(ಬೊಗಳೂರು ಕಿರಿಕಿರಿಕೆಟ್ಟಾಟ ಬ್ಯುರೋದಿಂದ)
(ಈ ವರದಿಯು ಮುಂಬರುವ ಏಪ್ರಿಲ್ ತಿಂಗಳಲ್ಲಿ ಪ್ರಕಟವಾಗಬೇಕಿದ್ದು, ತಪ್ಪಾಗಿ ಇಂದು ಪ್ರಕಟವಾಗುತ್ತಿದೆ. ಓದುಗರು ಸುಧಾರಿಸಿಕೊಳ್ಳಲು ವಿನಂತಿಸಲಾಗಿದೆ)ಬೊಗಳೂರು, ಮಾ.24- ದೇಶಾದ್ಯಂತ ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ.
ಎರಡನೇ ಪ್ರಮುಖ ವಿದ್ಯಮಾನವೆಂದರೆ, ಭಾರತದಾದ್ಯಂತ ಟಿವಿ ಕಂಪನಿಗಳು, ಡಿಟಿಎಚ್ ಸೇವೆ ಒದಗಿಸುವ ಕಂಪನಿಗಳು ಭಾರಿ ನಷ್ಟ ಅನುಭವಿಸಿದ್ದು, ಸ್ಟಾಕ್ ತೀರಿಸಲು ತಮ್ಮ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಯೋಚನೆಯಲ್ಲಿದ್ದಾರೆ.
ವಿದ್ಯಾರ್ಥಿಗಳೆಲ್ಲರೂ ಈ ಪರಿಯಾಗಿ ಅಂಕಗಳನ್ನು ಗಳಿಸಿರುವುದರ ಕುರಿತು ಹಿಂತಿರುಗಿ ನೋಡಿದಾಗ, ಇದಕ್ಕೆ ಭಾರತೀಯ ಕ್ರಿಕೆಟ್ ತಂಡವು ನೀಡಿದ ವರ ಹಾಗೂ ಅದು ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳೇ ಕಾರಣವೆಂದು ತಿಳಿದುಬಂದಿದೆ.
ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತೀಯ ಕ್ರಿಕೆಟ್ ತಂಡವು ಮೊದಲನೆಯದಾಗಿ ಬಾಂಗ್ಲಾ ಹುಲಿಗಳ ಘರ್ಜನೆಗೆ ಹೆದರಿಬಿಟ್ಟಿತ್ತು. ವಾಸ್ತವವಾಗಿ ಅವರು ಹೆದರಿದ್ದೇಕೆಂದರೆ, ಎಲ್ಲಾದರೂ ತಾವು ಈ ಹುಲಿಗಳನ್ನು ಕಟ್ಟಿಹಾಕಬೇಕಾಗಿ ಬಂದರೆ ಎಂಬ ಭೀತಿ. ಕೊನೆಗೂ ಬಾಂಗ್ಲಾ ಹುಲಿಗಳು ಭಾರತದ ಕಾಗದದ ಹುಲಿಗಳನ್ನು ಸೋಲಿಸುವ ಮೂಲಕ ಭಾರತೀಯ ತಂಡ ನಿಟ್ಟುಸಿರು ಬಿಡುವಂತೆ ಮಾಡಿತ್ತು.
