ಬೊಗಳೆ ರಗಳೆ

header ads

ಬಜೆಟ್ : ಇನ್ನು ನಾಯಿಪಾಡು ಅನುಭವಿಸುವುದು ಸುಲಭ!

(ಬೊಗಳೂರು ಸ್ವಯಂಬಜೆಟ್ ಬ್ಯುರೋದಿಂದ)
ಬೊಗಳೂರು, ಮಾ.1- ತಮಿಳುನಾಡಿಗೆ ಸೇರಿದವರಾದ ಕೇಂದ್ರದ ವಿತ್ತ ಸಚಿವರಾದ ಪೀಚಿ ದಂಬರಂ ಅವರು ಜನಸಾಮಾನ್ಯರ ಪಾಡನ್ನು ಎತ್ತ ಕೊಂಡೊಯ್ಯುತ್ತಾರೆ ಎಂಬ ಬಗೆಗಿದ್ದ ಕುತೂಹಲವನ್ನು ನಿನ್ನೆ ಕೋಲಸಭೆಯಲ್ಲಿ ಮಂಡಿಸಿದ ಆಯವ್ಯಯ ಪತ್ರದ ಮೂಲಕ ಶ್ರುತಪಡಿಸಿದ್ದು, ಮನುಷ್ಯ ಹೊರತಾಗಿ ಸಕಲ ಚರಾಚರ ಸಮುದಾಯವು ಬಜೆಟನ್ನು ಭರ್ಜರಿಯಾಗಿ ಸ್ವಾಗತಿಸಿವೆ.

ಈಗಾಗಲೇ ಮನುಷ್ಯರು ತಿನ್ನುವ ತರಕಾರಿ, ಬೇಳೆ ಮತ್ತಿತರ ದಿನಬಳಕೆ ಸಾಮಗ್ರಿಗಳು ಕೈಗೆಟುಕದಷ್ಟು ಮೇಲಕ್ಕೆ ನೆಗೆದಿದ್ದರೂ, ನಾಯಿ ಬೆಕ್ಕುಗಳ ಆಹಾರಕ್ಕೆ 33% ರಷ್ಟು ತೆರಿಗೆ ಕಡಿತ ಮಾಡುವ ಮೂಲಕ ಜನಸಾಮಾನ್ಯರು ಕೂಡ ಆ ಆಹಾರಗಳನ್ನೇ ತಿಂದು ನಾಯಿಬೆಕ್ಕುಗಳಂತೆ ಸಮೃದ್ಧವಾಗಿ, ದಷ್ಟಪುಷ್ಟವಾಗಿ, ಬುದ್ಧಿವಂತರಾಗಿ ಬೆಳೆಯಲು ಅನುವು ಮಾಡಿಕೊಟ್ಟಿರುವುದು ಸರ್ವತ್ರ ಶ್ಲಾಘನೆಗೆ ಕಾರಣವಾಗಿದೆ.

ಮೀಸಲಾತಿ ಎಂದ ತಕ್ಷಣ ದೌರ್ಜನ್ಯಕ್ಕೊಳಗಾದ, ತುಳಿತಕ್ಕೊಳಗಾದ ಎಂಬಿತ್ಯಾದಿ ಪದಗಳನ್ನು ನೆನಪಿಸಬಲ್ಲ ಮತ್ತು ಪ್ರತಿಭಟನೆ ಎದುರಿಸುತ್ತಿರುವ ಸಮುದಾಯವನ್ನು ಮೇಲೆತ್ತಲು ಎಂಬ ಉದ್ದೇಶದಿಂದ ಪರಿಶಿಷ್ಟ ಜಾತಿ-ವರ್ಗ ಮತ್ತು ಒಬಿಸಿಗಳಿಗೆ ಬಜೆಟ್ ಅನುದಾನವನ್ನು ಮೂರು ಪಟ್ಟು (ಅಂದರೆ ಕಳೆಬಾರಿ 6,600 ಕೋಟಿ ರೂ. ಇದ್ದದ್ದು ಈ ಬಾರಿ 17,691 ಕೋಟಿ ರೂ.ಗೆ) ಹೆಚ್ಚಿಸಿರುವುದು ವೈಟ್ ಕಾಲರ್ ನುಂಗಣ್ಣಗಳಿಂದ ಬಾಯ್ತುಂಬಾ ಹೊಗಳಿಕೆಗೆ ಕಾರಣವಾಗಿದೆ.

