(ಬೊಗಳೂರು ಮಕ್ಕಳಾಟಿಕೆ ಬ್ಯುರೋದಿಂದ)
ಬೊಗಳೂರು, ಮಾ.23- ವಿಶ್ವಾದ್ಯಂತ ಮಕ್ಕಳೆಲ್ಲರೂ ಎರಡೂ ಕೈಗಳನ್ನು ತಮ್ಮ ತಲೆಯ ಮೇಲೆ ಹೊತ್ತು ಕುಳಿತುಕೊಂಡಿದ್ದಾರೆ.ಇದಕ್ಕೆ ಕಾರಣ ವಿಶ್ವ ಕಪ್ ಕ್ರಿಕೆಟ್ ಇರಬಹುದೇ? ಅಥವಾ ಅವರಿಗಾಗಿ ಇರುವ ಚಾಕಲೇಟುಗಳನ್ನೆಲ್ಲಾ ಹಿರಿಯರು ಕದ್ದೊಯ್ದರೇ ಎಂಬಿತ್ಯಾದಿ ಸಾಧ್ಯಾಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿರುವಾಗ ದೊರೆತದ್ದು ಈ ಸುದ್ದಿ. ಮಕ್ಕಳ ಪ್ರೀತಿಯ ಆಟಗಾರ ಸ್ಪೈಡರ್ ಮ್ಯಾನ್‌ನನ್ನು ಮಲೇಷ್ಯಾ ಪೊಲೀಸರು ಬಂಧಿಸಿರುವುದು!!!
80 ಮಹಡಿಗಳ ಪೆಟ್ರೋನಾಸ್ ಕಟ್ಟಡಕ್ಕೆ ಮೇಲೇರಲು ಯತ್ನಿಸುತ್ತಿದ್ದ ಸ್ಪೈಡರ್ ಮ್ಯಾನ್‌ನನ್ನು ಪೊಲೀಸರು 60ನೇ ಮಹಡಿಯಿಂದ ಬಂಧಿಸಿದರು ಎಂದು ವರದಿ ತಿಳಿಸಿದೆ.
ಈ ಕಾರಣಕ್ಕೆ 60ನೇ ಮಹಡಿ ವರೆಗೆ ಏದುಸಿರು ಬಿಡುತ್ತಾ ಏರಿದ ಪೊಲೀಸರನ್ನು ಕೂಡ ಬಂಧಿಸಬೇಕು ಎಂದು ಪುಟಾಣಿಗಳು ಒತ್ತಾಯಿಸಿದ್ದು, ಸ್ಪೈಡರ್ ಮ್ಯಾನ್ ಬಿಡುಗಡೆಗೆ ತೀವ್ರ ಒತ್ತಡ ಹೇರತೊಡಗಿದ್ದಾರೆ.
ಈ ಬಗ್ಗೆ ಸ್ಪೈಡರ್ ಮ್ಯಾನ್‌ನನ್ನೇ ಮಾತನಾಡಿಸಲು ನಿರ್ಧರಿಸಿದ ಬೊಗಳೆ ರಗಳೆ ಬ್ಯುರೋ, ಕಟ್ಟಡದ ತುತ್ತ ತುದಿಯಲ್ಲಿ ನಿಂಬೆ ಹಣ್ಣಿನಂತೆ ತೋರುತ್ತಿದ್ದ ಸ್ಪೈಡರ್ ಮ್ಯಾನ್‌ನನ್ನು ಮರದ ಉದ್ದನೆಯ ಕೋಲಿನಿಂದ ಹೊಡೆದು ಕೆಳಗೆ ಎಳೆಯುವ ಪ್ರಯತ್ನ ಮಾಡಿತು. ಬೊಗಳೆ ಎಂದ ತಕ್ಷಣವೇ ಎರಡೂ ಕೈಗಳನ್ನು ಬಿಟ್ಟು ಧೊಪ್ಪನೆ ಕೆಳಗೆ ಬಿದ್ದ ಸ್ಪೈಡರ್ ಮ್ಯಾನ್, ಮಂಗನಂತೆ ಏರುವುದು ನಮ್ಮ ಉದ್ದೇಶವಾಗಿರಲಿಲ್ಲ. ಆದರೆ ಮಂಗ ಮಾಯವಾಗುವುದು ಹೇಗೆ ಎಂಬುದನ್ನು ಜನತೆಗೆ ತೋರಿಸಬೇಕಿತ್ತು ಎಂದು ಉತ್ತರಿಸಿದ್ದಾನೆ.