ಆದರೆ ಇದರ ಬಳಿಕ, ಭಾರತದಲ್ಲಿರುವ ತಮ್ಮ ಮನೆಗಳಿಗೆ ಕಲ್ಲು ಬಿದ್ದು, ತಮ್ಮ ಭಾವಚಿತ್ರಗಳಿಗೆ ಚಪ್ಪಲಿಹಾರ ಬಿದ್ದ ಹಿನ್ನೆಲೆಯಲ್ಲಿ ಅವರಿಗೊಂದು ಪಾಠ ಕಲಿಸೋಣ ಎಂದುಕೊಂಡ ತಂಡವು, ಕ್ರಿಕೆಟ್ ಶಿಶುಗಳಿಗೆ ಒಂದಷ್ಟು ಬೌಲಿಂಗ್ ಪ್ರಾಕ್ಟೀಸ್ ಆಗಲಿ, ಅವುಗಳು ಕೂಡ ಮುಂದೆ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಡುವಂತಾಗಲಿ ಎಂಬಂತೆ ಆಟವಾಡಿ, ದೊಡ್ಡ ಮೊತ್ತ ಪೇರಿಸಿ ಬರ್ಮುಡಾ ತಂಡಕ್ಕೆ ದೊಡ್ಡ ಬರ್ಮುಡಾ ತೊಡಿಸಿತ್ತು.
ಆ ಬಳಿಕ ಎದುರಾಗಿದ್ದು ಶ್ರೀಲಂಕಾದ ಹುಲಿಗಳು. ಅದರ ಎದುರು ಸೋಲಲು ಒಬ್ಬೊಬ್ಬ ಆಟಗಾರರು ತಮ್ಮದೇ ಕಾರಣ ನೀಡಿದ್ದು, ಕ್ರಿಕೆಟ್ ಕವರೇಜ್ ಮಾಡುವುದಕ್ಕೆ ಬೊಗಳೆ ರಗಳೆ ಬ್ಯುರೋದಿಂದ ಕಳುಹಿಸಲಾದ ಕ್ರಿಮಿನಲ್ ವರದಿಗಾರ ಅವರೆಲ್ಲರನ್ನೂ ಸಂ-ದರ್ಶಿಸಿ ವಿವರ ಸಂಗ್ರಹಿಸಿದ್ದಾರೆ. ಅವರ ಹೇಳಿಕೆ ಇಲ್ಲಿವೆ:
ನಾಯಕ ದ್ರಾಹುಲ್ ರಾವಿಡ್ : ನಮ್ಮ ಬದ್ಧ ಎದುರಾಳಿ ಹಾಗೂ ಏಷ್ಯಾ ಖಂಡದ ಅತ್ಯಂತ ಆಪ್ತ ತಂಡ ಪಾಕಿಸ್ತಾನವೇ ಕಣದಲ್ಲಿಲ್ಲದಿರುವಾಗ ನಾವಿದ್ದೇನು ಪ್ರಯೋಜನ? ಬೌಲರುಗಳು ಅಷ್ಟು ಬೇಗನೆ ವಿಕೆಟ್ ಕಿತ್ತಿದ್ದಾರೆ, ಸೇವೇಂದ್ರ ವಾಹ್‌ವಾಗ್ ಕೂಡ ಫಾರ್ಮಿಗೆ ಮರಳಿದ್ದಾರೆ. ನಮಗೆ ಇಷ್ಟು ಸಾಕು.
ಚಚ್ಚಿಂಗ್ ಚೆಂಡುಲ್ಕರ್ : ನಮಗೇನು ಗೊತ್ತು ಅವರು ಆ ರೀತಿ ಚೆಂಡು ಎಸೆಯುತ್ತಾರೆಂದು? ನಾವಿನ್ನೂ ಪಾಕ್ ಕೋಚ್ ಬಾಬ್ ವೂಲ್ಮರ್ ಕೊಲೆಯಾದ ದುಃಖದಲ್ಲಿದ್ದೇವೆ. ಅದರ ಬಗ್ಗೆಯೇ ಯೋಚಿಸುತ್ತಿದ್ದೆವು. ಚೆಂಡು ಈ ರೀತಿ ಎಸೆಯುತ್ತೇನೆ ಎಂದು ಹೇಳುವುದಕ್ಕೇನು ಧಾಡಿ ದಿಲ್ಹಾರಾ ಫೆರ್ನಾಂಡೊಗೆ?
