(ಬೊಗಳೂರು ಕೆಲಸವಿಲ್ಲದ ಬ್ಯುರೋದಿಂದ)
ಬೊಗಳೂರು, ಆ.29- ಮಾಡಲು ಕೆಲಸವಿಲ್ಲದ ಯುವಕರಿಗೆ ವಿಶೇಷ ತರಬೇತಿಯೊಂದನ್ನು ನೀಡಲು ಬೊಗಳೂರಿನ ಸರಕಾರ ನಿರ್ಧರಿಸಿದೆ.ಈ ನಿರ್ಧಾರದ ಹಿಂದಿನ ಪ್ರಮುಖ ಉದ್ದೇಶವೆಂದರೆ, "ನಿನಗೆ ಮಾಡಲು ಬೇರೆ ಕೆಲಸ ಇಲ್ವಾ" ಅಂತ ಯಾರಾದರೂ ಕೇಳುವುದನ್ನು ತಪ್ಪಿಸುವುದು. ಈ ಕಾರಣಕ್ಕೆ ಕೆಲಸವಿಲ್ಲದ ಯುವ ಜನತೆಗೆ ಕೈತುಂಬಾ ಕೆಲಸ ನೀಡುವುದು ಮತ್ತು ಮಾಡಲು ಉದ್ಯೋಗವಿಲ್ಲದಿದ್ದರೂ ಹೇಗೆ ಬದುಕುವುದು ಎಂಬುದನ್ನು ಈ ತರಬೇತಿಯಲ್ಲಿ ಹೇಳಿಕೊಡಲಾಗುತ್ತದೆ.
ಈ ತರಬೇತಿ ಕಾರ್ಯಕ್ರಮದಲ್ಲಿ, ಕೆಲಸವಿಲ್ಲದ ಯುವಕರಿಗೆ ಓರ್ಕುಟ್ ವಿಹಾರ, ಅಶ್ಲೀಲ ಇ-ಮೇಲ್‌ಗಳ ಫಾರ್ವರ್ಡಿಂಗ್, spam ಸಂದೇಶಗಳ ರವಾನೆ, ಚಾಟಿಂಗ್ ತಾಣದಲ್ಲಿ ಹೋಗಿ ಚಾಟಿಂಗ್ ನಿರತವಾಗುವುದು ಎಂಬಿತ್ಯಾದಿಗಳನ್ನು ಮೂಲಭೂತವಾಗಿ ಹೇಳಿಕೊಡಲಾಗುತ್ತದೆ.
ಆ ಬಳಿಕ, ಕೆಲಸವಿಲ್ಲದವರಿಗಾಗಿ ಭರ್ಜರಿ ಉದ್ಯೋಗಾವಕಾಶಗಳಿರುವ ರಾಜಕೀಯ ಕ್ಷೇತ್ರದ ಎಲ್ಲ ಮೂಲ ಪಾಠಗಳನ್ನು ಹೇಳಿಕೊಡಲಾಗುತ್ತದೆ. ಅದರಲ್ಲಿ ಪಂಚಿಂಗ್, ಮೈಕ್ ಎಳೆದಾಡುವಿಕೆ, ಕೂಗಾಡುವಿಕೆ, ತಲೆಕೂದಲು ಎಳೆಯುವಿಕೆ, ಮಾತ್ರವಲ್ಲದೆ, ಆಡಳಿತಾರೂಢರ ಎಲ್ಲ ಕ್ರಮಗಳನ್ನು ವಿರೋಧಿಸುತ್ತಲೇ ಅಧಿಕಾರಕ್ಕೆ ಅಂಟಿಕೊಳ್ಳುವುದು, ವಿರೋಧಿಗಳೊಂದಿಗೆ ಕೈಜೋಡಿಸಿ, ಕುಡಿಕೆ ಹೊನ್ನು ಸಾಲದಂತೆ ಕುಳಿತು ತಿನ್ನುವುದು, ಅವರಿವರವನ್ನು ಟೀಕಿಸುವುದು, ತಲೆ ಇಲ್ಲದ ಚಿಕನ್ ತಿನ್ನುವುದು, ದೇಶದ ಜನರ ಮೇಲೆ ತೆರಿಗೆ ವಿಧಿಸಿ, ಆ ತೆರಿಗೆ ಹಣವನ್ನೆಲ್ಲಾ ಮೋಜು ಮಸ್ತಿಗೆ ವ್ಯಯಿಸುವುದು... ಮುಂತಾಗಿ ಪಾಠಗಳನ್ನು ಹೇಳಿಕೊಡಲಾಗುತ್ತದೆ.
ಮತ್ತೆ ಕೆಲವು ಮಂದಿಗೆ ಮೊಬೈಲ್ ಫೋನ್ ಕೈಗೆ ನೀಡಲಾಗುತ್ತದೆ. ಅವರು ಇದ್ದವರಿಗೆ, ಇಲ್ಲದವರಿಗೆ... ಹೀಗೆ ಎಲ್ಲರಿಗೂ ಎಸ್ಎಂಎಸ್ ಟೈಪ್ ಮಾಡಿ ಕಳುಹಿಸುತ್ತಾ ಇರಬಹುದು ಮತ್ತು ಈ ಮೂಲಕ ಅಮೂಲ್ಯವಾದ ಕಾಲವನ್ನು ಕಳೆಯಬಹುದು. ಆದರೆ ಮೊಬೈಲ್ ಫೋನ್ ಪಡೆದವರು ಅದರ ಕೀಪ್ಯಾಡ್‌ಗಳ ಅಕ್ಷರಗಳು ಸವೆದುಹೋಗದಂತೆ ಜಾಗ್ರತೆ ವಹಿಸಬೇಕು ಎಂಬ ಷರತ್ತು ವಿಧಿಸಿರುವುದು ಮಾತ್ರ, ಈ ಕೆಲಸವಿಲ್ಲದ ಯುವಜನತೆಯ ಆಕ್ರೋಶಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
2 ಕಾಮೆಂಟ್‌ಗಳು
ಈ ರಿಕಾಮಚೋಟ ವಿಶ್ವವಿದ್ಯಾಲಯದ ಉಪಕುಲಪತಿ ಹುದ್ದೆಗೆ ಭಾರಿ ಪೈಪೋಟಿ ಇದೆಯಂತಲ್ಲ? ಸ್ಪರ್ಧೆಗೆ ನೀನೂ ಇಳಿದಿದ್ದೀಯಾ, ಗುರು?
ಪ್ರತ್ಯುತ್ತರಅಳಿಸಿಸುಧೀಂದ್ರರೇ,
ಪ್ರತ್ಯುತ್ತರಅಳಿಸಿಸ್ಪರ್ಧೆಗೆ ಇಳಿಯುವುದಕ್ಕೆ ಶಾಂತಮ್ಮ ಮತ್ತು ಪಾಪಮ್ಮ ತಡೆಯುತ್ತಿದ್ದಾರೆ...
ಏನಾದ್ರೂ ಹೇಳ್ರಪಾ :-D