(ಬೊಗಳೂರು ತಲೆತೆಗೆಯೋ ಸಲಹೆ ಬ್ಯುರೋದಿಂದ)
ಬೊಗಳೂರು, ಜೂ.15- ಖಾನಾಪುರದಲ್ಲಿ ಸಿಕ್ಕಾಪಟ್ಟೆ ಖಾನಾ ತಿಂದು ಕೈಯನ್ನು ಬೇರೆ ಬೇರೆ ರಣಹದ್ದುಗಳಂತಿರುವ ಬೆಕ್ಕುಗಳ ಮುಸುಡಿಗೆ ಒರೆಸಿರುವ ಕರೀಂ ತಲೆತೆಗಿ ಬಗ್ಗೆ ಸಿನಿಮಾ ನಿರ್ಮಾಣವಾಗುತ್ತಿರುವ ಸುದ್ದಿ ಕೇಳಿ ಬೊಗಳೂರು ಬ್ಯುರೋ ಬೆಚ್ಚಿ ಬಿದ್ದಿದೆ.
ಇದಕ್ಕೆ ಪ್ರಧಾನ ಕಾರಣವೆಂದರೆ ಛಾಪಾ ಕಾಗದದ ಪಾಪ ಕೂಪದಲ್ಲಿ ಬೊಗಳೆ ರಗಳೆ ಬ್ಯುರೋದ ಹೆಸರು ಕೂಡ ಚಲನಚಿತ್ರದಲ್ಲಿ ಪ್ರಕಟವಾಗುತ್ತದೆಯೇ ಎಂಬ ಒಂದು ಸಣ್ಣ ಮತ್ತು ಲೆಕ್ಕಕ್ಕಿಲ್ಲದ ಅಂಶ.
ಅದಲ್ಲದೆ ಈ ಛಾಪಾ ಕಾಗದದ ಕಾರುಬಾರಿನಿಂದ ಬಂದ ಹಣವನ್ನು ಕಾರು ಕೊಳ್ಳಲು ಮತ್ತು ಡ್ಯಾನ್ಸ್ ಬಾರುಗಳಲ್ಲಿ ಸುರಿಯಲು (ಬೇರೆಯವರ) ತಲೆತೆಗಿ ಸಂಚು ರೂಪಿಸಿದ್ದ ಎಂಬುದು ಕೂಡ ವರದಿಯಾಗಿದೆ. ಹೀಗಿರುವಾಗ ಹೇಗಾದರೂ ಮಾಡಿ ಈ ಹಗರಣದ ಮಸಿಯನ್ನು ತನ್ನ ಮೈಯಿಂದ ತೊಳೆದುಕೊಳ್ಳಲು ನಿರ್ಧರಿಸಿರುವ ಬೊಗಳೂರು ಬ್ಯುರೋ, ಇದೀಗ ಸಿನಿಮಾ ನಿರ್ಮಾಪಕರಿಗೆ ಖರ್ಚು ಕಡಿಮೆ ಮಾಡಿಸಲು ಒಂದು ಸಲಹೆ ಕೊಟ್ಟಿದೆ.
ಆ ಸಲಹೆಯ ಪರಿಣಾಮವೇ ಅದರಲ್ಲಿ ಸಾಕೀ ವಸ್ತ್ರಾಂತ ಹೇಳುತ್ತಿರುತ್ತಿರುವ ರಾಖಿ ಸಾವಂತ್ ಮತ್ತು ಸಂ-ಭಾವನೆ ಕೆರಳಿಸುತ್ತಿರುವ ಸಂಭಾವನಾ ಸೇಠ್ ಸೇರ್ಪಡೆ.
ತಲೆತೆಗಿಯು ಬೇರೆಯವರ ತಲೆ ತೆಗೆಯುವ ನಿಟ್ಟಿನಲ್ಲಿ ಹೆಸರು ಬಹಿರಂಗಪಡಿಸಲು ಆತನಿಗೆ ಮಂಪರು ಪರೀಕ್ಷೆ ನಡೆಸಲಾಗುತ್ತದಷ್ಟೇ? ಆದರೆ ಕುಡಿದು ಕುಡಿದೂ ಅಮಲಿಗೆ immune ಆಗಿಬಿಟ್ಟಿದ್ದ ತಲೆತೆಗಿಗೆ ಎಷ್ಟೇ ಔಷಧ ನೀಡಿದರೂ ಮಂಪರುನಿದ್ರೆಗೆ ಜಾರುತ್ತಿರಲಿಲ್ಲ. ಆ ಕಾರಣಕ್ಕೆ ಆತ ಮಾದಕತೆಯಲ್ಲಿ ತೇಲಾಡುವಂತಾಗುವ ನಿಟ್ಟಿನಲ್ಲಿ ಈ ಮಾದಕ ನಟಿಯರನ್ನು ಸೇರಿಸಿಕೊಳ್ಳಲು ನಮ್ಮ ಬ್ಯುರೋ ಸಲಹೆ ಮಾಡಿದೆ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಮೂಲಗಳು ವರದಿ ಮಾಡಿವೆ.
