ಬೊಗಳೆ ರಗಳೆ

header ads

ಬೊಗಳೆ ಪತ್ರಿಕೆ ಬೆಲೆ ನೂರು ಕೋಟಿ: ಸಂಶೋಧನೆ!

(ಬೊಗಳೂರು ರದ್ದಿ ಬ್ಯುರೋದಿಂದ)
ಬೊಗಳೂರು, ಆ.8- ಬೊಗಳೆ ರಗಳೆ ಎಂಬ ಇಂಟರ್ನೆಟ್ ಪತ್ರಿಕೆಯ ಬೆಲೆ ಎಷ್ಟು ಎಂಬುದನ್ನು ಮೋಡಿ ಸರಕಾರ ಸಂಶೋಧನೆ ಮಾಡಿ ಪತ್ತೆ ಹಚ್ಚಿದೆ ಎಂದು ಇಲ್ಲಿ ವರದಿಯಾಗಿದೆ.

ತಮ್ಮ ಪತ್ರಿಕೆಯನ್ನು ಸುದ್ದಿ ಪತ್ರಿಕೆಗಳಡಿ ಸೇರಿಸದೆ, ರದ್ದಿ ಪತ್ರಿಕೆ ಎಂದು ಪರಿಗಣಿಸಿದ ಮೋಡಿ ಮಾಡೋ ಸರಕಾರಕ್ಕೆ ಕೃತಜ್ಞತೆ ಸಲ್ಲಿಸಿರುವ ಏಕ ಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳು ಮತ್ತು ಓದುಗರೂ ಆಗಿರುವ ಸಂಪಾದಕರು, ರದ್ದಿ ಪತ್ರಿಕೆಗಳ ಸಾಲಿನಲ್ಲೇ ತಮ್ಮದು ನಂಬರ್ 1 ಪತ್ರಿಕೆಯಾಗಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ.

ಕನಿಷ್ಠ ಪಕ್ಷ ರದ್ದಿ ಆಯುವವರಾದರೂ ಈ ಪತ್ರಿಕೆಯ ಮೌಲ್ಯ ಅರಿತು ಅದಕ್ಕೆ ಕೋಟಿಗಟ್ಟಲೆ ಬೆಲೆ ಕಟ್ಟಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿರುವ ಸಂತಾಪಕರು, "ನಿರ್ಮಲ ಇಂಟರ್ನೆಟ್" ಯೋಜನೆಯಡಿ ಕೈಗೊಂಡಿರುವ ಈ ಯೋಜನೆ ಫಲಪ್ರದವಾಗಲಿ ಎಂದು ಹಾರೈಸಿದ್ದಾರೆ.

ಈ ಬಗ್ಗೆ ಕೂಲಂಕಷ ತನಿಖೆ ನಡೆಸಿದ ನಮ್ಮ ಬ್ಯುರೋವು, ಆ ಪ್ರದೇಶದಲ್ಲಿ ದೊರೆತ ವೇಸ್ಟ್-ಪೇಪರ್ (ರದ್ದಿ ಪತ್ರಿಕೆ) ಮತ್ತು ಜಂಕ್‌ಗಳಲ್ಲಿ ಶೇ. 99.99 ಭಾಗವೂ ಬೊಗಳೆ ರಗಳೆಗೆ ಸಂಬಂಧಿಸಿದ್ದೇ ಆಗಿತ್ತು ಎಂದು ಪತ್ತೆ ಹಚ್ಚಿ, ಬೆನ್ನು ತಟ್ಟಿಕೊಳ್ಳಲು ಆರಂಭಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

  1. ಈ ಪತ್ರಿಕೆಯ ಬೆಲೆ ಇಷ್ಟು ಏರೋಕ್ಕೆ ಯಾರು ಕಾರಣರು? ನೂರು ಕೋತಿಗಳಲ್ಲಿ ಒಂದು ಕೋತಿಯಾದರೂ ನಮ್ಮ ಕಡೆ ತಳ್ಳಬಾರದೇ ಗುರುಗಳೇ ;)

    ಈ ಕಡೆ ಬನ್ನಿ - ಹಂಚುವಿಕೆಯ ಬಗ್ಗೆ ಚರ್ಚಿಸೋಣ

    ವಿ.ಸೂ :
    ದಿನಕ್ಕೆ ೨೪ ಘಂಟೆಗಳಿಗಿಂತಲೂ ಹೆಚ್ಚಿನ ಕೆಲಸ ಇರೋದ್ರಿಂದ ಶ್ರೀ ಶ್ರೀ ಶ್ರೀಗಳು ಇತ್ತ ಕಡೆ ತಲೆ ಹಾಕಲಾಗಿಲ್ಲ, ಅದರ ಬದಲಿಗೆ ಇಂದು ತಮ್ಮ ಕಾಲು ಹಾಕಿದ್ದಾರೆ

    ಪ್ರತ್ಯುತ್ತರಅಳಿಸಿ
  2. ಶ್ರೀ ಶ್ರೀ ಶ್ರೀ ಕಾಲನ್ನು ಈ ಕಡೆ ಎಳೆದಂತಹ ಖೂಳರು ಯಾರು? ಅವರಿಗೆ ನಮ್ಮ ಧನ್ಯವಾದಗಳು!

