(ಬೊಗಳೂರು ತುಟ್ಟಿ-ಪಿಟಕ್ ಬ್ಯುರೋದಿಂದ)
ಬೊಗಳೂರು, ಆ.31- ಕೇಂದ್ರದ ಬೆಲೆ ಏರಿಕೆ (Unprecedented Price Agenda) ಸರಕಾರವು ತನ್ನ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಿಸಿದ್ದು, ಪ್ರಜೆಗಳ ಜೀವನಾವಶ್ಯಕ ವಸ್ತುಗಳನ್ನು ಮತ್ತಷ್ಟು ತುಟ್ಟಿ ಮಾಡುವ ಮೂಲಕ ದೇಶದ ಆರ್ಥಿಕ ಪ್ರಗತಿಗೆ ನಾಂದಿ ಹಾಡಿದೆ.ಈ ಮಧ್ಯೆ, ಕೂಗೊಂದು ಕೇಳಿಬಂದಿದ್ದು, ನೌಕರರ ತುಟ್ಟಿ ಭತ್ಯೆಯನ್ನು ಶೇ.35ರಿಂದ 41ಕ್ಕೆ ಏರಿಸಲಾಗಿದೆ. ಆದರೆ ಪ್ರಜೆಗಳ ಜೀವನಾವಶ್ಯಕ ವಸ್ತುಗಳ ತುಟ್ಟಿ ದರವನ್ನು ಶೇ.100ಕ್ಕೂ ಹೆಚ್ಚು ಏರಿಸಲಾಗಿದೆ. ಇದು ಯಾವ ನ್ಯಾಯ ಎಂದು ಕೇಂದ್ರ ಸರಕಾರಿ ನೌಕರರು ಪ್ರತಿಭಟನೆ ನಡೆಸಲು ತಯಾರಾಗಿದ್ದಾರೆ.
ಆದರೆ ಈ ನೌಕರರು ಪ್ರತಿಭಟನೆ ನಡೆಸುತ್ತಿರುವುದು ಬಡವರ ತುಟ್ಟಿ ದರವನ್ನು ಏರಿಸಿದ್ದಕ್ಕೆ ಅಲ್ಲ, ಬದಲಾಗಿ ತಮ್ಮ ತುಟ್ಟಿ ಭತ್ಯೆ ದರವನ್ನೂ ಶೇ.100ಕ್ಕಿಂತ ಹೆಚ್ಚು ಮಾಡಲು ಎಂಬುದನ್ನು ಬ್ಯುರೋ ಪತ್ತೆ ಹಚ್ಚಿದೆ.
ತುಟ್ಟಿ ಭತ್ಯೆ ಹೆಚ್ಚಳದಿಂದ ಬೊಕ್ಕಸಕ್ಕೆ 2206ಕ್ಕೂ ಹೆಚ್ಚು ಕೋಟಿ ರೂಪಾಯಿಯಷ್ಟು ಹೊರೆಯಾಗುತ್ತದೆ ಎಂದು ಸರಕಾರವೇ ಹೇಳುತ್ತಿದೆ. ಆ ಕಾರಣಕ್ಕೆ ಈ ಹೊರೆ ನಿವಾರಿಸಲು ನೌಕರರನ್ನೇ ಕೆಲಸದಿಂದ ನಿವಾರಿಸಿಬಿಟ್ಟರೆ ಸಾಕಷ್ಟು ಉಳಿತಾಯವಾಗುತ್ತದೆ ಎಂಬುದು ಬೊಗಳೂರು ಪ್ರಜೆಗಳ ಅಭಿಪ್ರಾಯ.
ತನ್ನ ಕ್ರಮಕ್ಕೆ ಸಮರ್ಥನೆ ನೀಡಿರುವ ಸರಕಾರವು, ತುಟ್ಟಿ ಭತ್ಯೆ ಹೆಚ್ಚಳದಿಂದ ಸರಕಾರಕ್ಕೆ ಎಷ್ಟು ಹೊರೆಯಾಗುತ್ತದೋ, ಅದಕ್ಕಿಂತ ಮೂರು ಪಟ್ಟು ಕಾಸು ನಮ್ಮ ಸಂಸದರು, ಶಾಸಕರ ಸೌಲಭ್ಯಕ್ಕೆ ಖರ್ಚಾಗುತ್ತದೆ. ಹಾಗಿರುವಾಗ ಇದನ್ನೆಲ್ಲವನ್ನೂ ನಾವು ಬೆಲೆ ಏರಿಕೆಯ ಮೂಲಕವೇ ಸರಿದೂಗಿಸಿಕೊಳ್ಳುತ್ತೇವೆ ಎಂದು ಸಮಜಾಯಿಷಿ ನೀಡಿದೆ.
