ಬೊಗಳೆ ರಗಳೆ

header ads

ಸರ್ವ-ಚಿತ್ someಮತ್ಸರ ಫಲ

(ಬೊಗಳೆ ಭವಿಷ್ಯರಹಿತ ಬ್ಯುರೋದಿಂದ)
ಸರ್ವರಿಗೂ ಸರ್ವಜಿತು ನಾಮ ಸಂವತ್ಸರದ ಶುಭಾಶಯಗಳೊಂದಿಗೆ ಬೊಗಳೆ ರಗಳೆ ಬ್ಯುರೋ ತನ್ನ ಓದುಗರಿಗಾಗಿ ಚಿಂತಾಜನಕ ಭವಿಷ್ಯ ವಾಣಿಯನ್ನು ಉಣಬಡಿಸಲಿದೆ.

ಬೊಗಳೆ ರಗಳೆ ಬ್ಯುರೋ ಭವಿಷ್ಯದ ವಿಶೇಷತೆಯೆಂದರೆ, ಈ ಕೆಳಗಿನ ರಾಶಿಗಳಿಂದ ಯಾರು ಬೇಕಾದರೂ ತಮಗೆ ಬೇಕಾದ ರಾಶಿಯನ್ನು ಆರಿಸಿಕೊಂಡು, ಅದನ್ನು ತಮ್ಮದೇ ರಾಶಿ ಎಂದುಕೊಂಡು ಮುನ್ನಡೆಯಬಹುದಾಗಿದೆ.

ಮೇಷ
ಅಷ್ಟಮ ಸ್ಥಾನದಲ್ಲಿ ಗುರು ನೆಲೆಸಿರುವುದರಿಂದ ಮನೆಯಲ್ಲಿ ಬಾಗಿಲು ಇಲ್ಲದಿದ್ದರೆ ಖಂಡಿತವಾಗಿಯೂ ಕಳ್ಳತನವಾಗುತ್ತದೆ. ಆದುದರಿಂದಾಗಿ ಚೋರ ಭಯ ಶತಃಸಿದ್ಧ. ಹಠಾತ್ ರಜೆ ಹಾಕಿದರೆ ಉನ್ನತ ಅಧಿಕಾರಿಗಳಿಂದ ಬೈಗುಳ. ಮನೆಯಲ್ಲಿ ಬೆಂಕಿ ಇದ್ದರೆ ಅದನ್ನು ಬೀಡಿ, ಸಿಗರೇಟು ಸುಡಲು, ಒಲೆ ಹಚ್ಚಲು ಬಳಸಬಹುದು. ಹೆಚ್ಚುಕಡಿಮೆ ಮಾಡಿಕೊಂಡು ಪ್ರಯೋಗಿಸಿದರೆ ಅನಾಹುತವಾಗಬಹುದು.

ವೃಷಭ
ಜ್ವರ ಬಂದರೆ ವೈದ್ಯರ ಬಳಿಗೆ ಹೋಗುವ ಇಚ್ಛೆ ನಿಮಗೆ ಬರಲಾರದು. ಬೇರೇನಾದರೂ ಕಾಯಿಲೆ ಬಂದರೆ ಮಾತ್ರ ಡಾಕ್ಟರ್ ಶಾಪ್ ಎಲ್ಲಿದೆ ಅಂತ ಹುಡುಕುವಿರಿ. ಬೇರೆಯವರ ಸ್ವಭಾವ ಗೊತ್ತಿದ್ದೂ ಅವರಿಗೆ ಜವಾಬ್ದಾರಿ ವಹಿಸಿದರೆ ಮೋಸ ಹೋಗುವ ಸರದಿ ನಿಮ್ಮದೇ. ಕಚೇರಿಯಲ್ಲಿ ಎಲ್ಲರೊಂದಿಗೂ ಕೂಗಾಡುತ್ತಿದ್ದರೆ ಅವರ ಆಕ್ರೋಶಕ್ಕೆ ಗುರಿಯಾಗುವಿರಿ. ಕ್ರೆಡಿಟ್ ಕಾರ್ಡ್ ಆಗಾಗ್ಗೆ ಬಳಸುವುದರಿಂದ ನೀವು ಸಾಲವಂತರಾಗುತ್ತೀರಿ.