    ಪ್ರತ್ಯುತ್ತರಅಳಿಸಿ
  3. ಏಕ ಸದಸ್ಯ ಬ್ಯುರೊದ ಪತ್ರಿಕೆ ಬೊಗಳೆ ರಗಳೆಯು ರೂ 6,59,615.633 ರಷ್ಟು($16,371.66) ಬೆಲೆ ಬಾಳುತ್ತದೆಯೆಂದುಇಲ್ಲಿ ವರದಿಯಾಗಿದೆ.

    ಇತೀ ಬೊಗಳೆ ರಗಳೆಯ ಅವಿಶ್ವಾಸಿ ಓದುಗ,
    ಅವಿವೇಕಿ

    ಪ್ರತ್ಯುತ್ತರಅಳಿಸಿ
  4. ಅಬ್ಬಾ... ಬೊಗಳೆ ಪತ್ರಿಕೆ ಬೆಲೆ ಎಷ್ಟು ಅಂತ ಹಾಕಿದ್ಮೇಲಾದ್ರೂ ನೀವು ಪತ್ತೆಯಾಗ್ತೀರಾ ಅನ್ನೋ ನನ್ನ ುಪಾಯ ಫಲಿಸಿದೆ ಶ್ರೀನಿವಾಸರೆ,

    ನಿಮ್ಮಲ್ಲಿ ಸ್ವಲ್ಪ ಗಂಟೆ ಹೆಚ್ಚಿದ್ದರೆ ನನಗೂ ಕೊಡಿ... ದಿನದ ಗಂಟೆಗಳಿಗೆ ಸೇರಿಸಲು ನನಗೂ ಸಾಕಷ್ಟು ಸಾಧ್ಯತೆಗಳಿವೆ.

    ಪ್ರತ್ಯುತ್ತರಅಳಿಸಿ
  5. ಸುಧೀಂದ್ರರೆ,

    ಶ್ರೀಶ್ರೀಶ್ರೀಗಳ ಕಾಲೆಳೆದ ಖೂಳರು ರದ್ದಿ ಕಾಗದಗಳಡಿ ಅವಿತುಕೊಂಡಿದ್ದಾರೆ ಎಂಬ ಸುದ್ದಿ ಬಂದಿದೆ...

    ಪ್ರತ್ಯುತ್ತರಅಳಿಸಿ
  6. ಅ(ಹ)ವಿವೇಕರೆ, :)

    ನಮ್ಮ ಬೊಗಳೆಯ ಬೆಲೆ ಕಟ್ಟಿ ಎಷ್ಟೂಂತ ತೋರಿಸಿ ನೀವು ನಮ್ಮನ್ನೂ ನಮ್ಮ ಅವ-ಮಾನವನ್ನೂ ಹರಾಜು ಹಾಕುವ ಪ್ರಯತ್ನ ಆರಂಭಿಸಿರುವುದು ಶ್ಲಾಘನೀಯ.

    ನಿಮ್ಮ ಅವಿಶ್ವಾಸಕ್ಕೆ ನಮ್ಮ ಕೃತ"ಘ್ನ"ತೆಗಳು.

    ಪ್ರತ್ಯುತ್ತರಅಳಿಸಿ
  7. ಅಸತ್ಯಿಗಳೇ,

    ಓಯ್..ಹೇಗಿದೀರಾ :)

    ಎಲ್ಲಿ ಹೋದರೂ ಬಿಡೋದಿಲ್ಲರೀ ನಿಮ್ಮ ಬೊಗಳೆ ಪತ್ರಿಕೆಯ ಬೆಲೆಯ ಸುದ್ದಿ...ನೂರು ಕೋಟಿಯಲ್ಲಿ ಎಷ್ಟು ಸೊನ್ನೆ ಇರ್ತಾವೆ ಅನ್ನೋದನ್ನು ತಾವು ಅನ್ವೇಷಿಸಿ ಹೇಳಬೇಕು

    ಪ್ರತ್ಯುತ್ತರಅಳಿಸಿ
  8. ಓಹೋಯ್ ಶಿವ್ ಅವರೆ,

    ಅಂತೂ ಮರಳಿ ಬಂದ್ರಲ್ಲಾ... ಅಬ್ಬ... ನೆಮ್ಮದಿಯಾಯಿತು...

    ಆದರೆ ಬಂದ ತಕ್ಷಣವೇ ನೀವು ನಮ್ಮನ್ನು "ಎಲ್ಲಿ ಹೋದ್ರೂ ಬಿಡಲ್ಲ" ಅಂತ ಹೇಳಿದ್ದು ಮಾತ್ರ, ನೀವು ನಮಗೆ ಹೇಳಿದ್ದೋ... ಅಥವಾ ನಮ್ಮ ಬಗ್ಗೆ ಹೇಳಿದ್ದೋ ಅಂಬೋದು ಒಂದಿಷ್ಟು ಅನುಮಾನ...

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D