ಬೊಗಳೆ ರಗಳೆ

header ads

ಮೊಬೈಲ್ ನಿಷೇಧ ಹಿಂತೆಗೆತಕ್ಕೆ ಪುಟಾಣಿಗಳ ಆಗ್ರಹ

(ಬೊಗಳೂರು ಕಿಡ್ಸ್ ರಕ್ಷಣಾ ಬ್ಯುರೋದಿಂದ)
ಬೊಗಳೂರು, ಸೆ.12- ಮಕ್ಕಳಿಗೆ ಮೊಬೈಲ್ ಬಳಕೆ ನಿಷೇಧದಿಂದಾಗಿ ಗಂಡಾಂತರಕಾರಿ ಪರಿಸ್ಥಿತಿ ಎದುರಾಗಿದೆ ಎಂದು ಅಖಿಲ ಭಾರತ ಅಂಗನವಾಡಿ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮಹೋದಯರು ಬೊಗಳೂರಿನಲ್ಲಿ ನಡೆಸಿದ ತುರ್ತು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇದು ಬೆಳೆಯುತ್ತಿರುವ ಯುಗ ಎಂದು ನಮ್ಮ ಅಪ್ಪ ಹೇಳುತ್ತಿರುತ್ತಾರೆ, ತನಗೂ ಒಂದು ಮೊಬೈಲ್ ಬೇಕು, ಕೆಲಸವಿಲ್ಲದಾಗ ಬೇರೆಯವರೊಂದಿಗೆ ಎಸ್ಎಂಎಸ್ ಹರಟೆ ಹೊಡೆಯಲು ಬೇಕೇಬೇಕು ಅಂತ ಅಮ್ಮ ಕೂಡ ಅಪ್ಪನಲ್ಲಿ ಜಗಳಾಡಿ ಮೊಬೈಲ್ ತೆಗೆಸಿಕೊಂಡಿದ್ದಾರೆ. ಅಪ್ಪನಿಗೆ ಎರಡು ಮೊಬೈಲ್, ಅಮ್ಮನಿಗೆ ಒಂದು ಮೊಬೈಲ್, ನನಗೆ ಮಾತ್ರ ಸೊನ್ನೆ ಮೊಬೈಲ್ ಯಾಕೋ ಗೊತ್ತಿಲ್ಲ... ಅಂತ ಅಂಗನವಾಡಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪುಟಾಣಿರಾಜ್ ಅವರು ನಮ್ಮ ರದ್ದಿಗಾರರಿಗೆ ತಿಳಿಸಿದ್ದಾರೆ.

ನಮ್ ಮಿಸ್ಸು ಕೂಡ ಆಗಾಗ್ಗೆ ಮಿಸ್ ಕಾಲ್ ಪಡೆಯುತ್ತಿರುತ್ತಾರೆ. ಅದರ ರಿಂಗಿಂಗ್ ಟೋನ್ ಕೇಳುವುದೇ ಅಂಗನವಾಡಿಯಲ್ಲಿ ನಮಗೆ ದೊರೆಯುವ ಉತ್ತಮ ಮನರಂಜನೆಗಳಲ್ಲೊಂದಾಗಿದೆ. ಆಗಾಗ್ಗೆ ಮಿಸ್ ಕಾಲ್ ಬರೋದು, ಒಮ್ಮೊಮ್ಮೆ ಕಾಲ್ ಮಿಸ್ ಆಗದಿದ್ದರೆ, ನಮ್ಮ ಮಿಸ್ಸೇ ಕ್ಲಾಸಿನಿಂದ ಮಿಸ್ ಆಗ್ತಿರೋದು ನಡೆಯುತ್ತೆ. ಹಾಗಾಗಿ ನಮಗೆ ಕ್ಲಾಸಿನಲ್ಲಿ ಬೇಕಾದಷ್ಟು ಜೋರಾಗಿ ಕೂಗಾಡಬಹುದು, ಹೊಡೆದಾಡಬಹುದು. ಇದು ಮೊಬೈಲ್ ಪ್ರಯೋಜನಗಳಲ್ಲೊಂದು ಎಂದು ತಿಳಿಸಿರುವ ಅವರು, ಆದರೆ ಮಕ್ಕಳ ಕೈಗೂ ಮೊಬೈಲ್ ಕೊಡದಿದ್ದರೆ, ಬೆಳೆಯುತ್ತಿರುವ ತಂತ್ರಜ್ಞಾನದೊಂದಿಗೆ ಪುಟಾಣಿಗಳು ಅಪ್‌ಡೇಟ್ ಆಗೋದು ಹೇಗೆ, ಅದರಲ್ಲಿರೋ ಗೇಮ್ಸ್‌ಗಳನ್ನು ನಾವು ಕರಗತ ಮಾಡಿಕೊಳ್ಳೋದು ಹೇಗೆ ಮತ್ತು ಎಸ್ಎಂಎಸ್‌ನಲ್ಲಿ ಬಳಸುವ ಭಾಷೆಯ ಅರಿವು ನಮಗಾಗುವುದು ಹೇಗೆ ಎಂಬ ಮೂಲಭೂತ ಪ್ರಶ್ನೆಗಳನ್ನು ಅವರು ಮುಂದಿಟ್ಟಿದ್ದಾರೆ.