ಮಿಥುನ
ನೀವು ಎಲ್ಲರೊಂದಿಗೂ ನಿಷ್ಠುರರಾಗಿ ಮಾತನಾಡುವುದರಿಂದ ಅವರೆಲ್ಲರಿಗೂ ನಿಷ್ಠುರ ವ್ಯಕ್ತಿ ಅನಿಸಿಕೊಳ್ಳುತ್ತೀರಿ. ನಿಮ್ಮ ತೋಟಕ್ಕೆ ಮಂಗಗಳ ಕಾಟ ಹೆಚ್ಚಾದಲ್ಲಿ ಮನೆಯಲ್ಲಿ ಮಂಗಗಳ ಕಾರ್ಯ ನೆರವೇರುವ ಸಾಧ್ಯತೆಗಳು ಬಹುತೇಕ ಖಚಿತ. ಹೊಸ ಬಟ್ಟೆ, ಹೊಸ ಆಭರಣ ತೊಟ್ಟರೆ ಎಲ್ಲರೂ ನಿಮ್ಮತ್ತ ನೋಡುವರು. ಬಟ್ಟೆ ಧರಿಸದಿದ್ದರೆ ನೋಡುವವರ ಸಂಖ್ಯೆ ಹೆಚ್ಚಾಗಲಿದೆ.

ಕರ್ಕಾಟಕ
ನೀವು ಎಲ್ಲರನ್ನೂ ನಂಬುವುದರಿಂದ ಎಲ್ಲರೂ ನಿಮಗೆ ಮೋಸ ಮಾಡುವುದು ಸುಲಭ. ಇದು ಬೊಗಳೆ ರಗಳೆ ಬ್ಯುರೋಗೆ ತಿಳಿಯದಂತೆ ಎಚ್ಚರ ವಹಿಸುವುದು ಸೂಕ್ತ. ವಿವಾದ ಇತ್ಯರ್ಥಕ್ಕೆ ನ್ಯಾಯಾಲಯದ ಮೊರೆ ಹೋಗಿದ್ದರೆ ಹತ್ತಾರು ವರ್ಷಗಳ ಬಳಿಕ ನಿಮಗೆ, ಅಲ್ಲದಿದ್ದರೆ ಎದುರಾಳಿ ಪಾರ್ಟಿಗಳಿಗೆ ನ್ಯಾಯ ದೊರೆಯುವುದು ಖಚಿತ. ಅಷ್ಟು ವರ್ಷಗಳ ಕಾಲ ಕರಿ"ಕೋಟಿ"ಗರು ನಿಮ್ಮಿಂದ ಕೋಟಿ ಕೋಟಿ ಪೀಕಿಸಬಹುದು.

ಸಿಂಹ
ಸಂಪಾದನೆಗಿಂತ ನೀವು ಹೆಚ್ಚು ಖರ್ಚು ಮಾಡಿದರೆ ಆ ತಿಂಗಳ ಮಟ್ಟಿಗೆ ದಿವಾಳಿಯಾಗುತ್ತೀರಿ. ಇಲ್ಲವಾದಲ್ಲಿ ಬ್ಯಾಂಕ್ ಬ್ಯಾಲೆನ್ಸ್ ಕರಗಿಸಬೇಕಾಗಿಬಂದೀತು. ಶಾಂತಿ ಎಂಬ ನಿಮ್ಮ ಕಾಲೇಜು ಗೆಳತಿ ಮನೆಗೆ ದಿಢೀರ್ ಬಂದರೆ ಗೃಹದಲ್ಲಿ ಅಶಾಂತಿ ಉಂಟಾದೀತು. ಯಾವುದೇ ಅಶುಭ ಫಲಗಳು ಸಂಭವಿಸದಿದ್ದರೆ ಆ ದಿನ ನಿಮಗೆ ಶುಭದಾಯಕವಾಗಲಿದೆ.

