(ಬೊಗಳೂರು ಚೂಯಿಂಗ್‌ಗಮ್ ಬ್ಯುರೋದಿಂದ)
ಬೊಗಳೂರು, ಫೆ.20- ಕನ್ನಡದಲ್ಲಿ ಬರುತ್ತಿರುವ ಧಾರಾವಾಹಿಗಳನ್ನು ನೋಡುತ್ತಲೇ ಜೀವನವನ್ನು ತ್ಯಾಗ ಮಾಡಿದ ಮಹಾನ್ ವ್ಯಕ್ತಿಯ ಮಮ್ಮಿಯನ್ನು ಇಲ್ಲಿ ಪತ್ತೆ ಹಚ್ಚಲಾಗಿದೆ.ಇನ್ನೇನು, ಇದರ ಸಿಹಿ ಎಲ್ಲಾ ಮುಗಿಯಿತು, ಇನ್ನು ಉಗಿದುಬಿಡೋಣ ಎಂದು ವೀಕ್ಷಕರು ಅಂದುಕೊಳ್ಳುವಷ್ಟರಲ್ಲಿ ಚೂಯಿಂಗ್ ಗಮ್‌ಗೆ ಅದೆಲ್ಲಿಂದ ಸಿಹಿ ಬರುತ್ತದೋ.... ಮತ್ತೆ ಬೇರೆಯೇ ತಿರುವು ಪಡೆದುಕೊಂಡು ಉದ್ದ ಆಗುತ್ತಲೇ ಇದ್ದ ಧಾರಾವಾಹಿಯೊಂದನ್ನು ನೋಡಿ ನೋಡಿ ಈ ವ್ಯಕ್ತಿ ಈ ರೀತಿಯಾಗಿದ್ದಾನೆ ಎಂದು ಬೊಗಳೂರು ಬೊಗಳೆ ಬ್ಯುರೋ ಪತ್ತೆ ಹಚ್ಚಿದೆ.
ಈ ಧಾರಾವಾಹಿಗಳು ಅತ್ಯುತ್ತಮ ಸಂದೇಶವನ್ನು ಜನರಿಗೆ ನೀಡುತ್ತಿವೆ. ಇಬ್ಬರು ಹೆಂಡಿರಿದ್ದರೆ ತಪ್ಪಲ್ಲ, ವಿವಾಹಿತರಾಗಿ ವಿವಾಹೇತರ ಸಂಬಂಧ ತಪ್ಪಲ್ಲ, ಪತ್ನಿಯೂ ಪರಪುರುಷನ ಜತೆ ಓಡಿ ಹೋದರೆ ತಪ್ಪಲ್ಲ ಎಂಬಿತ್ಯಾದಿ ಅಮೂಲ್ಯ ಮಾನವೀಯ ಮೌಲ್ಯಗಳ ಸಂದೇಶವನ್ನು ಜನತೆಗೆ ನೀಡುತ್ತಿರುವ ಧಾರಾವಾಹಿಗಳು ಬಿಟ್ಟಿರಲಾರದ ವ್ಯಸನದಂತೆ ಮನುಷ್ಯನಿಗೆ ಅಂಟಿಕೊಂಡುಬಿಟ್ಟಿವೆ. ಹಾಗಾಗಿ ಸಾಯೋ ಕಾಲದಲ್ಲೂ ಟಿವಿ ಧಾರಾವಾಹಿಯೊಂದು ಮುಗಿಯುತ್ತದೆ ಎಂದು ಕಾದು ಕೂತ ವ್ಯಕ್ತಿ, ಧಾರಾವಾಹಿ ಮುಗಿಯುವವರೆಗೂ ಕಾದರೆ ಈ ಲೋಕವೇ ಗತಿ ಎಂದುಕೊಂಡು ಕುಳಿತಲ್ಲೇ ಪರಲೋಕಕ್ಕೆ ತೆರಳಿರುವುದಾಗಿ ಅಸತ್ಯಾನ್ವೇಷಿ ವರದಿ ಮಾಡಿದ್ದಾನೆ.