ನಮಗೂ ಒಂದು ಮೊಬೈಲ್ ಕೊಟ್ಟರೆ, ಆಗಾಗ ನಮಗೆ ಬೇಕಾದವರಿಗೆ ಮತ್ತು ಬೇಡವಾದ ಮಿಸ್‌ಗೆ ಕೂಡ ಮಿಸ್ ಕಾಲ್ ಕೊಡುತ್ತಾ, ಅವರು ದೂರ ಹೋಗುವಂತೆ, ಅವರ ಗಮನ ದೂರ ತಂಗಾಳಿಯಲ್ಲಿ ತೇಲಿ ಹೋಗುವಂತೆ ಮಾಡಬಹುದು ಎಂಬುದು ಪುಟಾಣಿರಾಜ್ ನೀಡಿರುವ ಸ್ಪಷ್ಟನೆ.

ಮಕ್ಕಳು ಮೊಬೈಲ್ ಬಳಸುವುದರಿಂದ ಕಿವಿ, ಮೆದುಳು, ಹೃದಯ ಮತ್ತಿತರ ಅಂಗಗಳಿಗೆ ಹಾನಿಯಾಗುತ್ತದೆ ಅಂತ ತಜ್ಞರು ಹೇಳಿದ್ದಾರೆ. ಹೌದು, ಸರಿ, ಆಯ್ತು... ಏನೀಗ ಎಂದು ಪ್ರಶ್ನಿಸಿರುವ ಅವರು, ಈಗ ಬೆಳೆದು ದೊಡ್ಡವರಾದವರಿಗೂ ಕಿವಿ ಎಂಬುದು ಕೇಳಿಸುತ್ತದೆಯೇ? ಮಕ್ಕಳಾದ ನಾವೆಷ್ಟು ಬಾರಿ ಜೋರಾಗಿ ಅರಚಾಡಿ ಪೀಪಿ ತೆಗೆಸಿಕೊಡು, ಚಾಕ್ಲೇಟು ತೆಗೆಸಿಕೊಡು ಅಂತ ಕೇಳಿದರೂ ತಕ್ಷಣವೇ ತೆಗೆಸಿಕೊಡುವ ಅಪ್ಪಂದಿರು ಎಷ್ಟಿದ್ದಾರೆ? ನಾವೆಷ್ಟೇ ಕೂಗಾಡಿದರೂ ಕೇಳಿಸಿಕೊಳ್ಳುವ ಮಿಸ್ಸಂದಿರು ಎಷ್ಟಿದ್ದಾರೆ ಎಂದು ಪ್ರಶ್ನಿಸಿದರು.

ಅದಲ್ಲದೆ, ಈಗ ಬೆಳೆದು ದೊಡ್ಡವರಾದವರಿಗೆ ಮೆದುಳು ಎಂಬುದು ಇದೆಯೇ? ಇಲ್ಲ ಎಂಬುದು ನಮ್ಮ ಸರಕಾರದ ನೀತಿ ನಿಯಮಾವಳಿಗಳಿಂದಾಗಿಯೇ ತಿಳಿಯುತ್ತದೆ. ಉದಾಹರಣೆಗೆ ಮಕ್ಕಳಿಗೆ ಮೊಬೈಲ್ ಬಳಕೆ ನಿಷೇಧವನ್ನೇ ತೆಗೆದುಕೊಳ್ಳಿ. ಇದು ಮೆದುಳು ಇಲ್ಲದ ಕಾರಣದಿಂದಾಗಿಯೇ ತೆಗೆದುಕೊಂಡ ನಿರ್ಧಾರವಲ್ಲವೇ ಎಂದು ಅ ಆ ಇ ಈ ಕಲಿಯುವ "ಬ್ಯುಸಿ" ಶೆಡ್ಯೂಲ್ ನಡುವಿನಲ್ಲೂ ಒಂಟಿ ಪತ್ರಿಕಾಗೋಷ್ಠಿಯಲ್ಲಿ ಕೇಳಿದ ಪುಟಾಣಿರಾಜ್, 16 ವರ್ಷ ದಾಟಿದ ತಕ್ಷಣವೇ ಹೃದಯ ಬೆಳೆಯುತ್ತದೆ. ಇದನ್ನು ನಾವು ಕಾಲೇಜು ಸಮೀಪದ ಪಾರ್ಕುಗಳಲ್ಲಿ, ನಗರದ ಸಿನಿಮಾ ಥಿಯೇಟರುಗಳಲ್ಲಿ ಕಣ್ಣಾರೆ ಕಾಣಬಹುದು. ಅವರೆಲ್ಲಾ ಮೊಬೈಲನ್ನೇ ಅಲ್ಲವೇ ಬಳಸುತ್ತಿರುವುದು? ಅವರ ಹೃದಯಕ್ಕೆ ಹಾನಿಯಾಗುವುದು ಮೊಬೈಲ್‌ನಲ್ಲಿ ಹರಿದಾಡುವ ಸಂದೇಶಗಳು ಮತ್ತು ಅದರಲ್ಲಿ ಮೂಡಿಬರುವ ಮಾತುಗಳಿಂದಾಗಿಯೇ ಹೊರತು, ಮೊಬೈಲ್ ಬಳಕೆಯಿಂದ ಅಲ್ಲ ಎಂದು ತಮ್ಮ ಪೂರ್ವಜನ್ಮದ ಅನುಭವದ ನುಡಿಗಳನ್ನು ರದ್ದಿಗಾರರ ಮುಂದೆ ಬಿಚ್ಚಿಟ್ಟರು.

