ಬೊಗಳೆ ರಗಳೆ

header ads

ಬೊಗಳೆ ವರದಿ ಪರಿಣಾಮ: ಪಂದ್ಯವೇ ಡಿಕ್ಲೇರ್?

(ಬೊಗಳೂರು Fifty-fifty ಬ್ಯುರೋದಿಂದ)
ಬೊಗಳೂರು, ಸೆ.28- ಬೊಗಳೂರಿನ ವಿಶೇಷ ಟ್ವೆಂಟಿ-20 ಕುರಿತ ಬೊಗಳೆ ವರದಿಯಿಂದ ಬೇಸತ್ತ ಕರ್ನಾಟಕದ ಪಂದ್ಯಾವಳಿಯು ತಲ್ಲಣಗೊಂಡಿದೆ.

ಇನ್ನಿಂಗ್ಸ್‌ನ ಕೊನೆಯ ಓವರುಗಳನ್ನು ಆಡುತ್ತಿರುವ ಜಾಜದ ತಂಡವು, ಇನ್ನಿಂಗ್ಸ್ ಒತ್ತಟ್ಟಿಗಿರಲಿ, ಇಡೀ ಪಂದ್ಯವನ್ನೇ ಡಿಕ್ಲೇರ್ ಮಾಡುವುದರತ್ತ ಮುಖ ಮಾಡಿದೆ. ಇದಕ್ಕೆ ಭಾಜಪ ತಂಡದ ಬೌನ್ಸರ್‌ನಿಂದಾಗಿ ಜಾಜದ ತಂಡದ ಕೋಚ್ ಆಗಿರುವ ವದಿಯೋಗೌಡರ ಮುಖ ಊದಿಕೊಂಡದ್ದೇ ಕಾರಣ ಎಂದು ಬೊಗಳೂರು ಬ್ಯುರೋ ವರದಿ ಮಾಡಿದೆ.

ಅಕ್ಟೋಬರ್ 3ರಂದು ಬ್ಯಾಟಿಂಗ್‌ಗೆ ಡಿಕ್ಲೇರ್ ಘೋಷಿಸುತ್ತೇನೆ, ಭಾಜಪ ತಂಡಕ್ಕೆ ಬ್ಯಾಟಿಂಗ್ ಅವಕಾಶ ನೀಡುತ್ತೇನೆ ಎಂದು ಹೇಳಿದ್ದ ಜಾಜದ ತಂಡದ ಕ್ಯಾಪ್ಟನ್ ಆಗಿರುವ ವದಿಯೋಗೌಡರ ಮಗ, ಇದೀಗ ತಿಪ್ಪರಲಾಗಕ್ಕೂ ಸಿದ್ಧರಾಗಿದ್ದು, ಅಕ್ಟೋಬರ್ 3ರಂದೇ ನಿರ್ಧಾರ ತೆಗೆದುಕೊಳ್ಳುವುದಾಗಿ ಘೋಷಿಸಿರುವುದರಿಂದ ಪಂದ್ಯವೇ ಡಿಕ್ಲೇರ್ ಆಗುವ ಸಾಧ್ಯತೆಗಳು ಗೋಚರಿಸುತ್ತಿವೆ.

ಇನ್ನೊಂದೆಡೆ, ಟಿಕೆಟ್ ಖರೀದಿಸಿ (ಅಂದರೆ ತೆರಿಗೆ ಕಟ್ಟಿ) ಈ ಪಂದ್ಯಾಟ ವೀಕ್ಷಿಸಲು ಆಗಮಿಸಿರುವ ಬಡಪಾಯಿ ಪ್ರೇಕ್ಷಕ ಸಮುದಾಯಕ್ಕೆ ಆಟದ ಮನರಂಜನೆ ದೊರಕಿಸುವ ನಿಟ್ಟಿನಲ್ಲಿ, ಆಗಾಗ್ಗೆ "ಕೈ" ಬೀಸುತ್ತಾ, ಜಾಜದ ತಂಡದ ಸದಸ್ಯರತ್ತ ಹಾಯ್ ಹಾಯ್ ಎಂದು ಹೇಳುತ್ತಿರುವ ತಂಡವು ಪಂದ್ಯ ಮುಂದುವರಿಸುವ ಸಾಧ್ಯತೆಗಳನ್ನೂ ಕ್ರಿಕೆಟ್ ಪಂಡಿತರು ಅಲ್ಲಗಳೆಯುತ್ತಿಲ್ಲ.

