ಬೊಗಳೆ ರಗಳೆ

header ads

ಸದನದಲ್ಲಿ ಗದ್ದಲ, ಹೊರಗಿನಿಂದಲೇ ಸಭಾತ್ಯಾಗ!

(ಬೊಗಳೂರು Honey honey ಬ್ಯುರೋದಿಂದ)
ಬೊಗಳೂರು, ಏ.7- ಯಾವತ್ತೂ ಕೂಗಾಡುತ್ತಾ ಚೀರಾಡುತ್ತಾ ಸಿಕ್ಕಿದ್ದನ್ನು ಎಸೆಯುತ್ತಾ ಸದನದೊಳಗೆ ಗದ್ದಲ ಮಾಡಿ, ಅದರಿಂದಲೂ ತಮ್ಮನ್ನು ಸಭಾಧ್ಯಕ್ಷರು ಹೊರ ಹಾಕದಿದ್ದಾಗ ಸಭಾತ್ಯಾಗ ಮಾಡುವವರು ಸದನದ ಹೊರಗೆ ಬಂದೂ ಸಭಾತ್ಯಾಗ ಮಾಡಿದ ಘಟನೆ ಇಲ್ಲಿ ವರದಿಯಾಗಿದೆ.

ಸಚಿವರು, ಶಾಸಕರು ಸದನದೊಳಗೆ ಯಾವತ್ತೂ ನಡೆಯುವ ಗದ್ದಲಕ್ಕೆ ಒಗ್ಗಿ ಹೋಗಿದ್ದರಿಂದಾಗಿ ಗುಂಯ್ ಎಂಬ ಸದ್ದಿಗೆ ಅವರ ಕಿವಿಯು immune ಆಗಿತ್ತು. ಹೀಗಾದ್ದರಿಂದ ನಮ್ಮ ಬರುವಿಕೆಯು ಅವರ ಕಿವಿಗೆ ಬಿದ್ದಿರಲಿಲ್ಲ ಎಂದು dearest honey ನೊಣಗಳು ಅಸತ್ಯಾನ್ವೇಷಿ ಕಿವಿಯಲ್ಲಿ ಊದಿವೆ.

ಆದರೆ ಸದನದಿಂದ ಸಭಾತ್ಯಾಗ ಮಾಡಿದವರೆಲ್ಲರೂ ಹೊರಬಂದು, ಜೇನ್ನೊಣ ಕಾಟದಿಂದ ತಪ್ಪಿಸಿಕೊಳ್ಳಲು ಹೊರಗೆ ನಡೆಯುತ್ತಿದ್ದ ಸಭೆಯನ್ನು "ತ್ಯಾಗ" ಮಾಡಿ ಹೋಗಿದ್ದು ಸದನದೊಳಗೆಯೇ ಎಂದು ಪತ್ತೆ ಹಚ್ಚಲಾಗಿದೆ.

ಈ ನಡುವೆ, ತಮ್ಮನ್ನು ಭಯೋತ್ಪಾದಕರು ಎಂದು ಬಿಂಬಿಸುವ ಪತ್ರಿಕೆಗಳ ವಿರುದ್ಧವೂ ಅವುಗಳು ಗುಂಯ್‌ಗುಡುತ್ತಿರುವುದರಿಂದ ಶೀಘ್ರವೇ ಅವೆಲ್ಲವೂ ಇತ್ತಕಡೆ ಲಗ್ಗೆ ಹಾಕಲಿವೆ ಎಂಬುದನ್ನು ಮನಗಂಡಿರುವ ಪುತ್ರಕರ್ತರು, ರಾಣಿಯನ್ನು ಮಾತ್ರ ಗೂಡಿನೊಳಗಿರಿಸಲು ಸಂಚು ಹೂಡುತ್ತಿರುವುದನ್ನು ನಮ್ಮ ಬ್ಯುರೋ ಬಯಲಿಗೆಳೆದಿದೆ.

