗಿ ಪ್ರೇಕ್ಷಕರು "ಈ ಟ್ವೆಂಟಿ20 ಕ್ರಿಕೆಟಿನಲ್ಲಿ ಧುತ್ತನೆ ಕಾಣಿಸಿಕೊಂಡ ವದಿಯೋಗೌಡ ಯಾರು? ಅವರಿಗೇನು ಇಲ್ಲಿ ಕೆಲಸ? ಅವರಿಗೇನಿದೆ ಅಧಿಕಾರ?" ಎಂಬಿತ್ಯಾದಿ ಪ್ರಶ್ನೆಗಳು ಸಿಕ್ಸರ್‌ನಂತೆ ಮೇಲಕ್ಕೆ ಚಿಮ್ಮಿದ್ದರಿಂದ ಕಕ್ಕಾಬಿಕ್ಕಿಯಾಗಿದ್ದಾರೆ.

ಒಟ್ಟಿನಲ್ಲಿ ರಾಜ್ಯ-ಕಾರಣವು ಛೀ-ಥೂ, ಗಬ್ಬು, ಕೊಳಚೆ, ವ್ಯಾಕ್, ಆ...ಕ್ಷೀssss ಎಂಬ ಮಜಲುಗಳನ್ನು ದಾಟಿ, ಇದೀಗ "ದುರಂತ" ಎಂಬ ಹಂತಕ್ಕೆ ತಲುಪಿರುವುದು ಮತ್ತು ಈ ನಾಟಕದ ದೃಶ್ಯಗಳನ್ನು ದೆಹಲಿಯಲ್ಲೇ ಪ್ರದರ್ಶಿಸಬೇಕು ಎಂಬುದಾಗಿ ಎಲ್ಲ ಪಕ್ಷಗಳು ಈಗ ನಿರ್ಧರಿಸಿರುವುದು ಬಡ ಪ್ರಜೆಗಳಿಗೆ ಅತೀವ ಮನರಂಜನಾತ್ಮಕ ಸಂಗತಿಯಾಗಿದೆ. ಈ ಮಧ್ಯೆ, ಬೊಗಳೆ ಬ್ಯುರೋ ದೂರದ ತಮಿಳುಕಾಡಿನಲ್ಲಿದ್ದರೂ, ಗಬ್ಬುನಾತ ಎಲ್ಲಿಂದ ಬರುತ್ತಿದೆ ಎಂಬುದನ್ನು ಸಂಶೋಧನೆ ಮಾಡಲಾರಂಭಿಸಿದಾಗ ಈ ವಿಷಯಗಳು ಬೆಳಕಿಗೆ ಬಂದಿದೆ ಎಂಬುದು ಹೇಳಲೇಬೇಕಾದ ಸಂಗತಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

10 ಕಾಮೆಂಟ್‌ಗಳು

  1. ವದಿಯೋಗೌಡ್ರು, ವದೆತಿನ್ನಪ್ಪ ಇವರ ರಾಜಕೀಯ ನಾಟಕ ಬಂಬಾಟಾಗಿದೆ, ನಮಗಂತೂ ಸಕತ್ ಮನರಂಜನೆ. 100% ಉಚಿತ ಬೇರೆ. ನೀವು ಬರೋದಾದ್ರೆ ಹೇಳಿ. ಮುಂದಿನ ಸಾಲಿನಲ್ಲಿ ಜಾಗ ಹಿಡಿದುಕೊಳ್ತೀನಿ.

    ಪ್ರತ್ಯುತ್ತರಅಳಿಸಿ
  2. ದಾಳ ಶಕುನಿಗೌಡನ ಕೈಯಲ್ಲಿದೆ; ಪಗಡೆ ಕಾಯಿ ಹೆಂಗೆ ಬಿಡ್ತಾನೋ ನೋಡ್ತಾ ಇರಿ! ಒಟ್ಟಿನಲ್ಲಿ ಕುಮಾರ ಕೌರವಸ್ವಾಮಿಗೆ ಪಟ್ಟವಾಗಬೇಕು; ಪಾಂಡವರು ವನವಾಸಕ್ಕೆ ಹೋಗಬೇಕು. ಆದರೆ ದ್ರೌಪದಿ ಎನ್ನುವ ಈ ರಾಜ್ಯಸತಿಯ ವಸ್ತ್ರಾಪಹರಣ ತಪ್ಪಿಸುವ ಕೃಷ್ಣ ಎಲ್ಲಿದ್ದಾನೆ?

    ಪ್ರತ್ಯುತ್ತರಅಳಿಸಿ
  3. ಅನ್ವೇಷಿಗಳಿಗೆ,

    ನಮಸ್ಕಾರ.
    ಅಸತ್ಯಾನ್ವೇಷಣೆಯ ಭರದಲ್ಲಿ, ನೀವು ಹಾದಿ ತಪ್ಪಿದಂತಿದೆ.
    ಕರ್-ನಾಟಕದಲ್ಲಿ ನಡೆಯುತ್ತಿರುವುದು ಅತೀವ ಮನರಂಜನಾತ್ಮಕ ಸಂಗತಿ ಎಂಬ ಸತ್ಯವನ್ನು ಹೊರಗೆಡವಿದ್ದೀರಲ್ಲಾ?!

    ವಂದನೆಗಳೊಂದಿಗೆ,

    "ವಿ.ವಿ."

    ಪ್ರತ್ಯುತ್ತರಅಳಿಸಿ
  4. 20-20 with BJP, 10-10 with congress, then 5-5 with BJP...2.5,2.5 with.........