ಇಷ್ಟು ವರ್ಷಗಳಿಂದ ಪರಿಶಿಷ್ಟರ ಕಲ್ಯಾಣಕ್ಕೆ ಕೋಟಿ ಕೋಟಿ ರೂ. ಅನುದಾನ ಮೀಸಲಾಗಿಡುತ್ತಿದ್ದರೂ, ಇನ್ನೂ ಅವರು "ಹಿಂದುಳಿದಿದ್ದಾರೆ" ಎಂದೆಲ್ಲಾ ಈಗಲೂ ಕೂಗಾಡುತ್ತಿರುವುದರ ಹಿಂದಿನ ರಹಸ್ಯವನ್ನು ಇದೇ ಸಂದರ್ಭ ಪತ್ತೆ ಹಚ್ಚಲಾಗಿದ್ದು, ಅವರ ಕಲ್ಯಾಣಕ್ಕೆ ಮೀಸಲಾಗಿಡುತ್ತಿದ್ದ ಧನಕನಕಗಳೆಲ್ಲಾ ನುಂಗಣ್ಣರ ಅಭಿವೃದ್ಧಿಗೆ ವ್ಯಯವಾಗುತ್ತಿರುವುದು ಪತ್ತೆಯಾಗಿದೆ.

ಇದರಿಂದ ಇದುವರೆಗೆ ಬರೇ ಐಷಾರಾಮಿ ಕಾರುಗಳಲ್ಲಿ ಓಡಾಡುತ್ತಿದ್ದ ಕಲ್ಯಾಣ ಮತ್ತು ಅಭಿವೃದ್ಧಿ ಇಲಾಖೆ ಜನಗಳು ಇದೀಗ ಪರಿಶಿಷ್ಟರಿಗೆ ಅತಿ ಶೀಘ್ರದಲ್ಲಿ ಸೇವೆ ಸಲ್ಲಿಸುವುದಕ್ಕಾಗಿ ಹೆಲಿಕಾಪ್ಟರ್, ವಿಮಾನ ಖರೀದಿಗೆ ಮುಂದಾಗಿದ್ದಾರೆ. ತುಳಿತಕ್ಕೊಳಗಾಗಿ ಪಾತಾಳಕ್ಕೆ ತಳ್ಳಲ್ಪಟ್ಟಿರುವ ಸಮುದಾಯದ ಮಂದಿಯನ್ನೆಲ್ಲಾ ಪತ್ತೆ ಹಚ್ಚುವುದು ಇದರಿಂದ ಸುಲಭವಾದೀತು ಎಂದು ಈ ಬಿಳಿಕಾಲರ್ ನುಂಗಣ್ಣಗಳು ಸ್ಪಷ್ಟನೆ ನೀಡಿದ್ದಾರೆ.

ಆದರೆ ಪತ್ತೆ ಹಚ್ಚಿದ ಮೇಲೆ ಅವರಿಗೆ ಒಂದೆರಡು ರೂಪಾಯಿ ಕೊಟ್ಟುಬಿಟ್ಟರಾಯಿತು, ಇದರಿಂದ ಅವರ ಅಭಿವೃದ್ಧಿ ಖಂಡಿತಾ ಸಾಧ್ಯವಾಗುತ್ತದೆ ಎಂದು ಅವರು ಬಾಯಿಬಿಟ್ಟು ಹೇಳಿರುವುದಾಗಿ ಬೊಗಳೆ ರಗಳೆ ಬ್ಯುರೋದಲ್ಲೂ ವರದಿಯಾಗಿಲ್ಲ.

ಹಿಂದುಳಿದವರ ಕಲ್ಯಾಣಕ್ಕಾಗಿ ಇದೂ ಸಾಲದೆಂಬಂತೆ ಜನಸಾಮಾನ್ಯರನ್ನೂ ಮತ್ತಷ್ಟು ಹಿಂಡುವ ಪ್ರಯತ್ನವಾಗಿ ಶೈಕ್ಷಣಿಕ ಸೆಸ್ ಅನ್ನು 2% ನಿಂದ 3% ಕ್ಕೆ ಏರಿಸಿರುವುದು ಬಿಳಿಕಾಲರ್ ಸಮುದಾಯದ ಮತ್ತಷ್ಟು ಸಂತೋಷಕ್ಕೆ ಕಾರಣವಾಗಿದೆ.