ಪ್ಯಾಡ್ ಕಟ್ಟಿ, ಭಾರದ ಬ್ಯಾಟು ಹೊತ್ತು ಕಾಯುತ್ತಿರುವ ಗಡಿಊರಪ್ಪ ತಂಡವು, ಎಲ್ಲವನ್ನೂ ಕಟ್ಟಿಕೊಂಡ ಪರಿಣಾಮವಾಗಿ ಸೆಖೆಯ ಅನುಭವ ಪಡೆಯುತ್ತಿದ್ದು, ಒಳಗಿಂದೊಳಗೇ ಬೆವೆತುಕೊಳ್ಳಲಾರಂಭಿಸಿದೆ. ಭಾಜಪ ತಂಡದ ಈ ಸ್ಥಿತಿಗೆ ಕಾರಣವೂ ಇದೆ. ತಂಡದ ಕೆಲವು ಸದಸ್ಯರು, ವಿಶೇಷವಾಗಿ ಬಳ್ಳಾರಿ ಭಾಗದವರು ಯದ್ವಾ ತದ್ವಾ ಬ್ಯಾಟು ಬೀಸಿ ಹಿಟ್ ವಿಕೆಟ್ ಆಗುವ ಕಲೆಯನ್ನು ರೂಢಿಸಿಕೊಂಡಿದ್ದಾರೆ. ಹಿಂದೆ ಕೂಡ ಬ್ಯಾಟಿಂಗ್ ಸಿಗುವ ಮುನ್ನವೇ, ಕಪ್ತಾನ ಯಾರು, ಉಪಕಪ್ತಾನ ಯಾರು, ವಿಕೆಟ್ ಕೀಪರ್ ಯಾರು ಎಂಬಿತ್ಯಾದಿ ಪಟ್ಟಿ ಸಿದ್ಧಪಡಿಸಿಟ್ಟುಕೊಂಡು, ಚುನಾವಣಾ ಫಲಿತಾಂಶ ಹೊರಬಂದ ಬಳಿಕ ಏನೂ ಇಲ್ಲದಂತಾಗಿದ್ದು ಇತಿಹಾಸ. ಹೀಗಾಗಿ ಅವರಿಗೇನಾದರೂ ಬ್ಯಾಟಿಂಗ್ ಕೊಟ್ಟರೆ ಇಡೀ ಪಂದ್ಯ ಮತ್ತು ಪ್ರೇಕ್ಷಕರ ಪರಿಸ್ಥಿತಿ ಚಿಂತಾಜನಕವಾಗಬಹುದು ಎಂಬುದು ಬೊಗಳೂರು ಬ್ಯುರೋದ ಲೆಕ್ಕಾಚಾರ.

