(ಬೊಗಳೂರು ವಿದ್ಯಾರ್ಥಿಕ್ಷೇಮ ಬ್ಯುರೋದಿಂದ)
ಬೊಗಳೂರು, ಮೇ 17- ರಾಗಿಂಗ್ (Ragging) ಅನ್ನು ಕ್ರಿಮಿನಲ್ ಪ್ರಕರಣದಂತೆ ಪರಿಗಣಿಸಿ ಇದರಲ್ಲಿ ತೊಡಗುವವರನ್ನು ಕಠಿಣವಾಗಿ ಶಿಕ್ಷಿಸಬೇಕು ಎಂಬ ನ್ಯಾಯಾಲಯದ ತೀರ್ಪು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಘಟನೆ ಬೊಗಳೂರು ಬೀದಿಯಲ್ಲಿ ನಡೆದಿದೆ.ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ವಿಧಿಸಿದ ಕಡಿವಾಣ ಎಂದು ಪ್ರತಿಕ್ರಿಯಿಸಿರುವ ಅಖಿಲ ಬೊಗಳೂರು ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಹೀಗೆ ಮಾಡಿದರೆ ನಾವು ಕಾಲೇಜು ಮೆಟ್ಟಿಲೇರುವುದಾದರೂ ಹೇಗೆ ಎಂದು ಪ್ರತಿಕ್ರಿಯಿಯಿಸಿದ್ದಾರೆ.
ಹೈಸ್ಕೂಲ್ ಮುಗಿಸಿ ಕಾಲೇಜಿಗೆ ಬರುವುದೇ ಮಜಾ ಮಾಡಲು ಮತ್ತು ಮಜಾ ಪಡೆಯಲು. ಇನ್ನು ರಾಗಿಂಗ್‌ಗೆ ಕಡಿವಾಣ ಹೇರಿದಲ್ಲಿ ನಾವು ಕಾಲೇಜಿಗೆ ಬಂದು ಏನು ಪ್ರಯೋಜನ ಎಂದು ಪ್ರಶ್ನಿಸಿರುವ ಅವರು, ಶಿಕ್ಷಣ ಅಥವಾ ಸರ್ಟಿಫಿಕೇಟ್ ಎಲ್ಲಿ, ಯಾವಾಗ ಬೇಕಾದರೂ ಹಣ ಕೊಟ್ಟರೆ ದೊರೆಯುತ್ತದೆ, ಆದರೆ ರಾಗಿಂಗ್ ಎಲ್ಲಿ ಬೇಕೆಂದರಲ್ಲಿ ಮಾಡಲಾಗುವುದಿಲ್ಲವಲ್ಲ ಎಂದು ಕೊರಗಿದ್ದಾರೆ.
ಭವಿಷ್ಯದಲ್ಲಿ ಉತ್ತಮ ಪ್ರಜಾ-ಪ್ರಭುತ್ವವಾದಿಯಾಗಲು ಇಂಥ ರಾಗಿಂಗ್ ಚಟುವಟಿಕೆಗಳು ಪ್ರೇರಕ. ಕೇಂದ್ರದಲ್ಲಿ ಅಧಿಕಾರ ಹಿಡಿಯಬೇಕಿದ್ದರೆ ವಿದ್ಯಾರ್ಥಿ ಜೀವನದಲ್ಲಿ ಇವೆಲ್ಲವನ್ನೂ ಮಾಡಿ ಕಲಿತು, ಬಲಿತು ಮುಂದೆ ದೊಡ್ಡ ದೊಡ್ಡ ಕ್ರಿಮಿನಲ್ ಕೇಸುಗಳಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಹಾಗಿರುವಾಗ ಇದು ಮೂಲಭೂತ ಹಕ್ಕು ಎಂದವರು ಬಣ್ಣಿಸಿದ್ದಾರೆ.
ರಾಗಿಂಗ್ ಬೇಕು ಎಂದು ನೀವು ಇಷ್ಟೊಂದು ಒತ್ತಾಯ ಮಾಡುತ್ತಿರುವುದೇಕೆ ಎಂದು ಪ್ರಶ್ನಿಸಿದಾಗ ಅವರು, ಛೆ! ನೀವೆಂಥ ಪತ್ರಕರ್ತರಯ್ಯ? ಕಾಲೇಜು ವಿದ್ಯಾರ್ಥಿಗಳು ಬೆಲೆದು ದೊಡ್ಡವರಾಗಿ ರಾಜಕೀಯ ಎಂಬ ಅದ್ಭುತ ಉದ್ಯಮಕ್ಕೆ ಧುಮುಕಬೇಡವೇ? ಅಲ್ಲಿ ಚುನಾವಣೆಗಳಲ್ಲಿ Rigging ಮಾಡಬೇಕಿದ್ದರೆ Raggingಏ ಅಡಿಪಾಯ ಇದ್ದಹಾಗೆ ಎಂದು ಉತ್ತರಿಸಿ, ಕಿರಿಯ ವಿದ್ಯಾರ್ಥಿಯನ್ನು ಚುಡಾಯಿಸಲು ಹೊರಟೇಹೋದರು.