ಒಟ್ಟಿನಲ್ಲಿ ಈ ಎರಡೂ ಕ್ರಮಗಳು ಎರಡು ತಿಂಗಳಲ್ಲೇ ನಡೆಯಲಿರುವ ಉತ್ತರ ಪ್ರದೇಶ ಚುನಾವಣೆಗಳು ಹಾಗೂ ಇನ್ನೆರಡು ವರ್ಷದೊಳಗೆ ನಡೆಯಲಿರುವ ಮತ್ತೊಂದು ಲೋಕಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಅನುಷ್ಠಾನಗೊಂಡಿವೆ ಎಂದು ಶೋಧಿಸಲಾಗಿದೆ.

ರೈತರ ಬಗ್ಗೆ

ಇನ್ನು ದೇಶದ ಬೆನ್ನೆಲು-ಬಾಗಿರುವ ರೈತರ ಬಗ್ಗೆ ಪೀಚಿ ದಂಬರಂ ಅವರು ಮತ್ತಷ್ಟು ದಯಾಪರತೆ ತೋರಿಸಿದ್ದಾರೆ. ಈಗಾಗಲೇ ಮಾಡಿದ ಸಾಲ ತೀರಿಸಲಾಗದೆ, ಬಡ್ಡಿ ಕಟ್ಟಲಾಗದೆ ದೇಶಾದ್ಯಂತ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಂತೆಯೇ, ಅವರಿಗೆ ಹಣಕಾಸು ಸಹಾಯ ಅಥವಾ ಅವರು ಬೆಳೆದ ಬೆಳೆಗಳಿಗೆ ಬೆಲೆ ನೀಡುವ ಬದಲು, ಅವರಿಗೆ ನೀಡುವ ಸಾಲದ ಪ್ರಮಾಣವನ್ನು ಹೆಚ್ಚಿಸಿರುವುದು ಹಲವಾರು ಶಂಕೆಗಳಿಗೆ ಕಾರಣವಾಗಿದೆ. ಸಾಲದ ಪ್ರಮಾಣ ಹೆಚ್ಚಾದಷ್ಟೂ ಆತ್ಮಹತ್ಯೆಯ ಪ್ರಮಾಣವೂ ಹೆಚ್ಚಾಗಲಿದೆಯೇ ಎಂಬುದು ಈ ಶಂಕೆಗೆ ಮೂಲ ಹೇತುವಾಗಿದೆ.

ಜನ"ಸಾಮಾನ್ಯ"ರ "ಕಲ್ಯಾಣ"ಕ್ಕೆ ಪೀಚಿ ದಂಬರಂ ಅವರ ಇನ್ನು ಕೆಲವು ಸೂತ್ರಗಳು

* ಮನುಷ್ಯ ಬದುಕಲು ಬೇಕಾದ ಆಹಾರ ವಸ್ತುಗಳ ಬೆಲೆ ಏರುತ್ತಿದ್ದು, ಸರಿಯಾಗಿ ತಿನ್ನದೆ ನಿಶ್ಶಕ್ತರಾಗಿರುತ್ತಾರೆ. ಅವರಿಗೆ ಅತ್ತಿತ್ತ ಓಡಾಡುವುದು ಸುಗಮವಾಗಲಿ ಎಂಬ ಕಾರಣ್ಕೆ ಕಾರು ಖರೀದಿಯ ಸಾಲಕ್ಕೆ ತೆರಿಗೆ ಮನ್ನಾ.

* ಹೆಚ್ಚು ತಿಂದರೆ ಹೊಟ್ಟೆ ಹಾಳು ಎಂಬ ಕಾರಣದಿಂದ ಬೇಳೆ ಕಾಳುಗಳು, ಚಹಾ, ತರಕಾರಿ ಮತ್ತಿತರ ಆಹಾರ ಪದಾರ್ಥಗಳ ಬೆಲೆ ಏರಿಕೆ.