ಅಂದರೆ ಭಾಜದ ಬ್ಯಾಟಿಂಗ್ ಆರಂಭಿಸುವ ಮುನ್ನವೇ, ಎದುರಾಳಿ ತಂಡ- ಜಾಜದದ ನಾಯಕ ನನ್ನನ್ನು ಔಟ್ ಮಾಡಲು ಸಂಚು ರೂಪಿಸಿದ್ದಾರೆ ಎಂಬ ಆಂತರಿಕ ಭೀತಿ ವ್ಯಕ್ತಪಡಿಸಿ ಥರ್ಡ್ ಅಂಪೈರಿಗೆ ದೂರು ನೀಡಿರುವುದು ಎಲ್ಲರ ಅಸಮಾಧಾನಕ್ಕೆ ಕಾರಣವಾಗಿದೆ. ಅದೂ ಅಲ್ಲದೆ, ಭಾಜಪ ತಂಡದಲ್ಲಿ ಕಪ್ತಾನ ಯಾರಾಗಬೇಕೆಂಬ ಬಗ್ಗೆ ಬೂದಿಯೊಳಗೆ ಕೆಂಡದ ತುಂಡುಗಳು ಅಲ್ಲಾಡುತ್ತಿವೆ. ಆಟ ಶುರುವಾದ ಮೇಲೆಯೂ ಇದೇ ಸಮಸ್ಯೆ ಉಲ್ಬಣಗೊಂಡು ಆಂತರಿಕ ಭಾರದಿಂದಾಗಿಯೇ ಇನ್ನಿಂಗ್ಸ್ ಡಿಕ್ಲೇರ್ ಮಾಡಬೇಕಾದ ಅನಿವಾರ್ಯತೆ ಎದುರಾದಾಗ ಪ್ರೇಕ್ಷಕರು ಮೂಕರಾಗಿಯೇ ಇರಬೇಕಾಗುತ್ತದೆ ಎಂಬ ಆತಂಕ ಎಲ್ಲೆಡೆ ಕಾಡುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. ಬೊಗಳೆ ವರದಿಯಿಂದ ಸ್ಫೂರ್ತಿ ಪಡೆದ, ಕೈ-ಪಕ್ಷದವರು, ತಾವೂ ಪ್ಯಾಡು ಕಟ್ಟಿಕೊಂಡು, ಆಟದ ಮೈದಾನಕ್ಕೆ ನುಗ್ಗಿದ್ದಾರೆ.
    ಈ ಆಟಗಾರರಲ್ಲಿಯೂ ಕಪ್ತಾನರಾಗಲು ಪೈಪೋಟಿ ನಡೆದಿದೆ:
    (೧)ರಾಜಾ ಕರ್ಮಸಿಂಹ
    (೨)ಖಾರ-ಗೇ ಸಾಹೇಬ
    (೩)ಪಾಳೇಗಾರ ಸುದ್ಲಿಂಗಯ್ಯ
    ದಿಲ್ಲಿಯ ಸುಲ್ತಾನಳಾದ ಸೋನಾಬೀಬಿಯೇ ಕಪ್ತಾನನನ್ನು ಆರಿಸುತ್ತಾಳಂತೆ.

    ಪ್ರತ್ಯುತ್ತರಅಳಿಸಿ
  2. Good writing and nice comparison on present crisis of our Karnataka politics with cricket.

    ಪ್ರತ್ಯುತ್ತರಅಳಿಸಿ
  3. ಸುಧೀಂದ್ರರೆ,

    ನಮ್ಮ ಬೊಗಳೆ ಬ್ಯುರೋ ಭವಿಷ್ಯ ನಿಜವಾಗುತ್ತಿರುವಂತಿದೆ. ನೋಡಿ ನಮ್ಮ ಕೈಗುಣ...!!!

    ಪ್ರತ್ಯುತ್ತರಅಳಿಸಿ
  4. ಅನು ಅವರೆ,

    ಬೊಗಳೆ ಬ್ಯುರೋದಿಂದ ನಿಮಗೆ ಸ್ವಾಗತ.

    ನಮ್ಮ ಬ್ಯುರೋದ ಒದರಿಗಾರರು ಕ್ರಿಕೆಟ್ಟನ್ನು ಪಾಲಿಟಿಕ್ಸಿನಲ್ಲಿಯೂ, ಪಾಲಿಟಿಕ್ಸ್‌ನಲ್ಲಿ ಕ್ರಿಕೆಟನ್ನೂ ಕಾಣುತ್ತಿದ್ದಾರೆ. ಈ ರೋಗದ ಬಗ್ಗೆ ತಪಾಸಣೆ ಅಗತ್ಯವಾಗಿದೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D