6 ಕಾಮೆಂಟ್‌ಗಳು
ರಿಗ್ಗಿಂಗ್ ಮಾಡಿದವರೇ ರ್‍ಯಾಗಿಂಗ್ ಮಾಡಿದವರನ್ನು ಹಿಡಿಯೋದು ಸುಲಭ. ಏಕೆಂದರೆ ಅವರಾಗಲೇ ಆ ಕ್ಷೇತ್ರದಲ್ಲಿ ಪಳಗಿರ್ತಾರೆ. ಬೇರೆಯವರಿಗೆ ಈ ಕೆಲಸ ವಹಿಸಿದರೆ, ಬೆಗ್ಗಿಂಗ್ ಮಾಡಿದರೂ ಸುಳಿವು ಸಿಗೋಲ್ಲ :)
ಪ್ರತ್ಯುತ್ತರಅಳಿಸಿರಿಗ್ಗಿಂಗ್ ಮಾಡುವುದರಲ್ಲಿ ನಾನು ನಿಷ್ಣಾತ ಎಂದು ಹೇಳಿಕೊಳ್ಳಲು ನಾನು ಇಚ್ಛಿಸುವುದಿಲ್ಲ :D
ಕಾಲೇಜುಗಳಲ್ಲಿ ರ್ಯಾಗಿಂಗ್ ಮಾಡಿ ಅನುಭವ ಗಳಿಸದಿದ್ದರೆ, ಶಾಸಕರು ಶಾಸನ ಸಭೆಗಳಲ್ಲಿ ಏನು ಮಾಡಬೇಕು? ರ್ಯಾಗಿಂಗನ್ನು ಸಂವಿಧಾನದ ಮೂಲಭೂತ ಹಕ್ಕುಗಳಲ್ಲಿ ಸೇರಿಸಬೇಕೆನ್ನುವದು ನನ್ನ ಹಕ್ಕೊತ್ತಾಯದ ಬೇಡಿಕೆ.
ಪ್ರತ್ಯುತ್ತರಅಳಿಸಿಅನ್ವೇಷಿಗಳೆ, ಎಲ್ಲಡಗಿದ್ದೀರಿ? ಇತ್ತೀಚೆಗೆ ಯಾಕೋ ತಮ್ಮ ಮೂಜುದರ್ಶನ ಅಪರೂಪವಾಗಿಬಿಟ್ಟಿದೆಯಲ್ಲ? ನಿಮ್ಮ ಮನವ ಕಾಡುತ್ತಿರುವ ತರಳೆ ಯಾರೆಂದು ನಾವು ಕೇಳಬಹುದೇ? ನೀವು ಉತ್ತರ ಪೇಳಲಹುದೇ?
ಪ್ರತ್ಯುತ್ತರಅಳಿಸಿಶ್ರೀನಿವಾಸರೆ,
ಪ್ರತ್ಯುತ್ತರಅಳಿಸಿನೀವು ರಿಗ್ಗಿಂಗಿನಲ್ಲಿ ನಿಷ್ಣಾತ ಎಂದು ಹೇಳಿಕೊಳ್ಳದಿದ್ದರೂ ನಾವು ಕೇಳಿಸಿಕೊಳ್ಳುತ್ತೇವೆ.... ಏನು ಮಾಡುತ್ತೀರಿ ???
ಸುನಾಥರೆ,
ಪ್ರತ್ಯುತ್ತರಅಳಿಸಿನಿಮ್ಮ ಬೃಹತ್ ಬೇಡಿಕೆಯನ್ನು ನೋಡಿ ಯುವಜನತೆಯೆಲ್ಲವೂ ನಿಮ್ಮ ಬೆನ್ನ ಹಿಂದೆಯೇ ಬೀಳುವ ಸಾಧ್ಯತೆಗಳು ಗೋಚರಿಸುತ್ತಿವೆ. ಹೀಗಾದರೆ ಮುಂದೆ ನೀವು ಚುನಾವಣೆಗೆ ನಿಲ್ಲಬಹುದು....!
ಜಗಲಿ ಭಾಗವತರೆ,
ಪ್ರತ್ಯುತ್ತರಅಳಿಸಿನಿಮ್ಮ ಮುಜ್ಜು ಎಂಬ ಹೊಸ ಅಭಿದಾನದಿಂದ ಸಂತೃಪ್ತರಾಗಿದ್ದೇವೆ...
ವಿಷಯ ಏನಂದ್ರೆ, ನಾವು ಕೂತಲ್ಲೇ ಇದ್ದರೂ, ಎಲ್ಲರೂ ನಮ್ಮ ಸುತ್ತಮುತ್ತ ಸೇರಿ ಏಳದಂತೆ ಒತ್ತಿ ಹಿಡಿದು, ಅಕ್ಷರಶಃ ನಾವು ಅಡಗಿಹೋದಂತೆ ಆಗಿಬಿಟ್ಟಿದ್ದೇವೆ. ಧ್ವನಿ ಅಡಗಿಸುವ ಪ್ರಯತ್ನವೂ ಇದೇ ಸಂದರ್ಭ ನಡೆಯುತ್ತಿರುವುದರಿಂದ ನಮ್ಮ ಮೂಜು ಕೊಂಚ ಅಪ- ಅಲ್ಲಲ್ಲ ವಿರೂಪ ಆಗಿದ್ದಿರಬಹುದು.
ಏನಾದ್ರೂ ಹೇಳ್ರಪಾ :-D