* ಡಾಗ್ ಬಿಸ್ಕಿಟ್ ಮತ್ತಿತರ ಆಹಾರಗಳ ಬೆಲೆ ಇಳಿಕೆ. ಬೇಯಿಸಿದ ಆಹಾರ ಹೊಟ್ಟೆಗೆ ಒಳ್ಳೆಯದಲ್ಲ ಎಂಬ ಕಾರಣಕ್ಕೆ ಎಲ್‌ಪಿಜಿ, ಸೀಮೆಣ್ಣೆ ದರ ಏರಿಕೆ. (ಈ ಎರಡು ವಾಕ್ಯಗಳ ಸಂದೇಶ ಏನು?)

* ಇದು ಯಾಂತ್ರಿಕ ಯುಗವಾದುದರಿಂದ ಮನುಷ್ಯನಿಗಿಂತಲೂ ಯಂತ್ರಗಳಿಗೇ ಹೆಚ್ಚು ಪ್ರಾಧಾನ್ಯತೆ. ಈ ಕಾರಣಕ್ಕೆ ಟಿವಿ, ವಾಷಿಂಗ್ ಮೆಶಿನ್, ಫ್ರಿಜ್, ಏರ್ ಕಂಡಿಶನರ್ ಮುಂತಾದ ಐಷಾರಾಮಿ ವಸ್ತುಗಳ ಬೆಲೆ ಇಳಿಕೆ, ಜನ ಸಾಮಾನ್ಯರು ಹೊಟ್ಟೆಗೇನು ತಿನ್ನದಿದ್ದರೂ ಐಷಾರಾಮ ಜೀವನ ನಡೆಸಲಿ ಎಂಬುದು ಇದರ ಹಿಂದಿನ ಉದ್ದೇಶ.

* ಆಹಾರಕೊರತೆಯಿಂದ ಹೆಚ್ಚು ಅನಾರೋಗ್ಯ ಹೊಂದಿದರೆ ಚಿಕಿತ್ಸೆ ಸುಲಭವಾಗಲು ವೈದ್ಯಕೀಯ ಉಪಕರಣಗಳಿಗೆ ತೆರಿಗೆ ಕಡಿತ.

* ಇಷ್ಟಾಗಿಯೂ ತೀರಾ ಹೆಚ್ಚು ಹಸಿವಾದರೆ... ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿಕೊಳ್ಳುವ ಬದಲು, ಕೆಳ ದರ್ಜೆಯ ಸಿಮೆಂಟ್ ಬೆಲೆಯನ್ನು ಮತ್ತಷ್ಟು ಇಳಿಸಲಾಗಿದೆ. ಸಿಮೆಂಟ್ ಹಾಕಿಬಿಟ್ಟರೆ ಹಸಿವಾಗಲಾರದು ಎಂಬುದು ಇದರ ಮರ್ಮ.

ಕಾಮೆಂಟ್‌‌ ಪೋಸ್ಟ್‌ ಮಾಡಿ

11 ಕಾಮೆಂಟ್‌ಗಳು

  1. ಈ ಬಾರಿಯ ಭಾರಿ ಭಜೆಟ್‍ನಿಂದ ಭೂರಿ ಭೋಜನ ಸಿಕ್ಕ ಪುಣ್ಯವಂತರೆಲ್ಲರಿಗೂ ಅಭಿನಂದನೆ.
    ಪ್ರತಿ ವರ್ಷವೂ ಕೋಟಿ ಕೋಟಿ ರುಪಾಯಿ ವಿನಿಯೋಗಿಸುತ್ತಿದ್ದರೂ ಹಿಂದುಳಿದವರು ಇನ್ನೂ ಯಾಕೆ ಮುಂದೆ ಬರುತ್ತಿಲ್ಲ ಎಂಬುದರ ಬಗ್ಗೆ ವಿಚಾರಗೋಷ್ಟಿ ಏರ್ಪಡಿಸಿದ್ದು ಸಿಸ್ಸಿ, ಸಿಸ್ಟಿ ಯವರಿಗೆ ಶೇ ೬೦ರಷ್ಟು, ಎಬಿಸಿಯವರಿಗೆ ಶೇ೪೦ ರಷ್ಟು ಸಿಟುಗಳನ್ನು ಮೀಸಲಾಗಿರಿಸಲಾಗಿದ್ದು, ಪ್ರತಿಭೆಯಿರುವ ಪ್ರತಿಯೊಬ್ಬರೂ ಪಾಲ್ಗೊಳ್ಳುವಂತೆ ಕೇಳಿ ಕೊಳ್ಳಲಾಗಿದೆ.
    ಸಿಗರೇಟು, ಬೀಡಿ, ತಂಬಾಕಿನ ಮೇಲೆ ಅನವಶ್ಯಕವಾಗಿ ಕರ ಹೇರಿರುವುದನ್ನು ವಿರೋಧಿಸಿ ಅಕಿಲ ಭಾರತ ಹೊಗೆ ಬಿಡುವವರ ಸಂಘ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಘೋಷಿಸಿರುವುದಾಗಿ ನಮ್ಮ ಗುಪ್ತ ಮೂಲಗಳಿಂದ ತಿಳಿದುಬಂದಿದೆ.