ಇದೂ ಅಲ್ಲದೆ ಹೆಂಗಸರು ಅಳುವುದು ಸಾಮಾನ್ಯ... ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ... ಯಾವತ್ತಿದ್ದರೂ ಅವರು ಅಳುತ್ತಿರುತ್ತಾರೆ ಎಂಬ ಸಂದೇಶ ಕೂಡ ಈ ಧಾರಾವಾಹಿಯಲ್ಲಿದ್ದು, ಕಣ್ಣೀರು ಹರಿಯದ, ಸುಪ್ತ ಭಾವನೆಗಳನ್ನು ಕೆರಳಿಸದ ಧಾರಾವಾಹಿಗಳನ್ನು ಪ್ರಸಾರ ಮಾಡದಿರಲು ಚಾನೆಲ್‌ಗಳು ಕೂಡ ನಿರ್ಧರಿಸಿವೆ ಎಂದು ತಿಳಿದುಬಂದಿದೆ.
ಯಾವ ರೀತಿಯಲ್ಲಿ ಮನೆಯಲ್ಲಿ ಸುಳ್ಳು ಹೇಳಬೇಕು, ಯಾವ ರೀತಿ ಬೈಯಬೇಕು ಎಂಬಿತ್ಯಾದಿಗಳನ್ನೂ ಧಾರಾವಾಹಿ ಹೇಳಿಕೊಡುತ್ತಿದ್ದು ಕೊನೆ ಕ್ಷಣದಲ್ಲಿ ಈ ಧಾರಾವಾಹಿಯ ಅಂತ್ಯ ಹೇಗಿದೆ ಎಂಬುದನ್ನು ನೋಡಲು ಅಸಾಧ್ಯವಾಗಿ ಪರಲೋಕ ಸೇರಿದ ಈ ವ್ಯಕ್ತಿಯ ಅಂತಿಮ ಇಚ್ಛೆ ಈಡೇರದ ಕಾರಣ, ಆತ ಇನ್ನೂ ಮನೆ ಮನೆಗಳಲ್ಲಿ ಆಗಾಗ್ಗೆ ಧಾರಾವಾಹಿ ನೋಡಲು ದೆವ್ವರೂಪದಲ್ಲಿ ಬರುತ್ತಿರುತ್ತಾನೆ ಎಂದು ಪ್ರಸಿದ್ಧ ಮಂತ್ರ-ತಂತ್ರ ಧಾರಾವಾಹಿ ನಿರ್ಮಾಪಕರೊಬ್ಬರು ಕಥೆ ಹೆಣೆಯತೊಡಗಿದ್ದಾರೆ.
ಇದರ ಮಧ್ಯೆಯೇ, ಧಾರಾವಾಹಿ ನಿರ್ದೇಶಕರು ಮತ್ತು ನಿರ್ಮಾಪಕರಿಗಾಗಿ ತೀವ್ರ ಶೋಧ ನಡೆಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಹೊಂದಿರುವ ರಬ್ಬರ್ ಕಂಪನಿಗಳ ಮುಖ್ಯಸ್ಥರು ಬೆಂಗಳೂರಿಗೆ ಬಂದಿದ್ದಾರೆ ಎಂಬ Exclusive ವರದಿಯನ್ನು ಬೊಗಳೆ ರಗಳೆ ಬ್ಯುರೋ ಪತ್ತೆ ಹಚ್ಚಿದೆ.
8 ಕಾಮೆಂಟ್‌ಗಳು
ಅನ್ವೇಷಿಗಳೇ, ನೀವು ಕೊಟ್ಟ ಲಿಂಕ್ ಓದಲು ಆಗುತ್ತಿಲ್ಲ. ಹೋಗಲಿ, ಟಿವಿ ಧಾರಾವಾಹಿ ನಿರ್ದೇಶಕರಿಗೆ ಹೇಳೋರು ಕೇಳೋರು ಯಾರೂ ಇಲ್ಲವೇ ಎಂಬ ಪ್ರಶ್ನೆಗಾದರೂ ಉತ್ತರಿಸಿ.
