(ಬೊಗಳೂರು ಅತ್ಯದ್ಭುತ ಬ್ಯುರೋದಿಂದ)
ಬೊಗಳೂರು, ಜೂ.27- ಜಗತ್ತಿನ ಏಳು ಅದ್ಭುತಗಳ ಪಟ್ಟಿಯಲ್ಲಿ ಬಿಪಾಶಾ ಬಸುವನ್ನು ಸೇರಿಸಿರುವುದರಿಂದ ಅಚ್ಚರಿಗೊಂಡ ಬೊಗಳೆ ರಗಳೆ ಬ್ಯುರೋ, ಉಳಿದ ಆದ್ಭುತಗಳು ಯಾವುವು ಎಂಬುದರ ಬಗ್ಗೆ ಕೂಲಂಕಷ ವಿಚಾರಣೆ ಆರಂಭಿಸಿತು.ಈ ಸ್ಥಾನಕ್ಕೆ ಅತ್ಯಂತ "ಸರಳ"ವಾದ ಉಡುಗೆ ಧರಿಸುವ ರಾಖೀ ಸಾವಂತ್ ಹೆಸರೂ ಚಾಲ್ತಿಯಲ್ಲಿದೆ ಎಂಬುದು ಕೂಡ ತಿಳಿದುಬಂದಾಗ, ಇನ್ನಷ್ಟು ಮಂದಿಯ ಹೆಸರನ್ನು ಇದಕ್ಕೆ ಸೇರಿಸಬಹುದು ಎಂದು ನಿರ್ಧರಿಸಿದ ನಮ್ಮ ಬ್ಯುರೋ, ಆ ವಿಷಯವನ್ನು ಅಲ್ಲಿಗೇ ಕೈಬಿಟ್ಟು ಬೇರೆ ಸಂಗತಿಗಳತ್ತ ದೃಷ್ಟಿ ಹೊರಳಿಸಿತು.
ಇನ್ನುಳಿದ ಐದು ಅದ್ಭುತಗಳನ್ನು ಪಟ್ಟಿ ಮಾಡುವ ಹೊಣೆಗಾರಿಕೆಯನ್ನು ಬೊಗಳೆ ರಗಳೆ ಬ್ಯುರೋಗೆ ವಹಿಸಲಾಗಿದ್ದು, ಇದಕ್ಕಾಗಿ ಓದುಗರಿಂದ ಅಭಿಪ್ರಾಯ ಸಂಗ್ರಹಿಸಲು ನಿರ್ಧರಿಸಲಾಗಿದೆ.
ನಮ್ಮ ಬ್ಯುರೋ ಸಿದ್ಧಪಡಿಸಿರುವ ಪಟ್ಟಿಯು ಈ ಕೆಳಗಿನಂತಿದೆ.
1. ರಾಜಕಾರಣಿ : ಎಷ್ಟೇ ಹಗರಣಗಳನ್ನು ತಲೆಯಿಂದ ಕಾಲಿನ ವರೆಗೆ ಲೇಪಿಸಿಕೊಂಡರೂ ಕಾನೂನಿನ ಕೈಯಿಂದ ಬಚಾವಾಗುತ್ತಾ, ಕಾನೂನನ್ನೇ ಬದಲಿಸುತ್ತಾ, ಆಗಾಗ್ಗೆ ಮಾಯವಾಗುತ್ತಾ, ಸಂಸತ್ತು/ವಿಧಾನ ಸಭೆಗಳಲ್ಲಿ ಗದ್ದಲ ಎಬ್ಬಿಸುತ್ತಿದ್ದರೂ, ಮತ್ತೆ ಮತ್ತೆ ಆರಿಸಿಬರುವ ಸಾಧನೆ.
2. ರಾಜಕೀಯ ಪಕ್ಷ 1 : ನಮ್ಮಲ್ಲಿ ಅಧಿಕಾರವಿದೆ, ಯಾರನ್ನು ಬೇಕಾದರೂ ರಾಷ್ಟ್ರಪತಿ/ರಾಜ್ಯಪಾಲ ಸ್ಥಾನದಲ್ಲಿ ತಂದು ಕೂರಿಸುತ್ತೇವೆ, ಸಂವಿಧಾನದ ಪರಮೋಚ್ಚ ಸ್ಥಾನಕ್ಕೆ ಅರ್ಹತೆ ಅನಗತ್ಯವಾಗಿದ್ದು, ಆ ಸ್ಥಾನದಲ್ಲಿರುವವರಿಗೂ ರಾಜಕೀಯ ಕಲಿಸುತ್ತೇವೆ ಎನ್ನುತ್ತಿರುವ ಕಲಸು ಮೇಲೋಗರ ಪಕ್ಷಗಳು.
