ಬೊಗಳೆ ರಗಳೆ

header ads

"ಪೂರ್ಣ"ಧೂಮದ ಪಾನ ನಿಷೇಧ

(ಬೊಗಳೂರು ಧೂಮಪಾನಮತ್ತ ಬ್ಯುರೋದಿಂದ)
ಬೊಗಳೂರು, ಜು.2- ಸಂಪೂರ್ಣ ಧೂಮವನ್ನು ಪಾನ ಮಾಡುವುದನ್ನು ನಿಷೇಧಿಸಲು ವಿಶ್ವ ಆರೋಗ್ಯ ಸಂಸ್ಥೆ ಕರೆ ನೀಡಿರುವ ಬೆನ್ನಿಗೆ ಎಚ್ಚೆತ್ತುಕೊಂಡ ಕೇಂದ್ರ ಸರಕಾರವು, ಯಾರು ಕೂಡ "ಸಂಪೂರ್ಣ"ವಾಗಿ ಧೂಮವನ್ನೇ ಪಾನ ಮಾಡಬಾರದು ಎಂದು ಆದೇಶ ಹೊರಡಿಸಿದೆ.

ಪೂರ್ತಿಯಾಗಿ ಎಲ್ಲಾ ಧೂಮವನ್ನು ಒಳಗೆಳೆದುಕೊಂಡುಬಿಟ್ಟರೆ ಅದು ಆರೋಗ್ಯವಂತರ ಆರೋಗ್ಯಕ್ಕೆ ಮತ್ತು ಶ್ವಾಸಕೋಶ ಇದ್ದವರ ಶ್ವಾಸಕೋಶಕ್ಕೂ ಹಾನಿಯುಂಟು ಮಾಡುತ್ತದೆ. ಹೊಗೆಯನ್ನು ಸಂಪೂರ್ಣವಾಗಿ ಒಳಗೆಳೆದುಕೊಂಡರೆ ಹೊಗೆಗೆ ಒಳಗೆ ಜಾಗ ಸಾಲದೆ ಪಪ್ಪುಸ ಒಡೆಯುವ ಅಥವಾ ಅನಿಲ ಸೋರಿಕೆಯಾಗುವ ಸಾಧ್ಯತೆಗಳಿವೆ ಎಂಬ ಕಾರಣ ನೀಡಿ ಸರಕಾರದ ಅನಾರೋಗ್ಯ ಸಚಿವಾಲಯವು ಈ ಕ್ರಮ ಕೈಗೊಂಡಿದೆ ಎಂದು ನಮ್ಮ ವರದಿಗಾರರು ಮೂಗು ಮುಚ್ಚಿಕೊಂಡು ವರದಿ ಮಾಡಿದ್ದಾರೆ.

ಕೆಟ್ಟದ್ದನ್ನು ಸುಟ್ಟುಬಿಡಬೇಕು ಎಂಬ ದಾರ್ಶನಿಕರ ಸಂದೇಶವನ್ನು ಯಥಾವತ್ ಪಾಲಿಸುತ್ತಿರುವ ಇಂದಿನ ಜನಾಂಗೀಯರು, ಧೂಮಲೀಲೆಯಲ್ಲೇ ಮಗ್ನರಾಗಿ, ಇತ್ತೀಚಿನ ದಿನಗಳಲ್ಲಿ, ಅಲ್ಲಲ್ಲಿ ಹಳೆಯ ರೈಲು ಎಂಜಿನಿನಿಂದ ಹೊಗೆ ಬಿಡುತ್ತಿರುವ ದೃಶ್ಯಗಳು ಸರ್ವೇ ಸಾಮಾನ್ಯವಾಗಿ ಕಂಡುಬರುತ್ತಿದ್ದವು. ಹೊಗೆಬತ್ತಿ ಸೇವನೆಯು ಆರೋಗ್ಯಕ್ಕೆ ಹಾನಿಕರ ಎಂಬ ಕಟ್ಟೆಚ್ಚರಿಕೆಯುಳ್ಳ "ಶಾಸನ ವಿಧಿಸಿದ ಎಚ್ಚರಿಕೆ"ಯು ಯಾರ ಕಣ್ಣಿಗೂ ಬೀಳದಷ್ಟು ಚಿಕ್ಕ ಅಕ್ಷರಗಳಲ್ಲಿ ಮತ್ತು ದಟ್ಟ ಹೊಗೆಯ ನಡುವೆ ಕಣ್ಣಿಗೆ ಬೀಳದಂತಿದ್ದುದರಿಂದಾಗಿ ಯುವಕರು ಈ ತಂಬಾಕು ಯಜ್ಞವನ್ನು ಅಲ್ಲಲ್ಲಿ ಕೈಗೊಳ್ಳುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗಿದೆ.