ಪ್ರತ್ಯುತ್ತರಅಳಿಸಿ`ಧಾರಾ'ವಾಹಿಗಳು ಅಂದರೇನೇ ಕಣ್ಣೀರು ಧಾರೆ ಧಾರೆಯಾಗಿ ಹರಿಯುವುದು ಎಂದರ್ಥ ಎಂಬುದಾಗಿ ಕನ್ನಡ ಭಾಷಾ ಸಂಶೋಧಕ ಕಮ್ ತಜ್ಞರೊಬ್ಬರು ತಿಳಿಸಿ ನಮಗೆ ಜ್ಞಾನೋದಯ ಮಾಡಿಸಿದ್ದಾರೆ.
ಪ್ರತ್ಯುತ್ತರಅಳಿಸಿಅಸಲಿಗೆ ಕಥೆಯೆಂಬುದೇ ಇಲ್ಲದೆ ಪ್ರಾರಂಭವಾಗುವ ಈ 'ಸೀರಿಯಲ್ ಕಿಲ್ಲಿಂಗ್'ಗಳಲ್ಲಿ ಗಲ್ಲಿ ಗಲ್ಲಿಯಲ್ಲೊಂದೊಂದು ಕತೆ ಪ್ರಾರಂಭವಾಗಿ ಅದನ್ನು ನ್ಯಾಷನಲ್ ಹೈವೇ ತುಂಬಾ ಎಳೆದು ತಂದು ಕೊನೆಗೆ ಎಲ್ಲಿ ಮುಗಿಸುವುದು ಅಂತ ತಿಳಿಯದೆ ಪೆಚ್ಚಾಗುವ ನಿರ್ದೇಶಕರ, ಅದನ್ನು ಪ್ರತಿನಿತ್ಯ ಕಂಡು ಹುಚ್ಚಾಗುವ ಪ್ರೇಕ್ಷಕರ ಮೊರೆಯನ್ನು ಕೇಳಲು ಮಾನ(ಇದ್ದರೆ)ಯ ಮುಖ್ಯಮಂತ್ರಿಗಳು ನ್ಯಾಯ ಮಂಡಳಿಯೊಂದನ್ನು ತೆರೆಯುವುದಾಗಿ ಒದರಿದ್ದಾರೆ.
ಆ ರಬ್ಬರ್ ತಯಾರಿಕಾ ಕಂಪೆನಿಯವರು ಮತ್ತು ಅಂತಿಮ ಇಚ್ಛೆ ಈಡೇರದ ಭೂತಕ್ಕೂ ಸಂಬಂಧವಿದೆ ಎಂದೆನಿಸುವುದಿಲ್ಲವೇ? ನಾನಿನ್ನು ಜಾಸ್ತಿ ಹೇಳೋಲ್ಲ. ಆಮೇಲೆ ನನ್ನ ಗುಟ್ಟೇ ಬಯಲಾಗುತ್ತದೆ.
ಪ್ರತ್ಯುತ್ತರಅಳಿಸಿನಾನೇನೂ ಬರೆದಿಲ್ಲ
ಇದ ಬರೆದಿರುವುದು ನಾನಲ್ಲ
ನಾನು ಎಂಬುದೊಂದು ಸುಳ್ಳು
ಇದರ ಬಗ್ಗೆ ಮತ್ತೆ ಎಬ್ಬಿಸಬೇಡಿ ಗುಲ್ಲು
ಶ್ರೀತ್ರೀ ಅವರೆ,
ಪ್ರತ್ಯುತ್ತರಅಳಿಸಿಲಿಂಕ್ ಸರಿಪಡಿಸಲಾಗಿದೆ. ಬಹುಶಃ ಉದ್ದ ಎಳೆದಿದ್ದರಲ್ಲಿ ಏನೋ ತೊಡಕಾಗಿತ್ತು.