ಕನ್ಯಾ
ಕಲೆ, ಸಂಗೀತ, ಸಾಹಿತ್ಯ ಇತ್ಯಾದಿಗಳ ಅಕಾಡೆಮಿಗಳಿಗೆ ಅರ್ಜಿ ಸಲ್ಲಿಸಿಯೂ ನೀವು, ಕೆಲಸವಾಗಬೇಕಿದ್ದರೆ ಕತ್ತೆ ಕಾಲು ಹಿಡಿ ಎಂಬ ಉಕ್ತಿಯ ಅನುಸಾರ ರಾಜಕಾರಣಿಗಳ ಕಾಲು ಹಿಡಿಯದಿದ್ದರೆ, ಖಂಡಿತಾ ನಿಮಗೆ ಅರ್ಹತೆಯಿದ್ದರೂ ಪ್ರಶಸ್ತಿ, ಪುರಸ್ಕಾರ ಲಭಿಸುವುದಿಲ್ಲ. ರಾಜಕಾರಣಿಗಳೆಲ್ಲಾ ವಿಧಾನಸೌಧದಲ್ಲಿ ಹೊಡೆದಾಡುತ್ತಿರುವುದರಿಂದ ನಿಮ್ಮೂರಲ್ಲಿ ಅಭಿವೃದ್ಧಿ ಕಾರ್ಯಗಳಾಗಿ ಶಾಂತಿ ನೆಲಸಬಹುದು.

ತುಲಾ
ಅಪರಿಚಿತರೊಂದಿಗೆ ಸಹ-ವಾಸ ದೋಷದಿಂದ ಎಚ್ಐವಿ ಎಂಬ ಮಾನವಕುಲಕ್ಕೆ ಇದೀಗ ಅಮೂಲ್ಯವಾಗಿಬಿಟ್ಟಿರುವ (ಅದರ ಚಿಕಿತ್ಸೆಗೆ ಸಾಕಷ್ಟು ವ್ಯಯ ಮಾಡಬೇಕಾಗಿರುವುದರಿಂದ ಅದು ಅ-ಮೂಲ್ಯ) ವೈರಸ್ ನಿಮ್ಮನ್ನು ಪ್ರೀತಿಸುವ ಸಾಧ್ಯತೆಯಿದ್ದು, ಡ್ಯುಯೆಟ್ ಸಾಂಗ್ ಹಾಡಬಹುದು. ಶನಿಕಾಟವಿದ್ದರೆ ಶನಿಶಾಂತಿಯನ್ನೂ, ಗುರುಕಾಟವಿದ್ದರೆ ಗುರುಶಾಂತಿಯನ್ನೂ, ಅದೇ ರೀತಿ ಇತರ ನವಗ್ರಹಗಳ ಕಾಟವಿದ್ದರೆ ಆಯಾ ಶಾಂತಿಯನ್ನು ಮಾಡಿಸಿಕೊಳ್ಳುವುದು ಉತ್ತಮ.

ವೃಶ್ಚಿಕ
ಕರೆಂಟ್ ಬಿಲ್ ಕಟ್ಟದಿದ್ದರೆ ಬಿಲ್ ಸರಿಯಾಗಿ ಕಟ್ಟಿದವರಿಗೆ ದೊರೆಯುವ ಪವರ್ ಕಟ್ ಸೌಲಭ್ಯ ನಿಮಗೂ ಅಚಾನಕ್ ಆಗಿ ದೊರೆಯಬಹುದು. ವಿದ್ಯುತ್ ಸೌಲಭ್ಯ ಇಲ್ಲದಿದ್ದರೂ ಶಾಕ್ ಹೊಡೆಯುವ ಅನುಭವವು ವಿದ್ಯುತ್ ಇಲಾಖೆಯ ಈ ಬಿಲ್-ವಿದ್ಯೆಯಿಂದಾಗಿ ನಿಮಗೆ ಆಗಲಿದೆ. ಮನೆ ಬಾಡಿಗೆ ಬಾಕಿ ಇರಿಸಿಕೊಂಡಿದ್ದರೆ, ನೀವು ಕಚೇರಿಯಿಂದ ಸಂಜೆ ಮರಳಿದಾಗ ಮನೆಯೊಳಗಿನ ವಸ್ತುಗಳೆಲ್ಲಾ ಹೊರಗಿರುವ ಸಾಧ್ಯತೆ ಇರುವುದರಿಂದ ಮತ್ತು ಮನೆಯೊಡೆಯ ಕಣ್ಣು ದೊಡ್ಡದು ಮಾಡುತ್ತಾ ದೊಣ್ಣೆ ಹಿಡಿದು ನಿಮ್ಮನ್ನು ಸ್ವಾಗತಿಸಲು ಕಾಯುತ್ತಿರುವುದರಿಂದ ಎಚ್ಚರಿಕೆ ವಹಿಸಿ.