4 ಕಾಮೆಂಟ್‌ಗಳು
ಸಾಖೀ ರಾವಂತಳ ಮಾದಕ ಅನಾವರಣ ಹಾಗು ತಲೆತೆಗಿಯ ಭೀಕರ ನಗ್ನದರ್ಶನದಿಂದ ಬೆಚ್ಚಿ ಬೀಳುವ ಸಿನೆಮಾ ಪ್ರೇಕ್ಷಕರು ತಾವೆ ಮಂಪರಿನಲ್ಲಿ ಜಾರಿ ಹೋಗುವ ಭೀತಿಯಿದೆ. ಏನೂ ನೋಡಲಾರೆ, ಏನೂ ಕೇಳಲಾರೆ, ಏನೂ ಹೇಳಲಾರೆ ಎನ್ನುವ ಮಂಗಗಳಂತೆ ಅವರ ವರ್ತನೆಯಾಗಬಹುದು.
ಪ್ರತ್ಯುತ್ತರಅಳಿಸಿಚಿತ್ರ ಕಥೆ ಬಹಳ ಚೆನ್ನಾಗಿದೆ. ಈ ಕಥೆಯಿಂದ ಚಲನಚಿತ್ರವನ್ನೇನಾದರೂ ಮಾಡುವಂತಿದ್ದರೆ ... ಬಾರು ಬಾರು ದೇಖೋ ಹಜಾರು ಬಾರು ದೇಖೋ ಎನ್ನುವ ಹಾಡನ್ನು ಸೇರಿಸಿಕೊಳ್ಳಬಹುದು.
ಪ್ರತ್ಯುತ್ತರಅಳಿಸಿಬಹಳ ಚಂದದ ರೀಲು ಬಿಟ್ಟಿದ್ದಕ್ಕೆ ರೀಲೇಶ್ವರ ಎಂಬ ಬಿರುದನ್ನು ರಿಲಯನ್ಸ್ ಕಂಪನಿಯವರು ನೀಡಲು ಶಿಫಾರಸು ಮಾಡುತ್ತಿದ್ದೇವೆ.
ಸುನಾಥರೆ,
ಪ್ರತ್ಯುತ್ತರಅಳಿಸಿಅಂತೂ ನಟಿಯರೂ ಎಲ್ಲವನ್ನು ಬಿಚ್ಚಿಡುತ್ತಾರೆ, ತಲೆತೆಗಿಯಲು ಕೂಡ ಎಲ್ಲವನ್ನೂ ಬಟಾ ಬಯಲು ಮಾಡುತ್ತಿದ್ದಾನೆ ಎಂದಾದ ಮೇಲೆ ಈ ಚಿತ್ರಕ್ಕೆ ಎ ಸರ್ಟಿಫಿಕೆಟ್ ಗ್ಯಾರಂಟಿ.
ಶ್ರೀನಿವಾಸರೆ,
ಪ್ರತ್ಯುತ್ತರಅಳಿಸಿರೀಲು ಉದ್ದ ಆಗಿದೆ ಅಂತ ಸೆನ್ಸಾರ್ ಮಂಡಳಿಯೋರು ಎಲ್ಲಾದರೂ "ಏನೂ ಇಲ್ಲದ" ಕಡೆಗಳಲ್ಲೆಲ್ಲಾ ಕತ್ತರಿಯಾಡಿಸಿಬಿಟ್ಟರೆ, ಈ ಚಿತ್ರಕ್ಕೆ ಪ್ರೇಕ್ಷಕರು ಬಂದಾರೇ ಎಂಬ ಆತಂಕ ನಮಗೆ ಆರಂಭವಾಗಿದೆ.
ಏನಾದ್ರೂ ಹೇಳ್ರಪಾ :-D