3. ರಾಜಕೀಯ ಪಕ್ಷ 2 : ಅಧಿಕಾರ ಇರಲೇಬೇಕಿಲ್ಲ, ಸದಾ ಕಚ್ಚಾಡುತ್ತಲೇ ಕಾಲ ಕಳೆಯುತ್ತಾ, ಚುನಾವಣೆ ಬಂದಾಗ ದಿಢೀರನೆ ಎಚ್ಚೆತ್ತುಕೊಂಡು ಒಂದಾಗುವ, ಬಳಿಕ ಅಷ್ಟೇ ವೇಗದಲ್ಲಿ ಬೇರ್ಪಡುವ, ಭಿನ್ನಮತ ಏನೂ ಇಲ್ಲ ಎಂದು ಪ್ರತಿದಿನ ಹೇಳಿಕೆ ಕೊಡುವ, ಹೇಳಿಕೆ ನಿರಾಕರಿಸುವ ಇನ್ನೊಂದು ಮಾದರಿಯ ಪಕ್ಷ.
4. ರಾಜಕೀಯ ಪಕ್ಷ 3 : ನಾವು ಎಡಚರು, ಕಾಂಗ್ರೆಸ್ ಬದ್ಧ ವಿರೋಧಿಗಳು, ಉಳಿದವರೆಲ್ಲಾ ಕೋಮುವಾದಿಗಳು ಎನ್ನುತ್ತಲೇ, ತಾವು ಕೂಡ ಒಂದು ಸಮುದಾಯದ ಓಲೈಕೆಗೆ ಹೊರಟಿದ್ದರೂ, ನಾವು ಜಾತ್ಯತೀತರು, ಶ್ರೀಮಂತಿಕೆಯಲ್ಲಿ ಎಲ್ಲರಿಗೂ ಸಮಾನತೆ ಬೇಕು, ನಮಗೆ ಮಾತ್ರ ಹೆಚ್ಚು ಬೇಕು ಎನ್ನುತ್ತಾ, ಸರಕಾರ ಕಾರ್ಯ ನಿರ್ವಹಣೆ ಒಂಚೂರು ಇಷ್ಟವಿಲ್ಲ, ಅದರ ಕಾಲನ್ನು ಈಗ ಎಳೆಯುತ್ತೇವೆ ಎನ್ನುತ್ತಾ ವರ್ಷಗಟ್ಟಲೆ ದಿನ ದೂಡುತ್ತಿರುವವರು.
5. ರಾಜಕೀಯ ಪಕ್ಷ 4 : ಮೂರನೇ ರಂಗ ಕಟ್ಟುತ್ತೇವೆ, ಅದಾಗದಿದ್ದರೆ ನಾಲ್ಕನೇ ರಂಗ ಕಟ್ಟುತ್ತೇವೆ ಎನ್ನುತ್ತಾ, ನಾವು ಎಲ್ಲರಿಂದ ಸಮಾನ ದೂರ ಎಂದುಕೊಳ್ಳುತ್ತಾ, ಆಗಾಗ್ಗೆ ವಿದಳನವಾಗುತ್ತಾ, ಮತ್ತೆ ಜೋಡಿಸಿಕೊಳ್ಳುತ್ತಾ ಇದ್ದರೂ, ಚುನಾವಣೆ ಸಂದರ್ಭ ಒಂದೊಂದು ಬಾರಿ ದಿಢೀರನೇ ಆರಿಸಿಬರುವವರು.
6. ಪೊಲೀಸರು : ಯಾವುದೇ ರಾಜ್ಯದಲ್ಲಿ ಯಾವುದೇ ಪಕ್ಷವು ಅಧಿಕಾರ ಬಂದಾಗ, ಅದರ ತಾಳಕ್ಕೆ ತಕ್ಕಂತೆ ಕುಣಿಯಬೇಕಾದವರು ಎಂದು ಕರೆಸಿಕೊಳ್ಳುತ್ತಿರುವವರು.
