ಬೊಗಳೆ ರಗಳೆ

header ads

ಪ್ರಜೆಗಳಿಗೆ ಮನೋವೇದನೆ ತೆರಿಗೆ ಪ್ರಸ್ತಾಪ

(ಬೊಗಳೂರು ಬೊಕ್ಕಸದೋಚೋ ಬ್ಯುರೋದಿಂದ)
ಬೊಗಳೂರು, ಆ.5- ಮೈತ್ರಿ ರಾಜಕಾರಣದ ನಾಟಕಗಳಿಗೆ ಮನೋವೇದನಾ ತೆರಿಗೆ ವಿಧಿಸಬೇಕು ಎಂದು ಮೈತ್ರಿ ಸರಕಾರದ ಪಾಲುದಾರ ಪಕ್ಷಗಳು ಒತ್ತಾಯಿಸಿವೆ.

ರಾಜ್ಯದಲ್ಲಿ ಅಧಿಕಾರ ಹಸ್ತಾಂತರವೆಂಬ ನಾಟಕವು ಭರ್ಜರಿ ಪ್ರದರ್ಶನ ಕಾಣುವ ನಿರೀಕ್ಷೆಗಳನ್ನು ಈಗಾಗಲೇ ಹುಟ್ಟಿಸಿದ್ದು, ಹಸ್ತಾಂತರಕ್ಕೆ ದೊರೆತಷ್ಟು ಪ್ರಚಾರವು ಮೈತ್ರಿ ಪಕ್ಷಗಳ ಯಾವುದೇ ಕಾರ್ಯಗಳಿಗೆ ದೊರಕಿಲ್ಲ. ಹಾಗಾಗಿ ಈ ಅಧಿಕಾರ ಹಸ್ತಾಂತರವೆಂಬ ನಾಟಕವು ಬಿಡುಗಡೆಯಾದ ತಕ್ಷಣವೇ ಭರ್ಜರಿ ಜನಾಕರ್ಷಣೆಗೆ ಕಾರಣವಾಗಲಿದೆ ಎಂದು ಬಾಕ್ಸಾಫೀಸ್‌ನಲ್ಲಿ ಲೆಕ್ಕಾಚಾರ ಹಾಕಲಾಗುತ್ತಿದೆ.

ಈ ಮೈತ್ರಿ ಯಾಕೆ, ಅವರು ಸರಿ ಇಲ್ಲ, ತೆರಿಗೆ ಇಲ್ಲದ ಮನರಂಜನೆಯಿದು, ಸರಕಾರದ ಸಾಧನೆ ನಮ್ಮದು ಮಾತ್ರ, ಮೈತ್ರಿ ಪಕ್ಷದ್ದಲ್ಲ ಎಂಬಿತ್ಯಾದಿ ಡೈಲಾಗ್‌ಗಳು ಈ ನಾಟಕದ ಪ್ರಧಾನ ಆಕರ್ಷಣೆ. ಈ ಕಾರಣಕ್ಕೆ ಸ್ಕ್ರಿಪ್ಟ್ ರೈಟರ್‌ಗೆ ರಾಷ್ಟ್ರಪ್ರಶಸ್ತಿ ನೀಡಲು ಮೈತ್ರಿ ಪಕ್ಷಗಳ ಮುಖಂಡರ ನಡುವೆ ಗುದ್ದಾಟ ಆರಂಭವಾಗಿರುವುದಾಗಿ ವರದಿಯಾಗಿದೆ.

ಇದೇ ರೀತಿ, ಕೇಂದ್ರೀಯ ಮಟ್ಟದಲ್ಲೂ ಭರ್ಜರಿ ನಾಟಕವೊಂದು ಈಗಾಗಲೇ ಪ್ರದರ್ಶನಗೊಳ್ಳುತ್ತಿದ್ದು, ಎಡ ಪಕ್ಷಗಳು ಅಧಿಕಾರಾರೂಢ ಪಕ್ಷವನ್ನು ಎಡಕ್ಕೆ ಬಲಕ್ಕೆ ಎಳೆದಾಡುತ್ತಾ ಕುತೂಹಲ ಮೂಡಿಸುತ್ತಿದೆ. ಬೆಂಬಲ ಹಿಂತೆಗೆಯುತ್ತೇವೆ ಎಂಬ ಘರ್ಜನೆ ಕೇಳಿ ಬಂದ ತಕ್ಷಣವೇ ಮೆತ್ತಗಾಗುವ ಸರಕಾರವು, ಘರ್ಜನೆ ಕೇಳಿಬಂದಲ್ಲಿಗೆ ಒಂದಷ್ಟು ಸೊಪ್ಪು ಹಾಕಿ ಅವನ್ನು ಶಾಂತಗೊಳಿಸುವ ಕಲೆಯನ್ನೂ ಕರಗತ ಮಾಡಿಕೊಳ್ಳಲು ಈ ಬೆಂಬಲ ಹಿಂತೆಗೆತ ಎಂಬ ನಾಟಕ ಪೂರಕವಾಗಿದೆ.