ಸರಕಾರವು ನಮಗೆ ಮೊಬೈಲ್ ನಿಷೇಧ ಮಾಡಿದ ನಿರ್ಧಾರ ಹಿಂತೆಗೆದುಕೊಳ್ಳದಿದ್ದಲ್ಲಿ ಎಲ್ಲಾ ಅಂಗನವಾಡಿ ಮಕ್ಕಳೂ ಶಾಲೆಗೆ ಬಂದು ಆಟವಾಡುವ ಬದಲು, ಮನೆಯಲ್ಲೇ ಆಟವಾಡುವುದಾಗಿ ಬೆದರಿಕೆಯೊಡ್ಡಿದ ಅವರು, ಹೋರಾಟದ ಮುಂದಿನ ಭಾಗವಾಗಿ, ಅಂಗನವಾಡಿಯಿಂದ ಮನೆಗೆ ಹೋಗುವ ದಾರಿಯಲ್ಲಿರುವ ಎಲ್ಲಾ ಅಂಗಡಿಗಳಿಗೆ ನುಗ್ಗಿ, ಅಲ್ಲಿಂದ ಪೆಪ್ಪರ್‌ಮಿಂಟ್ ತೆಗೆಸಿಕೊಡಲು ಅಪ್ಪ-ಅಮ್ಮಂದಿರನ್ನು ಎಡೆಬಿಡದೆ ಕಾಡುವುದಾಗಿ ಎಚ್ಚರಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

  1. ಮೊಬೈಲ್ ಫೋನ್ ಬಳಸುವದು ಮಕ್ಕಳ ಮೂಲಭೂತ ಹಕ್ಕುಗಳಲ್ಲೊಂದಾಗಿದೆ.ಈ ಹಕ್ಕನ್ನು ನಿರಾಕರಿಸುವ ಪಾಲಕರ ಮೊಬೈಲುಗಳನ್ನೇ ಕಿತ್ತು ಮಕ್ಕಳ ಕೈಯಲ್ಲಿ ಕೊಡಬೇಕು. ಶಾಲೆಯಲ್ಲಿ ಮೊಬೈಲ್ ಮೂಲಕ ನೇರವಾಗಿ ಜ್ಞಾನಾರ್ಜನೆ ಮಾಡಬಹುದು. ಇದಕ್ಕೆ ಅಡ್ಡಿಪಡಿಸುವ ಶಿಕ್ಷಕರನ್ನು ಶಾಲೆಯ ಬಯಲಿನಲ್ಲಿ "ಕುರ್ಚಿ" ಕೂಡಿಸಬೇಕು. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಓರಾಟ ಮಾಡುತ್ತಿರುವ ಬೊಗಳೂರು ವೇದಿಕೆಗೆ ಮಕ್ಕಳು ಮೊಬೈಲ್ ಮಾಲೆ ಹಾಕಿ ಸನ್ಮಾನಿಸುತ್ತಾರಂತೆ . ವೇದಿಕೆಯ ಸಂಶೋದಹನದಿಂದ ಪ್ರಭಾವಿತರಾದ ಮನಮಾರಕ ಸಿಂಗಳೀಕರು ಭಾರತದ ಸಂವಧಾನಕ್ಕೆ ತಿದ್ದುಪಡಿ ಮಾಡುವ ಸೂಚನೆ ನೀಡಿದ್ದಾರೆ.

    ಪ್ರತ್ಯುತ್ತರಅಳಿಸಿ
  2. ಸುಧೀಂದ್ರರೆ,

    ಮೊಬೈಲ್ ಫೋನನ್ನು ಮಕ್ಕಳಿಗೆ ಪೆಪ್ಪರ್ ಮಿಂಟಿನಷ್ಟೇ ಮೂಲಬೋ ಲಬೋತ ಹಕ್ಕು ಅಂತ ತಿಳಿಸಿ ಉತ್ತಮ ಸಲಹೆ ನೀಡಿದ್ದು, ಆ ಮಕ್ಕಳೆಲ್ಲಾ ಧನ್ಯವಾದ ಹೇಳುವ ನಿಟ್ಟಿನಲ್ಲಿ ನಿಮ್ಮನ್ನು ಪೆಪ್ಪರುಮಿಂಟು, ಬಿಸ್ಕುಟಿಗೆ ಕಾಡಲಿದ್ದಾರೆ ಎಂದು ಸಂದೇಶ ಕಳುಹಿಸಿದ್ದಾರೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D