ಹಾಗಿದ್ದರೆ ಕೊನೆಯ ಅದ್ಭುತ???
----
----
----
ಇದನ್ನು ಜಗತ್ತಿನ ಏಳನೇ ಅದ್ಭುತ ಅಥವಾ ಎಂಟನೇ ಅದ್ಭುತ ಎಂದೂ ಕರೆಯಬಹುದಾಗಿದೆ. ಆಯ್ಕೆ ಓದುಗರಿಗೆ ಬಿಟ್ಟದ್ದು.
7. ತೆರಿಗೆ ತಪ್ಪಿಸಿಕೊಳ್ಳುತ್ತಿರುವ ಜಾರಕಾರಣಗಳ ಐಷಾರಾಮಿ ಜೀವನಕ್ಕಾಗಿ, ತಾನು ಕಷ್ಟಪಟ್ಟು ದುಡಿದ ಹಣವನ್ನು ತೆರಿಗೆ ರೂಪದಲ್ಲಿ ಕಟ್ಟಿ ಕಟ್ಟಿ ಸುಸ್ತಾಗಿ, ಏರುತ್ತಿರುವ ಬೆಲೆಗಳನ್ನು ಆಕಾಶದಲ್ಲೇ ದೃಷ್ಟಿಸಿ ನೋಡುತ್ತಾ ಏನೂ ಮಾಡಲಾರದೆ ಕೈಚೆಲ್ಲಿ ಕೂತಿರುವ ಬಡ ಪ್ರಜೆ!!!
4 ಕಾಮೆಂಟ್‌ಗಳು
ಈ ಪಟ್ಟಿಯಲ್ಲಿ ಜಾತ ಮಹಲ್ ಇಲ್ವಾ? ಬಿಪಾಶಾಗೆ ಜಾತಮಹಲ್ ಕಟ್ಟುವರಂತೆ! ಇದರ ಬಗ್ಗೆ ನಿಮ್ಮಲ್ಲೇನಾದರೂ ಮಾಹಿತಿ ಇದೆಯಾ? ಜನಸಾಮಾನ್ ಅಂದ್ರೆ ಯಾರದು?
ಪ್ರತ್ಯುತ್ತರಅಳಿಸಿಹರದನಹಳ್ಳಿಯ ಮಣ್ಣಿನ ಮಗನೇ ಎಲ್ಲ ಅದ್ಭುತಗಳಿಗಿಂತಲೂ ಹೆಚ್ಚಿನ ಅದ್ಭುತ.
ಪ್ರತ್ಯುತ್ತರಅಳಿಸಿಶ್ರೀನಿವಾಸರೆ,
ಪ್ರತ್ಯುತ್ತರಅಳಿಸಿಬಿಪಾಶಾಗೆ ತಾಜಾ ಮಹಲು ಕಟ್ಟಿಸಲು ಹಲವಾರು ಮಂದಿ ಕ್ಯೂನಲ್ಲಿ ನಿಂತಿದ್ದಾರೆ. ಜನರ ಸಾಮಾನ್ ಬಗ್ಗೆ ಜಾರಕಾರಣಿಗಳು ಕಾಳಜಿ ತೆಗೆದುಕೊಳ್ಳುತ್ತಾರೆ.
ಸುನಾಥರೆ,
ಪ್ರತ್ಯುತ್ತರಅಳಿಸಿನಿಮ್ಮ ಊಹೆ ಸರಿ. ಆದರೆ ಪಟ್ಟಿಯಲ್ಲಿ ಎಲ್ಲಿ ಸೇರಿಸುವುದೆಂದು ಗೊಂದಲವಾದ ಕಾರಣ, ತಪ್ಪಿ ಹೋಗಿದೆ... ಮುಂದಿನ ಸಾರಿ ಪಟ್ಟಿಯಲ್ಲಿ ಸೇರಿಸಲಾಗುತ್ತದೆ ಎಂದು ಭರವಸೆ... ಅಲ್ಲಲ್ಲ.... ಆಶ್ವಾಸನೆ ನೀಡುತ್ತಿದ್ದೇವೆ.
ಏನಾದ್ರೂ ಹೇಳ್ರಪಾ :-D