ಕಚ್ಚುವ ನಾಯಿ ಬೊಗಳುವುದಿಲ್ಲ ಎಂಬ ಧ್ಯೇಯವಾಕ್ಯವನ್ನು ಶಿರಸಾವಹಿಸಿ ಅನುಸರಿಸುತ್ತಿರುವ ಕೇಂದ್ರವು ಈ ನಾಟಕದ ಯಶಸ್ಸಿಗಾಗಿ ಈಗಾಗಲೇ ಪ್ರಜೆಗಳಿಗೆ ಮನೋವೇದನಾ ತೆರಿಗೆಯನ್ನು ಹೇರಿ ಭರ್ಜರಿ ಸಂಪಾದನೆಯನ್ನೂ ಆರಂಭಿಸಿದೆ. ಇನ್ನೆರಡು ವರ್ಷದಲ್ಲಿ ಬಾಕ್ಸಾಫೀಸ್‌ನಂತಿರುವ ಸರಕಾರಿ ಬೊಕ್ಕಸವು ಭರ್ಜರಿಯಾಗಿ ತುಂಬಿ ತುಂಬಿ, ಅಧಿಕಾರಸ್ಥರ ಜೇಬುಗಳಿಗೂ ತುಳುಕಾಡಲಿದೆ ಎಂದು ನಾಟಕ ವಿಮರ್ಶಕರು ಈಗಾಗಲೇ ಲೆಕ್ಕಾಚಾರ ಹಾಕಲಾರಂಭಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. ಪ್ರವಾಸವೇದನೆಗೂ ತೆರಿಗೆ ಹೇರುವರಾ? ಇದೆಂತಹ ಕಾಲ ಬಂತಪ್ಪಾ?

    ಅಂದ ಹಾಗೆ ಬೊ=ರ ಕಡೆಯಿಂದ ವರ್ಷಕ್ಕೆ ಎಷ್ಟು ತೆರಿಗೆ ಸರ್ಕಾರದ ಬೊಕ್ಕಸ ಸೇರುತ್ತಿದೆ?

    ಸದ್ಯಕ್ಕೆ ಮನಸ್ಸನ್ನೇ ದೂರ ಇಟ್ಟುಬಿಟ್ಟರೆ ಅದರ ಮೇಲೆ ತೆರಿಗೆ ಹೇರೋಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಅಲ್ವಾ ಅನ್ವೇಷಿಗಳೇ!

    ಹೊಸ ಹೊಸ ವಿಷಯಗಳನ್ನು ತೋರಿಸುತ್ತಿರುವ ನಿಮ್ಮ ತಲೆಗೆ ಅದೇನು ಕೊಡಬೇಕೋ ಅರ್ಥವೇ ಆಗ್ತಿಲ್ಲ :P

    ಪ್ರತ್ಯುತ್ತರಅಳಿಸಿ
  2. ಇವೆಲ್ಲಾ ನಾಟಕಗಳು Benefit showಗಳು. (ಯಾರ?)ಆದುದರಿಂದ ಸಖತ್ತಾಗಿ ಮನೋವೇದನಾ ತೆರಿಗೆ ಹಾಕಿ,ಕಲೆಕ್ಟ್ ಆದ ತೆರಿಗೆಯಿಂದ ನಿವೃತ್ತ ಪ್ರಧಾನ ಮಂತ್ರಿಗಳಿಗೆ rehabilitation ಒದಗಿಸಬೇಕು.

    ಪ್ರತ್ಯುತ್ತರಅಳಿಸಿ
  3. ಶ್ರೀನಿವಾಸರೇ

    ನೀವು ಏನೋ ಹೇಳಿದ್ದು ನಮಗೆ ಕೇಳಿಸಲೇ ಇಲ್ಲ... ನಾವು ತೆರಿಗೆ ಕಟ್ಟಿ ಕಟ್ಟಿ ಸುಸ್ತಾಗುತ್ತಿದ್ದೇವೆ.

    ಮನಸ್ಸನ್ನು ದೂರ ಮಾಡಿದರೆ ತೆರಿಗೆ ಹೇರೋದು ಸಾಧ್ಯವಿಲ್ಲ ಅಂದ್ರಲ್ಲಾ... ನೂರಕ್ಕೆ ನೂರು ಸತ್ಯ.

    ನಮ್ಮ ತಲೆಗೂ ನೀವೇ ತೆರಿಗೆ ಕಟ್ಟಿ ಬಿಡಿ...

    ಪ್ರತ್ಯುತ್ತರಅಳಿಸಿ
  4. ಸುಧೀಂದ್ರರೆ,

    ನಿರ್ವಸಿತ ಪ್ರಧಾನಿಗಳ ಬಡಾವಣೆಗಾಗಿ ಶೀಘ್ರವೇ ಅಡಿಗೆ ಕಲ್ಲು ಹಾಕಲು ನಮ್ಮನ್ನು ಅಹ್ವಾನಿಸುವ ಸಿದ್ಧತೆ ನಡೆದಿದೆಯಂತೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D