    ಪ್ರತ್ಯುತ್ತರಅಳಿಸಿ
  2. ಬೊ-ರಣ್ಣನ್ವರೇ ನೀವು ಪೀಚಿ‍ಗಿಂತಲೂ ಬಹಳ ಚೆನ್ನಾಗಿ ಬಿಸ್ಕೆಟ್ ಹಾಕಿದ್ದೀರಿ. ಅಂದ ಹಾಗೆ ನಾಯಿ ಬಿಸ್ಕೆಟ್ ಅಷ್ಟು ಅಗ್ಗವಾಗಿ ಹೋಯಿತೇ?
    ನಾಯಿ ಬಿಸ್ಕೆಟ್ಟೇ ಸವಿ
    ಬಲ್ಲವರೇ ಬಲ್ಲರು
    ವಕ್ರ ಲೋಚನ ಶ್ರೀ
    ಬೊ-ರಣ್ಣ ನಾಮವೆಂಬ ...

    ಪ್ರತ್ಯುತ್ತರಅಳಿಸಿ
  3. ಬಜೆಟ್2007 ಬಗ್ಗೆ

    >ಜನರ ಪ್ರತಿಕ್ರಿಯೆ: wow! wow!
    ಶುನಕ ಪ್ರತಿಕ್ರಿಯೆ: bow..bow..bow..wow!!

    ಪ್ರತ್ಯುತ್ತರಅಳಿಸಿ
  4. ಇದೀಗ ಬಂದ ವರದಿ. ಚಿದಂಬರಂ ಅವರು ಬಜೆಟ್ ಮಂಡಿಸಲಿಕ್ಕೆ ಪಂಚೆ ಉಟ್ಟುಕೊಂಡೇ ಹೊರಟಾಗ, ರಾಜಧಾನಿಯ ಕೆಲ ಡಾಗುಗಳು (ಡಾಕುಗಳಲ್ಲ!) ಅವರ ಪಂಚೆ ಎಳೆಯಲು ಬಂದವಂತೆ. ಅಚಾತುರ್ಯ ನಡೆದು ಅವರಿಗೆ ಚಿತ್ತೇ ಅಂಬರವಾಗುವ ಸಾಧ್ಯತೆಗಳಿದ್ದುವು. ಹೇಗೋ ತಪ್ಪಿಸಿಕೊಂಡ ಚಿದಂಬರಂ ಲೋಕಸಭೆಗೆ ನುಗ್ಗಿ ಮೊದಲುಮಾಡಿದ ಕೆಲ್ಸವೆಂದರೆ ಡಾಗ್‍ಬಿಸ್ಕೀಟ್‍ಗಳ ಬೆಲೆ ಇಳಿಸಿದ್ದು! ಇನ್ನು ಪಂಚೆ ಕ್ಷೇಮ!

    ಇತಿ ಪಂಚೆ ಪುರಾಣ. ಇದು pun ಛೇ!

    ಪ್ರತ್ಯುತ್ತರಅಳಿಸಿ
  5. ನಾಯಿಗಳು ದುಡ್ಡು ಕದಿಯುತ್ತಿವೆ, ನಾಯಿಗಳು ಜನರನ್ನು ಕಚ್ಚಿ ಸಾಯಿಸುತ್ತಿವೆ, ಈಗ ಬಿಸ್ಕೀಟು ಕೂಡ ಅಗ್ಗವಾಯಿತು. ಒಟ್ಟಿನಲ್ಲಿ , ನಾಯಿಯನ್ನು ತಡೆಯೋರು ಯಾರೂ ಇಲ್ಲ....!