ಅದು ಶಾಸನ ವಿಧಿಸಿದ ಎಚ್ಚರಿಕೆಯಾದರೂ ಧೂಮಪಾನವು ಸೇದಿದವರ ಆರೋಗ್ಯಕ್ಕೆ ಹಾನಿಕರ ಅಲ್ಲ, ಬದಲಾಗಿ ಪಕ್ಕದಲ್ಲಿ ಪರೋಕ್ಷವಾಗಿ ಧೂಮಪಾನ ಮಾಡುವವರ ಮತ್ತು ಹೊಗೆಬತ್ತಿ ಸೇದದವರ ಆರೋಗ್ಯಕ್ಕೆ ಹಾನಿಕರ ಎಂಬುದು ಶಾಸನ ವಿಧಿಸದ ಎಚ್ಚರಿಕೆ ಎಂದು ಧೂಮಪಾನಿಗಳು ತಿಳಿದುಕೊಂಡಿದ್ದರು ಎಂಬುದನ್ನು ಕೂಡ ಇದೇ ಸಂದರ್ಭದಲ್ಲಿ ಅನ್ವೇಷಣೆ ಮಾಡಲಾಗಿದೆ.

ಮಾತ್ರವಲ್ಲದೆ, ನೇರ ಧೂಮಪಾನಿಗಳಿಗಿಂತಲೂ ಪರೋಕ್ಷ ಧೂಮಪಾನಿಗಳ ಸಾವಿನ ಸಂಖ್ಯೆ, ಕಾಯಿಲೆಯ ಸಂಖ್ಯೆ ಹೆಚ್ಚಿರುವುದರಿಂದಾಗಿ ಇದನ್ನೇ ಆಯುಧವನ್ನಾಗಿಸಿಕೊಂಡ ಧೂಮಪಾನಿಗಳು, ನೋಡಿ, ಧೂಮಪಾನಿಗಳು ಆರೋಗ್ಯದಿಂದಿರುತ್ತಾರೆ, ಸೇದದವರೇ ಅನಾರೋಗ್ಯಕ್ಕೆ ತುತ್ತಾಗುತ್ತಾರೆ, ಆದುದರಿಂದ ಎಲ್ಲರೂ ಸೇದಿರಿ ಸೇದಿರಿ ಎಂದು ಬೊಗಳೆ ಘೋಷಣೆ ಹೊರಡಿಸಲಾರಂಭಿಸಿದ್ದಾರೆ.

ಇದೇ ತಂತ್ರಕ್ಕೆ ಮೊರೆ ಹೋದ ಸರಕಾರ ಸಂಪೂರ್ಣ ಧೂಮಪಾನ ನಿಷೇಧಿಸಿ, ಭಾಗಶಃ ಧೂಮಪಾನವನ್ನು ಉತ್ತೇಜಿಸಲು ನಿರ್ಧರಿಸಿದೆ ಎಂದು ಬೊಗಳೂರು ಬ್ಯುರೋ ವರದಿ ಮಾಡಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. ಪಪ್ಪುಸ ಪುಪ್ಪುಸ ಅಂತ ಏನೋ ಬರೆದಿದ್ದೀರಲ್ಲ, ಅದು ಕುಪ್ಪುಸದ ತದ್ಭವಾನಾ?

    ನೇರ ಪಾನ ಮಾಡೋದು, ಪರೋಕ್ಷವಾಗಿ ಪಾನ ಮಾಡೋದು ಅಂದರೇನು? ಧೂಮವೇನು ನೀರಿದ್ದ ಹಾಗೆ ಇರುತ್ತದಾ? ಕುಡಿಯೋಕ್ಕೆ :o

    ಧೂಮವನ್ನು ಯಾಕೆ ಪಾನ ಮಾಡ್ಬೇಕು? ಅಕಸ್ಮಾತ್ ಪಾನ ಮಾಡಿದರೂ ಉಗುಳಿದರಾಯ್ತಲ್ವಾ? ಅದೇನು ಬಿಸಿತುಪ್ಪಾನಾ - ಉಗುಳಿದರೆ ವೇಸ್ಟಾಗತ್ತೆ ಅನ್ನೋಕ್ಕೆ?

    ಅದೇನೇ ಆಗಲಿ, ನೀವು ಹೇಳಿದ್ದೀರ ಅಂದ ಮೇಲೆ ಇನ್ಮೇಲೆ ನಾನು ನೇರ ಪಾನ ಮಾಡೋಕ್ಕೆ ತಯಾರು? ಆದರೆ ಎಲ್ಲಿ ಹೇಗೆ ಎಂಬುದು ತಿಳಿಯದ ಕಾರಣ, ನಿಮ್ಮೊಡನೆ ತರಬೇತಿಗೆ ಬರುವೆ. ಹೆಚ್ಚು ಕಡಿಮೆ ಆಗೋದನ್ನು ನಾನು ಅಡ್ಜಸ್ಟ್ ಮಾಡಿಕೊಳ್ಳೋಣ. ಅಂದ ಹಾಗೆ ನೇರ ಪಾನ ಮಾಡೋವ್ರಿಗೆ ಸರಕಾರದವರು ಏನಾದ್ರೂ ಕೊಡ್ತಾರಾ?