ಸೇರೇಂದ್ರ ವಾಹ್‌ವಾಗ್ : ನಾನಂತೂ ಫಾರ್ಮಿಗೆ ಮರಳಿದ್ದೇನೆ. ಬರ್ಮುಡಾದೆದುರು ಶತಕ ಸಿಡಿಸಲಿಲ್ಲವೇ? ಲಂಕೆಯೆದುರು ಕೂಡ ಚೆನ್ನಾಗಿಯೇ ಚಚ್ಚಿದ್ದೇನೆ. ಯಾವಾಗಲೂ ನನ್ನ ಮೇಲೆ ಗೂಬೆ ಕೂರಿಸಲು ಯತ್ನಿಸಬೇಡಿ.
ಸಿಂಹೇಂದ್ರ ಮಂಗ್ ಧೋಣಿ : ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಕರೆದೊಯ್ಯುತ್ತೇವೆ, ಅಲ್ಲಿ ಸಾಕಷ್ಟು ದ್ವೀಪಗಳನ್ನು ದೋಣಿಯಲ್ಲಿ ಸುತ್ತಬಹುದು ಎಂದು ಹೇಳಿ ನಮ್ಮನ್ನು ಈ ರೀತಿ ದುಡಿಸುವುದಾ? ಈ ರೀತಿ ಆಟ ಆಡಬೇಕೆಂಬುದು ನಮಗೆ ಮೊದಲು ಗೊತ್ತಿರಲೇ ಇಲ್ಲ!!! ಏನೇ ಇರಲಿ, ಮುರಳೀಧರನ್ ಬೌಲಿಂಗೇ ಸರಿ ಇರಲಿಲ್ಲ.... ಆತ ಆ ರೀತಿ ಚೆಂಡೆಸೆಯಬಾರದಿತ್ತು.
ಸಿವರಾಜ್ ಯಂಗ್ : ಓಹ್.... ನಾವು ಬ್ಯಾಟು ಬೀಸಬೇಕಿತ್ತಾ?... ಮೊನ್ನೆ ಬರ್ಮುಡಾದೆದುರು ವಿಶ್ವದಾಖಲೆಯ ವಿಜಯ ಸಾಧಿಸಿದ್ದು ಸಾಕಾಗಲಿಲ್ಲವಾ? ಛೆ.... ಗೊತ್ತೇ ಇರಲಿಲ್ಲ.
ಗೌರವ್ ಸಂಗೂಲಿ : ನೋಡಿದ್ರಾ... ನಾನು ಇದ್ದಾಗ ತಂಡ ಕೇವಲ ಗೆಲ್ಲುವುದಲ್ಲ, ಸೋಲಲೂ ಸಾಧ್ಯ ಎಂಬುದು ಸಾಬೀತಾಗಲಿಲ್ಲವೇ?
ಬಳಿಕ ತಂಡದ ಎಲ್ಲರನ್ನೂ ಒಂದು ಕಡೆ ಕೂಡಿ ಹಾಕಿ ಮಾತನಾಡಿಸಿದಾಗ ಕೇಳಿಬಂದ ಕಾಳಜಿ : "ಸ್ವಾಮೀ... ನಾವು ಈ ರೀತಿ ಸೋತಿದ್ದೇವೆ ಅಂತ ದಯವಿಟ್ಟು ಯಾರಿಗೂ ಹೇಳಬೇಡಿ... ಜಾಹೀರಾತುಗಳಿಗೆ ನಮ್ಮ ಮುಖ ಬಾಡಿಗೆ ಕೊಡುವುದರಿಂದ ಬರುವ ಭಾರಿ ಮೊತ್ತದ ಆದಾಯ ಕೈತಪ್ಪಿ ಹೋದೀತು..."