    ಪ್ರತ್ಯುತ್ತರಅಳಿಸಿ
  6. ಕೇಂದ್ರದವರು ನಾಯಿ ಬಿಸ್ಕೆಟ್ ಹಾಕಿದ್ದಾರೆ...ಇನ್ನು ರಾಜ್ಯದವರು ಏನು ಹಾಕುತ್ತಾರೋ??!

    ಪ್ರತ್ಯುತ್ತರಅಳಿಸಿ
  7. ಸುಪ್ರೀತರೆ,
    ಭೂರಿ ಭೂಜನ ಉಂಡವರೆಲ್ಲಾ ಜನಸಾಮಾನ್ಯರಿಗೆ ಖಂಡಿತವಾಗಿಯೂ ಉಪ್ಪನ್ನಾದರೂ ಹಾಕುತ್ತಾರೆ ಎಂದು ಕೇಳಿಬಲ್ಲೆವು.
    ಬೆಂಕಿ ಇಲ್ಲದೆ ಹೊಗೆ ಬರುವುದಿಲ್ಲವಾದುದರಿಂದ ಹೊಗೆ ಬಿಡುವವರ ಬಗ್ಗೆ ನಿಮ್ಮ ಗುಪ್ತ ಮೂಲಗಳನ್ನು ಸ್ವಲ್ಪ ಜಾಗರೂಕತೆಯಿಂದಿರಲು ಹೇಳಿ.

    ಪ್ರತ್ಯುತ್ತರಅಳಿಸಿ
  8. ಶ್ರೀನಿವಾಸರೆ,
    ಪೀಚಿ ಅವರು ಮುಂದಿನ ವರ್ಷದ ಬಜೆಟ್ ಮಂಡನೆಗೆ ಮೊದಲು ಈಗಲೇ ನಮ್ಮ ಸಲಹೆ ಕೇಳಲು ಬುಕ್ ಮಾಡಿದ್ದಾರೆ.

    ವಕ್ರಲೋಚನ ಅಂದವರಾರು? ಸು-ಲೋಚನ ಇರಬಹುದು

    ಪ್ರತ್ಯುತ್ತರಅಳಿಸಿ
  9. ಜೋಷಿಯವರೆ,
    ನೀವು ನಮಗೆ ಹಾಕಿದ ಬಿಸ್ಕಿಟನ್ನು ನಾವು ಬ್ಲಾಗಿಗೇರಿಸಿದ್ದೇವೆ.

    ಡಾಗುಗಳ ಕಾಟದಿಂದಾಗಿ ಪೀಚಿ ಅವರು ಉಟ್ಟ ಅಂಬರವೇ ಚಿತ್ತು ಚಿತ್ತಾಗಿದ್ದು ನಿಜ.

    ಪ್ರತ್ಯುತ್ತರಅಳಿಸಿ
  10. ಶ್ರೀತ್ರೀ ಅವರೆ,
    ನಾಯಿಯನ್ನು ತಡೆಯೋರು ಯಾರು ಇಲ್ಲ ಅಂತ ಹೇಳಿ ನಾಯಿಗಳ ಬಗ್ಗೆ ಸಿಕ್ಕಾಪಟ್ಟೆ ಬರೆಯುತ್ತೇವೆ ಅಂತ ಶ್ವಾನದಳವನ್ನು ನಮ್ಮ ಮೇಲೆ ಛೂಬಿಡುತ್ತೇವೆ ಎಂದು ಪರೋಕ್ಷವಾಗಿ ಎಚ್ಚರಿಸುತ್ತಿದ್ದೀರಾ? :)

    ಪ್ರತ್ಯುತ್ತರಅಳಿಸಿ
  11. ಅನಾನಿಮಸ್ಗಿರಿಯವರೆ,
    ರಾಜ್ಯದವರು ಹೆಗ್ಗಣಗಳಿಗೆ ಹಾಕೋ ಪಾಷಾಣದ ಬೆಲೆ ಇಳಿಸಬಹುದೂಂತ ಕಾಣಿಸುತ್ತೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D