ಧನು
ನೀವು ರಾಜಕೀಯಕ್ಕೆ ಸೇರಿದ್ದರೆ ಓಟು ಪಡೆಯುವುದಕ್ಕಾಗಿ ಅಸತ್ಯ ನುಡಿಯಬೇಕಾಗುತ್ತದೆ. ಪ್ರಜೆಗಳು ಏನೇ ಮನವಿ ಸಲ್ಲಿಸಿದರೂ, "ಶೀಘ್ರದಲ್ಲೇ ಅದನ್ನು ಪರಿಹರಿಸುತ್ತೇವೆ, ನಾಳೆಯೇ ಅದನ್ನು ರಿಪೇರಿ ಮಾಡಿಸುವೆ, ಇನ್ನೊಂದೆರಡು ವಾರ ಕೊಟ್ಟು ನೋಡಿ, ಹೇಗೆ ಊರನ್ನೇ ಬದಲಿಸುತ್ತೇನೆ" ಎಂಬಿತ್ಯಾದಿ ಸಾಮಾನ್ಯ ಧ್ಯೇಯವಾಕ್ಯಗಳನ್ನು ಬರೆದಿಟ್ಟುಕೊಳ್ಳಿ. ಆಗಾಗ್ಗೆ ಈ ವಾಕ್ಯಗಳನ್ನು ಬಾಯಿಯಿಂದ ಉದುರಿಸಬೇಕಾಗಬಹುದು. ಆದರೆ ಇದನ್ನು "ಬೊಗಳೆ" ಎಂದು ಕರೆದು ನಮ್ಮ ಬ್ಯುರೋಗೆ ಅಪಮಾನ ಮಾಡದಿರಲು ಕೋರಲಾಗಿದೆ.

ಮಕರ
ರಾಜ್ಯದಲ್ಲೇನಾದರೂ ಅಹಿತಕರ ಘಟನೆ ನಡೆದಲ್ಲಿ, ನೀವು ಆಡಳಿತ ಪಕ್ಷದವರಾಗಿದ್ದರೆ, "ತನಿಖೆ ನಡೆಸಲಾಗುತ್ತದೆ, ದುಷ್ಕರ್ಮಿಗಳನ್ನು ಮಟ್ಟ ಹಾಕುತ್ತೇವೆ" ಎಂದೂ, ವಿರೋಧ ಪಕ್ಷದಲ್ಲಿದ್ದರೆ "ಸಿಬಿಐ ತನಿಖೆಯಾಗಲಿ, ಇದರಲ್ಲಿನ ಮಂತ್ರಿ ಕೈವಾಡದ ಬಗ್ಗೆ ತನಿಖೆಯಾಗಲಿ" ಎಂದೂ ವಿಧಾನಸೌಧದಲ್ಲಿ ಕೂಗಾಡಿದರೆ ನಿಮಗೆ ಆ ದಿನದ ವೇತನ ಗ್ಯಾರಂಟಿ. ರಾತ್ರಿ ಆಡಳಿತ-ವಿರೋಧ ಪಕ್ಷದವರಿಬ್ಬರೂ ಕುಳಿತುಕೊಂಡು ಸಾಮರಸ್ಯಕ್ಕಾಗಿ ಪಬ್‌ಗಳೂರಲ್ಲಿ ಸೋಮ-ರಸ ಹೀರುತ್ತಾ ಕುಳಿತಿರಬಹುದು.

ಕುಂಭ
ನೀವು ಕೈಗೊಳ್ಳುವ ಎಲ್ಲಾ ಕಾರ್ಯಗಳಲ್ಲಿ ಜಯ ಲಭಿಸದಿದ್ದರೆ ಅಪಜಯ ಎದುರಾಗುವುದು ಖಚಿತ. ಗೃಹ ನಿರ್ಮಾಣ ಕಾರ್ಯಕ್ಕಾಗಿ ನೀವು ಪಂಚಾಂಗ ಹಾಕದಿದ್ದರೆ, ಮನೆಯು ಮೇಲೆದ್ದು ನಿಲ್ಲುವ ಸಾಧ್ಯತೆಗಳು ಕಡಿಮೆ ಎಂದೇ ಹೇಳಬಹುದು. ಅಧಿಕಾರಿಗಳ ಕೈಬಿಸಿಯಾಗದಿದ್ದರೆ ಪರವಾನಗಿ ಪತ್ರದ ಬೆಣ್ಣೆ ಕರಗುವುದಿಲ್ಲ.