ಮತ್ತೊಂದು ಅಭಿಪ್ರಾಯ : ಕ್ರಿಕೆಟ್ ಶಿಶುಗಳು ಕೂಡ ಮುಂದೆ ಬರಬೇಕು, ಸ್ಕಾಟ್ಲೆಂಡ್, ಐರ್ಲೆಂಡ್, ಬಾಂಗ್ಲಾ, ನೆದರ್ಲೆಂಡ್ ಮುಂತಾದ ತಂಡಗಳು ಫೈನಲ್ ಪ್ರವೇಶಿಸುವಂತಾಗಬೇಕು. ಆ ರಾಷ್ಟ್ರಗಳಲ್ಲಿ ಕ್ರಿಕೆಟ್ ಬೆಳೆಯಬೇಕು, ಆ ಕ್ರಿಕೆಟಿಗರೂ ಜಾಹೀರಾತಿನಿಂದ ಹೆಚ್ಚು ಹೆಚ್ಚು ಆದಾಯ ಗಳಿಸುವಂತಾಗಬೇಕೆಂಬುದೇ ನಮ್ಮ ಗುರಿ.
ಮಗದೊಂದು ಮಾತು : ನಮ್ಮ ವಿದ್ಯಾರ್ಥಿಗಳು, ರಾತ್ರಿ ಶಿಫ್ಟ್‌ನಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಆರೋಗ್ಯ ಮತ್ತು ಮಾನಸಿಕ ಟೆನ್ಷನ್ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಾವು ವೆಸ್ಟ್ ಇಂಡೀಸ್‌ನಿಂದ ಬೇಗನೆ ಮರಳಲು ಇಚ್ಛಿಸಿದ್ದೆವು. ಹಾಗಾಗಿ ಎಲ್ಲರೂ ನಮ್ಮನ್ನು ಇನ್ನು ಮುಂದಾದರೂ ನಮ್ಮನ್ನು ದೇವರಂತೆ ಪೂಜಿಸಬೇಕು. ಹಾರ ಮಾತ್ರ ಹೂವಿನದ್ದೇ ಹಾಕಬೇಕು!!!
12 ಕಾಮೆಂಟ್‌ಗಳು
hmmmm!!!!! enri modle gottu itta Ind solutte aMta? beLiggene buero vardi maadibittide...neeveMdadu sari..... chennagi nidde madabahudu innu.... inna mele cricket noDabaradu aMta pramANa
ಪ್ರತ್ಯುತ್ತರಅಳಿಸಿಹೂಂ ಹಾಕ್ತಾರೆ ಹಾಕ್ತಾರೆ. ಹೂವಿನ ಹಾರ ಅಲ್ಲ; ಚಪ್ಲಿ ಹಾರ. ರೆಡಿ ಮಾಡಿಟ್ಕೊಂಡಿದೀನಿ. ಬರ್ಲಿ ಟೀಮ್ ವಾಪಸ್ ಇಂಡಿಯಾಗೆ... :x
ಪ್ರತ್ಯುತ್ತರಅಳಿಸಿಅನ್ವೇಷಿಯವ್ರೆ, ನಿಮ್ಗೂ ಕ್ರಿಕೆಟ್ಟು ಸಖತ್ ಫೀಲಿ೦ಗ್ ತರಿಸ್ಬಿಟ್ಟಿದೆ ಅ೦ತ ಕಾಣತ್ತೆ? ಸ್ವಲ್ಪ ಸುಧಾರಿಸ್ಕೊಳ್ಳ್ಕಿ ಸ್ವಾಮಿ, next Indian cricket match ತನ್ಕ ಟೈಮಿದೆ.. ಎಷ್ಟ೦ದ್ರೂ ಕ್ರಿಕೆಟ್ ಆಟಗಾರರು ಮತ್ತು ಅಭಿಮಾನಿಗಳ ನಡಿವಿನ ವೈಮನಸ್ಯ ಗ೦ಡ-ಹೆ೦ಡಿರ ಜಗಳದ ಹಾಗ೦ತೆ - ಯಾರೋ ಹೇಳಿದ್ದು... :-)
ಪ್ರತ್ಯುತ್ತರಅಳಿಸಿಅಸತ್ಯಿಗಳೇ,
ಪ್ರತ್ಯುತ್ತರಅಳಿಸಿಈ ವರ್ಷ ಪಿಯುಸಿ-ಪದವಿ ಪರೀಕ್ಷೆಗಳಲ್ಲಿ ಚೆನ್ನಾಗಿ ಅಂಕ ಗಳಿಸಿ ಇನ್ನೂ ಹೆಚ್ಚು ಜನ ಓದು-ಬರಹದಲ್ಲಿ ಮುಂದುವರಿದು ಭಾರತವು ಪ್ರಪಂಚಕ್ಕೆ ಕೊಡುತ್ತಿರುವ ಜ್ಞಾನದ ವ್ಯಾಪ್ತಿ ಜಾಸ್ತಿಯಾಗುವುದು.
