(ಬೊಗಳೂರು ನಿರ್ವಸ್ತ್ರೋದ್ಯಮ ಬ್ಯುರೋದಿಂದ)
ಬೊಗಳೂರು, ಏ.5- ಚಿತ್ರ ತಾರೆಯರು ಅಸ್ಸಾಂಗೆ ದಂಡೆತ್ತಿ ಹೋಗಿರುವುದರ ಹಿಂದಿನ ರಹಸ್ಯ ಬಯಲಾಗಿದ್ದು, ಕಾನೂನು ನಿರ್ಮಾತೃಗಳಿಗೆ ಬಟ್ಟೆ ತೊಡಿಸಲು ಅವರು ತೆರಳಿದ್ದರೆಂಬ ರಹಸ್ಯ ಅಂಶವನ್ನು ಬೊಗಳೆ ರಗಳೆ ಬ್ಯುರೋ ಪತ್ತೆ ಹಚ್ಚಿದೆ.ಸದನದಲ್ಲಿ ಯಾವ ರೀತಿ ಬಟ್ಟೆ ತೊಡಬೇಕು ಅಥವಾ ಬಿಚ್ಚಬೇಕು ಎಂಬುದರ ಬಗ್ಗೆ ಈ ಕಾನೂನು ರೂಪಕರು ಇಷ್ಟೊಂದು ತಲೆ ಕೆಡಿಸಿಕೊಳ್ಳುತ್ತಾರೇಕೆ? ಎಂದು ಮೂಗಿನ ಮೇಲೆ ಎರಡೂ ಬೆರಳಿಟ್ಟು ಒತ್ತಿಕೊಂಡಿರುವ ಸಿನಿ ತಾರೆಯರು, ಇವರು ಬಹುಶಃ ನಮ್ಮ ನಟನೆಯ ಚಿತ್ರಗಳನ್ನೇ ನೋಡಿರಲಿಕ್ಕಿಲ್ಲ ಎಂದು ತಲೆ ಚಚ್ಚಿಕೊಂಡಿದ್ದಾರೆ.
ಬಟ್ಟೆ ತೊಟ್ಟರೂ ಹೇಗೆ ತೊಡದಂತಿರಬೇಕು ಮತ್ತು ತೊಡದೆಯೂ ಬಟ್ಟೆ ತೊಟ್ಟಂತೆ ಕಾಣಿಸುವುದು ಹೇಗೆ ಎಂಬುದರ ಕುರಿತು ಈ ಕಾನೂನು ರೂಪಕರಿಗೆ ಹೇಳಿಕೊಡುವುದಾಗಿ ತಿಳಿಸಿರುವ ವಸ್ತ್ರಶೂನ್ಯ ತಾರೆಯರು, ಇದಕ್ಕಾಗಿ ಅಸ್ಸಾಂನಲ್ಲಿ "ಬಟ್ಟೆ ಕ್ರ್ಯಾಶ್" ಕೋರ್ಸ್ ನಡೆಸಲು ಸನ್ನದ್ಧರಾಗಿದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗಿದೆ.
ಆದರೆ ಸದನಕ್ಕೆ ಬರುವಾಗ ಮೈಕು, ಕುರ್ಚಿಗಳೆಲ್ಲಾ ಗಾಳಿಯಲ್ಲಿ ಹಾರಾಡುವುದರಿಂದ ದೇಹದ ಅಮೂಲ್ಯ ಭಾಗಗಳ ರಕ್ಷಣೆ ಬಗ್ಗೆ ಈ ವಸ್ತ್ರಶೂನ್ಯ ತಾರೆಯರಿಗೆ ಯಾವುದೇ ಅರಿವು ಇಲ್ಲ, ಅವರು ಕುಣಿಯುವಾಗ ತೊಟ್ಟ ಬಟ್ಟೆಯೆಲ್ಲವೂ ಗಾಳಿಯಲ್ಲಿ ಹಾರಾಡುತ್ತದೆಯೇ ಹೊರತು, ಮೈಕು-ಕುರ್ಚಿಗಳು ಹಾರಾಡಿದ ಅನುಭವ ಅವರಿಗಿಲ್ಲ ಎಂದು ಅಸ್ಸಾಂ ಸದನದ ಬಾಹು-ಬಲರು ತೋಳೆತ್ತಿ ಘರ್ಜಿಸಿದ್ದಾರೆ.
ಈ ತಾರೆಯರು ಬಂದರೆ ಬರಲಿ, ಆದರೆ ನಮಗೆ ಬಟ್ಟೆ ತೊಡುವ ಬಗ್ಗೆ ಪಾಠ ಕಲಿಸಬೇಕಾಗಿಲ್ಲ ಎಂದಿರುವ ಅವರು, ಅವರು ಕಲಿಸಿದ ಪಾಠ ಕಲಿತು ಸದನದಿಂದ ಹೊರಗೆ ಬಂದು ತಲೆಯೆತ್ತಿ ನಡೆಯಲಾದೀತೇ? ನಾವು ಮುಜುಗರವಿಲ್ಲದೆ ನಡೆದರೂ ನೋಡುಗರು ಗರ ಬಡಿದವರಂತೆ ಇರಲಾರರೇ ಎಂದು ಪ್ರಶ್ನಿಸಿದ್ದಾರೆ.
0 ಕಾಮೆಂಟ್ಗಳು
ಏನಾದ್ರೂ ಹೇಳ್ರಪಾ :-D