    ಪ್ರತ್ಯುತ್ತರಅಳಿಸಿ
  2. ಧೂಮಾನ್ವೇಶಿಗಳೆ,

    ಸರ್ಕಾರ ಹೇಳ್ತನೆ ಇದೆ. ಮಾಡೋಲ್ಲ :)

    ಇಂತಿ
    ಭೂತ

    ಪ್ರತ್ಯುತ್ತರಅಳಿಸಿ
  3. ಅನ್ಯಾಯಾನ್ವೇಶಿಗಳೆ, ಶಾಸನದ ಸರಿಯಾದ ಅ(ನ)ರ್ಥ ಶೋಧಿಸಿದ್ದಕ್ಕಾಗಿ ಅನಂತ ವಂದನೆಗಳು. ಇನ್ನು ಮೇಲೆ ಸಾರ್ವಜನಿಕ ಸ್ಥಳಗಳಲ್ಲೂ ಸಹ ಹೊಗೆಯನ್ನು ಪೂರ್ಣ ಒಳಗೇ ಇಟ್ಟುಕೊಂಡು ವೀರಮರಣ ಅಪ್ಪಬೇಕಾಗಿಲ್ಲ,ಹೊಗೆಯನ್ನು ಪೂರ್ಣವಾಗಿ ಹೊರಗೆ ಬಿಟ್ಟು ಪರೋಕ್ಷ ಧೂಮಪಾನಿಗಳಂತಹ ಅಯೋಗ್ಯರಿಗೆ ಸ್ವರ್ಗ ಕಾಣಿಸಬಹುದು ಎಂದು ತಿಳಿದು ತುಂಬಾ ನೆಮ್ಮದಿಯಾಯಿತು. ಇದೇ ತರಹ ನೀವು ಶಾಸನಗಳ ಅ(ನ)ರ್ಥ ಶೋಧನೆಯನ್ನು ಮಾಡುತ್ತ ಹೋಗುವಿರಿ ಎಂದು ಹಾರೈಸುತ್ತೇನೆ.ನೀವು ಶಾಸಕರಾಗಲು ಬಯಸಿದರೆ ನಮ್ಮ ಓಟು ನಿಮಗೇ ಎಂದು ಖಾತ್ರಿ ಕೊಡುತ್ತೇನೆ.

    ಪ್ರತ್ಯುತ್ತರಅಳಿಸಿ
  4. ಶ್ರೀನಿವಾಸರೆ,
    ನೀವು ಹೇಳಿದ್ದು ತದ್ಭವ ಅಲ್ಲ, ಅಪದ್ಭವ...
    ನೇರ ಪಾನ ಮಾಡೋವ್ರಿಗೆ ಸರಕಾರ ಏನೂ ಕೊಡಲ್ಲ... ಆದರೆ ಯಮಧರ್ಮರಾಯನಿಂದ ಟಿತ್ರಗುಪ್ತನ ಮೂಲಕ ಭರ್ಜರಿ ಉಡುಗೊರೆ ಕೊಡಿಸಲು ಹಗ್ಗ ಹಾಕಿ ಎಳೆದೊಯ್ತಾರಂತೆ...

    ಪ್ರತ್ಯುತ್ತರಅಳಿಸಿ
  5. ಅಬ್ಬಾ... ಫ್ಯಾಂಟಮರೇ....
    ಹೊಗೆ ಹಾಕಿದ ಮೇಲೇ ಈ ಭೂತ ಮೇಲೆದ್ದು ಬಂತೇ? ಯಾಕೆ ಇತ್ತೀಚೆಗೆ ಭೂತ ಸಂಚಾರ ಕಡಿಮೆಯಾಗಿದೆಯಲ್ಲಾ....

    ಪ್ರತ್ಯುತ್ತರಅಳಿಸಿ
  6. ಸುನಾಥರೇ,
    ನಿಮ್ಮ ಒಂದು ಓಟಿಗಾಗಿ ಕಾಯ್ತಾ ಇದ್ದೇವೆ... ಒಂದಲ್ಲ ಎಷ್ಟು ಬೇಕಾದರೂ ಓಟು ಹಾಕಬಹುದು ಎಂದು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇವೆ. ಆದರೆ ಧೂಮಪಾನ ಇಲಾಖಾ ಸಚಿವರನ್ನಾಗಿ ಮಾತ್ರ ಮಾಡಬಾರದು.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D