ಅದಕ್ಕೆ ಪ್ರಮುಖ ಕಾರಣದಾದ ನಮ್ಮ ಕಿರಿಕೆಟ್ ತಂಡಕ್ಕೆ ಈ ವರ್ಷ ಶಿಕ್ಷಣ ಇಲಾಖೆ-ಮಾಹಿತಿ ತಂತ್ರಾಜ್ಞ ಇಲಾಖೆಗಳ ವತಿಯಿಂದ ಜೀವಮಾನದ ಶ್ರೇಷ್ಟ ಸಾಧನೆಗೆ ಪ್ರಶಸ್ತಿ ನೀಡಬೇಕು
ನಿಮ್ಮ ವರದಿಗಾರ ತಂಡದ ತರಲೆ-ಭೇಟಿಗಾರ ಚಪ್ಪಲ್ ಅವರ ಸಂದರ್ಶನ ಮಾಡದೇ ಹಿಂದುರಿಗಿದ್ದು ಯಾಕೇ ?
ಮಹಾಂತೇಶರೆ,
ಪ್ರತ್ಯುತ್ತರಅಳಿಸಿನಾವು ಕೂಡ ಕ್ರಿಕೆಟ್ ನೋಡ್ಬಾರ್ದು ಅಂತ ಪ್ರಮಾಣ ಮಾಡಿದ್ದೆವು. ಹಾಳು ಕ್ರಿಕೆಟಿಗರು... ಆಗಾಗ್ಗೆ ನಿಜವಾದ ಕ್ರಿಕೆಟ್ ಆಡಿಬಿಡ್ತಾರಲ್ಲಾ... ಆಗ ಸ್ವಲ್ಪ ಆಸಕ್ತಿ ಹೆಚ್ಚುತ್ತೆ... ಮತ್ತೆ ಇದೇ ಪಾಡು :(
ಸುಶ್ರುತ ಅವರೆ,
ಪ್ರತ್ಯುತ್ತರಅಳಿಸಿಹಿಂದೆ ರವಿಶಾಸ್ತ್ರಿ, ಅಜರ್ ಎಲ್ಲರೂ ಹಾರ ಹಾಕಿಸಿಕೊಂಡವರು. ಏನಾದ್ರೂ ಪ್ರಯೋಜನವಾಯಿತೇ? ಹಾಗಾಗಿ ಈ ಬಾರಿ ಹೂವಿನ ಹಾರ ಹಾಕಿ ಸ್ವಾಗತಿಸಿದ್ರೆ ಇನ್ನಷ್ಟು ಮಜವಾಗಿರುತ್ತೆ!!!
ಶ್ರೀ ಅವರೆ,
ಪ್ರತ್ಯುತ್ತರಅಳಿಸಿಗಂಡ ಹೆಂಡಿರ ಜಗಳವೇನೋ ಇರಬಹುದು, ಆದರೆ ಈ ರೀತಿ ಡೈವರ್ಸ್ ಆಗಿಬಿಟ್ಟರೆ????