ವಿಧಾನಸಭೆಯ ಹೊರಗೆ ನಡೆದ ಈ ಘಟನೆಯಲ್ಲಿ ಮಹಿಳೆಯರು ಜೇನುನೊಣಗಳಿಂದ ರಕ್ಷಿಸಿಕೊಳ್ಳಲು ಸೆರಗು ಮುಚ್ಚಿಕೊಂಡರು, ಆದರೆ ಪುರುಷರು ಕಾಲಿಗೆ ಬುದ್ಧಿ ಹೇಳಿದರು ಎಂದು ವರದಿಯಾಗಿದೆ. ಈ ವರದಿಯ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಬೊಗಳೆ ಬ್ಯುರೋ, ಪುರುಷರು ಕಾಲಿಗೆ ಬುದ್ಧಿ ಹೇಳುವುದರ ಬದಲು, ಕೈ ಮತ್ತು ಬಾಯಿಗೆ ಬುದ್ಧಿ ಹೇಳಿದ್ದರೆ "ಹೆಜ್ಜೇನು ಸವಿದಂತೆ ಸರ್ವಜ್ಞ" ಎಂಬುದನ್ನು ಅನುಭವಿಸಬಹುದಿತ್ತಲ್ಲವೇ ಎಂದು ಪ್ರಶ್ನಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. ಅಣ್ಣಾವ್ರ ಜೇನಿನ ಮಳೆ ಹಾಡನ್ನು ಆ ಹನಿ-ನೋಣಗಳು ಕೇಳ್ತಾ ಇದ್ದವಂತೆ..ಆಯ್ತು ಸ್ಪಲ್ಪ ಜೇನಿನ ಮಳೆ ಸುರಿಸೋಣಾ ಅಂತಾ ಬಂದವಂತೆ..ಆದರೆ ಕತ್ತೆಗೇನು ಗೊತ್ತು ಕಸ್ತುರಿ ಪರಿಮಳ ಎಂದಂತೆ ನಮ್ಮ ರಾಜಕೀಯ ಜಿರಲೆಗಳಿಗೆ ಜೇನು-ನೋಣಗಳ ಸದುದ್ದೇಶ ಅರ್ಥನೇ ಆಗಲಿಲ್ಲವಂತೆ..

    ಬಂದಿರೋದು ಕಚ್ಚೋದಿಕ್ಕೆ ಅಂದುಕೊಂಡು ಓಡಿದರಂತಾಲ್ಲ..

    ಪ್ರತ್ಯುತ್ತರಅಳಿಸಿ
  2. ಕಿವಿ ಕಚ್ಚುವ ಆ ರಾಣಿಗೂ ಮತ್ತು ಅನ್ವೇಷಿಗಳಿಗೂ ಏನೋ ಕನೆಕ್ಸನ್ ಇದೆಯಂತೆ. ಹಾಗಾಗಿ ಹೊರಗಿನ ಸಮಾಚಾರವೆಲ್ಲಾ ಒಳಗೆ ಹೋಗಿ, ಸದನಿಗರೆಲ್ಲರೂ ಹೊರಗೆ ಕದನ ಮಾಡ್ಲಿಕ್ಕತ್ಯಾರ? ಏನಾಗಿದೆ ಅಂಬೋದನ್ನ ನಮ್ಮ ಅನ್ವೇಷಿಗಳು ಹೊರಕ್ಕ ಹಾಕ್ಲಿಕ್ಕ ಹತ್ಯಾರ.

    ಸದ್ಯದಲ್ಲೇ ನಮ್ಮ ಪತ್ರಿಕೆಯಲ್ಲಿ ಹಾಟ್ ಸುದ್ದಿ ನಿರೀಕ್ಷಿಸಿ

    ಪ್ರತ್ಯುತ್ತರಅಳಿಸಿ
  3. ಶಿವ್ ಅವರೆ,
    ಈ ಹನಿ ಹನಿಗಳನ್ನು ಹಿಡಿಯುವ ಹಾಗಿದ್ರೆ ಈ ರಾಜಕಾರಣಿಗಳು ಅದಕ್ಕೂ ಏರ್ಪಾಟು ಮಾಡುತ್ತಿದ್ದರು. ಅವರಿಗೆ ಈ ದುಡ್ಡು ಮಾಡೋ ದಂಧೆ ವಿಷಯ ಗೊತ್ತಾಗದಂತೆ ಶ್ರಮ ವಹಿಸಿ.
    ಆದರೂ ಹನಿಗಳು ಕಚ್ಚೋದಕ್ಕೆ ಬಂದ್ರೆ ಇವರೇಕೆ ಓಡಬೇಕು ಎಂಬುದಿನ್ನೂ ಅರ್ಥವಾಗದ ಸಂಗತಿ!!!!

    ಪ್ರತ್ಯುತ್ತರಅಳಿಸಿ
  4. ಯಾವನೋ ಒಬ್ಬ? ಅವರಿಗೆ ಸ್ವಾಗತ.

    ರಾಣಿ ಮತ್ತು ಅನ್ವೇಷಿ ಸಂಪರ್ಕ ಬಯಲಿಗೆಳೆಯಲು ಯತ್ನಿಸಿದರೆ, ಅನ್ವೇಷಿಯೂ ಯಾವನೋ ಒಬ್ಬ ಆಗುತ್ತಾನೆ ಎಂದು ಜೇನುನೊಣಗಳ ಮೂಲಕ ಕಚ್ಚರಿಸುತ್ತಿದ್ದೇವೆ!!!

    ನಿಮ್ಮ ಪತ್ರಿಕೆಯ ಹಾಟ್ ಸುದ್ದಿ ನೋಡಲು ಹೋದರೆ ಬಾಗಿಲೇ ತೆರೀತಾ ಇಲ್ವಲ್ಲಾ???

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D