ಮೀನ
ನೀವು ಸ್ನಾನ ಮಾಡದಿದ್ದರೆ ಸಮಾಜದಲ್ಲಿ ಉತ್ತಮ ಸ್ನಾನ-ಮಾನ ಲಭಿಸುವ ಸಾಧ್ಯತೆಗಳು ಕಡಿಮೆ. ನೀವು ಬೆಂಗಳೂರಿನಲ್ಲಿದ್ದರೆ ಶುನಕ ಕಾಟವೂ, ಶುನಕ ಕಾಟವಿಲ್ಲದಿದ್ದರೆ ಬೀದಿ ಶುನಕ ಕಾಟವೂ, ಯಾವುದೂ ಇಲ್ಲದಿದ್ದರೆ ಕೈಯೊಡ್ಡುವ ಪೊಲೀಸರ ಕಾಟವೂ ದೊರೆಯಲಿದೆ. ಮದುವೆಯಾಗದಿದ್ದರೆ ಮತ್ತು ಸರಿಯಾದ ವಧು-ವರರನ್ನು ನೋಡಿಟ್ಟಿದ್ದರೆ, ಕೊನೆಯದಾಗಿ ವಿವಾಹ ನಿಶ್ಚಿತಾರ್ಥವಾಗಿದ್ದರೆ ಮತ್ತು ವಿವಾಹವಾಗುವುದು ಖಚಿತವಾಗಿದ್ದರೆ ವಿವಾಹಯೋಗವಿದೆ.

(ಡಿಸ್ಕ್ ಕ್ಲೈಮರ್: ಭವಿಷ್ಯ ಓದಿ ಎದುರಾಗುವ ಕಾರ್ಯಗಳ ಫಲಾಫಲಗಳ ಬಗ್ಗೆ ಬೊಗಳೆ ಬ್ಯುರೋ ಜವಾಬ್ದಾರವಲ್ಲ.)
-------------
ಮನವಿ: ನಿಮ್ಮ ಬ್ಲಾಗು ಅಥವಾ ಮಿತ್ರರ ಬ್ಲಾಗು ಈ ಕೆಳಗಿರುವ ಕನ್ನಡ ಬ್ಲಾಗೋತ್ತಮರು ಪಟ್ಟಿಯಲ್ಲಿ ಇದೆಯೇ? ಇಲ್ಲವಾದಲ್ಲಿ, ಅದನ್ನು ಲಿಂಕಿಸುವ ಸಮ್ಮತಿಯೊಂದಿಗೆ ದಯವಿಟ್ಟು ಅದರ ಯುಆರ್ಎಲ್ ಮತ್ತು ಶೀರ್ಷಿಕೆ ಸಹಿತ asatya ಡಾಟ್ anveshi @ ಜಿಮೇಲ್ ಡಾಟ್ ಕಾಮ್ ಗೆ ತಿಳಿಸಿಬಿಡಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

  1. ಎಷ್ಟು ಚೆನ್ನಾಗಿ ಬೊಗಳೆ ಬಿಟ್ಟಿದ್ದೀರಿ. ನನ್ನ ರಾಶಿ ಯಾವುದು ಅನ್ನೋಫ್ದನ್ನೇ ನಿರ್ಧರಿಸಲಾಗಿಲ್ಲ. ನಿರ್ಧಾರವಾದ ಮೇಲೆ ನನ್ನ ಭವಿಷ್ಯವನ್ನು ಬದಲಿಸಲು ನಿಮ್ಮನ್ನು ಕೋರುವೆ.

    ಪ್ರತ್ಯುತ್ತರಅಳಿಸಿ
  2. ಅನ್ವೇಷಿಗಳು ರಜಾ ಮುಗಿಸಿಕೊಂಡು ಕ್ಷೇಮವಾಗಿ ಬಂದಿದ್ದಾರೆ!!