ಆಯ್ತು... ಮುಂದಿನ ವಿಶ್ವ ಕಪ್ ವರೆಗೆ ಕಾಯ್ತಾ ಇರ್ತೀವಿ.
ಶಿವ್ ಅವರೆ,
ಪ್ರತ್ಯುತ್ತರಅಳಿಸಿಆಟಗಾರರು ಚೆನ್ನಾಗಿ ಆಡದಿದ್ದರೆ ಚಪ್ಪಲನ್ನು ಎಳೆದಾಡುವ ಮನೋಭಾವ ಬದಲಾಗದಿದ್ದರೆ.... ಇನ್ನು ವಿದೇಶೀ ಕೋಚ್ ಗಳು ಭಾರತದತ್ತ ತಲೆಹಾಕಿಯೂ ಮಲಗುವುದಿಲ್ಲ. ಹಾಗಾಗಿ ಎಲ್ಲರೂ ಚಪ್ಪಲನ್ನೇ ದೂರುತ್ತಾರೆ, ನಾಯಕನನ್ನೇ ದೂರುತ್ತಾರೆ. ಹಾಗಾಗಿ ನಮ್ಮ ಬ್ಯುರೋ ಕೂಡ ಈ ರೀತಿ ಮಾಡದಂತೆ ನಮ್ಮ ಕ್ರಿಮಿ-null ವರದಿಗಾರರಿಗೆ ಸ್ಪಷ್ಟವಾಗಿ ಸೂಚಿಸಿದ್ದೇವೆ.
ಸಿಂಹೇಂದ್ರ ಮಂಗ್ ಧೋಣಿ, ಚಚ್ಚಿಂಗ್ ಚೆಂಡುಲ್ಕರ್ :))
ಪ್ರತ್ಯುತ್ತರಅಳಿಸಿಮನಸ್ವಿನಿ ಅವರೆ,
ಪ್ರತ್ಯುತ್ತರಅಳಿಸಿನೀವು ಕೂಡ ನಮ್ಮ ಕ್ರಿಕೆಟಿಗರ ಹೆಸರು (=ಅವಸ್ಥೆ) ನೆನಪಿಸಿಕೊಂಡು ನಗಲು ಆರಂಭಿಸಿದ್ದೀರಲ್ಲಾ!!!!
ಎಕ್ಸಲೆಂಟ್ ವರದಿ. ಇದಕ್ಕಿಂತ ಮಜವಾದ ನಿಜವಾದ ಬೊಗಳೆ ನಾನೆಲ್ಲೂ ಓದಿರಲಿಲ್ಲ. ನಿಮ್ಮ ಪೆನ್ ಸೂಪರ್ ಪನ್ನುಗಳನ್ನೇ ಬರೆಯುತ್ತದೆ.. ನನ್ನ ಬ್ಲಾಗಿಗೆ ಲಿಂಕಿದ್ದೇನೆ.. :)
ಪ್ರತ್ಯುತ್ತರಅಳಿಸಿಎಲ್ಲ ನೋಟಗಳಾಚೆ ಬೇರೇನೋ ಇದೆಯೆಂದು ಪ್ರತಿಪಾದಿಸುವ ಸಿಂಧು Sindhu ಅವರರಿಗೆ ಸ್ವಾಗತ.
ಪ್ರತ್ಯುತ್ತರಅಳಿಸಿಎಕ್ಸಲೆಂಟ್ ವರದಿ ಎಂಬ ನಿಮ್ಮ ಆಕ್ಷೇಪವನ್ನು ನಮ್ಮ ಬ್ಯುರೋ ಪರಿಗಣಿಸಿದ್ದು, ಇನ್ನು ಮುಂದೆ ಹಾಗಾಗದಂತೆ ಎಚ್ಚರವಹಿಸುತ್ತೇವೆ ಎಂದು ಭರವಸೆ ನೀಡುತ್ತದೆ. :)
ಏನಾದ್ರೂ ಹೇಳ್ರಪಾ :-D