ಧಾರಾವಾಹಿ ನಿರ್ದೇಶಕರನ್ನು ಹೇಳೋರು ಕೇಳೋರು ಯಾರೂ ಇಲ್ಲ ಎಂಬ ಪ್ರಶ್ನೆ ಉದ್ಭವಿಸುವುದೇ ಇಲ್ಲ. ಈಗಾಗಲೇ ಅವರನ್ನು ಕೇಳಿಕೊಂಡು ರಬ್ಬರ್ ಕಂಪನಿಯ ಮುಖ್ಯಸ್ಥರೆಲ್ಲಾ ಹೊಂಚು ಹಾಕಿ ಕುಳಿತಿದ್ದಾರೆ.
ಸುಪ್ರೀತರೆ,
ಪ್ರತ್ಯುತ್ತರಅಳಿಸಿನಿಮ್ಮ ವಿಪ್‌ರೀತ ಅನ್ಯಾಯ ಮಂಡಳಿಗೆ ನಮ್ಮ ಬೆಂಬಲವಿದೆ. ನಾವು ಕೂಡ ಮೂರ್ನಾಲ್ಕು ವರ್ಷಗಳ ಹಿಂದೆ ಧಾರಾವಾಹಿಯೊಂದನ್ನು ನೋಡಿದ್ದೆವು. ಅದು ಮುಗಿಯುವ ಹಂತಕ್ಕೆ ಬಂದಿತ್ತು. ಆದರೆ ಈಗಲೂ ಅದು ಓಡುತ್ತಾ ಇರುವುದರಿಂದ ಬಹುಶಃ ಕಾಲವೇ ತಟಸ್ಥವಾಗಿರಬೇಕು ಎಂಬ ಸಂದೇಹ ಹುಟ್ಟಿದೆ ನಮಗೆ.
ಶ್ರೀನಿವಾಸರೆ,
ಪ್ರತ್ಯುತ್ತರಅಳಿಸಿನಿಮ್ಮ ಗುಟ್ಟು ಬಯಲಾಗಲು ಧಾರಾವಾಹಿ ನಿರ್ದೇಶಕರು ಬಿಡಬೇಕಲ್ಲ. ಇನ್ನೂ ಹಲವು ವರ್ಷಗಳ ಕಾಲ ಎಳೀತಾ ಇರ್ತಾರೆ ಅದನ್ನು :)
ಈ ತರಹದ ಧಾರವಾಹಿ ನಿರ್ದೇಶಕ/ಶಕಿ ಯರಿಗೆ ಐಡಿಯಾ ಹೇಗೆ ಬರುತ್ತದೆ?? ಅವರವರ ಮನೆಗಳಲ್ಲಿ ನಿತ್ಯ ನಡೆಯುವ "ಮಾತುಕಥೆ, ಜಗಳ ಗಳನ್ನೇ ಧಾರವಾಹಿಗಳಿಗೆ ತುರುಕುತ್ತಿದ್ದಾರೆ ಅನ್ನಿಸುತ್ತದೆ...ಅದಕ್ಕೆ ಇವೆಲ್ಲಾ never ending storyಗಳು!!
ಪ್ರತ್ಯುತ್ತರಅಳಿಸಿಅನಾನಿಮಸರೆ,
ಪ್ರತ್ಯುತ್ತರಅಳಿಸಿನೀವು never ending storyಗಳು ಅಂತೆಲ್ಲಾ ಉಗುಳಿ ರಬ್ಬರ್ ಕಂಪನಿಗಳನ್ನು, ನಿರ್ದೇಶಕರನ್ನು ಬೆಂಬಲಿಸುತ್ತಿರುವುದೇಕೆ?
ಏನಾದ್ರೂ ಹೇಳ್ರಪಾ :-D