    ಅನ್ವೇಷಿಗಳೇ, ನನ್ನ ವರ್ಷ ಭವಿಷ್ಯದಲ್ಲಿ ಎಸ್.ಕೆ.ಜೈನ್ "ನೀವು ಮಣ್ಣು ಹಿಡಿದರೂ ಚಿನ್ನ" ಎಂದಿದ್ದಾರೆ. ಈಗ ನಾನೇನು ಮಾಡಬೇಕು? ಸದಾ ಕೈಯಲ್ಲಿ ಒಂದು ಹಿಡಿ ಮಣ್ಣು ಹಿಡಿದಿರಬೇಕೇ ದಯವಿಟ್ಟು ತಿಳಿಸಿ.

    ಪ್ರತ್ಯುತ್ತರಅಳಿಸಿ
  3. ಅನ್ವೇಷಿಗಳು ಜ್ಯೋತಿಷಿಗಳಾಗಬೇಕೆಂಬುದು ಓದುಗರ ಇಂಗಿತ ಎಂದು ಇಲ್ಲಿ ಸಾಬೀತಾಗುತ್ತಿದೆ. ನಿಮ್ಮ ಭವಿಷ್ಯದಲ್ಲಿ "ಕೆಲಸ ಬದಲಾವಣೆ / ಜೀವನದ ಪಥ ಬೇರೆಯಾಗಲಿದೆ" ಅಂತೇನಾದ್ರೂ ಇತ್ತಾ? ನೋಡಿಕೊಳ್ಳಿ.

    ಪ್ರತ್ಯುತ್ತರಅಳಿಸಿ
  4. ಶ್ರೀನಿವಾಸರೆ,
    ಸಿಂಹ ರಾಶಿಯಾಗಿದ್ದರೆ ಸ್ವಲ್ಪ ಜಾಗ್ರತೆ ವಹಿಸುವುದು ಸೂಕ್ತ. ನಿಮ್ಮ ರಾಶಿಯನ್ನು ನೀವೇ ಆಯ್ದುಕೊಳ್ಳಿ.

    ಪ್ರತ್ಯುತ್ತರಅಳಿಸಿ
  5. ಶ್ರೀತ್ರೀ ಅವರೆ,
    ನೀವೇನೂ ಮಾಡುವುದು ಬೇಡ. ನಮ್ಮ ಬ್ಯುರೋಗೆ ಬಂದರೆ ಸಾಕು... ಇಲ್ಲೇ ಮಣ್ಣು ಹೊರಬಹುದು.!!!!

    ಪ್ರತ್ಯುತ್ತರಅಳಿಸಿ
  6. ಸುಪ್ತದೀಪ್ತಿಯವರೆ,
    ಅನ್ವೇಷಿಯು ಓದುಗರ ಇಂಗು ತಿಂದ ಮಂಗನಂತಾಗಬೇಕೆಂಬ ಇಚ್ಛೆಗೆ ನಮ್ಮ ಹೃತ್ಪೂರ್ವಕ ಅಸಮ್ಮತಿ ಇದೆ.

    ನಮ್ಮ ಭವಿಷ್ಯದ ಪ್ರಕಾರ, ಯಾರಾದರೂ ಕೆಲಸ ಕೊಟ್ಟರೆ ಕೆಲಸ ಬದಲಾವಣೆ ಯೋಗವಿದೆ ಎಂದು ತಿಳಿದುಬಂದಿದೆ.

    ಪ್ರತ್ಯುತ್ತರಅಳಿಸಿ
  7. ಅಸತ್ಯಿಗಳೇ,

    la carte ತರ ಎಲ್ಲಾ ರಾಶಿಗಳಿಂದ ಬೇಕಾದದನ್ನು ತೆಗೆದುಕೊಳ್ಳುವ ಅವಕಾಶ ಇದೆಯೇ?

    ಪ್ರತ್ಯುತ್ತರಅಳಿಸಿ
  8. ಹೌದು ಶಿವ್ ಅವರೆ,
    ಆದ್ರೆ ಇಲ್ಲಿ ಕ್ರೆಡಿಟ್ ಕಾರ್ಡ್ ತೋರಿಸ್ಬೇಕಾಗಿಲ್ಲ. :) ಎಲ್ಲವೂ ಕ್ರೆಡಿಟ್ಟೇ!!!

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D