ಅದು ಹೇಗೆ, ಸ್ವಲ್ಪ ವಿವರಿಸಿ ಹೇಳುವೆಯಾ ಎಂದು ಕೇಳಿದಾಗ, "ಸುಮಾರು 40ನೇ ಮಹಡಿಗೆ ಏರಿದಾಗಲೇ ನಾನು ಕೆಳಗಿದ್ದವರಿಗೆ ಕಾಣಿಸುವುದಿಲ್ಲ. ಹಾಗಾಗಿ ಇನ್ನೂ ಮೇಲಕ್ಕೇರಿದರೆ ಬಹುತೇಕ ಅದೃಶ್ಯನಾಗಿಬಿಡುತ್ತೇನೆ. ಅಲ್ಲೆಲ್ಲಾದರೂ ಸ್ವರ್ಗ-ನರಕ ಕಾಣುತ್ತದೆಯೋ ಎಂಬುದನ್ನು ನೋಡಬೇಕಿತ್ತು" ಎಂದು ವಿವರಿಸಿದ್ದಾನೆ.
ಇದೀಗ ಮಕ್ಕಳನ್ನು ಸಮಾಧಾನಿಸಲು ವಿಶ್ವಾದ್ಯಂತ ಭರದ ಸಿದ್ಧತೆ ನಡೆಯುತ್ತಿದ್ದು, ಸ್ಪೈಡರ್ ಮ್ಯಾನ್ ಬಿಡುಗಡೆ ಬಹುತೇಕ ಖಚಿತವಾಗಿದೆ.
2 ಕಾಮೆಂಟ್‌ಗಳು
ಸ್ಪೈಡರ್ ಮ್ಯಾನ್‌ನನ್ನು ಪೊಲೀಸರು ಬಂಧಿಸಿದರು. ಆದರೆ ಪೊಲೀಸರು ಬಂಧಿಸೋವರ್ಯಾರು? ಸ್ವಲ್ಪ ವಿಚಾರಿಸಿ ತಿಳಿಸುವಿರಾ? ಯಾಕಂದ್ರೆ ಪೊಲೀಸರ ಮೇಲಿ ಪೊಲಿಸಿಂಗ್ ಮಾಡಲು ಸಂಚು ಮಾಡುತ್ತಿರುವೆ.
ಪ್ರತ್ಯುತ್ತರಅಳಿಸಿಮ್ಯಾನ್ ಬೊಅಗಳೆ ಎಂದು ಕೂಗಿದ್ಯಾಕೆ ಗೊತ್ತಾ? ಅವನು ಬೊಗಳೆ ಬ್ಯುರೋದವನಂತೆ. ಇಷ್ಟು ದಿನ ಊರಿಗೆ ಹೋಗ್ತಾನಿ ಅಂತ ಹೇಳಿ ಮಲೇಷ್ಯಾಗೆ ಹೋಗಿ ಸಿಕ್ಕಿಬಿದ್ದದ್ದ.
ಪೊಲೀಸರಿಗೇಕೆ ಮಾಲಿಶಿಂಗ್ ಮಾಡ್ತೀರಾ? ನಿಮಗೂ ಪೋಲಿ ಇಲಾಖೆ ಸೇರುವ ಇಚ್ಛೆಯಿದೆಯೇ, ಪೊಲೀಸರನ್ನು ಬಂಧಿಸಿದರೆ ನಿಮಗೇನು ಸಿಗಬಹುದು ಎಂಬುದನ್ನು ಕೂಡಲೇ ಶ್ರುತಪಡಿಸಿ. ಇಲ್ಲವಾದಲ್ಲಿ ಬೊಗಳೆ ರಗಳೆ ಬ್ಯುರೋವನ್ನು ಛೂ ಬಿಡಬೇಕಾಗುತ್ತದೆ.
ಪ್ರತ್ಯುತ್ತರಅಳಿಸಿಏನಾದ್ರೂ ಹೇಳ್ರಪಾ :-D