ಇದಲ್ಲದೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವುದು ಜನತೆಯ ಮತ್ತು ಆ ಮೂಲಕ ದೇಶದ ಶ್ರೀಮಂತಿಕೆಯ ಸಂಕೇತ. ಬೇರೆ ಊರಿನಲ್ಲಿ 1 ರೂಪಾಯಿಗೆ ದೊರೆಯುವ ವಸ್ತುವೊಂದು ಇಲ್ಲಿ ಏಳೆಂಟು ರೂಪಾಯಿಗೆ ದೊರೆಯಿತೆಂದಾದರೆ, ನಮ್ಮ ಪ್ರಜೆಗಳ ಜೀವನ ಮೌಲ್ಯವೂ ಏಳೆಂಟು ಪಟ್ಟು ವೃದ್ಧಿಯಾದಂತಲ್ಲವೇ ಎಂದು ಸರಕಾರದ ವಕ್ತಾರರು ಪ್ರಶ್ನಿಸಿದ್ದಾರೆ.
ಈ ನಡುವೆ, ಬೊಗಳೂರಿನ ಕಿಡಿಗೇಡಿ ಸಮುದಾಯದವರೆಲ್ಲರೂ ಒಟ್ಟಾಗಿದ್ದು, ತುಟ್ಟಿ ಭತ್ಯೆಯ ಜತೆಗೆ ತುಟಿ ಭತ್ಯೆಯನ್ನೂ ಹೆಚ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.
2 ಕಾಮೆಂಟ್‌ಗಳು
ತುಟಿಭತ್ತೆ! ವ್ಹಾ, ಎಂಥಾ ಐಡಿಯಾ! ಸರಕಾರಿ ನೌಕರರೆಲ್ಲರೂ, ನಮಗೆ ವೇತನವೇ ಬೇಡ, ತುಟಿಭತ್ತೆಯನ್ನೆ ೧೦೦% ಜಾಸ್ತಿ ಕೊಡಿ ಎಂದು ಡಿಮಾಂಡ್ ಮಾಡಬಹುದು. ಕ್ಲಾಸ್ ೧,೨,೩ ನೌಕರರಿಗೆ, ಅದೇ ಕ್ಲಾಸಿನ ತಾರಿಣಿಯರಿಂದ ತುಟಿಭತ್ತೆ ಸಿಗುವದೊ ಹೇಗೆ?
ಪ್ರತ್ಯುತ್ತರಅಳಿಸಿಸುಧೀಂದ್ರರೇ,
ಪ್ರತ್ಯುತ್ತರಅಳಿಸಿನೀವು ಕ್ಲಾಸ್ ಕ್ಲಾಸ್ ಅಂತ ಇಂಗ್ಲಿಷಿನಲ್ಲಿ ಹೇಳಿದರೆ ಏನೋ ಸರಿ ಬರೋದಿಲ್ಲ... ಹಾಗಾಗಿ ಮೂರನೇ ದರ್ಜೆ ಅಂತ ಹೇಳಬಹುದು ನೋಡಿ. ಸಾಧ್ಯವಾಗದಿದ್ದರೆ ಥರ್ಡ್ ಕ್ಲಾಸ್ ಅಂತ ಪೂರ್ತಿಯಾಗಿ ಇಂಗ್ಲಿಷಿನಲ್ಲೇ ಹೇಳಿದರೆ ಮತ್ತಷ್ಟು ನಿಖರತೆ ಇರುತ್ತದೆ.
ಅದೇ ಕ್ಲಾಸಿನವರಿಂದ ದೊರೆಯುತ್ತದೆಯೇ ಎಂಬ ನಿಮ್ಮ ಶಂಕೆಯನ್ನು ದೂರ ಮಾಡಿಸಲು ತ್ವರಿತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಾರ್-ಮಿಕ ಸಚಿವರ ಮೂಲಕ ಭರವಸೆ ದೊರೆತಿದೆ.
ಏನಾದ್ರೂ ಹೇಳ್ರಪಾ :-D