    ಪ್ರತ್ಯುತ್ತರಅಳಿಸಿ
  5. ವೀಕ್ಷಕರೆ,

    ನಿಮ್ಮ ಆಹ್ವಾನವನ್ನು ನಾವು ಸ್ವೀಕರಿಸುತ್ತಿದ್ದೇವೆ. ಮುಂದಿನ ಸಾಲಿನಲ್ಲಿ ಜಾಗ ಕೊಡೋದಾದ್ರೆ, ಮೊದಲ 20 ತಿಂಗಳು ನಮಗೇ.... ಆಮೇಲೂ ನಾವು ಆ ಜಾಗ ಬಿಟ್ಟು ಕೊಡೋದು, ಬಿಡೋದರ ಬಗ್ಗೆ ನಮ್ಮಪ್ಪ, ನಮ್ಮಜ್ಜ, ತಾತ, ಮುತ್ತಾತರನ್ನೆಲ್ಲಾ ಕೇಳಿ, ಆಮೇಲೆ ಸ್ವತಃ ನಮ್ಮನ್ನೂ ಕೇಳಿ ನಿರ್ಧಾರ ತಗೋತೀವಿ.

    ಪ್ರತ್ಯುತ್ತರಅಳಿಸಿ
  6. ಸುಧೀಂದ್ರರೆ,
    ಇಲ್ಲಿ ಅಧಿಕಾರ ಮದವೂ, ಮತ್ಸರವೂ ಸೇರಿಕೊಂಡಿದೆ. ಅದರ ಜತೆಗೆ ಸ್ಥಳೀಯ ಸಂಸ್ಥೆ ಚುನಾವಣೆ ವಿಜಯದ ಅಮಲೂ ನೆತ್ತಿಗೇರಿದೆ. ಹಾಗಾಗಿ ಗೌಡರನ್ನು ತಡೆಯೋರೂ ಯಾರೂ ಇಲ್ಲ... ಅಂತ ಹಾಡುವಿಕೆ ಆರಂಭವಾಗಿದೆ.

    ಪ್ರತ್ಯುತ್ತರಅಳಿಸಿ
  7. ವಿಕಟ ರದಿಗಾರರೆ,

    ನಾವು ಹಾದಿ ತಪ್ಪಿದ್ದೇವೆ ಎಂಬುದಕ್ಕೆ ಏನು ಪುರಾವೆ ಇದೆ? 20 ತಿಂಗಳ ಹಿಂದೆ ನಾವು ಹಾಗೆ ಹೇಳಿರಬಹುದು. ಆದರೆ ಈಗ ಪುರಾವೆ ಎಲ್ಲಿ? ಎಷ್ಟೇ ಒದ್ದರೂ (ಬುದ್ಧಿ ಒಂದು ಬರುವುದಿಲ್ಲ)ಧೂಳಿನಿಂದ ಮೇಲೆದ್ದು ಬರುತ್ತೇವೆ... ನಾವು ಮಾಜಿ ನಿಧಾನಿ ಅನ್ನೋದನ್ನ ಪ್ರೂವ್ ಮಾಡ್ತೀವಿ.

    ಪ್ರಜೆಗಳ ಪರಿಸ್ಥಿತಿ ಬಗ್ಗೆ ಚಿಂತೆ ಬೇಡ. ಈಗಿನ ನಾಟಕವು ಮನರಂಜನಾ ತೆರಿಗೆಮುಕ್ತವಾಗಿದೆ.

    ಪ್ರತ್ಯುತ್ತರಅಳಿಸಿ
  8. ಶ್ರೀನಿಧಿಯವರೆ,

    ಕಾಂಗ್ರೆಸ್, ಬಿಜೆಪಿ ಅಂತೆಲ್ಲಾ ಹೇಳಿದ್ದೀರಿ... 2.5-2.5 ಎಂಬ ಅಂಕಿಗಳ ಪಕ್ಕದಲ್ಲಿ "ಬೊಗಳೆರಗಳೆ" ಅನ್ನೋದನ್ನು ಸೇರಿಸಲು ಮರೆತುಬಿಟ್ಟಿದ್ದೀರಿ. ಅದು ಅಂತಿಮವಾಗೋದು 0-0 ಎಂಬುದರಲ್ಲಿ (ಪ್ರಜ್ಞಾವಂತ ಮತದಾರ ಪ್ರಭು ಪ್ರಜ್ಞೆ ಪ್ರಯೋಗಿಸಿ ಮತ ಚಲಾಯಿಸಿದರೆ.)

    ಪ್ರತ್ಯುತ್ತರಅಳಿಸಿ
  9. :D ಅಧ್ಬುತ ಕಲ್ಪನೆ...

    ಎಲ್ಲಿಂದ ಎಲ್ಲಿಗೆ ಛೆ.....

    ವದಿಯೋ ಗೌಡ ಹ ಹ್ಹ ಹ್ಹ :D

    ಪ್ರತ್ಯುತ್ತರಅಳಿಸಿ
  10. ಲಾಲಾಲಾ ನಾ.... ಅವರೆ,

    ನಮ್ಮ ಒದರುವಿಕೆ ನೋಡಿ ನೀವು ಕಲ್ಪನಾಳನ್ನು ನೆನಪಿಸಿಕೊಂಡಿದ್ದು ಅದು ಖಂಡಿತವಾಗಿಯೂ ನಮ್ಮ ತಪ್ಪಲ್ಲ ಅಂತ ಸ್ಪಷ್ಟಪಡಿಸುತ್ತಿದ್ದೇವೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D